×
Ad

Davanagere | ಸಾಕುನಾಯಿಗಳು ಕಚ್ಚಿ ಮಹಿಳೆ ಮೃತ್ಯು ಪ್ರಕರಣ: ಓರ್ವನ ಬಂಧನ

Update: 2025-12-08 00:18 IST

ಸಾಂದರ್ಭಿಕ ಚಿತ್ರ | PC : freepik

ದಾವಣಗೆರೆ : ಮಹಿಳೆಯನ್ನು ಭೀಕರವಾಗಿ ಕಚ್ಚಿ ಆಕೆಯ ಸಾವಿಗೆ ಕಾರಣವಾಗಿದ್ದ ಜೋಡಿ ರಾಟ್ ವೀಲರ್ ನಾಯಿಗಳ ಮಾಲಕನನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.

ದಾವಣಗೆರೆ ದೇವರಾಜ ಅರಸು ಬಡಾವಣೆಯ ಶೈಲೇಶಕುಮಾರ (27) ಬಂಧಿತ ಆರೋಪಿ.

ಆರೋಪಿ ಶೈಲೇಶ್ ಕುಮಾರ್ ಪಪ್ಪಿ ಮತ್ತು ಹೀರೋ ಹೆಸರಿನ ಜೋಡಿ ರಾಟ್ ವೀಲರ್ ನಾಯಿಗಳನ್ನು ಬಾಡಿಗೆ ಆಟೊ ರಿಕ್ಷಾವೊಂದರಲ್ಲಿ ತಂದು ಬಿಟ್ಚು ಹೋಗಿದ್ದು, ರಾಷ್ಟ್ರೀಯ ಹೆದ್ದಾರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿ ಸೇರಿದಂತೆ ಎಲ್ಲ ಮಾಹಿತಿ ಕಲೆ ಹಾಕಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿ ಸಮೀಪ ಗುರುವಾರ ತಡರಾತ್ರಿ ತನ್ನ ತವರು ಮನೆಗೆ ಹೊರಟಿದ್ದ ಮಲ್ಲಶೆಟ್ಟಿಹಳ್ಳಿ ಗ್ರಾಮದ ಅನಿತಾ ಎಂಬವರ ಮೇಲೆ ನಿರ್ಜನ ಪ್ರದೇಶದಲ್ಲಿ ಜೋಡಿ ರಾಟ್ ವೀಲರ್ ನಾಯಿಗಳು ಏಕಾಏಕಿ ದಾಳಿ ಮಾಡಿ, ಆಕೆಯ ಸಾವಿಗೆ ಕಾರಣವಾಗಿದ್ದವು. ಪೊಲೀಸರು, ಗ್ರಾಮಸ್ಥರು ನಾಯಿಗಳನ್ನು ಕೋಲು, ಪೈಪ್, ಪೋಲ್ಸ್‌ಗಳಿಂದ ಹೊಡೆದು, ಹಗ್ಗ ಬಿಗಿದು ಬಂಧಿಸಿದ್ದರು. ಇದೀಗ ಆಂತರಿಕ ರಕ್ತಸ್ರಾವದಿಂದಾಗಿ ಎರಡೂ ನಾಯಿಗಳೂ ಸಾವನ್ನಪ್ಪಿವೆ.

ಶೈಲೇಶ್ ಕುಮಾರ್ ಮೂರು ರಾಟ್ ವೀಲರ್ ನಾಯಿಗಳನ್ನು ಸಾಕಿದ್ದ. ಈ ಪೈಕಿ ಪಪ್ಪಿ ಮತ್ತು ಹೀರೋ ನಾಯಿಗಳು ಇತ್ತೀಚೆಗೆ ನಮ್ಮ ಮೇಲೆ ಹಲ್ಲೆ ನಡೆಸಲು ಬರುತ್ತಿದ್ದವು, ನನಗೂ ಮತ್ತು ನನ್ನ ಮಾವ ಶಿಕುಮಾರ ಅವರ ಹೊಟ್ಟೆಗೆ ಪರಚಿದ್ದರಿಂದ ಬೇಸರಗೊಂಡು ಡಿ.4ರಂದು ರಾತ್ರಿ 10:30ರ ಸುಮಾರಿಗೆ ಹೊನ್ನೂರು ಗೊಲ್ಲರಹಟ್ಟಿ ಬಳಿ ಬಿಟ್ಟು ಬಂದಿದ್ದಾಗಿ ಆರೋಪಿಯು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News