ಸಹಕಾರ ರಂಗ ದೇಶದ ಗ್ರಾಮೀಣ ಜನತೆಗೆ ಶಕ್ತಿ ನೀಡಿದೆ : ಯು.ಟಿ.ಖಾದರ್
72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ
ಮಂಗಳೂರು : ಸಹಕಾರರಂಗ ದೇಶದ ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡುವ ಮೂಲಕ ಗ್ರಾಮೀಣ ಜನರಿಗೆ ಶಕ್ತಿ ನೀಡಿದೆ. ದೇಶದ ಅಭಿವೃದ್ಧಿಗೆ ಸಹಕಾರರಂಗ ಅಪಾರ ಕೊಡುಗೆ ನೀಡುತ್ತಿದೆ ಎಂದು ಕರ್ನಾಟಕ ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಶ್ಲಾಘಿಸಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ "ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು" ಎಂಬ ದ್ಯೇಯ ವಾಕ್ಯ ದೊಂದಿಗೆ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ರವಿವಾರ ಹಮ್ಮಿಕೊಂಡ 72ನೇ ಅಖಿಲ ಭಾರತ ಸಹಕಾರ ಸಪ್ತಾಹ 2025ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮೀಣ ಭಾಗದ ಜನರ, ಮಹಿಳೆಯರ ಸ್ವಾವಲಂಬನೆ ಗೆ ದೇಶಾದ್ಯಂತ ವ್ಯಾಪಿಸಿರುವ ಸಹಕಾರ ಸಂಸ್ಥೆಗಳು ಕೊಡುಗೆ ನೀಡಿದೆ. ಧ್ವನಿ ಇಲ್ಲದವರಿಗೆ, ದುರ್ಬಲರಿಗೆ ಶಕ್ತಿ ನೀಡಿದೆ. ಕರಾವಳಿಯಲ್ಲಿ ಮಹಳೆಯರ ಸ್ವಾಭಿಮಾನದ ಬದುಕಿಗೆ ಸಹಕಾರ ಕ್ಷೇತ್ರ ಮಹತ್ವದ ಕೊಡುಗೆ ನೀಡಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲ ನೀಡಲು ಹಿಂದೇಟು ಹಾಕಿದ ಸಂದರ್ಭದಲ್ಲಿ ರಾಜೇಂದ್ರ ಕುಮಾರ್ ಅವರ ನೇತೃತ್ವದ ಸಹಕಾರಿ ಬ್ಯಾಂಕ್ ಸಾಲ ನೀಡಿ ಹಲವು ಸಂಸ್ಥೆಗಳ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಈ ಸಹಕಾರ ರಂಗ ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆಯನ್ನು ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸ್ವಾಗತಿಸಿ ಮಾತನಾಡುತ್ತಾ, ಸಹಕಾರ ಬ್ಯಾಂಕ್ ಜಿಲ್ಲೆಯ ಜನರ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುತ್ತಾ ಬಂದಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿಸಾಟಿಯಾಗಿ ರೈತರ ಆರ್ಥಿಕ ಅಗತ್ಯ ಗಳಿಗೆ ಶಿಕ್ಷಣ, ಮದುವೆ ಸೇರಿದಂತೆ ತುರ್ತು ಅಗತ್ಯ ಗಳಿಗೆ ಸ್ಪಂದಿಸಿದೆ. 72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು "ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು" ಎಂಬ ಧೈಯವಾಕ್ಯದೊಂದಿಗೆ ಈ ಬಾರಿ ಆಚರಿಸಲಾಗುತ್ತಿದೆ. ಸಪ್ತಾಹದ ಆಚರಣೆಯ ಸಂದರ್ಭದಲ್ಲಿ "ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ಬಲಪಡಿ ಸುವುದು" ಎಂಬ ವಿಷಯದ ಬಗ್ಗೆ ಕಾರ್ಯಕ್ರಮ ನಡೆಯಲಿದೆ ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ಸಹಕಾರ ರಂಗದ ಮೂಲಕ ಮಹಿಳೆಯರ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಹಕಾರ ಸರ್ವರ ಅಭಿವೃದ್ಧಿಗೆ ಪಕ್ಷಾತೀತವಾಗಿ, ಜಾತ್ಯತೀತ ವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಸಹಕಾರ ಕ್ಷೇತ್ರದ ಮೂಲಕ ಅಭಿವೃದ್ಧಿ ಸಾಧಿಸಬೇಕಾಗಿದೆ. ರಾಜ್ಯದಲ್ಲಿ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಸಹಕಾರ ಕ್ಷೇತ್ರ ಉತ್ತಮ ನಾಯಕತ್ವವನ್ನು ನೀಡಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಮಾತನಾಡಿ, ದೇಶದಲ್ಲಿಎಂಟೂವರೆ ಲಕ್ಷ ಸಹಕಾರ ಸಂಘಗಳು ದೇಶ ಕಟ್ಟುವ ಕೆಲಸದಲ್ಲಿ ತೊಡಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯರ ನೇತೃತ್ವದಲ್ಲಿ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಹಕಾರ ಸಂಘಗಳ ಮೂಲಕ ಸಾಲ ನೀಡಿ ರೈತರನ್ನು ಬೆಂಬಲಿಸಿದೆ. ಸಹಕಾರ ಕ್ಷೇತ್ರದಲ್ಲಿಯೂ ಮಹಿಳಾ ಮೀಸಲಾತಿ ನೀಡುವ ಅಗತ್ಯವಿದೆ ಎಂದರು.
ಸಮಾರಂಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿ ಸೋಜ, ಡಾ.ಮಂಜುನಾಥ ಭಂಡಾರಿ, ಕಿಶೋರ್ ಕುಮಾರ್ ಬೊಟ್ಯಾಡಿ, ಶಾಸಕ ಯಶ್ ಪಾಲ್ ಎ.ಸುವರ್ಣ, ನಬಾರ್ಡ್ ಮುಖ್ಯ ಪ್ರಬಂಧಕ ಡಾ.ಸುರೇಂದ್ರ ಬಾಬು, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಎಸ್ ಸಿಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕ ರಾದ ಐಕಳ ದೇವಿ ಪ್ರಸಾದ್ ಶೆಟ್ಟಿ, ಜಯರಾಜ ರೈ, ಮೋನಪ್ಪ ಶೆಟ್ಟಿ ಎಕ್ಕಾರ್, ಭಾಸ್ಕರ ಎಸ್ ಕೋಟ್ಯಾನ್, ಟಿ.ಜಿ.ರಾಜರಾಮಭಟ್ ಸದಾಶಿವ ಉಳ್ಳಾಲ್, ಶಶಿ ಕುಮಾರ್ ರೈ ಬಾಲ್ಯೋಟ್ಟು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ರಾಜ್ಯ ಸಹಕಾರ ಮಹಾ ಮಂಡಳದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ನವೀನ್, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಕರ್ನಾಟಕ ಸಹಕಾರ ಸಂಘಗಳ ರಾಜ್ಯ ನಿಬಂಧಕ ಟಿ.ಎಚ್.ಎಂ.ಕುಮಾರ್,ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಸಹಕಾರಿ ಇಲಾಖೆಯ ಉಪ ರಿಜಿಸ್ಟ್ರಾರ್ ರಮೇಶ್ ಮೊದಲಾದ ವರು ಉಪಸ್ಥಿತರಿದ್ದರು.
ನಗರದಲ್ಲಿ ವರ್ಣ ರಂಜಿತ ಮೆರವಣಿಗೆ :
ಸಹಕಾರ ಸಪ್ತಾಹದ ಸಮಾರಂಭದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಿಂದ ವೈವಿಧ್ಯತೆ ಯನ್ನೊಳಗೊಂಡ ವರ್ಣ ರಂಜಿತ ಮೆರವಣಿಗೆ ನಡೆಯಿತು. ಈ ಸಹಕಾರ ಮೆರವಣಿಗೆಯಲ್ಲಿ ಸಹಕಾರ ಸಂಘಗಳ ಸದಸ್ಯರು, ಸ್ವ-ಸಹಾಯ ಗುಂಪಿನ ಸದಸ್ಯರು ಸೇರಿದಂತೆ ಈ ಸಹಕಾರ ಮೆರವಣಿಗೆಯಲ್ಲಿ ಸಹಕಾರ ರಥ, ಘಟೋತ್ಕಜ, ಚೆಂಡೆ, ಕೊಂಬು, ಸಹಕಾರಿ ಬಣ್ಣದ ಕೊಡೆಗಳು, ಭುವನೇಶ್ವರಿ ದೇವಿಯ ಸ್ತಬ್ಧಚಿತ್ರ, ಪುರುಷರ ಹಾಗೂ ಮಹಿಳೆಯರ ಡೊಳ್ಳು ಕುಣಿತ, ಮೊಳಹಳ್ಳಿ ಶಿವರಾವ್ ಸ್ತಬ್ಧಚಿತ್ರ, ಮಹಿಳೆಯರ ವೀರಗಾಸೆ, ಹೈನುಗಾರಿಕೆಯ ಸ್ತಬ್ಧಚಿತ್ರ, ಮೀನುಗಾ ರಿಕೆಯ ಸ್ತಬ್ಧಚಿತ್ರ, ಹೊನ್ನಾವರ ಬ್ಯಾಂಡ್, ಕೆ.ಎಂ.ಎಫ್ ನಂದಿನಿ ಆನ್ ವೀಲ್ ಸ್ತಬ್ಧಚಿತ್ರ, ಸುಗ್ಗಿ ಕುಣಿತ, ತುಳುನಾಡು ವೈಭವ ಸ್ತಬ್ಧಚಿತ್ರ, ನವೋದಯ ಪ್ರಚಾರ ವಾಹನ, ಪುರವಂತಿಗೆ, ಗ್ರಾಮೀಣ ಬ್ಯಾಂಕಿಂಗ್ ಚಟುವಟಿಕೆಯ ಸ್ತಬ್ಧಚಿತ್ರ, ಚೆಂಡೆ ವಾಹನ, ಸೋಮನ ಕುಣಿತ, ಪಟ್ಟದ ಕುಣಿತ, ಶಿವನ ಮೂರ್ತಿಯ ಸ್ತಬ್ಧಚಿತ್ರ. ನವೋದಯ ಗುಂಪಿನ ಸಭೆ ನಡೆಸುವ ಸ್ತಬ್ಧಚಿತ್ರ, ಗೊರವರ ಕುಣಿತ, ಪ್ರಾಥಮಿಕ ಪತ್ತಿನ ಸಂಘದ ಸ್ತಬ್ಧಚಿತ್ರ, ಕೃಷಿ ಚಟುವಟಿಕೆಯ ಸ್ತಬ್ಧಚಿತ್ರ, ಉಳುಮೆ ಮಾಡುವ ರೈತನ ಸ್ತಬ್ಧಚಿತ್ರ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಮೊಬೈಲ್ ಬ್ಯಾಂಕ್ ವಾಹನ ಸೇರಿದಂತೆ 50ಕ್ಕೂ ಅಧಿಕ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ,ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ (ರಿ.) ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳು, ಸೌಹಾರ್ದ ಸಹಕಾರ ಸಂಘಗಳು ಹಾಗೂ ಎಲ್ಲಾ ವಿಧದ ಸಹಕಾರ ಸಂಘಗಳು ಮತ್ತು ಸಹಕಾರ ಇಲಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಹಕಾರ ಮಾಣಿಕ್ಯ ಪ್ರಶಸ್ತಿ :
ಈ ವೇಳೆ "ಸಹಕಾರ ಮಾಣಿಕ್ಯ ಪ್ರಶಸ್ತಿ"ಯನ್ನು 3 ಸಹಕಾರ ಸಂಸ್ಥೆಗಳಿಗೆ ನೀಡಲಾಯಿತು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿ ಸುತ್ತಿರುವ ತಲಾ 1 ಉತ್ತಮ ಕೃಷಿಪತ್ತಿನ ಸಹಕಾರಿ ಸಂಘಗಳನ್ನು ಹಾಗೂ 1 ಪತ್ತಿನ ಸಹಕಾರಿ ಸಂಘವನ್ನು 2025ನೇ ಸಾಲಿನ "ಸಹಕಾರ ಮಾಣಿಕ್ಯ" ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯ ಜೊತೆಗೆ 5 ಗ್ರಾಂ ಚಿನ್ನದ ಪದಕ. 10.000 ರೂ. ನಗದು ಹಾಗೂ ಪಾರಿತೋಷಕವನ್ನು ನೀಡಲಾಗುವುದು. ಸಾಮಾನ್ಯ ವಿಭಾಗದಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ ಉಭಯ ಜಿಲ್ಲೆಗಳಲ್ಲಿ ಒಂದರಂತೆ ಹಾಗೂ ಹೈನುಗಾರಿಕೆ ಕ್ರೆಡಿಟ್ಸೊಸೈಟಿ, ಮೀನುಗಾರಿಕಾ ಸಹಕಾರಿ ಸಂಘ, ಸೌಹಾರ್ಧ ಸಹಕಾರಿ ಸಂಘ ಹಾಗೂ ಮಹಿಳಾ ಸಹಕಾರಿ ಸಂಘಕ್ಕೆ ಉಭಯ ಜಿಲ್ಲೆಗಳಿಂದ 1 ಹಾಗೂ ವಜ್ರ ಮಹೋತ್ಸವ ಮತ್ತು ಸುವರ್ಣ ಮಹೋತ್ಸವ ಪೂರೈಸಿದ ಸಂಘಗಳನ್ನು ಗೌರವಿಸಲಾಯಿತು.
ಸ್ವ ಸಹಾಯ ಸಂಘಗಳು ಸೇರಿದಂತೆ ವಿವಿಧ ಸಂಸ್ಥೆ ಗಳ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿತ್ತು. 'ಸಹಕಾರ 'ಸ್ಮರಣ ಸಂಚಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು.
ಎಸ್ ಸಿ ಡಿ ಸಿ ಸಿ ಬ್ಯಾಂಕ್ ವತಿಯಿಂದ ರಾಜ್ಯ ಸಹಕಾರ ಮಹಾಮಂಡಳ ಶಿಕ್ಷಣ ನಿಧಿಗೆ 1.62 ಕೋಟಿ ರೂಪಾಯಿಗಳನ್ನು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡರ ಮೂಲಕ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹಸ್ತಾಂತರಿಸಿದರು.