×
Ad

ಜಾತಿಯ ಹೆಸರಿನಲ್ಲಿ ಮಾನ್ಯ ಕಗ್ಗೊಲೆ; ಪ್ರತ್ಯೇಕ ಕಾಯ್ದೆ ರೂಪಿಸಲು ಚಿಂತನೆ : ಸಚಿವ ಡಾ.ಮಹದೇವಪ್ಪ

Update: 2026-01-01 18:47 IST

ಹುಬ್ಬಳ್ಳಿ : ಜಾತಿಯ ಹೆಸರಿನಲ್ಲಿ ‘ಮಾರ್ಯಾದೆ’ ನೆಪದಲ್ಲಿ ನಡೆಯುತ್ತಿರುವ ಕಗ್ಗೊಲೆಯನ್ನು ತಡೆಗಟ್ಟಲು ‘ಮಾನ್ಯ’ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರಲು ಸರಕಾರ ಚಿಂತನೆ ನಡೆಸಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮಾನ್ಯ ಪಾಟೀಲ್ ಹತ್ಯೆ ಪ್ರಕರಣದ ಹಿನ್ನೆಲೆ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, 16 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಅನ್ಯಾಯಕ್ಕೆ ಒಳಗಾದ ಕುಟುಂಬಕ್ಕೆ ಪರಿಹಾರದ ಚೆಕ್ ಅನ್ನು ನೀಡಲಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ಜಾತಿಯ ಹೆಸರಿನಲ್ಲಿ ಮಾನ್ಯರ ಕುಟುಂಬಸ್ಥರೇ ಆಕೆಯನ್ನು ಹತ್ಯೆ ಮಾಡಿದ್ದು ಅಮಾನವೀಯ ಕೃತ್ಯ. ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ. ಮನುವಾದದ ಮನಸ್ಸುಗಳನ್ನು ಹತ್ತಿಕ್ಕಬೇಕು. ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾದವರು, ಅದಕ್ಕೆ ಉತ್ತೇಜನ ಕೊಟ್ಟವರ ವಿರುದ್ಧ ಸರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಮಹದೇವಪ್ಪ ತಿಳಿಸಿದರು.

ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಅಪರಾಧದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಇಂತಹ ಘಟನೆಗಳು ರಾಜ್ಯದಲ್ಲಿ ಹೆಚ್ಚಾಗಿ ನಡೆಯುತ್ತಿರಲಿಲ್ಲ. ರಾಜಸ್ತಾನ ಸೇರಿದಂತೆ ಇನ್ನಿತರ ರಾಜ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದವು. ನಮ್ಮದು ನಾಗರಿಕ ಮತ್ತು ಮುಂದುವರೆದ ರಾಜ್ಯ ಎಂದರು.

ವಯಸ್ಸಿಗೆ ಬಂದ ಯುವಕ-ಯುವತಿಯರು ತಮ್ಮ ಒಪ್ಪಿಗೆ ಮೇರೆಗೆ ಯಾವ ಧರ್ಮ, ಯಾವುದೇ ಜಾತಿಯವರನ್ನು ಮದುವೆಯಾಗಲು ಮುಕ್ತವಾದ ಅವಕಾಶವಿದೆ. ಅದು ಅವರ ಮೂಲಭೂತ ಹಕ್ಕು, ಇದನ್ನು ಹತ್ತಿಕ್ಕುವ ಕೆಲಸ ಯಾರೂ ಮಾಡಬಾರದು. ಈ ರೀತಿಯಾಗಿ ಕೆಲಸ ಮಾಡಿದರೆ ಅದಕ್ಕೆ ಬೆಂಬಲಿಸುವ ವ್ಯಕ್ತಿಗಳನ್ನು ಸರಕಾರ ಬಿಡುವುದಿಲ್ಲ. ಈ ಬಗ್ಗೆ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ' ಎಂದು ಮಹದೇವಪ್ಪ ಹೇಳಿದರು.

ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಏನು ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಸಿಎಂ, ಗೃಹ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಇಂತಹ ಮಾರ್ಯಾದೆ ಹತ್ಯೆ ತಡೆಗೆ ಕಾನೂನು ತರಲು ಮುಂದಿನ ಅಧಿವೇಶನದಲ್ಲಿ ಪ್ರಯತ್ನ ಮಾಡಲಾಗುವುದು. ಮಹಿಳೆಯ ಇಚ್ಛೆಯ ವಿರುದ್ಧವಾಗಿ ವಿವಾಹ ಆಗಬಾರದೆಂದು ಅಂಬೇಡ್ಕರ್ ಹೇಳಿದ್ದಾರೆ. ಅವಳ ಆಸೆಯಂತೆ ಮದುವೆ ಆಗಬೇಕು ಎಂಬುದನ್ನು ಹಿಂದೂ ಕೋಡ್ ಬಿಲ್ ಹೇಳುತ್ತದೆ. ಈ ಘಟನೆಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಿದೆ. ಇಂತಹ ಘಟನೆಗಳನ್ನು ನಮ್ಮ ಸರಕಾರ ಸಹಿಸುವುದಿಲ್ಲ' ಎಂದು ಮಹದೇವಪ್ಪ ಎಚ್ಚರಿಸಿದರು.

ಈ ಘಟನೆ ನಡೆದ ಕೂಡಲೇ ಎಸ್‍ಸಿ-ಎಸ್‍ಟಿ (ದೌರ್ಜನ್ಯ ತಡೆ)ಕಾಯ್ದೆ ಅಡಿಯಲ್ಲಿ ಸಂತ್ರಸ್ತರಿಗೆ ಪರಿಹಾರ ಕೊಡುವಂತೆ ಜಿಲ್ಲಾಧಿಕಾರಿಗೆ ಕರೆ ಮಾಡಿ ಸೂಚನೆ ನೀಡಿದ್ದೆ. ಈ ಘಟನೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರೇ ಅಂತವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮಹದೇವಪ್ಪ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News