×
Ad

ತುಳು ಭವನದಲ್ಲಿ ರಿಯಾಯಿತಿ ರದ್ದು ಮಾಡಿಲ್ಲ: ಅಕಾಡಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಸ್ಪಷ್ಟನೆ

Update: 2025-05-23 19:55 IST

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್

ಮಂಗಳೂರು: ಖಾಸಗಿ ಸಂಘ, ಸಂಸ್ಥೆಗಳು ಆಯೋಜಿಸುವ ತುಳು ಭಾಷೆ, ಸಾಹಿತ್ಯ, ಸಂಸ್ಕ್ರತಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಮಂಗಳೂರಿನ ತುಳುಭವನದಲ್ಲಿ ವಿಶೇಷವಾಗಿ ಶೇ.ಐವತ್ತರಷ್ಟು ರಿಯಾಯಿತಿಯಲ್ಲಿ ಸಭಾಂಗಣವನ್ನು ನೀಡಲಾಗುತ್ತಿದೆ. ಈ ವೇಳೆ ಯಕ್ಷಗಾನ, ನಾಟಕ ಆಯೋಜಿಸುವವರಿಗೆ ಇನ್ನೂ ಹೆಚ್ಚಿನ ರಿಯಾಯಿತಿಯಲ್ಲಿ ಸಭಾಂಗಣವನ್ನು ಒದಗಿಸಲಾಗುತ್ತದೆ. ಯಾವುದೇ ರಿಯಾಯಿತಿಯನ್ನು ರದ್ದು ಮಾಡಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.

ಸಂಘ ಸಂಸ್ಥೆಗಳು ಅಕಾಡಮಿಯೊಂದಿಗೆ ಸಹಭಾಗಿತ್ವದಲ್ಲಿ ನಡೆಸುವ ಕಾರ್ಯಕ್ರಮಗಳಿಗೆ ಉಚಿತವಾಗಿ ಸಭಾಂಗಣ ಒದಗಿಸಲಾಗುತ್ತದೆ. ಸಾಹಿತ್ಯ , ಸಾಂಸ್ಕ್ರತಿಕ ಹೊರತುಪಡಿಸಿದ ಖಾಸಗಿ ಕಾರ್ಯಕ್ರಮಗಳಿಗೆ ಮಾತ್ರ ಪೂರ್ತಿ ಬಾಡಿಗೆ ಪಡೆಯಲಾಗುತ್ತಿದೆ. ಯಾವುದೇ ಸಂಘ , ಸಂಸ್ಥೆಗಳು ನಡೆಸುವ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸರ್ಟಿಫಿಕೆಟ್ ನೀಡುವುದು ಅಕಾಡಮಿ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ ವಿಚಾರವಾಗಿರುವುದಿಲ್ಲ ಅಥವಾ ಅಕಾಡಮಿಯು ಪರೀಕ್ಷೆ ಪ್ರಾಧಿಕಾರವಾಗಿರುವುದಿಲ್ಲ. ಅಕಾಡೆಮಿಯ ವತಿಯಿಂದ ನೇರವಾಗಿ ಅಥವಾ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸುವ ತರಬೇತಿ ಶಿಬಿರ, ಕಮ್ಮಟ, ಸೆಮಿನಾರ್‌ಗಳಲ್ಲಿ ಭಾಗವಹಿಸುವವರಿಗೆ ಸರ್ಟಿಫಿಕೇಟ್ ಆಯಾ ಸಂದರ್ಭದಲ್ಲಿ ನೀಡಲಾಗುತ್ತಿದೆ ಎಂದು ಸ್ಪಷ್ಪಪಡಿಸಿದ್ದಾರೆ.

ತುಳು ಮಾತೃ ಭಾಷಾ ಪ್ರಮಾಣಪತ್ರವನ್ನು (ತುಳು ಕೋಟ ಸರ್ಟಿಫಿಕೇಟ್) ಆಯಾ ವಿದ್ಯಾರ್ಥಿಗಳು ವಾಸಿಸುವ ತಾಲೂಕಿನ ತಹಶೀಲ್ದಾರರು ನೀಡುವವರಾಗಿದ್ದು, ಎಲ್ಲಾ ತಾಲೂಕುಗಳಲ್ಲಿ ಭಾಷಾ ಪ್ರಮಾಣ ಪತ್ರ ನೀಡಲಾಗುತ್ತಿದೆ. ಭಾಷಾ ಪ್ರಮಾಣ ಪತ್ರ ನೀಡುವ ಅಧಿಕಾರ ತಾಲೂಕು ದಂಡಾಧಿಕಾರಿಗಳ ವ್ಯಾಪ್ತಿಗೆ ಸೇರಿದ್ದಾಗಿರುತ್ತದೆ. ಕರ್ನಾಟಕದ ಯಾವುದೇ ಅಕಾಡಮಿಯು ವಿದ್ಯಾರ್ಥಿಗಳಿಗೆ ಭಾಷಾ ಪ್ರಮಾಣ ನೀಡುವ ಸಕ್ಷಮ ಪ್ರಾಧಿಕಾರವಾಗಿರುವುದಿಲ್ಲ. ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಭಾಷಾ ಪ್ರಮಾಣ ಪತ್ರದ ಅರ್ಜಿ ನಮೂನೆಯನ್ನು ತುಳು ಅಕಾಡಮಿಯ ನೋಟಿಸ್ ಬೋರ್ಡ್‌ನಲ್ಲಿ ಲಗತ್ತಿಸಲಾಗಿರುತ್ತದೆ. ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರವನ್ನು ಪಡೆಯುವ ರೀತಿಯಲ್ಲೇ ಮಾತೃ ಭಾಷಾ ಪ್ರಮಾಣ ಪತ್ರವನ್ನು ಪಡೆಯಲು ಅವಕಾಶ ಇದೆ. ಶಾಲಾ ದಾಖಲಾತಿ ವಿವರದೊಂದಿಗೆ ತಹಶೀಲ್ದಾರರ ಕಛೇರಿಗೆ ಅರ್ಜಿ ಸಲ್ಲಿಸಿದಾಗ ಭಾಷಾ ಪ್ರಮಾಣ ಪತ್ರವನ್ನು ತಹಶೀಲ್ದಾರರು ನೀಡುತ್ತಾರೆ.ತುರ್ತು ಸಂದರ್ಭ ಅರ್ಜಿ ಸಲ್ಲಿಸಿದ ದಿನದಂದೇ ಈ ಪ್ರಮಾಣ ಪತ್ರವನ್ನು ನೀಡುತ್ತಾರೆ. ತಹಶೀಲ್ದಾರರ ಹೊರತುಪಡಿಸಿ ಯಾರೇ ನೀಡುವ ಮಾತೃ ಭಾಷಾ ಸರ್ಟಿಫಿಕೇಟ್‌ಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಶಾಸಕ ವೇದವ್ಯಾಸ ಕಾಮತ್ ಮಾಹಿತಿಯ ಕೊರತೆಯಿಂದ ವಾಸ್ತವ ಅಲ್ಲದ ಹೇಳಿಕೆಯನ್ನು ನೀಡಿದ್ದಾರೆ ಎಂದು ತಾರಾನಾಥ್ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News