×
Ad

ದಾವಣಗೆರೆ | ಶಿಕ್ಷಕಿಗೆ 22.40 ಲಕ್ಷ ರೂ. ವಂಚನೆ ಪ್ರಕರಣ: ಓರ್ವನ ಬಂಧನ

Update: 2025-08-28 23:12 IST

ದಾವಣಗೆರೆ, ಆ.28: ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕಿಯೊಬ್ಬರಿಗೆ 22.40 ಲಕ್ಷ ರೂ. ವಂಚಿಸಿದ ಪ್ರಕರಣವನ್ನು ಭೇದಿಸಿದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೊರಟಿಕೆರೆ ಗ್ರಾಮದ ಅರುಣ್ ಕುಮಾರ್ (35) ಬಂಧಿತ ಆರೋಪಿ.

ಘಟನೆ ವಿವರ:

ಆರೋಪಿ ಅರುಣ್ ಕುಮಾರ್ ಫೆ.5ರಂದು ಕರ್ತವ್ಯದಲ್ಲಿದ್ದ ಶಿಕ್ಷಕಿಗೆ ಕರೆ ಮಾಡಿ ನಾನು ಮುಂಬಯಿಯ ಬ್ಲೂ ಡಾಟ್ ಕೋರಿಯರ್ ಸರ್ವಿಸ್‌ನ ವ್ಯಕ್ತಿ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಫೆಡಕ್ಸ್ ಕೊರಿಯರ್‌ನಲ್ಲಿ ಕೆಲವು ಔಷಧಗಳು ಮುಂಬೈನಿಂದ ದುಬೈಗೆ ಪಾರ್ಸಲ್ ಹೋಗುತ್ತಿದ್ದು, ಅದರಲ್ಲಿ ಡ್ರಗ್ಸ್ ಕೂಡ ಇದೆ ಎಂದು ಹೆದರಿಸಿ, ನಿಮ್ಮ ಮೇಲೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾನೆ.

ನರೇಶ್ ಗೊಯಿಲ್ ಎನ್ನುವ ವ್ಯಕ್ತಿ ಹಣ ವರ್ಗಾವಣೆ ಮಾಡುತ್ತಿದ್ದಾನೆ. ಆ ಪ್ರಕರಣದಲ್ಲಿ ನೀವು ಕೂಡ ಇದ್ದಿರಾ. ಕೆನರಾ ಬ್ಯಾಂಕ್ ಮುಂಬೈಯಲ್ಲಿ ನಿಮ್ಮ ಅಕೌಂಟ್ ಇದೆ. ಇದರ ಎಟಿಎಂ ಕಾರ್ಡ್ ನರೇಶ ಗೋಯಿಲ್ ಹತ್ತಿರ ಸಿಕ್ಕಿದೆ. ಪ್ರತಿ ತಿಂಗಳು 20 ಲಕ್ಷ ರೂ. ನಿಮ್ಮ ಖಾತೆಗೆ ಬರುತ್ತಿದೆ. ನಿಮ್ಮ ಖಾತೆಯಲ್ಲಿರುವ ಹಣ ಅಧಿಕೃತ ಅಥವಾ ಅನಧಿಕೃತ ಎಂದು ಪರಿಶೀಲನೆ ಮಾಡಬೇಕು. ನಾವು ಕಳುಹಿಸಿದ ಎರಡು ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿ ಎಂದು ಹೇಳಿ ನನ್ನ ಖಾತೆಯಿಂದ 22,40,000 ರೂ. ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಶಿಕ್ಷಕಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ಆರೋಪಿಗಳ ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆಯ ಡಿಎಸ್ಪಿ ಬಂಕಾಳಿ ನಾಗಪ್ಪ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಯನ್ನೊಳಗೊಂಡ ತಂಡವು ಪ್ರಕರಣ ಭೇದಿಸಿ ಎ-3 ಆರೋಪಿ ಅರುಣ್ ಕುಮಾರ್‌ನನ್ನು ಬಂಧಿಸಿ ಆತನಿಂದ 1.90 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಬಲೆ ಬೀಸಿದ್ದಾರೆ.

ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಡಿವೈಎಸ್ಪಿ ಬಂಕಾಳಿ ನಾಗಪ್ಪ ಹಾಗೂ ಸಿಬ್ಬಂದಿ ಅಶೋಕ, ಮುತ್ತುರಾಜ್, ಯೋಗೀಶ್ ನಾಯ್ಕ್, ನಿಜಲಿಂಗಪ್ಪ ಅವರನ್ನು ಎಸ್ಪಿ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News