ಅರುವತ್ತೊಂದು ಲಕ್ಷ ದಾಟಿದ ಆತ್ಮಕತೆ!
ಜಗತ್ತಿನ ಈ ಅಪೂರ್ವ ಆತ್ಮಕತೆಯನ್ನು ತಂದೆ ತಾಯಿಗಳು, ಮೇಷ್ಟ್ರು, ಮೇಡಂಗಳು ತಾವೂ ಓದಿ, ಮಕ್ಕಳಿಗೂ ಓದಿಸಿದರೆ ಅವರ ಮನೆ ಮನಗಳೆರಡೂ ಅಪಾರ ಶಾಂತಿ, ಸಮಾಧಾನ ಪಡೆಯಬಲ್ಲವು ಎಂದು ಗ್ಯಾರಂಟಿ ಕೊಡುವೆ. ತಮ್ಮ ಅನುಭವಗಳನ್ನು ಬರೆಯಲು ಬಯಸುವವರಿಗಂತೂ ಇದು ಅತ್ಯಂತ ಉಪಯುಕ್ತ ಮಾದರಿ.
ಕಳೆದ ತೊಂಭತ್ತು ವರ್ಷಗಳಿಂದಲೂ ಈ ಆತ್ಮಕತೆ ಪ್ರಕಟವಾಗುತ್ತಲೇ ಇದೆ. ನವಜೀವನ್ ಟ್ರಸ್ಟ್ ಈಚೆಗೆ ಕೊಟ್ಟ ಅಧಿಕೃತ ಅಂಕಿ ಅಂಶ ಇದು: 2025ರ ಅಕ್ಟೋಬರ್ ತಿಂಗಳ ಹೊತ್ತಿಗೆ ಈ ಆತ್ಮಕತೆಯ 61 ಲಕ್ಷ ಪ್ರತಿಗಳು ಭಾರತದ 17 ಭಾಷೆಗಳಲ್ಲಿ ಪ್ರಕಟವಾಗಿ ಮಾರಾಟವಾಗಿದ್ದವು. ಇಂಗ್ಲಿಷ್ 21.9 ಲಕ್ಷ. ಮಲಯಾಳಂ 9.1 ಲಕ್ಷ. ತಮಿಳು 7.8 ಲಕ್ಷ. ಹಿಂದಿ 7.06 ಲಕ್ಷ. ಗುಜರಾತಿ 7.05 ಲಕ್ಷ.
ದಕ್ಷಿಣ ಭಾರತದಲ್ಲಿ ಹೆಚ್ಚು ಮಾರಾಟವಾಗಿರುವ ಈ ಆತ್ಮಕತೆಯ ಪ್ರಸಾರದ ನಾಗಾಲೋಟದಲ್ಲಿ ಮಲಯಾಳಂ ಮುಂಚೂಣಿಯಲ್ಲಿದೆ. 1999-2000ದ ವರ್ಷದಲ್ಲಿ ಹಾಗೂ 2000-01ರಲ್ಲಿ ತಲಾ 1 ಲಕ್ಷ ಮಲಯಾಳಂ ಪ್ರತಿಗಳು ಮಾರಾಟವಾದವು. ಇವತ್ತಿಗೂ ಜಗತ್ತಿನ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಈ ಪುಸ್ತಕಕ್ಕೆ ಖಾಯಂ ಸ್ಥಾನವಿದೆ. ಈ ಪುಸ್ತಕದ ವಿದೇಶಿ ಮಾರಾಟದ ಪ್ರಸಾರದ ಲೆಕ್ಕ ಸಿಕ್ಕಿಲ್ಲ. ಬೇರೆ ಬೇರೆ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿದ ಆವೃತ್ತಿಗಳ ಮಾರಾಟ ಹಾಗೂ ಈ ಆತ್ಮಕತೆಯ ಸಂಕ್ಷಿಪ್ತ ಆವೃತ್ತಿಯ ಮಾರಾಟದ ಅಂಕಿ ಅಂಶಗಳು ಕೂಡ ಇದರಲ್ಲಿ ಸೇರಿಲ್ಲ.
