×
Ad

ಪಕ್ಷವನ್ನು ಬದಿಗೊತ್ತಿ ಸಮಾಜದ ಅಭ್ಯರ್ಥಿಗಳಿಗೆ ಬೆಂಬಲ; 3 ಕ್ಷೇತ್ರಗಳಲ್ಲಿ ಬಿಲ್ಲವ ಅಭ್ಯರ್ಥಿಗಳ ಗೆಲುವಿಗೆ ಶ್ರಮ: ಸತ್ಯಜಿತ್ ಸುರತ್ಕಲ್

Update: 2024-04-01 14:09 IST

ಮಂಗಳೂರು, ಎ.1: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ಎಸ್‌ಎನ್‌ಜಿವಿ)ಯ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಂತೆ ಸಮಾಜಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ದ.ಕ., ಉಡುಪಿ- ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಲ್ಲವ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ ಎಂದು ಎಸ್‌ಎನ್‌ಜಿವಿ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

ನಗರದ ಪ್ರೆಸ್‌ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಟೀಂ ಸತ್ಯಜಿತ್ ಸುರತ್ಕಲ್‌ನಲ್ಲಿ ವಿವಿಧ ಸಮಾಜದ ಬಾಂಧವರು ಇರುವುದರಿಂದ ಅದು ಹಾಗೇ ಮುಂದುವರಿಯಲಿದ್ದು, ಚುನಾವಣೆಯ ನನ್ನ ಕಾರ್ಯಕ್ಕೂ ಆ ತಂಡಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ನನ್ನ ಯಾವುದೇ ಕಾರ್ಯಕ್ಕೂ ಬೆಂಬಲ ನೀಡವುದಾಗಿ ಹೇಳಿದ್ದು, ಮುಂದಿನ ದಿನಗಳಲ್ಲಿ ಆ ತಂಡ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದೆ ಎಂದು ಹೇಳಿದರು.

