×
Ad

ದಾವಣಗೆರೆ : ಪೊಲೀಸರ ವಶದಲ್ಲಿದ್ದ ಯುವಕ ಸಾವು ; ಆಕ್ರೋಶಿತರಿಂದ ಠಾಣೆ‌ ಮೇಲೆ ದಾಳಿ

Update: 2024-05-25 11:47 IST

ದಾವಣಗೆರೆ : ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಸಾವಿಗೀಡಾಗಿದ್ದು, ಇದರಿಂದ ಆಕ್ರೋಶಗೊಂಡ ಮೃತ ಆರೋಪಿಯ ಸಂಬಂಧಿಕರು ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯಲ್ಲಿ 11 ಮಂದಿ ಪೊಲೀಸರಿಗೆ ಗಾಯಗೊಂಡು, ಕೆಲವು ವಾಹನಗಳು ಜಖಂಗೊಂಡಿರುವುದಾಗಿ ವರದಿಯಾಗಿದೆ.

ಚನ್ನಗಿರಿ ಪಟ್ಟಣದ ಟಿಪ್ಪು ನಗರ ನಿವಾಸಿಯಾಗಿದ್ದ ಆದಿಲ್ (30) ಎಂಬಾತನ್ನು ಮಟ್ಕಾ ಆಡಿಸುತ್ತಿದ್ದ ಹಿನ್ನಲೆ ಪೊಲೀಸರು ವಶಕ್ಕೆ ಪಡೆದು, ಸಂಜೆ ಪೊಲೀಸ್ ಠಾಣೆಗೆ ಕರೆತಂದಿದ್ದರು. ಆದರೆ ಬಿಪಿ ಲೋ ಆಗಿ ಬಿದ್ದ ಆರೋಪಿ ಆದಿಲ್‌ ಠಾಣೆಯಲ್ಲಿ ಕುಸಿದು ಬಿದ್ದಿದ್ದಾನೆ ಎಂದು ಹೇಳಲಾಗಿದೆ. ಕೂಡಲೇ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಇದರಿಂದ ಆರೋಪಿ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿ ಸಂಬಂಧಿಕರು ಆಕ್ರೋಶಗೊಂಡು ಪೊಲೀಸ್​ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಕರಣ ಸಂಬಂಧ ದಾವಣಗೆರೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಮಾತನಾಡಿ, ಟಿಪ್ಪು ನಗರದ ನಿವಾಸಿಯಾಗಿದ್ದ ಮೃತ ಆದಿಲ್​ನನ್ನು​ ಶುಕ್ರವಾರ ಪೊಲೀಸರು ಠಾಣೆಗೆ ಕರೆತಂದರು. ಆದರೆ ಬಳಿಕ ಆರೋಪಿ​ ಠಾಣೆಯಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ್ದೇವೆ.‌ ಆದರೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ಆದಿಲ್​ ಪೊಲೀಸ್ ಠಾಣೆಯಲ್ಲಿ ಆರು-ಏಳು ನಿಮಿಷ ಕೂಡ ಇಲ್ಲ ಎಂದು ತಿಳಿಸಿದರು.

ಘಟನೆ ಸಂಬಂಧ ಮೃತ ಆದಿಲ್ ತಂದೆ ದೂರು ಕೊಟ್ಟಿದ್ದಾರೆ. ತನಿಖೆ ಆಗುತ್ತದೆ.‌ ಈಗಾಗಲೇ ಮೃತದೇಹವನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.‌ ಇದು ಗಂಭೀರ ಪ್ರಕರಣ ಹಿನ್ನೆಲೆ ನ್ಯಾಯಾಧೀಶರ ಸಮ್ಮುಖದಲ್ಲಿ ತನಿಖೆ ಮಾಡಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು‌ ಪ್ರಕರಣ ದಾಖಲಾಗಿವೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News