ಈ ಗುಜರಾತಿ ಪುಸ್ತಕದ ಹೆಸರು: ‘ಸತ್ಯಾ ನ ಪ್ರಯೋಗೊ ಅಥವಾ ಆತ್ಮಕಥಾ’. ಲೇಖಕರು: ಮೋಹನದಾಸ್ ಕರಮಚಂದ ಗಾಂಧಿ.
ಗಾಂಧೀಜಿಯ ಆತ್ಮಕತೆ 1925ನೆಯ ಇಸವಿಯ ನವೆಂಬರ್ 25ರಿಂದ ‘ನವಜೀವನ್’ ಪತ್ರಿಕೆಯಲ್ಲಿ ಪ್ರತಿವಾರ ಪ್ರಕಟವಾಗತೊಡಗಿತು. ‘ಮೈ ಎಕ್ಸ್ ಪರಿಮೆಂಟ್ ವಿತ್ ಟ್ರುತ್ ಆರ್ ಸ್ಟೋರಿ ಆಫ್ ಮೈ ಲೈಫ್’ ಎಂಬ ಶೀರ್ಷಿಕೆಯಲ್ಲಿ ಮಹದೇವ ದೇಸಾಯಿ ಪ್ರತೀ ಕಂತನ್ನೂ ಇಂಗ್ಲಿಷ್‌ಗೆ ಅನುವಾದಿಸತೊಡಗಿದರು. ಅದು ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಪ್ರತಿವಾರ ಪ್ರಕಟವಾಗತೊಡಗಿತು. 1925ರಿಂದ 1929ರವರೆಗೆ ಈ ಆತ್ಮಕತೆ ಪ್ರಕಟವಾಯಿತು. ‘ಸತ್ಯದೊಂದಿಗೆ ನನ್ನ ಪ್ರಯೋಗ ಅಥವಾ ನನ್ನ ಜೀವನ ಕತೆ’ಯ ಮೊದಲ ಭಾಗ 1927ರಲ್ಲಿ ಪುಸ್ತಕರೂಪದಲ್ಲಿ ಪ್ರಕಟವಾಯಿತು. ನಂತರ ಎರಡನೆಯ ಭಾಗ ಬಂತು.
‘ಆತ್ಮಕತೆ ಅಥವಾ ನನ್ನ ಸತ್ಯಾನ್ವೇಷಣೆ’ ಎಂದು ಕನ್ನಡದಲ್ಲೂ ಪ್ರಕಟವಾಗಿರುವ ಗಾಂಧೀ ಆತ್ಮಕತೆಯ ಪ್ರಸಾರವನ್ನು ಇನ್ನೆರಡು ಪುಸ್ತಕಗಳ ವ್ಯಾಪಕ ಪ್ರಸಾರಗಳ ಜೊತೆಗೆ ಕೆಲವರು ಹೋಲಿಸಿ ನೋಡಿದ್ದಾರೆ. ದುರುಳ ಸರ್ವಾಧಿಕಾರಿ ಹಿಟ್ಲರ್‌ನ ‘ಮೈನ್ ಕೆಂಫ್’ (ನನ್ನ ಹೋರಾಟ) 1930-45ರ ನಡುವೆ ಅವನ ನಾಝಿವಾದದ ಫ್ಯಾಶಿಸ್ಟ್ ಅಬ್ಬರದ ಕಾಲದಲ್ಲಿ ಮಿಲಿಯಗಟ್ಟಲೆ ಖರ್ಚಾಗಿತ್ತು. ಅದು ನಾಝಿ ಜನಾಂಗದ ಪರವಾದ ಹುಸಿ ಉನ್ಮಾದ ಹಾಗೂ ಪೂರ್ವಾಗ್ರಹದ ಫಲವಾಗಿತ್ತು. ಚೀನಾದ ಅಧ್ಯಕ್ಷರಾಗಿದ್ದ ಮಾವೋ ಭಾಷಣ, ಬರಹಗಳ ‘ರೆಡ್ ಬುಕ್’ನ ಕೋಟಿಗಟ್ಟಲೆ ಪುಸ್ತಕಗಳು ಮುದ್ರಣವಾಗಿವೆ. ಮಾವೋ ಪುಸ್ತಕದ ಕ್ರಾಂತಿಕಾರಿ ಮಹತ್ವ ಈ ಪ್ರಸಾರಕ್ಕೆ ಒಂದು ಕಾರಣವಾಗಿತ್ತು. ಚೀನಾ ಕ್ರಾಂತಿಯ ಸಂದರ್ಭದಲ್ಲಿ ಈ ಪುಸ್ತಕವನ್ನು ಕಡ್ಡಾಯವಾಗಿ ಹಂಚಲಾಗಿದ್ದು ಈ ಬೃಹತ್ ಪ್ರಸಾರಕ್ಕೆ ಮತ್ತೊಂದು ಕಾರಣ.
