×
Ad

ಇನ್ಮುಂದೆ ಸುಮ್ಮನಿರಲ್ಲ, ಅಪಮಾನ ಮಾಡಿದರೆ ಬೀದಿಗಿಳಿದು ಮಾತನಾಡುತ್ತೇವೆ : ಶ್ರೀರಾಮುಲು

Update: 2025-02-03 19:12 IST

ಶ್ರೀರಾಮುಲು

ಗದಗ : ಶಾಸಕ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದ ಮಾಜಿ ಸಚಿವ ಶ್ರೀರಾಮುಲು, ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧವೂ ಅಸಮಾಧಾನ ಹೊರಹಾಕಿದ್ದರು. ಶ್ರೀರಾಮುಲುಗೆ ಕೇಂದ್ರ ಗೃಹಸಚಿವ  ಅಮಿತ್ ಶಾ  ಕರೆ ಮಾಡಿದ್ದಾರೆ. ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ.

ಇದೀಗ ರಾಷ್ಟ್ರೀಯ ನಾಯಕರ ಭೇಟಿ ವಿಚಾರವಾಗಿ ಗದಗದಲ್ಲಿ ಮಾತನಾಡಿದ ಶ್ರೀರಾಮುಲು, ʼದೆಹಲಿಗೆ ಅಪಾಯಿಂಟ್ಮೆಂಟ್ ಕೇಳಿ ಹೋಗಬೇಕು ಅಂತಾನೆ ಇಲ್ಲ. ಅವಕಾಶ ಸಿಕ್ಕಾಗಲೆಲ್ಲ ಹೋಗುತ್ತಿರುತ್ತೇನೆ, ಮುಂದೇನು ಹೋಗುತ್ತೇನೆ. ಎಲ್ಲಾ ವಿಚಾರವನ್ನು ವರಿಷ್ಠರ ಬಳಿ ಹೇಳಿ ಬರುತ್ತೇನೆ. ರಾಮುಲು ಸುಮ್ಮನೆ ಇದ್ರು.. ಇದ್ರು. ಎಂದು ಹೇಳುತ್ತಿದ್ದರು. ಇನ್ನು ಮುಂದೇ ಸುಮ್ಮನೆ ಇರುವುದಿಲ್ಲ. ಇನ್ನು ಮುಂದೇ ನಾನು ಮಾತಾಡುತ್ತೇನೆ. ಯಾರ ಮುಲಾಜು ಇಲ್ಲದೆ ಮಾತಾಡುತ್ತೇನೆʼ ಎಂದು ಹೇಳಿದರು.

ʼಇಲ್ಲಿಯವರೆಗೆ ಪಕ್ಷಕ್ಕೆ ಡ್ಯಾಮೇಜ್ ಆಗಬಾರದೆಂದು ಸುಮ್ಮನೇ ಇದ್ದೆ. ಈ ಬಾರಿ ನಮ್ಮಂತಹರನ್ನು ಅಪಮಾನ ಮಾಡಿದರೆ, ಬೀದಿಗೆ ಇಳಿದು ಮಾತಾಡುತ್ತೇವೆ. ರಾಮುಲು ಯಾವತ್ತೂ ಪಕ್ಷ ಬಿಟ್ಟು ಹೋಗಲ್ಲ, ಇದು ರಾಜ್ಯದ ಜನರಿಗೂ ಗೊತ್ತಿದೆ. ನಾನು ಹೋಗಬೇಕೆಂದರೆ, ನನ್ನನ್ನು ತಡೆಯೋಕೆ ಆಗುತ್ತಾ? ಜೈಲಿನಲ್ಲಿ ಇಡುವುದಕ್ಕೆ ಆಗುತ್ತಾ.? ಈಗಿನ ಕಾಲದಲ್ಲಿ ಯಾರು ಯಾರ ಮಾತನ್ನೂ ಕೇಳುವುದಿಲ್ಲʼ ಎಂದು ತಿಳಿಸಿದರು.

ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳ ಕುರಿತು ಪ್ರತಿಕ್ರಿಯಿಸಿದ ಅವರು, ʼರಾಜ್ಯ ಬಿಜೆಪಿಯ ಸಮಸ್ಯೆಗಳಿಗೆ ಪರಿಹಾರದ ಮೂಗುದಾರ ಹಾಕುವ ಶಕ್ತಿ ರಾಷ್ಟ್ರೀಯ ನಾಯಕರಿಗೆ ಇದೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲು ಹೋಗಿದ್ದಾರೆ. ರಾಜಕಾರಣದಲ್ಲಿ ಮುಚ್ಚುಮರೆ ಮಾಡುವುದಕ್ಕೆ ಆಗುವುದಿಲ್ಲ. ಕೇಂದ್ರದ ನಾಯಕರು ಮೂಗುದಾರ ಹಾಕುವ ಕೆಲಸ ಮಾಡುತ್ತಾರೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ. 2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಹಾಗೆ ಎಲ್ಲರೂ ಕೆಲಸ ಮಾಡುತ್ತಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News