ಡೈಮಂಡ್ ಲೀಗ್: ಸೀಸನ್ ನಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದರೂ ನೀರಜ್ ಗೆ ಬೆಳ್ಳಿ
PC: x.com/htTweets
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿಪದಕ ವಿಜೇತ, ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಗುರುವಾರ ನಡೆದ ಲಾಸನ್ ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪ್ರಸಕ್ತ ಸೀಸನ್ ನಲ್ಲೇ ಅತ್ಯುತ್ತಮ ಪ್ರದರ್ಶನ ತೋರಿ 89.49 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿಪದಕದ ಸಾಧನೆ ಮಾಡಿದರು.
26 ವರ್ಷ ವಯಸ್ಸಿನ ಚೋಪ್ರಾ ನಾಲ್ಕನೇ ಸುತ್ತಿನವರೆಗೂ ನಾಲ್ಕನೇ ಸ್ಥಾನದಲ್ಲಿದ್ದರು. ಐದನೇ ಪ್ರಯತ್ನದಲ್ಲಿ ಅವರು 85.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರು. ಆದರೆ ಕೊನೆಯ ಪ್ರಯತ್ನದಲ್ಲಿ ಅದ್ಭುತ ಪ್ರದರ್ಶನ ತೋರಿ 89.49 ಮೀಟರ್ ದೂರವನ್ನು ಸಾಧಿಸಿ ಎರಡನೇ ಸ್ಥಾನಕ್ಕೇರಿದರು. ಆ್ಯಂಡರ್ಸನ್ ಪೀಟರ್ಸ್ 90.61 ಮೀಟರ್ ದೂರಕ್ಕೆ ಎಸೆಯುವ ಮೂಲಕ ಚಿನ್ನದ ಪದಕ ತನ್ನದಾಗಿಸಿಕೊಂಡರು.
ಜರ್ಮನಿಯ ಜ್ಯೂಲಿಯನ್ ವೆಬೆರ್ 87.08 ಮೀಟರ್ ಸಾಧನೆಯೊಂದಿಗೆ ಕಂಚು ಗೆದ್ದರು. ಸತತವಾಗಿ ಗಾಯದ ಸಮಸ್ಯೆ ಎದುರಿಸುತ್ತಿರುವ ಭಾರತೀಯ ಅಥ್ಲೀಟ್ ಆಗಸ್ಟ್ 8ರಂದು ನಡೆದ ಪ್ಯಾರಿಸ್ ಒಲಿಂಪಿಕ್ ಸ್ಪರ್ಧೆಯಲ್ಲಿ 89.45 ಮೀಟರ್ ದೂರ ಎಸೆದಿದ್ದರು. ಮೂರು ವರ್ಷ ಮುನ್ನ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚೋಪ್ರಾ ಚಿನ್ನದ ಸಾಧನೆ ಮಾಡಿದ್ದರು.