ಕಳೆದ ಶುಕ್ರವಾರ ಎಸ್‌ಎನ್‌ಜಿವಿಯ ಸಭೆ ನಡೆದು ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ರಾಜ್ಯದಲ್ಲಿ ನಾರಾಯಣಗುರು ಸಮಾಜ ಎಂದು ಹೇಳುವ ಬಿಲ್ಲವ, ಈಡಿಗ, ನಾಮಧಾರಿ ಎಂಬ 26 ಪಂಗಡಗಳ ಸಮಾಜ ಅನೇಕ ವರ್ಷಗಳ ನಂತರ ಸಮಾಜಕ್ಕೆ ಮೂರು ಕ್ಷೇತ್ರಗಳಲ್ಲಿ ಅವಕಾಶ ದೊರಕಿದೆ. ದ.ಕ., ಉಡುಪಿ, ಚಿಕ್ಕಮಗಳೂರು, ಕಾರವಾರ, ಶಿವಮೊಗ್ಗದಲ್ಲಿ ಸಮಾಜದ 12 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ನಮ್ಮ ಸಮಾಜ ಬಹುಸಂಖ್ಯಾತ ಸಮಾಜವಾಗಿದೆ. ಆದರೆ ಬಿಜೆಪಿಯಿಂದ 33 ವರ್ಷಗಳಿಂದ ಈ ನಾಲ್ಕೂ ಕ್ಷೇತ್ರಗಳಲ್ಲಿಯೂ ಸಮಾಜದ ಅಭ್ಯರ್ಥಿಗೆ ಅವಕಾಶ ನೀಡಲಾಗಿಲ್ಲ. ಕಾಂಗ್ರೆಸ್‌ನಲ್ಲಿ ನಾಲ್ಕನೆ ಬಾರಿ ಜನಾರ್ದನ ಪೂಜಾರಿ ಸೋತ ಬಳಿಕ ಕಳೆದ ಬಾರಿ ದ.ಕ.ದಲ್ಲಿ ಬಂಟ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಲಾಗಿತ್ತು. ಎಸ್‌ಎನ್‌ಜಿವಿ ಸಂಘಟನೆ ಆರಂಭವಾದ ಶಿವಮೊಗ್ಗದ ಸಿಗಂದೂರಿನಲ್ಲಿ ಆರಂಭಗೊಂಡ ಹೋರಾಟ ಬ್ರಹ್ಮಶ್ರೀ ನಾರಾಯಣಗುರುಗಳ ಟ್ಯಾಬ್ಲೋ ವಿಚಾರ, ಪಠ್ಯಪುಸ್ತಕ, ಅಭಿವೃದ್ಧಿ ನಿಗಮ, ಕಾಂತರಾಜು ವರದಿ ಹೋರಾಟ, ವಿಮಾನ ನಿಲ್ದಾಣಕ್ಕೆ ಕೋಟಿಚನ್ನಯ ಹೆಸರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂಗಾರಪ್ಪರ ಹೆಸರಿಡುವ ಹೋರಾಟ ಸೇರಿದಂತೆ ಹಲವು ಹೋರಾಟಗಳು ನಡೆದಿವೆ. ಇದರ ಪರಿಣಾಮವಾಗಿ ಸಮಾಜಕ್ಕೆ ಬಿಜೆಪಿಯಿಂದ ಉಡುಪಿ- ಚಿಕ್ಕಮಗಳೂರು, ಕಾಂಗ್ರೆಸ್‌ನಿಂದ ಶಿವಮೊಗ್ಗ ಹಾಗೂ ದ.ಕ.ದಲ್ಲಿ ಅವಕಾಶ ನೀಡಲಾಗಿದೆ. ಸಮಾಜದ ಸಂಘಟನೆಯಾಗಿ, ಸಮಾಜವನ್ನು ಗೆಲ್ಲಿಸಲು, ಪಕ್ಷವನ್ನು ಪಕ್ಕಕ್ಕಿಟ್ಟು ಸಮಾಜದ ಅಭ್ಯರ್ಥಿಗಳಾದ ಪದ್ಮರಾಜ್ ಆರ್., ಕೋಟ ಶ್ರೀನಿವಾಸ ಪೂಜಾರಿ ಹಾಗೂ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸುವ ಪ್ರಯತ್ನ ನಾರಾಯಣ ಗುರು ವಿಚಾರವೇದಿಕೆಯಿಂದ ಆಗಲಿದೆ. ಇವರು ಮೂವರು ಗೆದ್ದರೆ ಸಮಾಜಕ್ಕೆ ದೊಡ್ಡ ಶಕ್ತಿ ಸಿಗಲಿದೆ. ಉಳಿದ ಸಮಾಜಗಳಂತೆ ನಮ್ಮ ಸಮಾಜವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮೇಲೆತ್ತಲು ಸಾಧ್ಯ ಆಗಲಿದೆ. ಆ ನಿಟ್ಟಿನಲ್ಲಿ ಮೂರು ಕ್ಷೇತ್ರಗಳಲ್ಲಿಯೂ ತಾನೂ ಪ್ರಚಾರ ಕಾರ್ಯ ನಡೆಸುವುದಾಗಿ ಘೋಷಿಸಿದರು.

ಹಿಂದುತ್ವಕ್ಕಾಗಿ ಕಳೆದ 37 ವರ್ಷಗಳ ಶ್ರಮಕ್ಕೆ ಬೆಲೆ ಸಿಗದಿದ್ದಾಗ, ಅನ್ಯಾಯ ಆದಾಗ, ಹಿಂದುತ್ವದ ಪಕ್ಷದಲ್ಲಿಯೇ ನನ್ನನ್ನು ತಿರಸ್ಕರಿಸಿ, ನನಗೆ ಯಾವುದೇ ಸ್ಥಾನಮಾನ ನೀಡದೆ ಕಡೆಗಣಿಸಿದರೂ ನನ್ನ ಜತೆಗಿದ್ದು, ನನ್ನ ಕಷ್ಟದಲ್ಲಿ ಜತೆಯಾದವರ ಮಾತಿಗೆ ಮಾತ್ರ ಬೆಲೆ ನೀಡಲಿದ್ದೇನೆ. ನನ್ನನ್ನು ಕಾಂಗ್ರೆಸ್‌ವಾದಿ ಅನ್ನಲಿ, ಜಾತಿವಾದಿ ಎಂದು ಆಪಾದಿಸಲಿ. ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಟೀಕೆ, ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದೆ ಸಮಾಜದ ಅಭ್ಯರ್ಥಿಗಳ ಜಯಕ್ಕಾಗಿ ದುಡಿಯಲು ಕಟಿಬದ್ಧನಾಗಿದ್ದೇನೆ ಎಂದು ಹೇಳಿದರು.

