×
Ad

ಉಳ್ಳಾಲ| ದರ್ಗಾ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ನಿರಾಧಾರ: ಬಿ.ಜಿ. ಹನೀಫ್ ಹಾಜಿ

"ದರ್ಗಾದ ಆಯವ್ಯಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ"

Update: 2025-11-13 19:02 IST

ಉಳ್ಳಾಲ: ಸಯ್ಯಿದ್ ಮದನಿ ದರ್ಗಾ ನೂತನ ಸಮಿತಿ ಆಡಳಿತಕ್ಕೆ ಬಂದ ನಂತರ ಬಹಳಷ್ಟು ಯೋಜನೆ ಮಾಡಿ ಮುಗಿಸಿದೆ. ಇದನ್ನು ಸಹಿಸದ ಕೆಲವು ಸ್ಥಾಪಿತ ಹಿತಾಸಕ್ತಿಗಳು ಆಡಳಿತ ಸಮಿತಿ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪ ಹೊರಿಸಿದ್ದು, ಅದೆಲ್ಲವೂ ಸಾಕ್ಷ್ಯ ರಹಿತ ಆರೋಪ ಎಂದು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ ಹೇಳಿದರು.

ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಉರೂಸ್ ನಡೆಯುವವರೆಗೆ ಎರಡು ವಾರಕ್ಕೊಮ್ಮೆ ಮತ್ತು ನಂತರ ತಿಂಗಳಿಗೊಮ್ಮೆ ಸಮಿತಿ ಸಭೆ ನಡೆಸಬೇಕೆಂದು ಉಳ್ಳಾಲ ಖಾಝಿ ಎ.ಪಿ. ಉಸ್ತಾದರ ಆದೇಶವಾಗಿದ್ದು, ದರ್ಗಾ ಸಮಿತಿ ತುರ್ತು ಸಭೆ ಸೇರಿದಂತೆ ತಿಂಗಳ ಸಭೆ, ಮಹಾಸಭೆ ನಡೆಸಿದೆ. ಸಮಿತಿಯ ಆಯವ್ಯಯಗಳ ಸಂಪೂರ್ಣ ಮಾಹಿತಿಯನ್ನು ಮಹಾಸಭೆಗಳಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆಯಲಾಗಿದೆ. ಆದರೂ ಸಮಿತಿಯ ಮೇಲೆ ಭ್ರಷ್ಟಾಚಾರ ಮತ್ತು ಏಳು ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ದರ್ಗಾ ಸಮಿತಿ ಸದಸ್ಯತನ ಕಳೆದುಕೊಂಡ ಕೆಲವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಅವರು ಹೇಳಿದರು.

ದರ್ಗಾ ಸಮಿತಿ ಸಭೆಗೆ ಹಾಜರಾಗದೆ ಸದಸ್ಯತ್ವ ರದ್ದುಗೊಂಡವರು ದರ್ಗಾದಲ್ಲಿ ಅವ್ಯವಹಾರ ನಡೆದಿದೆಯೆಂದು ಆರೋಪಿಸಿ ರಾಜ್ಯ ವಕ್ಫ್ ಬೋರ್ಡ್, ಹೈಕೋರ್ಟ್ ಗೆ ದೂರು ನೀಡಿದ್ದರು. ಪ್ರಕರಣವು ಹೈಕೋರ್ಟ್ ನಲ್ಲಿರುವಾಗಲೇ ಸಂಶಯದ ಆಧಾರ ಮೇಲೆ ಪತ್ರಿಕಾಗೋಷ್ಠಿ ಕರೆದು ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾಕ್ಕೆ ಕಪ್ಪು ಚುಕ್ಕೆ ತರುವುದು ಖಂಡನೀಯ. ಅವರ ಹಿನ್ನಲೆ, ಅವರಿಗೆ ಯಾರ ಬೆಂಬಲ ಇದೆ ಎಂಬ ಬಗ್ಗೆ ಉಳ್ಳಾಲದ ನಾಗರಿಕರಿಗೆ ತಿಳಿದಿದೆ. ಅವರ ವಿರುದ್ಧ ಕಾನೂನು ಮೊಕದ್ದಮೆ ದಾಖಲಿಸಿ ಕಾನೂನು ಹೋರಾಟ ಮಾಡಲು ಮುಂದಾಗಿದ್ದೇವೆ ಎಂದು ಅವರು ಹೇಳಿದರು.