ಆದರೆ ಕಳೆದ ತೊಂಭತ್ತೈದು ವರ್ಷಗಳಲ್ಲಿ ಭಾರತದಲ್ಲಿ ಹಾಗೂ ಭಾರತದಾಚೆಗೆ ಎಲ್ಲ ವರ್ಗದ ಜನರೂ ಕೊಂಡು ಓದಿದ ‘ಸತ್ಯದೊಂದಿಗೆ ನನ್ನ ಪ್ರಯೋಗ’ ಪುಸ್ತಕದ ಅಗ್ಗಳಿಕೆ ಈ ಎರಡೂ ಪುಸ್ತಕಗಳಿಗಿಲ್ಲ. ಒಂದು ಪುಸ್ತಕ ಓದಿದ ನಂತರ ಉಂಟಾಗುವ ಸಾತ್ವಿಕ ಪ್ರಭಾವ ಎಷ್ಟು ಅದ್ಭುತವಾಗಿರುತ್ತದೆ; ನಮ್ಮೊಳಗೆ ಎಂಥ ಒಳಿತಿನ ಭಾವ ಹಬ್ಬುತ್ತದೆ; ಹಾಗೂ ಒಳಿತು ಒಳಿತನ್ನು ಉದ್ದೀಪಿಸಬಲ್ಲದು ಎಂಬುದಕ್ಕೆ ಗಾಂಧೀ ಆತ್ಮಚರಿತ್ರೆ ಸಾಕ್ಷಿಯಂತಿದೆ.
‘ಸತ್ಯದೊಂದಿಗೆ ನನ್ನ ಪ್ರಯೋಗ’ ಎನ್ನುವುದು ಎಲ್ಲ ಬರವಣಿಗೆಯ ಹಾಗೂ ಎಲ್ಲ ಬಗೆಯ ಅಭಿವ್ಯಕ್ತಿಯ ಸವಾಲನ್ನು ಹೇಳುತ್ತದೆ ಎಂದು ಸದಾ ನನಗನ್ನಿಸಿದೆ. ಆಧುನಿಕ ಗುಜರಾತಿ ಗದ್ಯವನ್ನು ರೂಪಿಸಿದ ಮಹತ್ವದ ಲೇಖಕರಾಗಿ ಕೂಡ ಗಾಂಧೀಜಿ ಗುಜರಾತಿ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿದ್ದಾರೆ. ಲೇಖಕನೊಬ್ಬ ಅತ್ಯಂತ ಸರಳವಾಗಿ, ಸತ್ಯಕ್ಕೆ ಅತ್ಯಂತ ಹತ್ತಿರವಾಗಿ ತನ್ನ ಬದುಕಿನ ಕತೆ ಹೇಳುವ ಈ ರೀತಿ ಎಲ್ಲ ಕಾಲದಲ್ಲೂ ಬರವಣಿಗೆ ಕಲಿಯಲು ಬಯಸುವವರಿಗೆ ಮಾರ್ಗದರ್ಶಿಯಂತಿದೆ.
