×
Ad

Davanagere | ನೀರು ತುಂಬಿದ್ದ ಪಾತ್ರೆಗೆ ಬಿದ್ದು ಎರಡು ವರ್ಷದ ‌ಮಗು ಮೃತ್ಯು

Update: 2025-11-26 12:54 IST

ಸ್ಥಳೀಯ ಶಾಸಕ ಬಿ. ದೇವೇಂದ್ರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಮೃತ ಮಗುವಿನ ಕುಟುಂಬಕ್ಕೆ ವೈಯಕ್ತಿಕ ಧನಸಹಾಯ ನೀಡಿದರು

ದಾವಣಗೆರೆ : ನೀರು ತುಂಬಿದ್ದ ಪಾತ್ರೆಗೆ ಬಿದ್ದು ಎರಡು ವರ್ಷದ ‌ಮಗು ಮೃತಪಟ್ಟಿರುವ ಘಟನೆ ಜಗಳೂರು ತಾಲೂಕಿನ ನಿಬಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ರಾಜೇಶ್ವರಿ ಮತ್ತು ಮಂಜುನಾಥ ದಂಪತಿಯ ಮೂರು ಮಕ್ಕಳಲ್ಲಿ ಕೊನೆಯವಳಾದ ವೇದಾ ಮೃತಪಟ್ಟ ಮಗು.  ನ.25 ಮಂಗಳವಾರ ಬೆಳಗ್ಗೆ‌ ಮಕ್ಕಳಾದ ರೋಜಾ, ರೋಹಿಣಿ, ವೇದಾ ಮನೆಯ ಮುಂದೆ ಆಡುತ್ತಿದ್ದರು. ಮನೆಕೆಲಸದಲ್ಲಿದ್ದ ತಾಯಿ ರಾಜೇಶ್ವರಿ ಸ್ವಲ್ಪ ಸಮಯದ ನಂತರ ಮನೆಯ ಹೊರಗಡೆ ಬಂದು ನೋಡಿದಾಗ ವೇದಾಳು ಸ್ಥಳದಲ್ಲಿ ಇರಲಿಲ್ಲ. ಹುಡುಕುತ್ತಾ ಮನೆಯ ಹಿಂದೆ ಇರುವ ಬಚ್ಚಲಿಗೆ ಹೋಗಿ ನೋಡಿದಾಗ ನೀರು ತುಂಬಿದ ಪಾತ್ರೆಯಲ್ಲಿ ಬಿದ್ದಿದ್ದಳು. ತಕ್ಷಣವೇ ಗಂಡನನ್ನು ಕರೆದು ಮಗುವನ್ನೆತ್ತಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದರು.

ವೇದಾ ಮನೆಯಲ್ಲಿ ಆಟ ಆಡುತ್ತಾ ಮನೆಯ ಹಿಂದಿನ ಬಚ್ಚಲು ಮನೆ ಕಡೆಗೆ ಹೋಗಿದ್ದು, ಆಕಸ್ಮಿಕವಾಗಿ ಕಾಲು ಜಾರಿ ನೀರು ತುಂಬಿದ ಪಾತ್ರೆಗೆ ಬಿದ್ದು ಮೇಲೆ ಎದ್ದು ಬರಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾಳೆ. ನನ್ನ ಮಗಳು ಮೃತಪಟ್ಟಿರುವ ಬಗ್ಗೆ ನಮಗೆ ಬೇರೆ ಯಾವುದೇ ಅನುಮಾನವಿರುವುದಿಲ್ಲ ಎಂದು ತಂದೆ ಮಂಜುನಾಥ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಶಾಸಕ ಬಿ. ದೇವೇಂದ್ರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಮೃತ ಕುಟುಂಬಕ್ಕೆ ವೈಯಕ್ತಿಕವಾಗಿ 25000 ರೂ ಸಹಾಯಧನ ನೀಡಿದರು. ಈ ವೇಳೆ ಮಾತನಾಡಿದ ಅವರು, ಮನೆಯಲ್ಲಿ ಪೋಷಕರು ಚಿಕ್ಕ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.   ಕ್ಷೇತ್ರದ ವ್ಯಾಪ್ತಿಯ ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆಗಳಲ್ಲಿಯೂ ಮಕ್ಕಳನ್ನು ಜಾಗ್ರತೆಯಿಂದ ನೊಡಿಕೊಳ್ಳಬೇಕು ಎಂದು ಸಲಹೆ‌ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News