×
Ad

ಉಳ್ಳಾಲ | ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ : ಆರೋಪಿಗಳ ಬಂಧನ

Update: 2025-11-26 20:30 IST

ಉಳ್ಳಾಲ: ನಕಲಿ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಓರ್ವ ತಲೆಮರೆಸಿಕೊಂಡ ಘಟನೆ ತೊಕ್ಕೊಟ್ಟಿನ ಹಣಕಾಸು ಸಂಸ್ಥೆಯೊಂದರಲ್ಲಿ ನಡೆದಿದೆ.

ಮಹಾರಾಷ್ಟ್ರ ಮೂಲದ ವಿಕ್ರಮ್, ಹರೇಕಳದ ಇಸ್ಮಾಯಿಲ್, ಮುಹಮ್ಮದ್ ಮಿಸ್ಬಾ, ಕಾಟಿಪಳ್ಳದ ಉಮರ್ ಫಾರೂಕ್, ಉಳ್ಳಾಲ ಮೇಲಂಗಡಿಯ ಇಮ್ತಿಯಾಝ್, ಮಂಚಿಲದ ಝಹೀಮ್ ಅಹ್ಮದ್ ಬಂಧಿತರಾಗಿದ್ದು, ಹೆಜಮಾಡಿಯ ನೌಫಾಲ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಕೊಣಾಜೆ ವಿವಿ ರಸ್ತೆಯಲ್ಲಿರುವ ಹಣಕಾಸು ಸಂಸ್ಥೆಯೊಂದಕ್ಕೆ ನ.22ರಂದು ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಬಂದಿದ್ದ ನೌಫಾಲ್ ಮತ್ತು ಝಹೀಮ್ ಅಹ್ಮದ್ ಎಂಬವರು 41 ಗ್ರಾಂ ತೂಗುವ ಎರಡು ಚೈನ್ ಗಳನ್ನು ಅಡವಿರಿಸಿ ಸಾಲ ಕೊಡುವಂತೆ ಕೇಳಿದ್ದಾರೆ. ಈ ಸಂದರ್ಭ ಸಂಸ್ಥೆಯ ಮಾಲಕ ದಿನೇಶ್ ರೈ ಮತ್ತು ಸಿಬ್ಬಂದಿ ನಿಕೇಶ್ ಎಂಬವರು ಆರೋಪಿಗಳು ನೀಡಿದ ಚಿನ್ನಾಭರಣ ಪರಿಶೀಲಿಸಿದಾಗ ಚಿನ್ನದ ಪರಿಶುದ್ಧತೆಯ 916 ಸಂಕೇತ ಮತ್ತು ಓರೆ ಕಲ್ಲಿನಲ್ಲಿ ಉಜ್ಜಿದಾಗಲೂ ಅಸಲಿಯಂತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಝಹೀಮ್ ಅಹ್ಮದ್ ಹೆಸರಿನಲ್ಲಿ ಆಭರಣಗಳನ್ನು ಅಡವು ಇಟ್ಟು 3 ಲಕ್ಷದ 55 ಸಾವಿರ ರೂ. ಹಣವನ್ನು ಮಾಲಕ ಸಾಲ ನೀಡಿದ್ದಾರೆ.

ನ.24ರ ಸಂಜೆ 5 ಗಂಟೆ ಹೊತ್ತಿಗೆ ಉಳ್ಳಾಲ ಮೇಲಂಗಡಿಯ ನಿವಾಸಿ ಇಮ್ತಿಯಾಝ್ ಎಂಬಾತ ಇದೇ ಹಣಕಾಸು ಸಂಸ್ಥೆಗೆ ಬಂದಿದ್ದು 55 ಗ್ರಾಂ ತೂಕದ ಎರಡು ಚೈನ್ ಮತ್ತು ಒಂದು ಬ್ರಾಸ್ಲೇಟ್ ಅಡವಿಟ್ಟು 4 ಲಕ್ಷ 80 ಸಾವಿರ ರೂಪಾಯಿ ಸಾಲ ಕೊಡುವಂತೆ ತಿಳಿಸಿದ್ದಾನೆ. ಆಭರಣ ಪರಿಶೀಲಿಸಿದಾಗ ಅದರಲ್ಲೂ 916 ಸಂಕೇತ ಮತ್ತು ಓರೆ ಕಲ್ಲಿಗೆ ಉಜ್ಜಿದಾಗ ಚಿನ್ನವೆಂದೇ ಕಂಡುಬಂದಿದೆ. ಚಿನ್ನ ಖರೀದಿ ಬಗ್ಗೆ ವಿಚಾರಿಸಿದಾಗ ದುಬೈಯ ಚಿನ್ನವೆಂದು ತಿಳಿಸಿದ್ದಾಗಿ ಹೇಳಲಾಗಿದೆ.

ಆತನ ಮಾತಿನಿಂದ ಅನುಮಾನಗೊಂಡ ಸಂಸ್ಥೆಯ ಮಾಲಕ ದಿನೇಶ್ ರೈ ಅವರು ಇಮ್ತಿಯಾಝ್ ನೀಡಿದ ಆಭರಣ ಮತ್ತು ನ.22ರಂದು ಝಹೀಮ್ ಅಹ್ಮದ್ ಅಡವಿಟ್ಟಿದ್ದ ಆಭರಣಗಳನ್ನು ಮಂಗಳೂರಲ್ಲಿ ಚಿನ್ನದ ಕೆಲಸ ಮಾಡುವ ತನ್ನ ಸ್ನೇಹಿತ ಉದಯ್ ಆಚಾರ್ಯ ಎಂಬವರ ಬಳಿ ಹೋಗಿ ಪರೀಕ್ಷಿಸಿದ್ದಾರೆ. ಈ ವೇಳೆ ಆಭರಣಗಳನ್ನು ಆ್ಯಸಿಡ್ ಲ್ಲಿನ ಮುಳುಗಿಸಿ ಬಿಸಿ ಮಾಡಿದಾಗ ನೊರೆ ಬಂದಿದ್ದು ನಕಲಿ ಎನ್ನುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಹಣಕಾಸು ಸಂಸ್ಥೆಯ ದಿನೇಶ್ ರೈ ಅವರು ಉಳ್ಳಾಲ ಠಾಣೆಯಲ್ಲಿ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳಾದ ಝಹೀಮ್ ಅಹ್ಮದ್, ನೌಫಾಲ್ ಹಾಗೂ ಇಮ್ತಿಯಾಝ್ ಎಂಬವರ ಮೇಲೆ ಕೇಸು ದಾಖಲಿಸಿ, ಇಮ್ತಿಯಾಝ್ ನನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆತ ನೀಡಿದ ಮಾಹಿತಿಯಾಧಾರದಲ್ಲಿ ಇತರ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಆರು ಮೊಬೈಲ್ ಫೋನ್, 47,000 ರೂಪಾಯಿ ನಗದು ಮತ್ತು 9 ಕ್ಯಾರೇಟ್ ನ 141 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News