×
Ad

‌ಕೊಳವೆಬಾವಿ ವ್ಯವಸ್ಥೆ ಕಲ್ಪಿಸಲು ಲಂಚ ಆರೋಪ: ಪೆರುವಾಯಿ ಗ್ರಾಪಂ ಅಧ್ಯಕ್ಷೆ, ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

Update: 2025-09-06 19:05 IST

ವಿಟ್ಲ: ರಾಜ್ಯ ಸರಕಾರ ಯೋಜನೆಯಡಿ ಕೊಳವೆಬಾವಿ ಕೊರೆಯಲು ಲಂಚ ಪಡೆದ ಆರೋಪದಲ್ಲಿ ಪೆರುವಾಯಿ ಗ್ರಾಪಂ ಅಧ್ಯಕ್ಷೆ ಮತ್ತು ಬಿಲ್ ಕಲೆಕ್ಟರ್ ಮಂಗಳೂರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶನಿವಾರ ಸಂಜೆ ನಡೆದಿದೆ.

ಪೆರುವಾಯಿ ಗ್ರಾಪಂ ಅಧ್ಯಕ್ಷೆ ನಫೀಸಾ ಮತ್ತು ಗ್ರಾಪಂ ಬಿಲ್ ಕಲೆಕ್ಟರ್ ವಿಲಿಯಂ ಎಂಬವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಮಂಗಳೂರು ವಿಭಾಗದ ಪ್ರಕಟನೆ ತಿಳಿಸಿದೆ.

ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದಲ್ಲಿ ದೂರುದಾರರ ಮಾವನಿಗೆ 1 ಎಕರೆ ಕೃಷಿ ಜಮೀನು ಇದೆ. ನೀರಿನ ವ್ಯವಸ್ಥೆ ಇಲ್ಲದ ಕಾರಣ ಪೆರುವಾಯಿ ಗ್ರಾಪಂಗೆ ಸರಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಲು 2024ರಲ್ಲಿ ಪೆರುವಾಯಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. ಆದರೆ ದೂರುದಾರನ ಮಾವನ ಹೆಸರು ಕೊಳವೆ ಬಾವಿ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿರಲಿಲ್ಲ. 2025ರಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಸರಕಾರವು ಕೃಷಿಕರಿಗೆ ಕೊಳವೆ ಬಾವಿ ಮಾಡಿಕೊಡುತ್ತಿರುವ ಬಗ್ಗೆ ಮಾಹಿತಿಯಂತೆ ದೂರುದಾರನ ಮಾವ 2025ರ ಮೇ ತಿಂಗಳಲ್ಲಿ ಕೊಳವೆ ಬಾವಿಗೆ ಅರ್ಜಿ ಹಾಕಿದ್ದರು. ಬಳಿಕ ದೂರುದಾರರ ಪತ್ನಿ ಎರಡ್ಮೂರು ಬಾರಿ ಗ್ರಾಪಂ ಕಚೇರಿಗೆ ಹೋಗಿ ವಿಚಾರಿಸಿ ದರೂ ಕೂಡ ಸ್ಪಂದನ ಸಿಕ್ಕಿರಲಿಲ್ಲ. ದೂರುದಾರನ ಮಾವನಿಗೆ 75 ವರ್ಷ ಪ್ರಾಯವಾಗಿದ್ದು, ಅವರ ಆರೋಗ್ಯ ಸರಿಯಿಲ್ಲದ ಕಾರಣ ದೂರುದಾರರು ಸೆ.2ರಂದು ಗ್ರಾಪಂ ಕಚೇರಿಗೆ ತೆರಳಿ ವಿಚಾರಿಸಿದ್ದರು. ಆವಾಗ ಗ್ರಾಪಂ ಅಧ್ಯಕ್ಷೆ ನೆಫಿಸಾ ‘ನಿಮಗೆ ಬೋರ್‌ವೆಲ್ ಫ್ರೀ ಆಗುತ್ತದೆ, ಬೆಂಗಳೂರು ಆಫೀಸ್‌ಗೆ ಹತ್ತು ಸಾವಿರ ಕೊಡ್ಲಿಕ್ಕೆ ಇದೆ, ಹಣ ಕೊಟ್ಟರೆ ಅವರು ಪಾಸ್ ಮಾಡುತ್ತಾರೆ, ತಾನು ಬೆಂಗಳೂರಿಗೆ ಹೋಗಿ ನಿಮ್ಮ ಕೆಲಸ ಮಾಡಿಸುತ್ತೇನೆ, ಹಣ ತಗೊಂಡು ಬನ್ನಿ, ನೀವು ಹಣ ಕೊಟ್ಟರೆ ಮಾತ್ರ ನಿಮಗೆ ಬೋರ್‌ವೆಲ್ ಪಾಸ್ ಮಾಡಿಸಿ ಕೊಡುತ್ತೇನೆ’ ಎಂದು ಹೇಳಿರುವುದಾಗಿ ದೂರುದಾರರು ತಿಳಿಸಿದ್ದಾರೆ.

ತನ್ನಲ್ಲಿ ಅಷ್ಟು ಹಣ ಇಲ್ಲ ಎಂದು ಹೇಳಿ ವಾಪಸ್ ಬಂದ ತಾನು ಸೆ.4ರಂದು ಮತ್ತೆ ಗ್ರಾಪಂ ಅಧ್ಯಕ್ಷೆಯ ಬಳಿ ಕೇಳಿ ಕೊಂಡಾಗ 10 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಗ್ರಾಪಂ ಅಧ್ಯಕ್ಷೆಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಸೆ.6ರಂದು ನಫೀಸಾ ಬಿಲ್ ಕಲೆಕ್ಟರ್ ವಿಲಿಯಂ ಬಳಿ 10,000 ರೂ. ಲಂಚದ ಹಣವನ್ನು ಪಡೆದುಕೊಳ್ಳಲು ಸೂಚಿಸಿದ್ದರು. ಅದರಂತೆ ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ನಫೀಸಾ ಮತ್ತು ವಿಲಿಯಂರನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ಲೋಕಾಯುಕ್ತ ಎಸ್ಪಿ (ಪ್ರಭಾರ) ಕುಮಾರ್‌ಚಂದ್ರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿಡಾ.ಗಾನ.ಪಿ. ಕುಮಾರ್, ಸುರೇಶ್ ಕುಮಾರ್ ಪಿ, ಇನ್‌ಸ್ಪೆಕ್ಟರ್ ಭಾರತಿ, ಚಂದ್ರಶೇಖರ್ ಕೆ.ಎನ್, ರವಿ ಪವಾರ್, ಸಿಬ್ಬಂದಿಗಳಾದ ಮಹೇಶ್, ರಾಜಪ್ಪ, ರಾಧಕೃಷ್ಣ, ಆದರ್ಶ್, ರಾಮನಾಯ್ಕ, ವಿವೇಕ್, ಪ್ರವೀಣ್, ಗಂಗಣ್ಣ, ನಾಗಪ್ಪ, ಮಾಹದೇವ, ಪವಿತ್ರ, ದುಂಡಪ್ಪ, ರುದ್ರಗೌಡ, ರಾಜಶೇಖರ್ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News