Davanagere | ಚಿನ್ನಾಭರಣ ಸುಲಿಗೆ ಆರೋಪ; ಪಿಎಸ್ಸೈ ಸೇರಿದಂತೆ ಏಳು ಜನರ ಬಂಧನ
ಸಾಂದರ್ಭಿಕ ಚಿತ್ರ
ದಾವಣಗೆರೆ : ಬಂಗಾರದ ಆಭರಣ ತಯಾರು ಮಾಡುವ ವ್ಯಕ್ತಿಯೊಬ್ಬರಿಂದ 7.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ ಆರೋಪದಡಿ ಇಬ್ಬರು ಪಿಎಸ್ಸೈ ಸೇರಿದಂತೆ ಒಟ್ಟು ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಸೈಗಳಾದ ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣ್ ಕುಮಾರ್ ಹಾಗೂ ಇಬ್ಬರು ಕಾನ್‌ಸ್ಟೇಬಲ್ ಸೇರಿದಂತೆ ಒಟ್ಟು 7 ಜನರನ್ನು ಕೆಟಿಜೆ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರವಾರ ಮೂಲದ ವಿಶ್ವನಾಥ್ ಅರ್ಕಸಾಲಿ ಅವರು ಮಂಡಿಪೇಟೆ, ಹಳೆಪೇಟೆಯ ಕೆಲ ಆಭರಣ ಮಾರಾಟಗಾರರಿಂದ ಚಿನ್ನದ ಗಟ್ಟಿ ಹಾಗೂ ಹಳೆಯ ಉಂಗುರಗಳನ್ನು ಸಂಗ್ರಹಿಸಿ ರವಿವಾರ ಮಧ್ಯರಾತ್ರಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಕಾರವಾರಕ್ಕೆ ಮರಳಲು ಹುಬ್ಬಳ್ಳಿ ಮಾರ್ಗದ ಬಸ್ ಏರಿದ ಅವರನ್ನು ಪಿಎಸ್ಸೈಗಳು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ.
ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಸಮೀಪದ ಕೆಟಿಜೆ ನಗರ ಪೊಲೀಸ್ ಠಾಣೆಯ ಬಳಿಗೆ ವಿಶ್ವನಾಥ್ ಅವರನ್ನು ಕರೆತಂದಿದ್ದಾರೆ. ಠಾಣೆಯ ಹೊರಭಾಗದಲ್ಲಿ ಕಾರು ನಿಲ್ಲಿಸಿ ಕೆಲಹೊತ್ತು ಠಾಣೆಯಲ್ಲಿದ್ದ ಪೊಲೀಸರೊಂದಿಗೆ ಚರ್ಚಿಸಿದ ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿಶ್ವನಾಥ್ ಅವರನ್ನು ಬೆದರಿಸಿದ್ದಾರೆ. ಅವರ ಬಳಿ ಇದ್ದ 78 ಗ್ರಾಂ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿಗಳನ್ನು ಕಸಿದುಕೊಂಡು ಊರಿಗೆ ಮರಳುವಂತೆ ಸೂಚಿಸಿದ್ದರು. ಶಂಕೆಗೊಂಡ ವಿಶ್ವನಾಥ್ ಘಟನೆಯ ಕುರಿತು ಮನೆಗೆ ಮಾಹಿತಿ ನೀಡಿ, ಸೋಮವಾರ ಸಂಜೆ ಠಾಣೆಗೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.
ಮಾಹಿತಿ ನೀಡಿ ಸಹಾಯ ಮಾಡಿದ ಆರೋಪದಡಿ ದಾವಣಗೆರೆ ಮೂಲದ ಇಬ್ಬರು ಆಭರಣ ತಯಾರಕರಾದ ವಿನಾಯಕ ನಗರದ ಸತೀಶ್ ರೇವಣ್ಕರ್, ಶಿರಸಿ ಮೂಲದ ನಾಗರಾಜ್ ರೇವಣ್ಕರನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಕೃತ್ಯಕ್ಕೆ ಬಳಸಿದ್ದ ಕಾರು, ನಕಲಿ ಪಿಸ್ತೂಲನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೂರ್ವವಲಯ ಐಜಿಪಿ ಡಾ. ರವಿಕಾಂತೇಗೌಡ ಈ ಕುರಿತು ಮಾತನಾಡಿ, ಆರೋಪಿಗಳನ್ನು ತಡರಾತ್ರಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಕೆಟಿಜೆ ನಗರ ರಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ವಶಕ್ಕೆ ಕೇಳಲಿದ್ದೇವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಆಭರಣ ತಯಾರಕರಿಂದ ಚಿನ್ನ ದೋಚಿದ ಆರೋಪ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಪಿಎಸ್ಸೈ ಸೇರಿದಂತೆ ನಾಲ್ವರನ್ನು ತಡರಾತ್ರಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಮಂಗಳವಾರ ಮತ್ತೆ ಮೂವರು ಸೇರಿ ಒಟ್ಟು ಏಳು ಜನರನ್ನು ಬಂಧಿಸಿದ್ದು, ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಡಿವೈಎಸ್ಪಿಯವರನ್ನು ನಿಯೋಜಿಸಿ ವಶಕ್ಕೆ ಪಡೆದು ನಿಷ್ಪಕ್ಷ ವಿಚಾರಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