ಇನಾಂ ವೀರಾಪೂರದಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣ | ಗ್ರಾಮದಲ್ಲಿ ಶಾಂತಿ ಕಾಪಾಡಿ; ಇಂತಹ ದುರ್ಘಟನೆಗಳು ಜರುಗದಂತೆ ಮುನ್ನಚ್ಚರಿಕೆ ವಹಿಸಿ : ಆರ್.ಬಿ.ತಿಮ್ಮಾಪುರ
ಧಾರವಾಡ : ಮರ್ಯಾದೆಗೇಡು ಹತ್ಯೆ ನಡೆದಂತಹ ಇನಾಂ ವೀರಾಪೂರ ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ನಿಯಮಾನುಸಾರ ಪರಿಹಾರ, ರಕ್ಷಣೆ ನೀಡಬೇಕೆಂದು ಅಬಕಾರಿ ಇಲಾಖೆ ಸಚಿವ ಆರ್.ಬಿ.ತಿಮ್ಮಾಪುರ್ ಅವರು ಪೊಲೀಸ್ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಿದರು.
ಮಂಗಳವಾರ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದೊಂದಿಗೆ ಸಭೆ ಜರುಗಿಸಿ, ಇನಾಂ ವೀರಾಪೂರ ಗ್ರಾಮದಲ್ಲಿನ ದೌರ್ಜನ್ಯ, ಕೊಲೆ ಪ್ರಕರಣದ ಮಾಹಿತಿ ಪಡೆದು ಮಾತನಾಡಿದ ಅವರು, ಇದೊಂದು ಅಮಾನವೀಯ ಘಟನೆ. ಇಂತಹ ಮನಸ್ಥಿತಿಗಳಿಂದ ಸಾಮಾಜಿಕ ವ್ಯವಸ್ಥೆ ಹಾಳಾಗುತ್ತಿದೆ. ಈ ಘಟನೆಯಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಸರಕಾರಿ ಅಭಿಯೋಜಕರಿಗೆ ಅಗತ್ಯ ಸಹಕಾರ ನೀಡಬೇಕು ಎಂದರು.
ಈಗಾಗಲೇ ದಾಖಲಿಸಿರುವ ಎಫ್.ಐ.ಆರ್. ಪ್ರಕಾರ ಎಲ್ಲರ ಬಂಧನವಾಗಬೇಕು. ಗ್ರಾಮದ ಸಾಮರಸ್ಯಕ್ಕೆ, ಸೌಹಾರ್ದತೆಗೆ ಧಕ್ಕೆ ಆಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಘಟನೆಯಲ್ಲಿ ಕಂದಾಯ, ಸಮಾಜ ಕಲ್ಯಾಣ ಇಲಾಖೆಗಳು ತಮ್ಮ ಕರ್ತವ್ಯ ನಿರ್ವಹಿಸಿವೆ. ಆದರೂ ಇನ್ನಷ್ಟು ತ್ವರೀತವಾಗಿ ಸ್ಪಂದಿಸಬೇಕಿತ್ತು ಎಂದು ಅವರು ಹೇಳಿದರು.
ಗುಪ್ತವಾರ್ತೆಯ ವಿಭಾಗದ ಸಕಾಲಿಕ ಮಾಹಿತಿ ಕೊರತೆಯಿಂದ ದುರ್ಘಟನೆ ತಡೆಗಟ್ಟಲು ಸಾಧ್ಯವಾಗಿಲ್ಲ. ಘಟನೆ ನಂತರ ವಿವಿಧ ಇಲಾಖೆಗಳು ನಿರ್ವಹಿಸಿದ ಕಾರ್ಯಗಳ ಕುರಿತು, ನಿಯಮ ಪಾಲನೆ ಕುರಿತು ತನಿಖೆ ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಪಾರದರ್ಶಕವಾಗಿ ತನಿಖೆ ಮಾಡಿ, ವರದಿ ನೀಡಬೇಕು ಎಂದು ಸಚಿವರು ಹೇಳಿದರು.
ಜಿಲ್ಲಾಧಿಕಾರಿ ದಿವ್ಯಾ ಪ್ರಭು ಮಾತನಾಡಿ, ವಿವೇಕಾನಂದ ದೊಡ್ಡಮನಿ ಕುಟುಂಬದ ಬೇಡಿಕೆಗಳನ್ನು ಜಿಲ್ಲಾಡಳಿತ ಹಂತದಲ್ಲಿ ಈಡೇರಿಸಲಾಗಿದೆ. ಅವರ ಕೆಲವು ಬೇಡಿಕೆಗಳ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈಗಾಗಲೇ ಗ್ರಾಮದಲ್ಲಿ ಶಾಂತಿ ಸಭೆ ಮಾಡಿ, ದೊಡ್ಡಮನಿ ಕುಟುಂಬವನ್ನು ಅವರ ಮನೆಗೆ ಸೇರಿಸಲಾಗಿದೆ ಎಂದು ತಿಳಿಸಿದರು.
ಶಾಂತಿ, ಸೌಹಾರ್ದತೆಯಿಂದ ಎಲ್ಲರೂ ಇರುವುದಾಗಿ ಗ್ರಾಮಸ್ಥರು ಭರವಸೆ ನೀಡಿದ್ದಾರೆ. ಗ್ರಾಮದಲ್ಲಿ ಪೊಲೀಸ್ ಬಂದೊಬಸ್ತ್, ಕುಟುಂಬದವರಿಗೆ ಅಗತ್ಯ ಚಿಕಿತ್ಸೆ, ಕೌನ್ಸಿಲಿಂಗ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೆ 5 ಲಕ್ಷ ರೂ.ಪರಿಹಾರ ನೀಡಲಾಗಿದೆ. ಗ್ರಾಮ ಹಾಗೂ ಕುಟುಂಬಗಳ ಮೇಲೆ ಮುನ್ನೆಚರಿಕೆಯಾಗಿ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು, ಘಟನೆಯ ಕುರಿತು ಮತ್ತು ಆರೋಪಿತರ ಮೇಲೆ ಕೈಗೊಂಡ ಕ್ರಮಗಳ ಕುರಿತು ಸಚಿವರಿಗೆ ವಿವರಿಸಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭಾ ಪಿ., ಅವರು ಸ್ವಾಗತಿಸಿ, ಘಟನೆ ಕುರಿತು ಇಲಾಖೆ ಕೈಗೊಂಡ ಕ್ರಮಗಳನ್ನು ವಿವರಿಸಿದರು.
ಸಭೆಯಲ್ಲಿ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ್, ತಹಶೀಲ್ದಾರ್ ಜೆ.ಬಿ.ಮಜ್ಜಗಿ, ಇನ್‍ಸ್ಪೆಕ್ಟರ್ ಮುರಗೇಶ ಚನ್ನಣ್ಣವರ, ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ಡಿಸಿಆರ್‌ಇ ವಿಜಯಪುರ ಡಿವೈಎಸ್ಪಿ ಹಾಗೂ ಇನಾಂ ವೀರಾಪುರ ಗ್ರಾಮ ಪ್ರಕರಣದ ತನಿಖಾಧಿಕಾರಿ ಸಂದೀಪ್‍ಸಿಂಗ್ ಮುರಗೋಡ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಇನ್‍ಸ್ಪೆಕ್ಟರ್ ವೀರಭದ್ರಪ್ಪ ಕಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.