×
Ad

ಗದಗ|ಪಾನಮತ್ತನಾಗಿ ಠಾಣೆಗೆ ನುಗ್ಗಿದ ಪೊಲೀಸ್ ಅಧಿಕಾರಿಯ ಸಹೋದರ; ಅನುಚಿತ ವರ್ತನೆ, ಕರ್ತವ್ಯಕ್ಕೆ ಅಡ್ಡಿ: ಆರೋಪ

Update: 2025-08-09 14:23 IST

ಗದಗ : ಐಪಿಎಸ್ ಸಹೋದರನೋರ್ವ ರಾತ್ರಿ ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಗೆ ನುಗ್ಗಿ, ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಗದಗದ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಐಪಿಎಸ್ ಅಧಿಕಾರಿ ಅನಿತಾ ಹದ್ದಣ್ಣವರ್ ಅವರ ಸಹೋದರ ಅಕ್ಷತ್ ಹದ್ದಣ್ಣವರ್ ಹಾಗೂ ಆತನ ಸಹಚರ ಪೊಲೀಸ್ ಠಾಣೆಯಲ್ಲಿ ರೌಡಿ ರೀತಿ ವರ್ತಿಸಿದ್ದಾರೆ ಎನ್ನಲಾಗಿದ್ದು, ಸ್ಥಳೀಯರು ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.

ಕುಡಿದ ಮತ್ತಿನಲ್ಲಿ ಏಕಾಏಕಿ ಕಾರಿನೊಂದಿಗೆ ಪೊಲೀಸ್ ಠಾಣೆಗೆ ನುಗ್ಗಿದ ಅಕ್ಷತ್‌, ನಾನು ವಕೀಲ ಯಾರು ಏನು ಮಾಡ್ತಿರಿ ಅಂತ ಠಾಣೆಯ ಬಳಿಯ ಸ್ಥಳೀಯರೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ.  ಸಿಪಿಐ, ಪಿಎಸ್ಐ ವಾಹನ ನಿಲ್ಲಿಸುವ ಸ್ಥಳದಲ್ಲಿ ಅಕ್ಷತ್ ತನ್ನ ಕಾರ್ ಪಾರ್ಕಿಂಗ್ ಮಾಡಿದ್ದಾರೆ. ಅಧಿಕಾರಿಗಳು ಕಾರು ನಿಲ್ಲಿಸಲು ಜಾಗವಿಲ್ಲದೆ ಠಾಣೆಯ ಹೊರಗೆ ರಸ್ತೆ ಬದಿ ನಿಲ್ಲಿಸಿದ್ದರು. ಮಾತ್ರವಲ್ಲ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಏಕವಚನ ಹಾಗೂ ಅವಾಚ್ಛ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇಷ್ಟೆಲ್ಲಾ ನಡೆದರೂ ಪೊಲೀಸರು ಕೇವಲ ಡ್ರಿಂಕ್ & ಡ್ರೈವ್ ಟೆಸ್ಟ್ ಮಾಡಿ ಕಳುಹಿಸಿದರಾ .? ಅಕಸ್ಮಾತ್ ಜನಸಾಮಾನ್ಯರು ಹೀಗೆ ಮಾಡಿದ್ರೆ  ಪೊಲೀಸರು ಸುಮ್ಮನೆ ಬಿಡುತ್ತಿದ್ದರಾ? ಅಧಿಕಾರಿಯ ಸಹೋದರನಿಗೆ ಒಂದು ನ್ಯಾಯ, ಜನ ಸಾಮಾನ್ಯರಿಗೊಂದು ಕಾನೂನಾ? ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ರೂ ಸುಮ್ಮನಿರುವುದಾದ್ರೂ ಯಾಕೆ? ಎಂದು ಐಪಿಎಸ್ ಅಧಿಕಾರಿ ಸಹೋದರನ ಆಟಾಟೋಪದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News