×
Ad

ಒಂದು ವಾರದಲ್ಲಿ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು : ಬಸವರಾಜ ಬೊಮ್ಮಾಯಿ

Update: 2026-01-05 18:56 IST

ಗದಗ : ರಾಜ್ಯ ಸರಕಾರ ಮೆಕ್ಕೆಜೋಳ ಬೆಳೆದ ಎಲ್ಲ ರೈತರಿಗೆ ಘೋಷಣೆ ಮಾಡಿರುವ 250 ರೂ. ಪ್ರೋತ್ಸಾಹ ಧನವನ್ನು ಏಜೆಂಟರ ಹಾವಳಿ ತಪ್ಪಿಸಿ ನೇರವಾಗಿ ರೈತರ ಖಾತೆಗೆ ಜಮೆಯಾಗುವಂತೆ ನೋಡಿಕೊಳ್ಳಬೇಕು. ಒಂದು ವಾರದಲ್ಲಿ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಸೋಮವಾರ ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರಾರಂಭಿಸುವ ಹಾಗೂ ಖರೀದಿ ಕೇಂದ್ರದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವ ಸಲುವಾಗಿ ಜಿಲ್ಲಾಧಿಕಾರಿ ಹಾಗೂ ರೈತ ಮುಖಂಡರ ಸಭೆಯನ್ನು ನಡೆಸಿ ಅವರು ಮಾತನಾಡಿದರು.

ಕಳೆದ ವರ್ಷ ಮೆಕ್ಕೆಜೋಳಕ್ಕೆ ಎರಡು ಸಾವಿರ ರೂ.ಗಿಂತ ಹೆಚ್ಚಿನ ದರ ಸಿಗುತ್ತಿತ್ತು. ಈ ವರ್ಷ ದರ ಸಂಪೂರ್ಣ ಕುಸಿದಿದೆ. ರೈತರು ಬಹಳ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಗದಗ ಜಿಲ್ಲೆಯ ರೈತರು ವಿಶೇಷವಾಗಿ ಲಕ್ಷ್ಮೇಶ್ವರದಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದರು. ಅಲ್ಲಿಗೆ ಜಿಲ್ಲಾಧಿಕಾರಿ ಬಂದು ಸರಕಾರಕ್ಕೆ ಎಲ್ಲ ಮಾಹಿತಿ ನೀಡಿದ್ದಾರೆ. ಸರಕಾರ ಮೊದಲು 10 ಲಕ್ಷ ಮೆಟ್ರಿಕ್ ಟನ್ ತೆಗೆದುಕೊಳ್ಳುವುದಾಗಿ ಹೇಳಿತ್ತು. ಆದರೆ, ಒಂದೂವರೆ ತಿಂಗಳಿಂದ ಯಾವುದೇ ಖರೀದಿ ಪ್ರಕ್ರಿಯೆ ನಡೆದಿಲ್ಲ. ಈಗ ಖರೀದಿ ಬಹಳ ಮಂದಗತಿಯಲ್ಲಿ ನಡೆಯುತ್ತಿದೆ. ಇದುವರೆಗೂ ಒಂದು ಲಕ್ಷ ಟನ್ ಕೂಡ ಖರಿದಿಯಾಗಿಲ್ಲ. ಖರಿದಿ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂದು ಅವರು ಹೇಳಿದರು.

ರಾಜ್ಯದ ರೈತರು ಖರೀದಿ ಕೇಂದ್ರಕ್ಕೆ ತರುವ ಮೆಕ್ಕೆಜೋಳವನ್ನು ಖರೀದಿಸಬೇಕು. ಆದರೆ, ರೈತರ ಸಂಕಷ್ಟ ನೀಗಿಸುವ ಯಾವ ಕ್ರಮವೂ ಕಾಣಿಸುತ್ತಿಲ್ಲ. ಈಗ ರೈತರಿಗೆ 250 ರೂ. ಕೊಡುವ ಹೊಸ ಯೋಜನೆ ಬಗ್ಗೆಯೂ ಸರಿಯಾದ ಮಾಹಿತಿ ಇಲ್ಲ. ನಾವು ತೆಗೆದುಕೊಂಡು ಹೋಗಿರುವ ಮೆಕ್ಕೆಜೋಳದ ಪರಿಸ್ಥಿತಿ ಏನು?. ಯಾರು ಖರೀದಿ ಕೇಂದ್ರಕ್ಕೆ ಮೆಕ್ಕೆಜೋಳ ತೆಗೆದುಕೊಂಡು ಹೋಗಿದ್ದಾರೆ. 250 ರೂ. ಪ್ರೋ ತ್ಸಾಹ ಧನವನ್ನು ಯಾವ ರೀತಿ ಪರಿಹಾರ ನೀಡುತ್ತಾರೆ ಎನ್ನುವುದನ್ನು ರೈತರಿಗೆ ತಿಳಿಸಬೇಕು ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಏಜೆಂಟರ ಹಾವಳಿ ತಪ್ಪಿಸಿ: ಸರಕಾರ ಘೋಷಣೆ ಮಾಡಿರುವ ಹೊಸ ಯೋಜನೆಯಲ್ಲಿ ಅವ್ಯವಹಾರ ಆಗುವ ಆತಂಕ ಇದೆ. ಹಿಂದೆ ಹುಬ್ಬಳ್ಳಿಯಲ್ಲಿ ಈರುಳ್ಳಿ ಖರೀದಿ ಸಂದರ್ಭದಲ್ಲಿ ಅವ್ಯವಹಾರ ಆಗಿತ್ತು. ಗೋವಿನ ಜೋಳ ಖರೀದಿ ಸಂದರ್ಭದಲ್ಲಿಯೂ ಲೋಪ ಆಗಿತ್ತು. ಸರಕಾರದ ಯೋಜನೆಯ ದುರ್ಲಾಭ ಪಡೆದುಕೊಳ್ಳುವವರು ಇರುತ್ತಾರೆ. ಈ ಬಗ್ಗೆ ಎಚ್ಚರ ವಹಿಸಬೇಕು. ಈಗಾಗಲೇ ಏಜೆಂಟರು ಹುಟ್ಟಿಕೊಂಡಿರುತ್ತಾರೆ. ನಿಜವಾದ ರೈತರ ಸಂಪೂರ್ಣ ಮಾಹಿತಿ ಪಡೆದು ಆವರು ಮಾರಿರುವ ಮೆಕ್ಕೆ ಜೋಳದ ಹಣವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಬೇಕು. ಇದರಲ್ಲಿ ಯಾವುದೇ ರೀತಿಯ ತಾರತಮ್ಯ, ಪಕ್ಷಪಾತ, ರಾಜಕಾರಣ ತರಬಾರದು ಎಂದು ಅವರು ಸೂಚಿಸಿದರು.

ಈ ಸಂಧರ್ಭದಲ್ಲಿ ಶಾಸಕರಾದ ಸಿ.ಸಿ.ಪಾಟೀಲ್, ಡಾ.ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ್, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News