ಪ್ರೊ.ಪ್ರತಾಪ್ ಸಿಂಗ್ ನಿಧನ
ಕೋಲಾರ, ಸೆ.3 : ಕೆಜಿಎಫ್ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ಭೂಗರ್ಭ ಶಾಸ್ತ್ರ ಪ್ರಾಧ್ಯಾಪಕರು ಹಾಗೂ ಎನ್.ಸಿ.ಸಿ. ಅಧಿಕಾರಿಯಾಗಿದ್ದ ಮೇಜರ್ ಪ್ರೊ.ಪ್ರತಾಪ್ ಸಿಂಗ್ (80) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಕೆಜಿಎಫ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಸೇವೆಗೆ ಸೇರಿದ ಪ್ರತಾಪ್ ಸಿಂಗ್ ರವರು ಭೂಗರ್ಭ ಶಾಸ್ತ್ರ ಉಪನ್ಯಾಸದ ಜೊತೆಗೆ ಎನ್.ಸಿ.ಸಿ. ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು, ತಮ್ಮ ನಿವೃತ್ತಿಯ ಅಂಚಿಗೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಇವರು ಎನ್.ಸಿ.ಸಿ. ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಎನ್.ಸಿ.ಸಿ. ಸೇರಲು ಪ್ರೇರಣೆ ನೀಡುತ್ತಿದ್ದರಲ್ಲದೆ ನೂರಾರು ವಿದ್ಯಾರ್ಥಿಗಳು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಲು ಉತ್ಸಾಹ ತುಂಬುವ ಮೂಲಕ ನೂರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿ ದೀಪವಾಗಿದ್ದಾರೆ.
ಇವರಿಂದ ಮಾರ್ಗದರ್ಶನ ಪಡೆದ ಸಹಸ್ರಾರು ವಿದ್ಯಾರ್ಥಿಗಳು ಇಂದು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಾಪ್ ಸಿಂಗ್ ಅವರು ತಮ್ಮ ಮೊಮ್ಮಗಳನ್ನು ವೈದ್ಯಕೀಯ ಶಿಕ್ಷಣಕ್ಕಾಗಿ ದಾಖಲಿಸಲು ಸಿಕ್ಕಿಂ ಗೆ ತೆರಳಿದ್ದರು, ದಾಖಲಾತಿ ಪ್ರಕ್ರಿಯೆ ಮುಗಿಸಿ ಮರುಪ್ರಯಾಣಕ್ಕೆ ಮುಂಚೆ ರಾತ್ರಿ ಊಟಕ್ಕೆ ಕುಳಿತಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ.
ಮೃತರು ಮಡದಿ, ಇಬ್ಬರು ಮಕ್ಕಳು, ಅಳಿಯ, ಮೊಮ್ಮಕ್ಕಳನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಹೆಚ್.ಎಸ್. ಆರ್. ಬಡಾವಣೆಯ ಅವರ ಸ್ವಗೃಹದಲ್ಲಿ ಇಡಲಾಗಿದ್ದು, ಅಂತ್ಯ ಸಂಸ್ಕಾರವನ್ನು ಸೆ.4ರಂದು ಅಪರಾಹ್ನ 12-30ಕ್ಕೆ ಬೆಂಗಳೂರಿನ ಹೊಸೂರು ರಸ್ತೆಯ ಕೂಡ್ಲು ರುದ್ರಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬದವರು ತಿಳಿಸಿರುತ್ತಾರೆ.
ಇವರ ನಿಧನಕ್ಕೆ ಕೆಜಿಎಫ್ ಪ್ರಥಮ ದರ್ಜೆ ಕಾಲೇಜು ನಿವೃತ್ತ ಪ್ರಾಧ್ಯಾಪಕರುಗಳಾದ ಡಾ.ರವಿಚಂದ್ರನ್, ಪ್ರೊ.ಎಂ.ಸುಬ್ರಮಣಿ, ಪ್ರೊ.ರೆಜಿನಾ, ಹಳೆಯ ವಿದ್ಯಾರ್ಥಿಗಳಾದ ಡಿ.ದೇವರಾಜ್, ಟಿ.ಪಾಂಡಿಯನ್, ಪೇಶ್ವಾ , ಎ.ಜಿ.ಕರಿಯಪ್ಪ, ಭೋಧಿ ಸತ್ವನ್, ಕ್ಯಾಪ್ಟನ್ ಡಾ.ಟಿ.ಪ್ರಭಾಕರನ್, ಕರುಣಾಮೂರ್ತಿ, ಸಿ.ವಿ.ನಾಗರಾಜ್, ಸಿ. ನಾಗೋಜಿ ರಾವ್, ಯು.ಗೋಪಿನಾಥ್ ಮತ್ತು ಅಪಾರ ವಿದ್ಯಾರ್ಥಿ ಬಳಗ ಸಂತಾಪ ಸೂಚಿಸಿದ್ದಾರೆ.