×
Ad

ಪ್ರತಿಪಕ್ಷ, ರೈತರನ್ನು ಹತ್ತಿಕ್ಕಲು ದ್ವೇಷ ಭಾಷಣ ನಿಯಂತ್ರಣ ಕಾನೂನು : ಬಸವರಾಜ ಬೊಮ್ಮಾಯಿ

Update: 2025-12-21 19:19 IST

ಗದಗ : ರಾಜ್ಯ ಸರಕಾರ ಎಲ್ಲ ರಂಗದಲ್ಲಿಯೂ ವಿಫಲವಾಗಿದ್ದು, ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಅದರ ವಿರುದ್ಧ ಮಾತನಾಡದಂತೆ ವಿರೋಧ ಪಕ್ಷ, ರೈತರು, ಜನ ಸಾಮಾನ್ಯರನ್ನು ದಮನ ಮಾಡಲು ವ್ಯಕ್ತಿಯ ಸ್ವಾತಂತ್ರ್ಯ ಹರಣ ಮಾಡಲು ಸಂವಿಧಾನದ ವಿರುದ್ಧ ದ್ವೇಷ ಭಾಷಣ ನಿಯಂತ್ರಣ ಕಾನೂನು ತಂದಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ರವಿವಾರ ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ. ಯಾವ ಇಲಾಖೆಯಲ್ಲಿಯೂ ಕೆಲಸ ಆಗುತ್ತಿಲ್ಲ. ಭ್ರಷ್ಟಾ ಚಾರ ಹೆಚ್ಚಾಗಿದೆ. ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಜನರು ಇದನ್ನು ವಿರೋಧ ಮಾಡಬಾರದು ಎಂದು ದ್ವೇಷ ಭಾಷಣದ ವಿರುದ್ಧ ಕಾನೂನು ಮಾಡಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ನವರೇ ಹೆಚ್ಚು ದ್ವೇಷ ಭಾಷಣ ಮಾಡಿದ್ದಾರೆ. ಈಗಾಗಲೇ ದ್ವೇಷ ಭಾಷಣ ಮಾಡುವುದನ್ನು ನಿಯಂತ್ರಿಸಲು ಬಿಎನ್‍ಎಸ್ ಕಾನೂನಿದೆ. ಇವರು ವಿರೋಧ ಪಕ್ಷ, ರೈತರನ್ನು, ಜನ ಸಾಮಾನ್ಯರನ್ನು ದಮನ ಮಾಡಲು ವ್ಯಕ್ತಿಯ ಸ್ವಾತಂತ್ರ್ಯ ಹರಣ ಮಾಡಲು ಸಂವಿಧಾನದ ವಿರುದ್ಧ ಈ ಕಾನೂನು ತಂದಿದ್ದಾರೆ ಎಂದು ಹೇಳಿದರು.

ಜಿ ರಾಮ್ ಜಿ ವಿಧೇಯಕವನ್ನು ಕಾಂಗ್ರೆಸ್ ವಿರೋಧಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿ ರಾಮ್ ಜಿ ವಿಧೇಯಕದ ಬಗ್ಗೆ ಸಂಸತ್ತಿನಲ್ಲಿ ಸುಮಾರು ಹದಿನೈದು ಗಂಟೆಗಳಿಗಿಂತ ಹೆಚ್ಚು ಸುದೀರ್ಘವಾಗಿ ಚರ್ಚೆಯಾಗಿದೆ. ಪ್ರಮುಖವಾಗಿ ಹದಿನೈದು ಇಪ್ಪತ್ತು ವರ್ಷದಿಂದ ಇದ್ದ ಕಾನೂನು ಇವತ್ತಿನ ಗ್ರಾಮೀಣ ಪರಿಸ್ಥಿತಿ ಬಹಳ ಬದಲಾಗಿದೆ. ಅದರ ಅನುಗುಣವಾಗಿ ಬದಲಾವಣೆ ಮಾಡಲಾಗಿದೆ. ಭ್ರಷ್ಟಾ ಚಾರ ಹೆಚ್ಚಾಗಿತ್ತು. ಯೋಜನೆ ದುರುಪಯೋಗ ಆಗುತ್ತಿರುವ ಆರೋಪ ಇತ್ತು. ತಾಂತ್ರಿಕವಾಗಿ ಅದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸೋರಿಕೆ ತಡೆಯಲಾಗಿದೆ. ಆಸ್ತಿ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಈ ಯೋಜನೆ ಬಳಕೆ ಆಗಬೇಕೆಂದು ಬದಲಾವಣೆ ತಂದಿದ್ದಾರೆ. ಪ್ರತಿ ವರ್ಷ ಒಂದು ಲಕ್ಷ ಹನ್ನೊಂದು ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಅದು ಒಳ್ಳೆಯ ಉದ್ದೇಶಕ್ಕೆ ಆಗಬೇಕು. ಬಹಳಷ್ಟು ರಾಜ್ಯಗಳಲ್ಲಿ ದುರುಪಯೋಗ ಆಗುತ್ತಿತ್ತು. ನೋಂದಣಿ ಅಥವಾ ಉದ್ಯೋಗದ ದಿನಗಳನ್ನು ಕಡಿಮೆ ಮಾಡಿಲ್ಲ. 25 ದಿನ ಹೆಚ್ಚಿಗೆ ಮಾಡಲಾಗಿದೆ. ವಿರೋಧ ಪಕ್ಷಗಳು ಇದನ್ನು ವಿರೋಧ ಮಾಡಲು ವಿರೋಧಿಸುತ್ತಿವೆ ಎಂದು ಅವರು ಹೇಳಿದರು.

ಮಹಾತ್ಮಾ ಗಾಂಧಿ ವಿಚಾರಧಾರೆ ಹತ್ತಿಕ್ಕಲು ಈ ವಿಧೇಯಕ ತರಲಾಗಿದೆ ಎಂಬ ಕಾಂಗ್ರೆಸ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ರಾಮನ ಹೆಸರು ತೆಗೆದುಕೊಂಡಾಗ ಅದರಲ್ಲಿ ಗಾಂಧೀಜಿ ಇದ್ದಾರೆ. ಗಾಂಧಿ ರಾಮರಾಜ್ಯ, ಗ್ರಾಮ ರಾಜ್ಯದ ಬಗ್ಗೆ ಮಾತನಾಡಿದ್ದಾರೆ. ರಾಮನನ್ನು ಗಾಂಧೀಜಿಯಿಂದ ಬೇರ್ಪಡಿಸುವುದೆ ಗಾಂಧಿಜಿಗೆ ಮಾಡುವ ದೊಡ್ಡ ಅಪಚಾರ ಎಂದು ಹೇಳಿದರು.

ರೈತರಿಗೆ ಮೋಸ: ರಾಜ್ಯ ಸರಕಾರ ಮೆಕ್ಕೆಜೋಳ ಖರೀದಿ ಮಾಡದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ನಾನು ಇದನ್ನು ಮೊದಲೆ ಹೇಳಿದ್ದೆ. ಯಾವುದೇ ಏಜೆನ್ಸಿ ನಿಗದಿ ಮಾಡಿರಲಿಲ್ಲ. ಅವರೇ ಹತ್ತು ಲಕ್ಷ ಮೆಟ್ರಿಕ್ ಟನ್ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಎಷ್ಟು ಮೆಟ್ರಿಕ್ ಟನ್ ಖರೀದಿ ಮಾಡಿದ್ದಾರೆ ಎಂದು ಸರಕಾರ ಬಹಿರಂಗ ಪಡಿಸಲಿ. ಎಲ್ಲಿಯೂ ಖರೀದಿ ಆಗುತ್ತಿಲ್ಲ. 8-10 ಕ್ವಿಂಟಾಲ್ ಖರೀದಿಸಿ ನಿಲ್ಲಿಸುತ್ತಾರೆ. ಮೆಕ್ಕೆಜೋಳ ಬೆಳೆಯುವ ರೈತರಿಗೆ ಸರಕಾರ ಮೋಸ ಮಾಡಿದೆ ಎಂದು ದೂರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News