ವಿಹಿಂಪ ಮುಖಂಡ ಶ್ರೀಕಾಂತ್ ಶೆಟ್ಟಿಯ ದ್ವೇಷ ಭಾಷಣ, ಪ್ರತೀಕಾರಕ್ಕೆ ಪ್ರಚೋದನೆ ಖಂಡನಾರ್ಹ: ಎಸ್ ಡಿಪಿಐ
ಮಂಗಳೂರು: ಬಜ್ಪೆಯಲ್ಲಿ ಮೇ 25 ರವಿವಾರ ದಂದು ಪೊಲೀಸ್ ಇಲಾಖೆಯ ಯಾವುದೇ ಅನುಮತಿಯಿಲ್ಲದೆ ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗದಳದಂತಹ ಸಂಘಪರಿವಾರದ ಅಂಗಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ "ಬಜ್ಪೆ ಚಲೋ" ಜನಾಗ್ರಹ ಸಭೆಯಲ್ಲಿ, ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಹತ್ಯೆಯನ್ನು ಕೇಂದ್ರೀಕರಿಸಿ, ವಿಶ್ವ ಹಿಂದೂ ಪರಿಷತ್‌ನ ಮುಖಂಡ ಶ್ರೀಕಾಂತ್ ಶೆಟ್ಟಿಯವರು ದ್ವೇಷ ಭಾಷಣ ಮಾಡಿ, ಪ್ರತೀಕಾರಕ್ಕೆ ಪ್ರಚೋದನೆ ನೀಡಿರುವುದು ಖಂಡನೀಯ ಎಂದು ಎಸ್ ಡಿಪಿಐ ಮಂಗಳೂರು ನಗರ ಜಿಲ್ಲಾ ಸಮಿತಿ ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಎಸ್ ಡಿಪಿಐ, ಈ ರೀತಿಯ ಭಾಷಣವು ಸಾಮಾಜಿಕ ಸಾಮರಸ್ಯವನ್ನು ಕದಡುವ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆಯನ್ನು ಹೊಂದಿದೆ. ಕಾನೂನಿನ ಚೌಕಟ್ಟಿನಲ್ಲಿ ಯಾವುದೇ ಸಭೆ ಅಥವಾ ಕಾರ್ಯಕ್ರಮವನ್ನು ಆಯೋಜಿಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಈ ಸಭೆಯನ್ನು ಯಾವುದೇ ಅನುಮತಿಯಿಲ್ಲದೆ ನಡೆಸಿರುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಟೀಕಿಸಿದೆ.
ಈ ಘಟನೆಯ ಆಯೋಜಕರಾದ ಶ್ರೀಕಾಂತ್ ಶೆಟ್ಟಿ, ಶಿವಾನಂದ ಮೆಂಡನ್ ಮತ್ತು ಇತರ ಸಂಘಟನೆಗಳ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮಂಗಳೂರು ನಗರ ಜಿಲ್ಲಾ ಸಮಿತಿಯು ಮಂಗಳೂರು ಪೊಲೀಸ್ ಆಯುಕ್ತರಲ್ಲಿ ಒತ್ತಾಯಿಸಿದೆ.
ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಮತ್ತು ದ್ವೇಷ ಭಾಷಣದಂತಹ ಕೃತ್ಯಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಯು ತಕ್ಷಣ ಕಾನೂನು ಕ್ರಮಕೈಗೊಂಡು, ಆಯೋಜಕರ ವಿರುದ್ಧ ಸೂಕ್ತ ತನಿಖೆ ನಡೆಸಿ, ಶಿಕ್ಷಾರ್ಹ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ತತ್ವವನ್ನು ಎತ್ತಿಹಿಡಿಯಲು ಮತ್ತು ಸಮಾಜದಲ್ಲಿ ಶಾಂತಿ ಕಾಪಾಡಲು ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ನಾವು ಮನವಿ ಮಾಡುತ್ತೇವೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮಂಗಳೂರು ನಗರ ಜಿಲ್ಲಾ ಅಧ್ಯಕ್ಷ ಅಬ್ದುಲ್ ಜಲೀಲ್ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.