ತಮ್ಮ ಕಾವ್ಯ ಬದುಕಿನ ಆರಂಭ ಘಟ್ಟದಲ್ಲಿ ಸ್ಫೋಟಕ ಹಾಡು, ಕವಿತೆಗಳನ್ನು ಬರೆದ ಸಿದ್ಧಲಿಂಗಯ್ಯ ತಮ್ಮ ನಡುವಯಸ್ಸಿನಲ್ಲಿ ಬೆಂಗಳೂರಿನ ಬಾದಾಮಿ ಹೌಸ್ ಲೈಬ್ರರಿಯಲ್ಲಿ ಕೂತು, ‘ಹರಿಜನ್’ ಪತ್ರಿಕೆಗೆ ಗಾಂಧೀಜಿ ಬರೆದ ಬರಹಗಳನ್ನು ಓದಿದರು. ನಂತರ ಇಡೀ ಸಂಗ್ರಹವನ್ನು ಕೊಂಡು ತಮ್ಮ ಖಾಸಗಿ ಗ್ರಂಥಭಂಡಾರದಲ್ಲಿ ಇಟ್ಟುಕೊಂಡರು. ಸಿದ್ಧಲಿಂಗಯ್ಯ ತಮ್ಮ ಆತ್ಮಚರಿತ್ರೆ ‘ಊರು ಕೇರಿ’ಯ ಮೊದಲ ಭಾಗ ಬರೆದಾಗ, ಕೊನೇ ಪಕ್ಷ ಅದರ ಸರಳ, ನಿರುದ್ವಿಗ್ನ ನಿರೂಪಣೆಯ ಶೈಲಿಯನ್ನು ಗಾಂಧೀಜಿಯ ಆತ್ಮಕತೆಯ ನಿರೂಪಣಾ ಶೈಲಿಯಿಂದಲೂ ಕಲಿತಿರಬಹುದು ಎಂದು ಊಹಿಸುತ್ತೇನೆ. ಗಾಂಧೀ ಲೋಕಕ್ಕೆ ಅತ್ಯಂತ ಒಳಗಿನವರಾಗಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಈ ಗಾಂಧೀ ಆತ್ಮಕತೆಯನ್ನು ಕನ್ನಡ ಓದುಗಬಳಗಕ್ಕೆ ಆತ್ಮೀಯವಾಗುವಂತೆ ಅನುವಾದಿಸಿದ್ದಾರೆ. ಇದು ಅನುವಾದದ ಒಂದು ಮುಖ್ಯ ಮಾದರಿಯಾಗಿ ಕೂಡ ನಮ್ಮೆದುರಿಗಿದೆ.
ಗಾಂಧೀಜಿಯವರ ಆತ್ಮಕತೆಯ ಬರವಣಿಗೆ 1920ನೆಯ ಇಸವಿಯವರೆಗಿನ ಅವರ ಅನುಭವಗಳವರೆಗೆ ಬಂದು ನಿಂತಿತು. ಅದಕ್ಕೆ ಕಾರಣವನ್ನು ಲೇಖಕರೇ ಕೊಡುತ್ತಾರೆ: ‘ಇನ್ನು ಈ ಅಧ್ಯಾಯಗಳನ್ನು ಮುಗಿಸುವ ಕಾಲ ಬಂದಿದೆ. ಇಲ್ಲಿಂದ ಮುಂದೆ ನನ್ನ ಜೀವನ ಎಷ್ಟು ಬಹಿರಂಗವಾಗಿದೆಯೆಂದರೆ, ಸಾರ್ವಜನಿಕರಿಗೆ ತಿಳಿಯದಿರುವ ಸಂಗತಿ ಏನೇನೂ ಇಲ್ಲ...’