ಕಳೆದ ಎರಡು ತಿಂಗಳಿನಿಂದ ಟೀಂ ಸತ್ಯಜಿತ್ ಸುರತ್ಕಲ್ ಹೆಸರಿನಲ್ಲಿ ಚುನಾವಣೆಗೆ ಅಭಿಯಾನ ನಡೆದಿದೆ. ಟೀಂ ಸತ್ಯಜಿತ್ ಸುರತ್ಕಲ್ ರಾಜಕೀಯ ಉದ್ದೇಶದೊಂದಿಗೆ ಮಾಡಲಾಗಿದ್ದು, ಸಮಾವೇಶ, ಸಭೆಗಳು ನಡೆದಿವೆ. ಬಿಜೆಪಿಯಿಂದ ಬೃಜೇಶ್ ಚೌಟ ಅವರಿಗೆ ಟಿಕೆಟ್ ಘೋಷಣೆ ಆದ ಬಳಿಕವೂ ತಂಡದವರು ಮತ್ತೆ ತಮಗೆ ಕಾಲಾವಕಾಶ ನೀಡಿ, ಪಕ್ಷದಲ್ಲಿ ನನಗೆ ಸೂಕ್ತ ಸ್ಥಾನಮಾನ ನಾವು ಕೇಳುವುದಾಗಿ ಹೇಳಿ ನನ್ನನ್ನು ತಡೆ ಹಿಡಿದಿದ್ದರು. ಆದರೆ ಟಿಕೆಟ್ ಘೋಷಣೆಯಾಗಿ 20 ದಿನಗಳಾಗುತ್ತಾ ಬಂದರೂ ಯಾವುದೇ ಜವಾಬ್ಧಾರಿಯ ಘೋಷಣೆ ಮಾಡಿಲ್ಲ. ಹಾಗಾಗಿ ಪ್ರಸಕ್ತ ಚುನಾವಣೆಯಲ್ಲಿ ನಾನು ಯಾವುದೇ ನಿರ್ಧಾರ ಕೈಗೊಳ್ಳಲು ನಾನು ಸ್ವತಂತ್ರ್ಯ ಹಾಗೂ ನನ್ನ ನಿರ್ಧಾರಕ್ಕೆ ಯಾವುದೇ ವಿರೋಧ ಇಲ್ಲ ಎಂಬುದನ್ನು ತಂಡ ಸ್ಪಷ್ಟಪಡಿಸಿದೆ ಎಂದರು.

ಎಸ್‌ಎನ್‌ಜಿವಿಯ ಶಿವಮೊಗ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವು ಹೂಗಾರ್, ಉಪಾಧ್ಯಕ್ಷ ಕೆ.ಪಿ. ಲಿಂಗೇಶ್, ಉಡುಪಿ ತಾಲೂಕು ಅಧ್ಯಕ್ಷ ಶಶಿಧರ ಎಂ. ಅಮೀನ್, ಉಡುಪಿ ಜಿಲ್ಲಾಧ್ಯಕ್ಷ ಜಗನ್ನಾಥ್ ಕೋಟೆ, ಮಂಗಳೂರು ಘಟಕದ ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.

