ಬೆಟಗೇರಿ | ಖಾರದ ಪುಡಿ ಎರಚಿ ಪೆಟ್ರೋಲ್ ಬಂಕ್ ದರೋಡೆ
ಗದಗ : ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಖಾರದ ಪುಡಿ ಎರಚಿ, ಹಲ್ಲೆ ಮಾಡಿ ನಗದು ದೋಚಿ ಪರಾರಿಯಾದ ಘಟನೆ ಗದಗ ನಗರದ ಬೆಟಗೇರಿಯ ಶರಣಬಸವೇಶ್ವರ ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಶ್ರೀಸಾಯಿ ಪೆಟ್ರೋಲ್ ಬಂಕ್ ನಲ್ಲಿ ಈ ಘಟನೆ ನಡೆದಿದೆ. ತಡರಾತ್ರಿ ಮೂರು ಜನ ದುಷ್ಕರ್ಮಿಗಳ ತಂಡವೊಂದು ಪೆಟ್ರೊಲ್ ಬಂಕ್ ಗೆ ಬಂದಿದೆ ಎನ್ನಲಾಗಿದೆ. ಬಂಕ್ ಸಿಬ್ಬಂದಿ ಫಕ್ಕಿರೇಶ್ ಕೊಠಡಿಯೊಳಗೆ ಮಲಗಿದ್ದಾನೆ. ಕೊಠಡಿ ಗಾಜು ಒಡೆದು ಒಳಗೆ ನುಗ್ಗಿದ ದುಷ್ಕರ್ಮಿಗಳು, ಸಿಬ್ಬಂದಿ ಫಕ್ಕಿರೇಶ್ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ನಂತರ ಅಲ್ಲಿರುವ ಕುರ್ಚಿ, ಟೇಬಲ್ ನಿಂದ ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಬಂಕ್‌ನಲ್ಲಿದ್ದ ಡ್ರಾವರ್ ಒಡೆದಿದ್ದು, ಏನೂ ಸಿಗದ ಹಿನ್ನಲೆಯಲ್ಲಿ ಬಂಕ್ ನಲ್ಲಿದ್ದ ಪಕ್ಕಿರೇಶ್‌ನ ಹಣದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.