Hubballi | ಸಾರಿಗೆ ಬಸ್ -ಬೈಕ್ ನಡುವೆ ಢಿಕ್ಕಿ: ತಂದೆ-ಮಗ ಮೃತ್ಯು, ಮಗಳ ಸ್ಥಿತಿ ಗಂಭೀರ
Update: 2025-12-30 16:41 IST
ಹುಬ್ಬಳ್ಳಿ : ಹುಬ್ಬಳ್ಳಿ-ಕಾರವಾರ ರಸ್ತೆಯ ಅಂಚಟಗೇರಿ ಬಳಿ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಂದೆ ಹಾಗೂ ಎರಡು ವರ್ಷದ ಮಗ ಮೃತಪಟ್ಟು, ನಾಲ್ಕು ವರ್ಷದ ಹೆಣ್ಣುಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಮೃತರನ್ನು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದ ಮೆಹಬೂಬ್ ಖಾನ್ ಉಸ್ತಾದಿ (36), ಅಸ್ನೇನ್ (2) ಎಂದು ಗುರುತಿಸಲಾಗಿದೆ, ಅಜೀಜಾ ಎಂಬ ನಾಲ್ಕು ವರ್ಷದ ಹೆಣ್ಣುಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿಯಿಂದ ತಡಸಕ್ಕೆ ಹೋಗುವಾಗ ಮೆಹಬೂಬ್ ಅವರು ಓವರ್ಟೇಕ್ ಮಾಡಲು ಹೋಗಿ ಎದುರಿಗೆ ಬರುತ್ತಿದ್ದ ಬಸ್ಗೆ ಢಿಕ್ಕಿ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ನಾಲ್ಕು ವರ್ಷದ ಬಾಲಕಿಯನ್ನು ಚಿಕಿತ್ಸೆಗೆ ನಗರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.