ಗದಗ: ಕಡಲೆ ಬೆಳೆ ಕಳ್ಳತನ; ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ರೈತರು
ಗದಗ: ಕಡಲೆ ಬೆಳೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ರೈತರು ಹಿಡಿದು ಕಂಬಕ್ಕೆ ಕಟ್ಟಿಹಾಕಿದ ಘಟನೆ ಗದಗ ಹೊರವಲಯದ ಸರ್ವಜ್ಞ ಸರ್ಕಲ್‌ನಲ್ಲಿ ನಡೆದಿದೆ.
ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ನಿವಾಸಿ ಚಿದಾನಂದ ಛಲವಾದಿ (30) ಎಂದು ಗುರುತಿಸಲಾಗಿದೆ. ಹೊಂಬಳ ರಸ್ತೆಯ ರೈತರ ಜಮೀನಿನಲ್ಲಿ ಕಡಲೆ ಬೆಳೆ ಕಳ್ಳತನ ಮಾಡುವ ವೇಳೆ ಆರೋಪಿಯು ರೆಡ್‌ಹ್ಯಾಂಡ್ ಆಗಿ ರೈತರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ರೈತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಖದೀಮರು ಸುಮಾರು ನಾಲ್ಕು–ಐದು ಜನರ ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರೂ ಒಟ್ಟಾಗಿ ತಡರಾತ್ರಿ ಅಥವಾ ನಸುಕಿನ ಜಾವ ರೈತರ ಜಮೀನಿಗೆ ನುಗ್ಗುತ್ತಾರೆ. ಟಂ–ಟಂ ವಾಹನದಲ್ಲಿ ಬಂದು, ಮಾರಕಾಸ್ತ್ರಗಳು ಹಾಗೂ ಖಾರದ ಪುಡಿಗಳನ್ನು ಹಿಡಿದು ಹೊಲಗಳಿಗೆ ನುಗ್ಗಿ ಕಳ್ಳತನ ನಡೆಸುತ್ತಾರೆ ಎಂದು ರೈತರು ಆರೋಪಿಸಿದ್ದಾರೆ.
ಕಳೆದ ಒಂದು ವಾರದಿಂದ ಅನೇಕ ರೈತರ ಜಮೀನಿನಲ್ಲಿ ಹಸಿ ಕಡಲೆ ಬೆಳೆ ವ್ಯಾಪಕವಾಗಿ ಕಳ್ಳತನವಾಗುತ್ತಿತ್ತು. ಶುಕ್ರವಾರವೂ ಹೊಂಬಳ ರಸ್ತೆಯ ರೈಲ್ವೆ ಹಳಿ ಬಳಿ ಇವರ ಚಲನವಲನ ರೈತರಿಗೆ ಅನುಮಾನ ಮೂಡಿಸಿದೆ. ತಕ್ಷಣ ಇತರೆ ರೈತರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ರೈತರು ಜಮಾಯಿಸಿದಾಗ, ತಂಡದಲ್ಲಿದ್ದ ಮೂವರು–ನಾಲ್ವರು ಪರಾರಿಯಾಗಿದ್ದಾರೆ.
ಈ ವೇಳೆ ಹಸಿ ಕಡಲೆ ಬೆಳೆ ಮೂಟೆಯೊಂದಿಗೆ ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆತನನ್ನು ಹಿಡಿದು ರೈತರು ಸರ್ವಜ್ಞ ಸರ್ಕಲ್‌ನ ಕಂಬಕ್ಕೆ ಕಟ್ಟಿಹಾಕಿ, ಕದ್ದ ಕಡಲೆ ಬೆಳೆ ಹಾರ ಮಾಡಿ ಕೊರಳಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದರು.
ಹಸಿ ಕಡಲೆ ಬೆಳೆ ಕಳ್ಳತನ ಮಾಡಿ ಮಾರಾಟ ಮಾಡುವುದೇ ಈ ತಂಡದ ವೃತ್ತಿಯಾಗಿರಬಹುದೆಂದು ಶಂಕಿಸಲಾಗಿದೆ. ಆರೋಪಿ ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.