ಸತ್ಯಜಿತ್ ಸುರತ್ಕಲ್ ದೊಡ್ಡ ಶಕ್ತಿ ಆಗಿದ್ದರೆ ಬಿಜೆಪಿಯವರು ಯಾಕೆ ತಿರಸ್ಕರಿಸಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಸತ್ಯಜಿತ್ ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗ ಅಥವಾ ಬಂಟ ಆಗುತ್ತಿದ್ದರೆ ಅವಕಾಶ ಸಿಗುತ್ತಿತ್ತೋ ಏನೋ? ಆದರೆ ನಾನು ಹುಟ್ಟಿದ್ದು, ಶೂದ್ರ ಸಮಾಜದಲ್ಲಿ. ಹಾಗಾಗಿ ಶೂದ್ರ ಸಮಾಜದ ಎಂದರೆ ಕೇವಲ ಸೇವೆ ಮಾಡಲು, ಗುಲಾಮಗಿರಿಗೆ ಮಾತ್ರ ಎಂದು ಗೊತ್ತಿರಲಿಲ್ಲ. ಬಡತನದಲ್ಲಿ ಹುಟ್ಟಿ ಬೆಳೆದ ನಾನು ಹಿಂದುತ್ವ, ಸಂಘ ಎಂದು ನಾನು ನಿಂತಿದ್ದೆ, ನಾಯಕರು ಹೇಳಿದಂತೆ ಬಾಲ ಮುದುರಿಕೊಂಡು ಇರುವವವರಿಗೆ, ಬಕೆಟ್ ಹಿಡಿಯುವವರಿಗೆ ಮಾತ್ರ ಬಿಜೆಪಿಯಲ್ಲಿ ಬೆಲೆ ಇರುವಂತದ್ದು. ಆ ಗುಲಾಮಿ ಮಾನಸಿಕತೆ ನನ್ನಲ್ಲಿಲ್ಲ. ಕೋಟಿ ಚನ್ನಯರು ಸ್ವಾಭಿಮಾನದಿಂದ ಬದುಕಲು ಕಲಿಸಿದವರು. ಅವರ ಸಮುದಾಯದವ ನಾನು. ಜಾತಿ, ಬಡತನದಿಂದಾಗಿ ನನಗೆ ಬಿಜೆಪಿಯಲ್ಲಿ ಅವಕಾಶ ತಪ್ಪಿದೆ ಎಂದು ನಾನು ನೇರವಾಗಿ ಹೇಳಲು ಬಯಸುತ್ತೇನೆ ಎಂದರು. 

ಕೋಟ ಶ್ರೀನಿವಾಸರಿಗೆ ಬಿಜೆಪಿ ಟಿಕೆಟ್‌ನಿಂದ ಸಮಾಜಕ್ಕೆ ಅನ್ಯಾಯ

ಬಿಜೆಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅವಕಾಶ ನೀಡಿದ್ದಾರಲ್ಲ? ಗುಲಾಮಗಿರಿಗೆ ಮಾತ್ರ ಅವಕಾಶ ಎನ್ನುತ್ತೀರಲ್ಲಾ ಎಂಬ ಪ್ರಶ್ನೆಗೆ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಲ್ಲವ ಸಮಾಜದ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಸಂತೋಷವಿದೆ. ಆದರೆ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೊಡುವ ಮೂಲಕ ಬಿಲ್ಲವ ಸಮುದಾಯಕ್ಕೆ ಬಿಜೆಪಿಯಿಂದ ನ್ಯಾಯವೇ? ಅನ್ಯಾಯವೇ ಎಂಬ ಬಗ್ಗೆ ಪತ್ರಕರ್ತರು ವಿಶ್ಲೇಷಣೆ ಮಾಡಿದ್ದೀರಾ ಎಂದು ಸತ್ಯಜಿತ್ ಸುರತ್ಕಲ್ ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯರಾಗಿದ್ದವರು ಅವರು. ಆ ಸ್ಥಾನಮಾನ ಹೋರಾಟದ ಮೂಲಕ ಪಡೆಯಬಹುದು. ವಿಧಾನ ಪರಿಷತ್‌ನ ವಿಪಕ್ಷ ನಾಯಕನ ಹುದ್ದೆಯಲ್ಲಿದ್ದರು. ಮುಖ್ಯಮಂತ್ರಿಯ ಬಳಿಕ ದೊರಕುವ ಸ್ಥಾನಮಾನ ಅದು. ಅದು ಮತ್ತೆ ಈ ಸಮಾಜಕ್ಕೆ ಸಿಗಲು ಸಾಧ್ಯವೇ? ಬಿಜೆಪಿಗೆ ಬಿಲ್ಲವ ಸಮಾಜಕ್ಕೆ ನ್ಯಾಯ ಕೊಡಬೇಕೆಂದಿದ್ದರೆ, ಉಡುಪಿ- ಚಿಕ್ಕಮಗಳೂರಿನಲ್ಲಿ ಜಿ.ಪಂ. ಅಧ್ಯಕ್ಷರಾಗಿ ಪ್ರಾಮಾಣಿಕವಾಗಿ ನಿರ್ವಹಣೆ ಮಾಡಿದ ಬಿ.ಎಲ್. ಶಂಕರ ಪೂಜಾರಿ ಅಥವಾ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಕಿರಣ್ ಕುಮಾರ್, ರಾಜಪ್ಪ ಅವರಿದ್ದರು. ಅವರಿಗೆ ನೀಡಬಹುದಿತ್ತಲ್ಲವೇ? ಸತ್ಯಜಿತ್ ನೇರವಾಗಿ ಮಾತನಾಡುತ್ತಾನೆ ಅದಕ್ಕಾಗಿ ಕೊಡಲಿಲ್ಲ ಬಿಡಿ. ಕೋಟ ಅವರು ನಾನು ಯಾವ ಮಾನಸಿಕತೆ ಬಗ್ಗೆ ಮಾತನಾಡಿದೆ, ಹಾಗೆ ಇದ್ದವರು. ಅದೇ ಕಾರಣಕ್ಕೆ ಅವರಿಗೆ ನೀಡಲಾಗಿದೆ. ಸಂಸದ ಸ್ಥಾನಕ್ಕೆ ಅಭ್ಯರ್ಥಿಯಾಗಿಸಿ ಎರಡು ಸ್ಥಾನವನ್ನು ಸಮಾಜ ಕಳೆದುಕೊಳ್ಳುವಂತೆ ಮಾಡಲಾಗಿದೆ. ಲಾಭಕ್ಕಿಂತ ಹೆಚ್ಚು ಅನ್ಯಾಯ ಆಗಿದೆ ಎಂದು ಆರೋಪಿಸಿದರು.

ಹಿಂದುತ್ವ ಎನ್ನುವ ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಎಲ್ಲಿದೆ?