ಇದೇ ಅಧ್ಯಾಯದಲ್ಲಿ ಅವರು ಬರೆಯುವ ಮಾತುಗಳು:
‘ಈವರೆಗಿನ ನನ್ನ ಪ್ರಯೋಗಗಳಿಂದ ದೊರೆತ ನಿರ್ಣಯಗಳನ್ನು ನಾವು ಅಂತಿಮ ತೀರ್ಮಾನಗಳೆಂದು ಪರಿಗಣಿಸಲು ಆಗುವುದಿಲ್ಲ. ಆದುದರಿಂದ ಈ ಕಥೆಯನ್ನು ಇಲ್ಲಿಗೆ ಮುಗಿಸುವುದು ನನ್ನ ಸರಳ ಕರ್ತವ್ಯ. ವಾಸ್ತವವಾಗಿ ನನ್ನ ಲೇಖನಿ ಮುಂದುವರಿಯಲು ಸ್ವಾಭಾವಿಕವಾಗಿಯೇ ಹಿಂಜರಿಯುತ್ತದೆ. ವಾಚಕರಿಂದ ಬೀಳ್ಕೊಳ್ಳುವುದು ನನ್ನ ಮನಸ್ಸಿಗೆ ನೋವಾಗದೇ ಇಲ್ಲ. ನನ್ನ ಪ್ರಯೋಗಗಳಿಗೆ ನಾನು ಹೆಚ್ಚು ಬೆಲೆಯನ್ನು ಕಟ್ಟುತ್ತೇನೆ. ಅವುಗಳನ್ನು ಸತ್ಯಬದ್ಧವಾಗಿ ವರ್ಣಿಸುವಲ್ಲಿ ಯಶಸ್ವಿಯಾಗಿದ್ದೇನೋ ಇಲ್ಲವೋ ನನಗೆ ತಿಳಿಯದು. ಪ್ರಾಮಾಣಿಕವಾದ ನಿರೂಪಣೆಯನ್ನು ಮಾಡಲು ನಾನು ಸರ್ವ ಪ್ರಯತ್ನಗಳನ್ನೂ ಮಾಡಿದ್ದೇನೆಂದು ಮಾತ್ರ ಹೇಳಬಲ್ಲೆ. ಸತ್ಯವು ನನಗೆ ಹೇಗೆ ತೋರಿತೋ ಹಾಗೆ ವಿವರಿಸುವುದು ಹಾಗೂ ನಾನು ಆ ಸತ್ಯವನ್ನು ಕಂಡುಕೊಂಡ ಮಾರ್ಗವನ್ನು ವಿವರಿಸುವುದು ನನ್ನ ನಿರಂತರ ಪ್ರಯತ್ನವಾಗಿದೆ. ಇವನ್ನೆಲ್ಲ ಓದುಗರಿಗೆ ವಿವರಿಸಿ ಹೇಳುವಾಗ ನನಗೆ ವರ್ಣಾನಾತೀತವಾದ ಮಾನಸಿಕ ಶಾಂತಿ ಸಿಕ್ಕಿದೆ; ಯಾಕೆಂದರೆ ಇದು ಓದುಗರಲ್ಲಿ ಸತ್ಯ, ಅಹಿಂಸೆಗಳಲ್ಲಿ ನಂಬಿಕೆ ಹುಟ್ಟಿಸಬಹುದೆಂಬುದು ನನ್ನ ನೆಚ್ಚಿನ ಆಸೆಯಾಗಿದೆ.’
‘ಸತ್ಯನಿಷ್ಠ ನಿರೂಪಣೆ ಮಾಡುವ ಹಾದಿಯಲ್ಲಿ ಎದುರಾಗುವ ಯಾವ ಕಷ್ಟ ಕೋಟಲೆಗಳನ್ನೂ ನಾನು ಎದುರಿಸದೆ ಬಿಟ್ಟಿಲ್ಲ’ ಎಂಬ ಗಾಂಧೀಜಿಯ ಮಾತು ನಿಜವಾದ ಬರವಣಿಗೆಯ ಸವಾಲನ್ನು ಎಲ್ಲ ಲೇಖಕ ಲೇಖಕಿಯರಿಗೂ ನೆನಪಿಸುತ್ತದೆ. ‘ಆತ್ಮಕಥಾ’ ಕುರಿತು ಮುಂದೊಮ್ಮೆ ಗಾಂಧೀಜಿ ಬರೆದ ಮಾತು: ‘ನಾನೆಂದೂ ಆತ್ಮಚರಿತ್ರೆ ಬರೆಯಲಿಲ್ಲ. ಸತ್ಯದೊಂದಿಗೆ ನನ್ನ ಪ್ರಯೋಗ ಕುರಿತ ಲೇಖನಗಳ ಸರಣಿ ಬರೆದೆ; ಅವು ನಂತರ ಪುಸ್ತಕ ರೂಪದಲ್ಲಿ ಪ್ರಕಟವಾದವು. ಇದಾಗಿ ಇಪ್ಪತ್ತಕ್ಕಿಂತ ಹೆಚ್ಚು ವರ್ಷಗಳಾದವು. ಅದಾದ ನಂತರ ನಾನು ಏನು ಮಾಡಿದೆ, ಏನು ಯೋಚಿಸಿದೆ... ಇವೆಲ್ಲವನ್ನೂ ಕಾಲಾನುಕ್ರಮದಲ್ಲಿ ಬರೆದಿಲ್ಲ. ಹಾಗೆ ಬರೆಯುವ ಆಸೆಯೇನೋ ಇದೆ. ಆದರೆ ನನಗೆ ಬಿಡುವೆಲ್ಲಿದೆ?’