ಎರಡು ವಾರಕ್ಕೊಮ್ಮೆ ಸಭೆ ನಡೆಸಬೇಕು ಎಂದು ಸುದ್ದಿ ಗೋಷ್ಠಿಯಲ್ಲಿ ಹೇಳುತ್ತಿರುವ ಇದೇ ವ್ಯಕ್ತಿಗಳು ಹೈಕೋರ್ಟ್ ನಲ್ಲಿ ಸಲ್ಲಿಸಿರುವ ದಾವೆಯಲ್ಲಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ವಕ್ಫ್ ನಿಯಮಾವಳಿಯಲ್ಲಿ ಇದೆ ಎಂದು ವಾದಿಸಿದ್ದಾರೆ. ಇದು ಅವರ ದ್ವಿಮುಖ ಧೋರಣೆಯನ್ನು ಬೊಟ್ಟು ಮಾಡುತ್ತದೆ ಎಂದು ಹನೀಫ್ ಹಾಜಿ ಆರೋಪಿಸಿದರು.

2022 ರಲ್ಲಿ ಉರೂಸ್ ಗೆ ಮಂಜೂರಾದ ಒಂದು ಕೋಟಿ ರೂ. ಹಾಗೂ 2025ರ ಉರೂಸ್ ಗೆ ಮಂಜೂರಾದ ಮೂರು ಕೋಟಿ ರೂ. ಸಹಿತ ಒಟ್ಟು ನಾಲ್ಕು ಕೋಟಿ ಅನುದಾನ ಬಂದಿದೆ. ಐದು ಮಹಡಿಯ ವಸತಿ ಕಟ್ಟಡ ನಿರ್ಮಾಣಕ್ಕೆ ಮೂರು ಕೋಟಿ ರೂ. ಮಂಜೂರಾಗಿದ್ದು, ಹಂತ, ಹಂತವಾಗಿ ಒಟ್ಟು ಏಳು ಕೋಟಿ ಸರಕಾರಿ ಅನುದಾನ ಬಂದಿದೆ. ಸರಕಾರದ ಅನುದಾನದ ದುಡ್ಡು ಬ್ಯಾಗಲ್ಲಿ ತರಲು ಸಾಧ್ಯವಿಲ್ಲ. ಅದೆಲ್ಲವೂ ಬ್ಯಾಂಕ್ ಮುಖಾಂತರ ಬರುವುದಾಗಿದೆ. ಟೆಂಡರ್ ಕರೆದು ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ. ಪತ್ರಿಕೆಗಳಲ್ಲಿ ಟೆಂಡರ್ ಜಾಹಿರಾತು ನೀಡಿ, ಕಡಿಮೆ ಕೊಟೇಷನ್ ಕೊಟ್ಟವರಿಗೆ ಪಾರದರ್ಶಕವಾಗಿ ಗುತ್ತಿಗೆ ನೀಡಲಾಗಿದೆ. ಸಯ್ಯಿದ್ ಮದನಿ ಶರೀಅತ್ ಕಾಲೇಜು ವಿದ್ಯಾರ್ಥಿಗಳ ವಸತಿ ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದ್ದು ಇದರಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

ದರ್ಗಾ ಸಮಿತಿಯಿಂದ 23 ಸದಸ್ಯರು ಮಾತ್ರ ಮೂರು ಸಭೆಗಳಿಗೆ ಹಾಜರಾಗದ ಕಾರಣದಿಂದ ಹೊರಗುಳಿದಿದ್ದಾರೆ. ಈಗ 44 ಮಂದಿ ಸಮಿತಿಯಲ್ಲಿ ಇದ್ದಾರೆ. ಪ್ರತಿ ತಿಂಗಳು ಸಭೆ ನಡೆಯುತ್ತಿದೆ ಎಂದರು.