ರಾಜಕೀಯದಲ್ಲಿ ಜಾತಿಯೇ ಇಂದು ಮಾನದಂಡವಾಗುತ್ತಿರುವುದು ದುರ್ದೈವ. ಹೇಳಲು ಮಾತ್ರ ಹಿಂದುತ್ವ. ದ.ಕ. ಜಿಲ್ಲೆಯಲ್ಲಿ ಬಂಟ ಸಮುದಾಯಕ್ಕೆ ಸಂಸದ ಸ್ಥಾನಮಾನ ನೀಡದಿದ್ದರೆ ಪಕ್ಷ ಸೋಲುತ್ತದೆ ಎಂದು ಸಭೆಯಲ್ಲಿ ಹೇಳಲಾಗಿದೆ ಎಂಬ ಮಾಹಿತಿ ನಮಗೆ ದೊರಕಿದೆ. ಯಡಿಯೂರಪ್ಪನವರು ಮಾತೆತ್ತಿದರೆ ಸರ್ವರಿಗೂ ಸಮಬಾಳು, ಸಮಪಾಲು ಎನ್ನುತ್ತಾರೆ. ಆದರೆ 25 ಕ್ಷೇತ್ರದಲ್ಲಿ ಯಾರಿಗೆ ಸ್ಥಾನ ನೀಡಿದ್ದಾರೆ ಎಂಬ ಬಗ್ಗೆ ಪತ್ರಕರ್ತರಲ್ಲಿ ಮಾಹಿತಿ ಇದೆಯೇ? ಕಾಂತರಾಜು ವರದಿ ಪ್ರಕಾರ, 60 ಲಕ್ಷ ಜನಸಂಖ್ಯೆ ಇರುವ ಲಿಂಗಾಯಿತ ಸಮಾಜದ ಒಂಭತ್ತು ಅಭ್ಯರ್ಥಿಗಳು, 1 ಕೋಟಿಗೂ ಅಧಿಕ ಇರುವ ಎಸ್‌ಸಿಎಸ್‌ಟಿ ಸಮಾಜಕ್ಕೆ ಐದಾರು ಸ್ಥಾನ, ಹಿಂದುಳಿದ ವರ್ಗದಲ್ಲಿ 200ಕ್ಕೂ ಅಧಿಕ ಜಾತಿಗಳಿವೆ. ಕುರುಬರು, ಬಿಲ್ಲವ, ಮೊಗವೀರರು ಸುಮಾರು 70 ಲಕ್ಷ ಜನಸಂಖ್ಯೆ ಇರುವ ಸಮುದಾಯಕ್ಕೆ ಸಿಕ್ಕಿದ್ದು ಮೂರು ಸ್ಥಾನ, ಬ್ರಾಹ್ಮಣ ಸಮಾಜ 15 ಲಕ್ಷ ಜನಸಂಖ್ಯೆ ಹೊಂದಿರುವವರಿಗೂ 3 ಸ್ಥಾನ, ಒಕ್ಕಲಿಗ ಸಮಾಜಕ್ಕೆ ನಾಲ್ಕೈದು ದೊರಕಿದೆ. ಇದು ಯಾವ ಸಾಮಾಜಿಕ ನ್ಯಾಯ? ಕಾಂಗ್ರೆಸ್‌ನಲ್ಲಿಯೂ ಬಹಳ ವ್ಯತ್ಯಾಸ ಏನಿಲ್ಲ. ಆದರೆ ಬಿಜೆಪಿಯ ಹಿಂದುತ್ವ ಎಂದರೆ, ಲಿಂಗಾಯಿತ, ಬ್ರಾಹ್ಮಣ, ಒಕ್ಕಲಿಗ, ಬಂಟರು ಮಾತ್ರವೇ? ಬಿಜೆಪಿ ಇದಕ್ಕೆ ಉತ್ತರಿಸಬೇಕು ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು. 

ರಾಜ್ಯದಲ್ಲಿ ಬಿಜೆಪಿ ಇಲ್ಲ, ಬಿಎಸ್‌ಪಿ ಇರುವುದು!

ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಇಲ್ಲ. ವಿಧಾನಸಭಾ ಚುನಾವಣೆಯವರೆಗೆ ಬಿಎಲ್‌ಪಿ, ಬಿ.ಎಲ್. ಸಂತೋಷ್ ಪಾರ್ಟಿ ಇದ್ದಿದ್ದು. ಈಗ ಬಿಎಸ್‌ಪಿ, ಬಿ.ಎಸ್. ಯಡಿಯೂರಪ್ಪ ಪಾರ್ಟಿ ಇರುವುದು. ಯಾರು ಅವರ ಜತೆಯಲ್ಲಿ ಗುರುತಿಸಿಕೊಳ್ಳುತ್ತಾರೋ, ಯಾರು ಜೈ ಎನ್ನುತ್ತಾರೋ, ಅವರ ಹಿಂದೆ ಯಾರು ನೇತಾಡುತ್ತಾರೋ ಅವರಿಗೆ ಮಾತ್ರ ಅವಕಾಶ ಆಗುತ್ತಿದೆ ಎಂದು ಸತ್ಯಜಿತ್ ಸುರತ್ಕಲ್ ಆರೋಪಿಸಿದರು.

