Gadag | ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ ನಿಧಿ ಪತ್ತೆ!
Update: 2026-01-10 23:31 IST
ಗದಗ : ಮನೆಯ ಹೊಸ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಮಣ್ಣಿನ ಚೆಂಬೊಂದರಲ್ಲಿ ಅಂದಾಜು 1 ಕೆಜಿಯಷ್ಟು ತೂಕದ ಪುರಾತನ ಚಿನ್ನಾಭರಣಗಳು ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ವಾರ್ಡ್ ಸಂಖ್ಯೆ 4ರ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಅವರ ಮನೆ ಜಾಗದಲ್ಲಿ ನಿಧಿ ಪತ್ತೆಯಾಗಿದೆ. ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣಕ್ಕಾಗಿ ಭೂಮಿ ಅಗೆಯುತ್ತಿದ್ದಾಗ ತಾಮ್ರದ ಚೆಂಬು ಸಿಕ್ಕಿದೆ. ಚೆಂಬಿನೊಳಗೆ ಚಿನ್ನದ ಬಳೆಗಳು, ಚೈನ್‌ಗಳು, ಉಂಗುರಗಳು ಮತ್ತು ಇತರ ಆಭರಣಗಳು ಪತ್ತೆಯಾಗಿವೆ ತಿಳಿದುಬಂದಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಗ್ರಾಮಸ್ಥರು ಸೇರಿದ್ದಾರೆ. ಆ ಬಳಿಕ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ದುರ್ಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ ನಿಧಿಯನ್ನು ಪೊಲೀಸರು ವಶಪಡಿಸಿಕೊಂಡು ಸುರಕ್ಷಿತವಾಗಿ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.