ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ; 139 ಶಾಸಕರ ಬೆಂಬಲ ಡಿಕೆಶಿಗೆ ಇದೆ : ಶಾಸಕ ಬಸವರಾಜು ಶಿವಗಂಗಾ
"ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನು ಹೈಕಮಾಂಡ್ ಗಮನಿಸುತ್ತಿದೆ"
ದಾವಣಗೆರೆ : 40 ರಿಂದ 50 ನಮ್ಮಂತಹ ಯುವ ಶಾಸಕರು ಡಿ.ಕೆ.ಶಿವಕುಮಾರ್ ಏನೇ ಹೇಳಿದರೂ ತ್ಯಾಗಮಾಡಲು ಸಿದ್ದರಾಗಿದ್ದೇವೆ ಎಂದು ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆಯಾಗಿರುವ ಕುರಿತು ನನಗೆ ಮಾಹಿತಿ ಇದೆ. 139 ಶಾಸಕರ ಬೆಂಬಲ ಡಿಕೆಶಿ ಅವರಿಗೆ ಇದೆ. ಅವರು ಪ್ರಾಣ ಕೇಳಿದರೂ ಕೊಡುವುದಕ್ಕೆ ತಯಾರಿದ್ದೇವೆ ಎಂದರು.
ನನಗಿರುವ ಮಾಹಿತಿ ಪ್ರಕಾರ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ. ಯತೀಂದ್ರ ಸಿದ್ದರಾಮಯ್ಯ ಅವರು ಪದೇ ಪದೇ ಈ ರೀತಿಯ ಹೇಳಿಕೆ ನೀಡುತ್ತಲೇ ಇದ್ದಾರೆ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನು ಪಕ್ಷದ ಹೈಕಮಾಂಡ ಗಮನಿಸುತ್ತಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರೀಯಾಂಕಾ ಗಾಂಧಿ ಇದ್ದಾರೆ. ಪಕ್ಷದಲ್ಲಿ ಅಧಿಕಾರ ಹಂಚಿಕೆ ಆಗಿದೇಯೇ? ಇಲ್ಲ ಎಂಬುದು ಸ್ಪಷ್ಟ ಪಡೆಸಬೇಕು ಎಂದು ಹೇಳಿದರು.
ಡಿಕೆಶಿಯವರು ಹೇಳಿದಂತೆ ಯತೀಂದ್ರ ಸಿದ್ದರಾಮಯ್ಯ ನಮ್ಮ ಹೈಕಮಾಂಡ್. ಪದೇ ಪದೇ ಮಾಧ್ಯಮಗಳ ಮುಂದೆ ಬಂದು ಯತೀಂದ್ರ ಸಿದ್ದರಾಮಯ್ಯ ಅವರು ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ , ರಾಹುಲ್ ಗಾಂಧಿಯವರು ಇದ್ದಾರೆ. ಸಿದ್ದರಾಮಯ್ಯನವರು ಸ್ಪಷ್ಟಪಡಿಸಲಿ, ನಾನು ಯಾವುದೇ ಮಾತು ಕೊಟ್ಟಿಲ್ಲ ಎಂದು ಹೇಳಲಿ. ಆಗ ನಾವು ಎಲ್ಲರೂ ಯಾವುದೇ ಪ್ರಶ್ನೆ ಎತ್ತೋದಿಲ್ಲ. ಸಿಎಂ ಬದಲಾವಣೆ ನನ್ನ ಹೇಳಿಕೆಯನ್ನು ಗಣನೆಗೆ ತೆಗೆದುಕೊಳ್ಳಿ, ಯಾಕಂದರೆ ನನ್ನ ಒಂದು ಓಟ್ ಇದೆ. ಆದರೆ, ಯತೀಂದ್ರ ಸಿದ್ದರಾಮಯ್ಯನವರದ್ದು ಓಟ್ ಇಲ್ಲ, ಅವರದ್ದು ಏಕೆ ಗಣನೆಗೆ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು.
ನಮ್ಮ ಹೈಕಮಾಂಡ್ ಬಲಿಷ್ಠವಾಗಿದೆ. ಯತೀಂದ್ರ ಸಿದ್ದರಾಮಯ್ಯಗೆ ಕಡಿವಾಣ ಹಾಕುತ್ತಾರೆ, ಕಾದು ನೋಡಿ ಎಂದ ಅವರು, ನನಗೆ ನೋಟೀಸ್ ಕೊಟ್ಟಿದ್ದನ್ನು ಸ್ವಾಗತ ಮಾಡಿದ್ದೇನೆ. ಆದರೆ ಸಿಎಂ ಮಗ ಅಂತ ಸುಮ್ನೆ ಆಗಿಲ್ಲ. ಹೈಕಮಾಂಡ್ ವಿರುದ್ಧ ಮಾತನಾಡಿದ ಸಚಿವರನ್ನೇ ತೆಗೆದರು. ಅದ್ದರಿಂದ ಎಲ್ಲವನ್ನು ಹೈಕಮಾಂಡ್ ಗಮನಿಸುತ್ತದೆ ಎಂದರು.