Davanagere| ಚಿನ್ನಾಭರಣ ಸುಲಿಗೆ ಪ್ರಕರಣ : ಪ್ರೊಬೆಷನರಿ ಪಿಎಸ್ಸೈ ವಜಾ, ಇನ್ನೋರ್ವ ಅಮಾನತು
ಸಾಂದರ್ಭಿಕ ಚಿತ್ರ
ದಾವಣಗೆರೆ : ಚಿನ್ನದ ವ್ಯಾಪಾರಿಯನ್ನು ಬೆದರಿಸಿ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದ ಪ್ರಕರಣದ ಮೊದಲ ಆರೋಪಿ ಪ್ರೊಬೆಷನರಿ ಸಬ್ ಇನ್‌ಸ್ಪೆಕ್ಟರ್‌ನನ್ನು ಸೇವೆಯಿಂದ ವಜಾಗೊಳಿಸಿ ಮತ್ತೊಬ್ಬ ಆರೋಪಿಯನ್ನು ಅಮಾನತುಗೊಳಿಸಿ ಪೂರ್ವ ವಲಯ ಪೊಲೀಸ್ ನಿರೀಕ್ಷಕ ಡಾ.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಯ ಪರೀಕ್ಷಾರ್ಥ ಅವಧಿಯಲ್ಲಿದ್ದ ಪ್ರಕರಣದ ಮೊದಲ ಆರೋಪಿ ಮಾಳಪ್ಪ ಯಲ್ಲಪ್ಪ ಚಿಪ್ಪಲಕಟ್ಟಿಯನ್ನು ಪೊಲೀಸ್ ಸೇವೆಯಿಂದಲೇ ವಜಾಗೊಳಿಸಲಾಗಿದ್ದು, ಎರಡನೇ ಆರೋಪಿ ಪ್ರವೀಣ್ ಕುಮಾರ್‌ರನ್ನು ನ.24ರಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದ್ದಾರೆ.
ಮಾಳಪ್ಪ ಚಿಪ್ಪಲಕಟ್ಟಿ ಹಾವೇರಿ ಜಿಲ್ಲೆಯ ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರೊಬೆಷನರಿ ಪಿಎಸ್ಸೈ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರವೀಣ್‌ಕುಮಾರ್ ರಾಣೆಬೆನ್ನೂರು ಸಂಚಾರ ಠಾಣೆಯಿಂದ ಶಿವಮೊಗ್ಗ ಜಿಲ್ಲೆಯ ಸಾಗರ ಠಾಣೆಗೆ ವರ್ಗಾವಣೆಗೊಂಡಿದ್ದರು.
ಸಾರ್ವಜನಿಕರಿಗೆ ರಕ್ಷಣೆ ನೀಡುವ ಹಾಗೂ ನೊಂದವರಿಗೆ ನ್ಯಾಯ ಕೊಡಿಸುವಂತಹ ಬಹುಮುಖ್ಯ, ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ದರೋಡೆ ಕೃತ್ಯ ಎಸಗಿದ್ದು ಘೋರ ಅಪರಾಧ. ಈ ಹಿನ್ನೆಲೆಯಲ್ಲಿ ಮಾಳಪ್ಪ ಚಿಪ್ಪಲಕಟ್ಟಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದರೆ ಪ್ರವೀಣ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಐಜಿಪಿ ಆದೇಶದಲ್ಲಿ ತಿಳಿಸಿದ್ದಾರೆ.
ನ.24ರಂದು ನಸುಕಿನಲ್ಲಿ ಕಾರವಾರದ ಆಭರಣ ತಯಾರಕ ವಿಶ್ವನಾಥ್ ಅರ್ಕಸಾಲಿ ಅವರಿಂದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪಿಎಸ್ಸೈ ಸೇರಿ 7 ಆರೋಪಿಗಳನ್ನು ಕೆಟಿಜೆ ನಗರ ಠಾಣೆಯ ಪೊಲೀಸರು ನ.25ರಂದು ಬಂಧಿಸಿದ್ದರು.