ಆತ್ಮಕತೆಯ ಮುಂದಿನ ಭಾಗವನ್ನು ಬರೆಯಬೇಕೆಂದು ಜನ ಕೇಳುತ್ತಲೇ ಇದ್ದರು. ಆಗ ಗಾಂಧೀಜಿ ಬರೆದರು: ‘ಆತ್ಮಕತೆಯನ್ನು ಎಲ್ಲಿಗೆ ನಿಲ್ಲಿಸಿದ್ದೇನೋ ಅಲ್ಲಿಂದ ಮತ್ತೆ ಮುಂದುವರಿಸಬೇಕೆಂದು, ಅಹಿಂಸಾ ತತ್ವವನ್ನು ವಿವರಿಸುವ ಒಂದು ಗ್ರಂಥದ ರಚನೆಗೂ ನಾನು ಶೀಘ್ರದಲ್ಲೇ ಕೈಹಾಕಬೇಕೆಂದು ನನ್ನ ಸ್ನೇಹಿತರೊಬ್ಬರು ಬೇಡಿ.ಕೆ.ಯಿಟ್ಟಿದ್ದಾರೆ. ನಿಜ ಹೇಳಬೇಕೆಂದರೆ ನನ್ನ ಆತ್ಮಕತೆಯನ್ನು ಬರೆಯಬೇಕೆಂದು ತೀರ್ಮಾನಿಸಿ ನಾನು ಬರೆದದ್ದಲ್ಲ. ಬದುಕಿನ ಯಥಾರ್ಥ ಅನುಭವಗಳನ್ನು ಒಂದು ಅಂದಾಜಿನಲ್ಲಿ ನಾನು ದಾಖಲಿಸುತ್ತಾ ಹೋದೆನಷ್ಟೆ. ಪತ್ರಿಕೆಯಲ್ಲಿ ಪ್ರಕಟವಾದ ಈ ಬರಹ ಸರಣಿ, ನಂತರ ಪುಸ್ತಕವಾಗಿ ಪ್ರಕಟವಾಯಿತು. ಆಗಿನಿಂದ ಇಲ್ಲಿಗೆ ಇಪ್ಪತ್ತು ವರ್ಷ ಸಂದಿವೆ. ನಾನು ಚಿಂತಿಸಿದ, ಕ್ರಿಯೆಯಲ್ಲಿ ತೊಡಗಿದ ವಿವರಗಳು ಈ ಅವಧಿಯಲ್ಲಿ ಅಷ್ಟು ವ್ಯವಸ್ಥಿತವಾಗಿ ಬರಹ ರೂಪಕ್ಕಿಳಿದಿಲ್ಲ. ಅವನ್ನು ಕ್ರಮಬದ್ಧವಾಗಿ ದಾಖಲಿಸುವುದು ನನಗೂ ಸಹ ಇಷ್ಟವೇ. ಆದರೆ ಅಷ್ಟು ಪುರುಸೊತ್ತಾದರೂ ಎಲ್ಲಿದೆ? ಆತ್ಮಕತೆಯನ್ನು ಮತ್ತೆ ಮುಂದುವರಿಸಲು ಸಮಯಾವಕಾಶವಂತೂ ಸದ್ಯಕ್ಕೆ ನನ್ನ ಬಳಿ ಇಲ್ಲ. ದೈವಸಂಕಲ್ಪ ಹೇಗಿದೆಯೋ ನೋಡಬೇಕು. ಆದರೆ ಅಹಿಂಸಾ ತತ್ವದ ಕುರಿತು ಗ್ರಂಥವನ್ನು ಬರೆಯುವಷ್ಟು ಖಂಡಿತ ನಾನು ಶಕ್ತನಲ್ಲ. ಪಾಂಡಿತ್ಯಪೂರ್ಣ ಬರವಣಿಗೆ ನನ್ನ ಕೈಲಾಗದು.’
