ದ್ವೇಷ ಭಾಷಣ ವಿರೋಧಿ ಮಸೂದೆಯ ಹಿಂದೆ ಹಿಂದುತ್ವ ಸಂಘಟನೆ, ನಾಯಕರನ್ನು ಮುಗಿಸುವ ಷಡ್ಯಂತ್ರ: ಮುತಾಲಿಕ್ ಆರೋಪ
ದಾವಣಗೆರೆ: ರಾಜ್ಯ ಸರಕಾರ ದ್ವೇಷ ಭಾಷಣ, ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಕಾಯ್ದೆಯ ಮೂಲಕ ಹಿಂದೂಗಳನ್ನು ಗುರಿಯಾಗಿಸಿ ಹಿಂದುತ್ವ ಸಂಘಟನೆ, ನಾಯಕರನ್ನು ಮುಗಿಸುವ ಷಡ್ಯಂತ್ರ ನಡೆಸಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಮಸೂದೆಯನ್ನು ಶ್ರೀರಾಮಸೇನೆ ಉಗ್ರವಾಗಿ ಖಂಡಿಸುತ್ತದೆ. ಸರಕಾರ ಕೇವಲ ಹಿಂದೂಗಳನ್ನು ಟಾರ್ಗೆಟ್ ಮಾಡಿ, ಮುಸ್ಲಿಮರ ಓಟ್ ಗಾಗಿ ಈ ಮಸೂದೆ ಜಾರಿಗೆ ತರಲು ಹೊರಟಿದೆ. ಗೋಹತ್ಯೆ ನಿಷೇಧ ಜಾರಿಯಲ್ಲಿದ್ದಾಗಲೂ ಹಲವೆಡೆ ಗೋಹತ್ಯೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಗೋಹತ್ಯೆ ವಿರುದ್ಧ ಮಾತನಾಡುವುದು ತಪ್ಪೇ?, ಲವ್ ಜಿಹಾದ್, ಪ್ರೀತಿ, ಪ್ರೇಮದ ಹೆಸರಲ್ಲಿ ಮತಾಂತರ ನಡೆದಾಗ ತಡೆಯುವುದು ತಪ್ಪೇ? ಈ ಕುರಿತು ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ತಪ್ಪೇ? ಹಲವೆಡೆ ಅನಧಿಕೃತವಾಗಿ ಚರ್ಚ್, ಮಸೀದಿ ಸ್ಥಾಪನೆ, ಸ್ಮಶಾನ ಜಾಗ ಕಬಳಿಗೆ ನಡೆದಾಗ ವಿರೋಧಿಸುವುದು ತಪ್ಪೇ? ಎಂದು ಪ್ರಶ್ನಿಸಿದರು.
ಪ್ರಶ್ನಿಸುವ, ವಿರೋಧಿಸುವ ಧೈರ್ಯವನ್ನು ಸರಕಾರ ಹತ್ತಿಕ್ಕಿ ಹಿಂದೂಗಳನ್ನು ಸಂಪೂರ್ಣವಾಗಿ ನಾಶ ಮಾಡುವ ಹುನ್ನಾರ ನಡೆಸಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಹರಣಗೈದಿದೆ. ಆದ್ದರಿಂದ ಈ ಕೂಡಲೇ ರಾಜ್ಯದ ಬಿಜೆಪಿ, ಜೆಡಿಎಸ್ ಶಾಸಕರು ಸಂಪುಟ ಸಭೆಯಲ್ಲಿ ಈ ಮಸೂದೆ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸುವ ಮೂಲಕ ಈ ಮಸೂದೆ ಜಾರಿಯಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ಎಲ್ಲ ಶಾಸಕರಿಗೆ ಒತ್ತಾಯಿಸಿ ಸಂಘಟನೆಯಿಂದ ಮನವಿ ಸಲ್ಲಿಸಿ ಒತ್ತಡ ಹೇರಲಾಗುವುದು ಎಂದು ಮುತಾಲಿಕ್ ಹೇಳಿದರು.
ಇದೇ ಸಂದರ್ಭ ಮುತಾಲಿಕ್ ಕಾಯ್ದೆಯ ಪ್ರತಿಗಳನ್ನು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಪ್ರಮುಖರಾದ ಪರಶುರಾಮ್ ನಡುವಿನಮನಿ, ಯಶವಂತ್, ಶ್ರೀಧರ್, ಮಧು ಇತರರಿದ್ದರು.