ಚಕ್ರವರ್ತಿ ಸೂಲಿಬೆಲೆಗೆ ಆಹ್ವಾನ ವಿರೋಧಿಸಿ ಪ್ರತಿಭಟನೆ; ಧಾರವಾಡ ಕೃಷಿ ವಿವಿ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ರದ್ದು
ಧಾರವಾಡ : ನಗರದ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ದಲಿತ ಸಂಘಟನೆ ಹಾಗೂ ಕೃಷಿ ವಿವಿ ಬೋರ್ಡ್ ಸದಸ್ಯರು ವಿವಿ ಗೇಟ್ ಎದುರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಗೊಂಡ ಘಟನೆ ಮಂಗಳವಾರ ನಡೆದಿದೆ.
ಕೃಷಿ ವಿವಿ ಕುಲಪತಿ ಪಿ.ಎಲ್.ಪಾಟೀಲ್ ಅಧ್ಯಕ್ಷತೆಯಲ್ಲಿ ವಿವಿಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸಚಿವರು, ಶಾಸಕರನ್ನು ಕರೆಯದೆ ಚಕ್ರವರ್ತಿ ಸೂಲಿಬೆಲೆಯನ್ನು ಕರೆದಿದ್ದು ಯಾಕೆ?. ಅವರೇನು ವಿಜ್ಞಾನಿನಾ ಎಂದು ಪ್ರಶ್ನಿಸಿದರು.
ಇದೇ ವೇಳೆ ಮನವಿ ಸ್ವೀಕರಿಸಲು ಬಂದಿದ್ದ ಡೀನ್ ರನ್ನೂ ತರಾಟೆಗೆ ಪಡೆದ ಪ್ರತಿಭಟನಾಕಾರರು, ಕುಲಪತಿಯವರೇ ಬಂದು ನಮ್ಮ ಮನವಿ ಸ್ವೀಕರಿಸಬೇಕೆಂದು ಒತ್ತಾಯಿಸಿದರು. ಇದೇ ವೇಳೆ ಹಲವರು ವಿವಿ ಗೇಟ್ ಏರಿ ಪ್ರತಿಭಟನೆ ನಡೆಸಿದರು.
‘ಸಮಾಜದಲ್ಲಿ ಕೋಮು ಗಲಭೆಗೆ ಕಾರಣ ವಾಗುವಂತವರನ್ನು ಕರೆದು ವಿವಿಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸಬಾರದು. ಅದರ ಬದಲು, ಕೃಷಿ ಸಾಧಕರನ್ನೋ, ವಿಜ್ಞಾನಿಗಳನ್ನೋ ಕರೆಸಬಹುದಿತ್ತು. ಸಿಂಡಿಕೇಟ್ ಸದಸ್ಯರಿಗೂ ತಿಳಿಸದೆ ಕುಲಪತಿಯವರು ಕಾರ್ಯಕ್ರಮ ಮಾಡಲು ಹೊರಟಿದ್ದಾರೆ’ ಎಂದು ದಲಿತ ಸಂಘಟನೆ ಮುಖಂಡರು ಆರೋಪಿಸಿದ್ದಾರೆ.
ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ
ದಲಿತ ಸಂಘಟನೆ ಹಾಗೂ ಕೃಷಿ ವಿವಿ ಬೋರ್ಡ್ ಸದಸ್ಯರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮವನ್ನು ಕೃಷಿ ವಿವಿ ರದ್ದು ಗೊಳಿಸಿತ್ತು. ಆದರೂ, ಪ್ರತಿಭಟನೆ ಮುಂದುವರಿಸಿದ್ದರಿಂದ ಉಪನಗರ ಠಾಣೆಯ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.