ಬಿಲ್ಲವ ಸಮುದಾಯದ ಜತೆಗೆ ಇನ್ನುಳಿದ ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬಿಸುವ ಕೆಲಸ ನಾವು ಮಾಡಬೇಕಾಗಿದೆ. ನಿಜವಾದ ಹಿಂದುತ್ವ, ಅತ್ಯಂತ ಕಟ್ಟಕಡೆಯ ವ್ಯಕ್ತಿ ಕೂಡಾ ಸ್ವಾಭಿಮಾನದಿಂದ ಬದುಕುವ ಸಮಾಜ ನಿರ್ಮಾಣ ಆಗಬೇಕಾದ ಕಡೆಗೆ ಹೆಜ್ಜೆ ಇಡಬೇಕಾಗಿದೆ. ಅದಕ್ಕಾಗಿ ಹಿಂದುಳಿದ ವರ್ಗಕ್ಕೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಸಮಾಜದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಾಗಿದೆ ಎಂದು ಅವರು ಹೇಳಿದರು.

ಜನಾರ್ದನ ಪೂಜಾರಿ ಗೆಲುವು ಅಸಾಧ್ಯವಾಗುವಲ್ಲಿ ನಾನೂ ಒಬ್ಬ ಕಾರಣಕರ್ತ ಎಂದು ಒಪ್ಪಿಕೊಂಡ ಸತ್ಯಜಿತ್ ಸುರತ್ಕಲ್, ಆ ಸಮಯದಲ್ಲಿ ಈ ರೀತಿಯ ಸಾಮಾಜಿಕ ಅನ್ಯಾಯದ ಯೋಚನೆ, ಕಲ್ಪನೆ ಇರಲಿಲ್ಲ. ಎಲ್ಲಾ ಸಮಾಜಕ್ಕೆ ನ್ಯಾಯ ಸಿಗಲಿದೆ, ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು, ಬಂಧು ಎಂಬ ಮಾತು ನಿಜವಾಗುತ್ತದೆ ಎಂಬ ನಂಬಿಕೆ ಇತ್ತು. ಆದರೆ ದುರ್ದೈವ. ನಮ್ಮನ್ನೆಲ್ಲಾ ಬಲಿಪಶುಮಾಡಿಕೊಂಡು ಜನಾರ್ದನ ಪೂಜಾರಿ ಅವರ ಅವಸಾನಕ್ಕೆ ಕಾರಣವಾಯಿತು ಎಂದು ಹತಾಶೆ ವ್ಯಕ್ತಪಡಿಸಿದರು.

ಬ್ರಹ್ಮಕಲಶ ಸಂದರ್ಭದಲ್ಲಿ ನಾಲ್ಕು ಕಡೆ ಅಡುಗೆ, ನಾಲ್ಕು ತರದ ಊಟ ಎಂದು ಪಂಕ್ತಿಬೇಧದ ಬಗ್ಗೆ ಉಲ್ಲೇಖಿಸಿದ ಸತ್ಯಜಿತ್ ಸುರತ್ಕಲ್, ಇದೇ ಹಿಂದುತ್ವದ ಹೆಸರಿನಲ್ಲಿ ಅಧಿಕಾರವನ್ನು ಪಡೆದ ಶಾಸಕರು ಅಧ್ಯಕ್ಷ ಸ್ಥಾನದಲ್ಲಿಯೂ ಇಂತಹ ಘಟನೆಗಳು, ಇತರ ದೇವಸ್ಥಾನಗಳಲ್ಲಿಯೂ ಇಂತಹ ಪಂಕ್ತಿಬೇಧ ಮುಂದುವರಿಯುತ್ತಿದೆ. ಹಿಂದೂ ಸಮಾಜಕ್ಕೆ ಬಾಹ್ಯ ಶಕ್ತಿಗಳಿಂದ ತೊಂದರೆ ಇರುವುದಕ್ಕಿಂತಲೂ ಮುಖ್ಯವಾಗಿ, ಹಿಂದು ಧರ್ಮದೊಳಗಿನ ಸಾಮಾಜಿಕ ಅಸಮಾನತೆ ದೂರವಾಗಬೇಕು ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News