×
Ad

ಬನತ್ತಡಿ ಸರಕಾರಿ ಜಾಗದಲ್ಲಿ ಎಫ್‌ಎಸ್‌ಟಿಪಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಆಕ್ಷೇಪ

ಕೋಟೆಕಾರ್ ಪ.ಪಂ.ಸಾಮಾನ್ಯ ಸಭೆ

Update: 2025-11-29 19:26 IST

ಉಳ್ಳಾಲ, ನ.29: ಕೋಟೆಕಾರ್ ಪಟ್ಟಣ ಪಂಚಾಯತ್‌ನ ಸಾಮಾನ್ಯ ಸಭೆಯು ಅಧ್ಯಕ್ಷೆ ದಿವ್ಯಾ ಸತೀಶ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ಸಭೆಯಲ್ಲಿ ಮಾತನಾಡಿದ ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ, ಬನತ್ತಡಿಯಲ್ಲಿರುವ ಸರಕಾರಿ ಜಾಗದಲ್ಲಿ ಎಫ್‌ಎಸ್‌ಟಿಪಿ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣಕ್ಕೆ ಜಾಗ ಮೀಸಲಿಡು ವುದು ಬೇಡ. ಈ ಜಾಗದ ಸಮೀಪ ಹಲವು ಮನೆಗಳಿದ್ದು, ಘಟಕ ನಿರ್ಮಾಣವಾದರೆ ತೊಂದರೆಯಾಗಲಿದೆ. ಈ ಜಾಗವನ್ನು ದಫನ ಭೂಮಿಗೆ ಮೀಸಲಿಡಿ ಎಂದು ಒತ್ತಾಯಿಸಿದರು.

ಈ ಬಗ್ಗೆ ವ್ಯಾಪಕ ಚರ್ಚೆ ನಡೆದು, ಸದಸ್ಯರು ಅಹ್ಮದ್‌ರ ಆಕ್ಷೇಪಕ್ಕೆ ಸಹಮತ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷೆ, ಬನತ್ತಡಿಯಲ್ಲಿ ಗುರುತಿಸಿದ ಜಾಗದಲ್ಲಿ ಎಫ್‌ಎಸ್‌ಟಿಪಿ ನಿರ್ಮಾಣಕ್ಕೆ ಸ್ಥಳೀಯ ಸದಸ್ಯರ ವಿರೋಧ ಇದೆ. ಬೇರೆ ಕಡೆ ಕಡೆ ಮಾಡು ವುದಕ್ಕೆ ಉಳಿದ ಸದಸ್ಯರ ವಿರೋಧ ಇದೆ. ಆದರಿಂದ ಕೋಟೆಕಾರು ಗ್ರಾಮದ ಹೊರಗಡೆ ಘಟಕ ನಿರ್ಮಾಣಕ್ಕೆ ಅವಕಾಶ ಮಾಡಿ ಕೊಡುವಂತೆ ತಹಶೀಲ್ದಾರ್‌ಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಪಶು ಸಂಗೋಪನಾ ಇಲಾಖೆಯ ರಚನಾ ಮಾತನಾಡಿ, ಬೀದಿನಾಯಿಗಳ ಹಾವಳಿ ತಡೆಯಲು ಸಂತಾನ ಹರಣ ಚಿಕಿತ್ಸೆ ನೀಡಲಾಗುತ್ತದೆ. ಸಾಕುನಾಯಿಗಳನ್ನು ಕರೆತಂದಲ್ಲಿ ಸಂತಾನ ಹರಣ ಚಿಕಿತ್ಸೆ ನೀಡಲಾಗುವುದು ಎಂದರು.

ಶಿಶು ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶಂಕರಿ ಮಾತನಾಡಿ, ಪಟ್ನಾ ತಲಪಾಡಿ ಬಳಿ ಒಂದು ಅಂಗನವಾಡಿಯಲ್ಲಿ ಶುಕ್ರವಾರದಿಂದ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಮುಂದಿನ ಹಂತದಲ್ಲಿ ಉಳಿದ ಅಂಗನವಾಡಿಗಳಲ್ಲೂ ಹಂತ ಹಂತವಾಗಿ ಇದು ಆರಂಭಗೊಳ್ಳಲಿದೆ ಎಂದು ಹೇಳಿದರು.

ಅಂಗನವಾಡಿ ತಾಲೂಕು ವ್ಯಾಪ್ತಿಯ ಎಲ್ಲಾ ಕಡೆ ಶೀಘ್ರ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.

ಪಪಂನ ಪ್ರತೀ ವಾರ್ಡ್‌ಗೆ ತಲಾ 15 ದಾರಿದೀಪಗಳನ್ನು ನೀಡಲಾಗುವುದು. ಒಟ್ಟು 280 ದಾರಿದೀಪಗಳನ್ನು ಖರೀದಿ ಮಾಡಲಾಗುವುದು ಎಂದು ಅಧ್ಯಕ್ಷೆ ದಿವ್ಯಾ ಸತೀಶ್ ಸಭೆಗೆ ಮಾಹಿತಿ ನೀಡಿದರು.

ಅಗತ್ಯ ಸ್ಥಳಗಳಲ್ಲಿ ದಾರಿದೀಪಗಳನ್ನು ಅಳವಡಿಸಬೇಕಿರು ವುದರಿಂದ ಪ್ರತೀ ವಾರ್ಡ್‌ಗೆ ತಲಾ 20 ದಾರಿದೀಪಗಳನ್ನು ನೀಡಬೇಕು ಎಂದು ಸದಸ್ಯ ಸುಜಿತ್ ಮಾಡೂರು ಒತ್ತಾಯಿಸಿದರು.

ದಾರಿದೀಪದ ಟೆಂಡರ್ ಸನ್‌ಲೈಟ್ ಸಂಸ್ಥೆಗೆ ನೀಡುವುದು ಬೇಡ. ಬೇರೊಬ್ಬರಿಗೆ ನೀಡಿ. ಒಬ್ಬರೇ ನಿರ್ವಹಣೆ ಮಾಡಲಿ ಎಂದು ಸದಸ್ಯ ಧೀರಜ್ ಆಗ್ರಹಿಸಿದರು.

ಪನೀರ್ ಕಾನ್ವೆಂಟ್ ಬಳಿ ಇರುವ ಸರಕಾರಿ ಸ್ಥಳದಲ್ಲಿ ಅಮೃತ್ 2.0 ಬಹು ಗ್ರಾಮ ಕುಡಿಯುವ ನೀರು ಯೋಜನೆ 10 ಲಕ್ಷ ಲೀ. ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿಸುವ ಚಿಂತನೆ ಇದೆ ಎಂದು ಅಧ್ಯಕ್ಷೆ ತಿಳಿಸಿದರು.

ಟ್ಯಾಂಕ್ ನಿರ್ಮಾಣದ ಬಳಿಕ ಅದರ ನಿರ್ವಹಣೆ ಮಾಡುವವರು ಯಾರು ಎಂಬ ಬಗ್ಗೆ ತೀರ್ಮಾನ ಆಗಬೇಕು. ಈಗಿರುವ 65 ಕೊಳವೆಬಾವಿಗಳ ಪೈಕಿ ಕೆಲವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸುಜಿತ್ ಮಾಡೂರು ಒತ್ತಾಯಿಸಿದರು.

ಪ್ರತೀ ವಾರ್ಡ್‌ಗಳ ಅಭಿವೃದ್ಧಿ ಕಾಮಗಾರಿಗೆ ತಲಾ ಐದು ಲಕ್ಷ ರೂ. ಮೀಸಲಿಡಲಾಗಿದೆ. ಆದರೆ ಅಧ್ಯಕ್ಷರ ವಾರ್ಡ್‌ಗೆ ಮಾತ್ರ 15 ಲಕ್ಷ ರೂ. ಇಡಲಾಗಿದೆ. ಅದನ್ನು ಅಧ್ಯಕ್ಷರ ವಾರ್ಡ್‌ಗೆ ಮಾತ್ರ ಸೀಮಿತವಾಗಿ ಬಳಸಬಾರದು. ಇದರಲ್ಲಿ ತಾರತಮ್ಯ ನೀತಿ ಬೇಡ ಎಂದು ಅಹ್ಮದ್ ಅಜ್ಜಿನಡ್ಕ ಆಕ್ಷೇಪಿಸಿದರು.

16 ವಾರ್ಡ್‌ಗಳಿಗೂ ತುರ್ತು ಕಾಮಗಾರಿಗೆ ಹಣ ಮಂಜೂರು ಮಾಡಲಾಗಿದೆ. ಆದರೆ ತನ್ನ ವಾರ್ಡ್‌ನ್ನು ಮಾತ್ರ ಕಡೆಗಣಿಸಲಾಗಿದೆ ಎಂದು ಎಸ್‌ಡಿಪಿಐ ಸದಸ್ಯೆ ಸಲೀಮಾ ಬಿ. ಹಸೀನಾ ಆಕ್ರೋಶ ವ್ಯಕ್ತಪಡಿಸಿದರು.

ತುರ್ತು ಕಾಮಗಾರಿಗೆ ಸ್ಥಾಯಿ ಸಮಿತಿ ಸದಸ್ಯರ ಸಭೆಯಲ್ಲಿ ಅನುದಾನ ನೀಡಿದೆ. ನೀವು ಸ್ಥಾಯಿ ಸಮಿತಿ ಸದಸ್ಯರಲ್ಲದ ಕಾರಣ ನಿಮ್ಮ ವಾರ್ಡ್ ಬಾಕಿ ಉಳಿದಿರಬಹುದು ಎಂದು ಅಧ್ಯಕ್ಷೆ ಸ್ಪಷ್ಟನೆ ನೀಡಿದರು.

ಸಭೆಯಲ್ಲಿ ಮುಖ್ಯಾಧಿಕಾರಿ ಮಾಲಿನಿ, ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News