×
Ad

ದಾವಣಗೆರೆ: ಕಾನೂನು ಬಾಹಿರವಾಗಿ ಮಗು ಪಡೆದ ಆರೋಪ; ದೂರು

Update: 2024-05-30 23:24 IST

ದಾವಣಗೆರೆ: ಕಾನೂನು ಬಾಹಿರವಾಗಿ ಮಗುವೊಂದನ್ನು ದತ್ತು ಪಡೆದು, ಸುಳ್ಳು ಜನನ ಪ್ರಮಾಣಪತ್ರ ಪಡೆದ ಆರೋಪದಡಿ ಮೂವರ ವಿರುದ್ಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ಬುಧವಾರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್. ಕವಿತಾ ದೂರು ನೀಡಿದ್ದಾರೆ.

ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದ ಮಂಜುಳಾ ದಾಸಪ್ಪರ ರಾಜಪ್ಪ, ಇವರಿಗೆ ಮಗು ನೀಡಿದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸುರ ಗ್ರಾಮದ ಪರಿತ್ಯಕ್ತ ಮಹಿಳೆ ಕುಸುಮಾ ಹಾಗೂ ಇವರ ನಡುವೆ ಮಧ್ಯಸ್ಥಿಕೆ ವಹಿಸಿ, ಜನನ ಪತ್ರ ಪಡೆಯಲು ಸುಳ್ಳು ದಾಖಲೆ ಸೃಷ್ಠಿಸಿಕೊಟ್ಟ, ಹಾವೇರಿ ಜಿಲ್ಲೆಯ ಬ್ಯಾಡಗಿಯ ದಾದಿ ಚೈತುನಬಿ ಸೌದಾಗರ ವಿರುದ್ಧ ದೂರು ದಾಖಲಾಗಿದೆ.

ದೊಡ್ಡಬಾತಿಯ ಮಂಜುಳಾ ದಾಸಪ್ಪರ ರಾಜಪ್ಪರ ಮನೆಯಲ್ಲಿ 4 ತಿಂಗಳ ಹೆಣ್ಣು ಮಗುವನ್ನು ಅನಧಿಕೃತವಾಗಿ ಸಾಕುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ಕರೆ ಬಂದಿದೆ. ಈ ಕರೆಯ ಮಾಹಿತಿ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ಸೂಚನೆ ಹಿನ್ನೆಲೆ ಮೇ 24ರ ಸಂಜೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಎಂ.ಎಚ್. ಪ್ರತಿಭಾ, ಎನ್.ಕೆ. ಚಂದ್ರಶೇಖರ್ ಹಾಗೂ ಆಪ್ತ ಸಮಾಲೋಚಕಿ ಐ.ಎಂ. ಶ್ವೇತಾ ದೊಡ್ಡಬಾತಿಯ ಮಂಜುಳಾ ಮನೆಗೆ ಭೇಟಿ ನೀಡಿದ್ದಾರೆ.

ಈ ವೇಳೆ ಮನೆಯಲ್ಲಿ ಮಗು ಇರುವುದು ಪತ್ತೆಯಾಗಿದೆ. ಈ ಬಗ್ಗೆ ಮಹಿಳೆಯನ್ನು ವಿಚಾರಿಸಿದಾಗ, ‘ತಮಗೆ ಪರಿಚಯ ಇರುವ ಕುಸುಮಾಗೆ ಬ್ಯಾಡಗಿಯ ಪಾರಂಪರಿಕ ಹಾಗೂ ತರಬೇತಿ ಪಡೆದ ದಾದಿ ಚೈತುನಬಿ ಸೌದಾಗರ ಮನೆಯಲ್ಲಿ ಹೆಣ್ಣು ಮಗು ಜನನವಾಗಿತ್ತು. ಈ ಮಗುವಿಗೆ ನಾವೇ ತಂದೆ-ತಾಯಿ ಎಂಬುದಾಗಿ, ಹಾವೇರಿ ಜಿಲ್ಲೆಯ ಬ್ಯಾಡಗಿ ಪುರಸಭೆಯಿಂದ ಜನನ ಪ್ರಮಾಣಪತ್ರ ಪಡೆದು ಸಾಕುತ್ತಿರುವುದಾಗಿ ಹೇಳಿದ್ದಾರೆ.

ಈ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಮಾರ್ಗದರ್ಶನದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್. ಕವಿತಾ ಅವರು, ಮೂವರ ವಿರುದ್ಧ ದಾವಣಗೆರೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News