1920ರ ನಂತರದ ಗಾಂಧೀ ಕತೆಯನ್ನು ರಾಜಮೋಹನ ಗಾಂಧಿಯವರ ‘ಮೋಹನದಾಸ್: ಎ ಟ್ರು ಸ್ಟೋರಿ’ ಅಥವಾ ಡಿ.ಎಸ್. ನಾಗಭೂಷಣರ ‘ಗಾಂಧೀ ಕಥನ’ ಮುಂತಾದ ಪುಸ್ತಕಗಳಲ್ಲಿ ಹಲವೆಡೆ ಓದಿಕೊಳ್ಳಬಹುದು. ಆದರೆ ‘ಗಾಂಧೀಜಿ ತಮ್ಮ ಆತ್ಮಕತೆಯ ಮೊದಲ ಅಧ್ಯಾಯದಿಂದ ಕೊನೆಯ ಅಧ್ಯಾಯದವರೆಗೂ ಬರೆದ ಸರಳ, ನೇರ ರೀತಿಯಲ್ಲಿ ನಂತರದ ಕತೆಯನ್ನೂ ಬರೆದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!’ ಎಂಬ ನಿರೀಕ್ಷೆ ಮಾತ್ರ ಹಾಗೇ ಉಳಿದುಬಿಟ್ಟಿದೆ. 500 ಪುಟಗಳ ಈ ಪುಸ್ತಕ ಈಗ ಎಲ್ಲೆಡೆ ದೊರೆಯುತ್ತದೆ. ‘ಗಾಂಧಿ ಭವನ, ಕುಮಾರ ಪಾರ್ಕ್ ಪೂರ್ವ, ಶೇಷಾದ್ರಿಪುರಂ, ಬೆಂಗಳೂರು 56001’ ಇಲ್ಲಿ ನೂರು ರೂಪಾಯಿ ಮುಖ ಬೆಲೆಯ ಇಂಗ್ಲಿಷ್ ಹಾಗೂ ಕನ್ನಡಾನುವಾದದ ಪ್ರತಿಗಳು ಐವತ್ತು ರೂಪಾಯಿಗೆ ದೊರೆಯುತ್ತವೆ. ಸಂಕ್ಷಿಪ್ತ ವಿದ್ಯಾರ್ಥಿ ಆವೃತ್ತಿ ಮೂವತ್ತು ರೂಪಾಯಿಗೆ ದೊರೆಯುತ್ತದೆ.
ಜಗತ್ತಿನ ಈ ಅಪೂರ್ವ ಆತ್ಮಕತೆಯನ್ನು ತಂದೆ ತಾಯಿಗಳು, ಮೇಷ್ಟ್ರು, ಮೇಡಂಗಳು ತಾವೂ ಓದಿ, ಮಕ್ಕಳಿಗೂ ಓದಿಸಿದರೆ ಅವರ ಮನೆ ಮನಗಳೆರಡೂ ಅಪಾರ ಶಾಂತಿ, ಸಮಾಧಾನ ಪಡೆಯಬಲ್ಲವು ಎಂದು ಗ್ಯಾರಂಟಿ ಕೊಡುವೆ. ತಮ್ಮ ಅನುಭವಗಳನ್ನು ಬರೆಯಲು ಬಯಸುವವರಿಗಂತೂ ಇದು ಅತ್ಯಂತ ಉಪಯುಕ್ತ ಮಾದರಿ.