ಹುಬ್ಬಳ್ಳಿ : ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಇಂಡಿಯಾ ಮೈತ್ರಿಕೂಟದ ಇತರೆ ಸಂಸದರನ್ನು ಬಂಧಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಆರಂಭಿಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಧಾರವಾಡ ಜಿಲ್ಲಾ ಕಾಂಗ್ರೆಸ್ ಮಹಾನಗರ ಅಧ್ಯಕ್ಷ ಸದಾನಂದ ಡಂಗನವರ, ಕೇಂದ್ರದ ಭ್ರಷ್ಟ, ಕೋಮುವಾದಿ ಬಿಜೆಪಿ ಸರಕಾರ, ನರೇಂದ್ರ ಮೋದಿ, ಅಮಿತ್ ಶಾ, ಮೋಹನ ಭಾಗವತ್ ಅವರೆಲ್ಲ ಸೇರಿ ಜನರ ಮತದಾನದ ಹಕ್ಕು ಕಸಿದುಕೊಳ್ಳುವ ಪಿತೂರಿ ಮಾಡಿದ್ದಾರೆ. ಅದರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ದೇಶದ ಜನ ಬೆಂಬಲ ಸೂಚಿಸುತ್ತಿದ್ದು, ಇದನ್ನು ಸಹಿಸದೇ ಕೇಂದ್ರ ಸರ್ಕಾರ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್ ಐಆರ್ ಸಂಪೂರ್ಣ ರದ್ದು ಮಾಡಬೇಕು. ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ, ಜ್ಞಾನೇಶ ಕುಮಾರ್ ರನ್ನು ತಕ್ಷಣ ವಜಾ ಮಾಡಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಚಂದ್ರಶೇಖರ ಜುಟ್ಟಲ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಕ್ಕೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದ ರಾಹುಲ್ ಗಾಂಧಿ ಅವರನ್ನು ಬಂಧಿಸಿರುವುದು ಸರಿಯಾದ ನಡೆಯಲ್ಲ. ಜ್ಞಾನೇಶಕುಮಾರ ಅವರನ್ನು ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ರಾಷ್ಟ್ರಪತಿಗಳು ಕೇಂದ್ರ ಸರ್ಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಿನಿ ವಿಧಾನಸೌಧದ ವರೆಗೆ ಮೆರವಣಿಗೆ ನಡೆಸುವ ಯತ್ನದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ವಾಹನದಲ್ಲಿ ಕರೆದೊಯ್ದರು.

ಕಾಂಗ್ರೆಸ್ ಮುಖಂಡರಾದ ವೇದವ್ಯಾಸ ಕೌಲಗಿ, ಅನ್ವರ್ ಮುಧೋಳ ಮಾತನಾಡಿದರು. ಪಾಲಿಕೆ ಸದಸ್ಯ ಆರೀಫ್ ಭದ್ರಾಪುರ, ಅಶ್ಫಾಕ್ ಕುಮಟಾಕರ, ಯಾಸೀನ್ ಹಾವೇರಿಪೇಟ, ಶಿವಾನಂದ ಬೆಂತೂರ, ಶಿವಾನಂದ ಮುತ್ತಣ್ಣವರ, ದಾನಪ್ಪ ಕಬ್ಬೇರ, ಅರ್ಜುನ ಪಾಟೀಲ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor