ದಾವಣಗೆರೆ ಕಾಂಗ್ರೆಸ್‌ ನಲ್ಲಿ ಭಿನ್ನಮತ; ಬಂಡಾಯ ಅಭ್ಯರ್ಥಿಯಾಗಿ ಜಿ.ಬಿ. ವಿನಯ್‌ ಕುಮಾರ್ ಕಣಕ್ಕೆ

Update: 2024-04-09 06:37 GMT

ದಾವಣಗೆರೆ:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯಸ್ಥಿಕೆಯ ಹೊರತಾಗಿಯೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಇನ್‌ಸೈಟ್ಸ್‌ ಐಎಎಸ್ ಸಂಸ್ಥೆಯ ಸಂಸ್ಥಾಪಕ, ಕಾಂಗ್ರೆಸ್‌ ಮುಖಂಡ ಜಿ.ಬಿ. ವಿನಯ್‌ಕುಮಾರ್ ಅವರು ಘೋಷಿಸಿದ್ದಾರೆ.

ಸೋಮವಾರ  ತಮ್ಮ ಬೆಂಬಲಿಗರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼನಾಯಕರ ಮಾತಿಗಿಂತ ಜನರ ಅಭಿಪ್ರಾಯಕ್ಕೆ ನಾನು ಮನ್ನಣೆ ನೀಡುತ್ತೇನೆ. ಇದೊಂದು ಧರ್ಮ ಸಂಕಟ. ಪಕ್ಷೇತರ ಸ್ಪರ್ಧೆ ಸುಲಭ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ನಾನು ಜನರ ತೀರ್ಮಾನದಂತೆ ಸ್ಪರ್ಧಿಸುವ ತೀರ್ಮಾನ ಮಾಡಿದ್ದೇನೆ. ಚುನಾವಣೆಯಲ್ಲಿ ಗೆದ್ದ ಬಳಿಕ ಸಿದ್ದರಾಮಯ್ಯ ಅವರಿಗೆ ಮುಖ ತೋರಿಸುತ್ತೇನೆʼ ಎಂದು ಹೇಳಿದರು.

‘ಮುಖ್ಯಮಂತ್ರಿಗಳ ಜೊತೆ ಭಾನುವಾರ ಸಮಾಲೋಚನೆ ನಡೆದಿದೆಯಾದರೂ ಅಂತಿಮವಾಗಿ ಏನೂ ಹೇಳಲಿಲ್ಲ. ಇದೊಂದು ಪೊಲಿಟಿಕಲ್ ಸೂಯಿಸೈಡ್ ಅನಿಸಬಹುದು. ಆದರೆ ಕುಟುಂಬದವರು ಹಾಗೂ ಕ್ಷೇತ್ರದ ಜನರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದೇನೆ. ನಾಮಪತ್ರ ಸಲ್ಲಿಸಿದ ಮೇಲೆ ಯಾವುದೇ ಒತ್ತಡ ಬಂದರೂ ವಾಪಸ್‌ ತೆಗೆದುಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜಿಲ್ಲೆಯಲ್ಲಿ ಎರಡು ಪ್ರಮುಖ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ನಡೆಯುತ್ತಿರುವುದರಿಂದ ಜನರಲ್ಲಿ ಅಸಮಾಧಾನವಿದೆ. ಇಬ್ಬರ ವಿರುದ್ಧವೂ ಜನರು ಮತ ಚಲಾಯಿಸಲಿದ್ದು, ಆ ಮತಗಳು ನನಗೆ ಬೀಳಲಿವೆ. ಹೊಸಬರಿಗೆ ಅವಕಾಶ ಸಿಗಬೇಕು ಎಂದೇ ನನ್ನ ಹೋರಾಟ. ನನಗೆ ಇಬ್ಬರೂ ಎದುರಾಳಿಗಳೇ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News