ಸಯ್ಯದ್ ಮದನಿ (ಖ.ಸಿ)ಉರೂಸ್ 2025 ಯಶಸ್ವಿಯಾಗಿ ನಡೆಸಲಾಗಿದೆ. ಉಳ್ಳಾಲ ಕೇಂದ್ರ ಜುಮಾ ಮಸೀದಿಯು ರಾಜ್ಯದ ಗ್ರ್ಯಾಂಡ್ ಮಸೀದಿಯನ್ನಾಗಿ ನಿರ್ಮಾಣಗೊಳ್ಳಲಿದೆ. ಐದು ವರ್ಷದೊಳಗೆ ಐವತ್ತು ಕೋಟಿ ಖರ್ಚದಲ್ಲಿ ದೇಶಕ್ಕೇ ಮಾದರಿಯ ಗ್ರ್ಯಾಂಡ್ ಮಸ್ಜಿದ್ ನಿರ್ಮಾಣಗೊಳ್ಳಲಿದೆ. ಮಸ್ಜಿದ್ ಸುತ್ತಲೂ ಮದೀನ ಮಾದರಿಯ ಆವರಣಗೋಡೆ ನಿರ್ಮಾಣಗೊಳ್ಳಲಿದ್ದು ,ಅದರ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ.ಇಂತಹ ಅಭಿವೃದ್ಧಿಯ ಕಾಮಗಾರಿಗಳಿಗೆ ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ. ಒಂದು ಶೇಕಡ ಜನರು ಇಂತಹ‌ ಕಾರ್ಯಗಳನ್ನು ವಿರೋಧಿಸುತ್ತಾರೆ ಎಂದು ಹೇಳಿದರು.

ಉರೂಸ್ ಮುಗಿದು ಎಂಟು ತಿಂಗಳಾದರೂ ಮಹಾಸಭೆ ನಡೆದಿಲ್ಲ, ಲೆಕ್ಕ ಪತ್ರ ಮಂಡನೆ ಮಾಡಿಲ್ಲವೆಂಬ ಆರೋಪವನ್ನು ಅವರು ಸುದ್ದಿಗೋಷ್ಠಿ ಯಲ್ಲಿ ಮಾಡಿದ್ದಾರೆ. ಇದು ದೊಡ್ಡ ಸುಳ್ಳು. ಕಳೆದ ಮೇ ತಿಂಗಳಲ್ಲಿ ಉರೂಸು ಮುಗಿದಿದೆ. ಉರೂಸ್ ಮುಗಿದು ಆರು ತಿಂಗಳ ಒಳಗೆ ಲೆಕ್ಕ ಮಂಡಿಸಿ ಉರೂಸ್ ಕಮಿಟಿ ಬರ್ಕಾಸ್ತ್ ಮಾಡುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಅದನ್ನೇ ನಾವು ಪಾಲಿಸಿದ್ದು, ಈ ತಿಂಗಳಲ್ಲೇ ಉರೂಸ್ ಕಮಿಟಿಯನ್ನು ಬರ್ಕಾಸ್ತ್ ಮಾಡಲಿದ್ದೇವೆ ಎಂದರು.

ಉಪಾಧ್ಯಕ್ಷ ಅಶ್ರಫ್ ರೈಟ್ ವೇ , ಪ್ರಧಾನ ಕಾರ್ಯದರ್ಶಿ ಶಿಹಾಬುದ್ದಿನ್ ಸಖಾಫಿ, ಕೋಶಾಧಿಕಾರಿ ನಾಜಿಮ್ ಹಾಗೂ ಜೊತೆ ಕಾರ್ಯದರ್ಶಿ ಮಹಮ್ಮದ್ ಮುಸ್ತಫಾ ಮದನಿ ನಗರ ಉಪಸ್ಥಿತರಿದ್ದರು.

ನೂತನ ಸಮಿತಿ ಅಧಿಕಾರ ಹಿಡಿದಾಗ ಖಜಾನೆಯಲ್ಲಿದ್ದ ಮೊತ್ತ ಕೇವಲ ಐದು ಸಾವಿರ ರೂ. ಗಳಷ್ಟು ಮಾತ್ರ. ಒಂದು ಕೋಟಿ ರೂ. ಗೂ ಹೆಚ್ಚು ಮೊತ್ತ ಶಾಲಾ ಕಾಲೇಜುಗಳಿಗೆ ವೇತನ ಬಾಕಿ ಇತ್ತು. ಕಳೆದ ಎರಡೂವರೆ ವರ್ಷಗಳಲ್ಲಿ ಬಾಕಿ ಇರುವ ವೇತನಗಳನ್ನು ಸಂಪೂರ್ಣ ಪಾವತಿಸಲಾಗಿದೆ. ದರ್ಗಾ ಅಧೀನದ ಒಂಭತ್ತುಕೆರೆ ಟಿಪ್ಪು ಸುಲ್ತಾನ್ ಕಾಲೇಜಿನ ನವೀಕರಣವನ್ನು 36 ಲಕ್ಷ ರೂ. ಮೊತ್ತದಲ್ಲಿ ಮಾಡಲಾಗಿದೆ.

ಬಿ. ಜಿ. ಹನೀಫ್ ಹಾಜಿ, ಅಧ್ಯಕ್ಷ, ದರ್ಗಾ ಸಮಿತಿ

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News