ಸಿಪಿಐ(ಎಂ) ಹಿರಿಯ ಕಾರ್ಯಕರ್ತ ತಿಮ್ಮಯ್ಯ ಕೊಂಚಾಡಿ ನಿಧನ
Update: 2026-06-05 11:11 IST
ಮಂಗಳೂರು, ಜೂ.5: ಸಿಪಿಐ(ಎಂ)ನ ಹಿರಿಯ ಸದಸ್ಯ ಹಾಗೂ ಕಮ್ಯುನಿಸ್ಟ್ ಚಳವಳಿಯ ಸಕ್ರಿಯ ಕಾರ್ಯಕರ್ತ ತಿಮ್ಮಯ್ಯ ಕೊಂಚಾಡಿ (70) ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಯೆಯ್ಯಾಡಿ ಕೊಂಚಾಡಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ರಾಜಕೀಯ ಜೀವನ ಆರಂಭಿಸಿದ್ದ ಅವರು, ಬಳಿಕ ಎಡಪಂಥೀಯ ಚಳವಳಿಗೆ ಸೇರ್ಪಡೆಗೊಂಡು ಸಿಪಿಐ(ಎಂ)ನ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುವ ವರ್ಗದ ಹಕ್ಕುಗಳಿಗಾಗಿ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ನಾಲ್ವರು ಪುತ್ರರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಸಿಪಿಐ(ಎಂ), ಡಿವೈಎಫ್‌ಐ, ಎಸ್‌ಎಫ್‌ಐ, ಸಿಐಟಿಯು, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿವೆ.