ಕನ್ನಡ ಸ್ಪೆಲ್ ಚೆಕ್: ಕರ್ನಾಟಕ ಸರಕಾರದ ಹೊಣೆ
ಎನ್.ಎ.ಎಂ. ಇಸ್ಮಾಯಿಲ್
ತಮಿಳು ಸ್ಪೆಲ್ ಚೆಕ್ ಬರಲು ದಶಕಗಳ ಹಿಂದೆ ತಮಿಳು ಸರಕಾರವೇ ಮುಂದಡಿಯಿಟ್ಟಿದ್ದರಿಂದ ತಮಿಳು ಸ್ಪೆಲ್ ಚೆಕ್ ಈಗ ಜಾರಿಯಲ್ಲಿದೆ. ಕನ್ನಡದಲ್ಲೂ ಸ್ಪೆಲ್ ಚೆಕ್ ಎಲ್ಲರಿಗೂ ದೊರೆಯುವಂತೆ ಮಾಡುವುದು ಅಸಾಧ್ಯವಾದದ್ದೇನಲ್ಲ. ಕನ್ನಡದ ಹೊಸ ತಲೆಮಾರಿನ ಬಗ್ಗೆ ಕಾಳಜಿ ಇದ್ದರೆ ಇದು ಕೆಲವೇ ತಿಂಗಳುಗಳಲ್ಲಿ ಸಾಧ್ಯವಾಗಬಹುದಾದ ಕೆಲಸ.
ಇಂಗ್ಲಿಷ್ ಅಧ್ಯಾಪಕರೊಬ್ಬರು ಈಚೆಗೆ ಕಳಿಸಿದ ಒಂದು ಮೆಸೇಜ್: ‘ನಿಮ್ಮ ಇಂತಿ ನಮಸ್ಕಾರಗಳು’ ಪುಸ್ತಕ ಓದುತ್ತಾ ಇದ್ದೀನಿ. ನನಗೆ ತುಂಬಾ ಖುಷಿ ಕೊಟ್ಟ ವಿಷಯ ಅಂದ್ರೆ typing mistakes ಇಲ್ಲ. ಇತ್ತೀಚೆಗೆ ನಾನು ಓದಿದ ಕೆಲವು ಕನ್ನಡ ಪುಸ್ತಕಗಳಲ್ಲಿ ಈ mistakesತುಂಬಾ ನೋಡ್ತಿದೀನಿ.
ಈ ಇಂಗ್ಲಿಷ್ ಅಧ್ಯಾಪಕ-ಸಂಶೋಧಕರು ಹೆಚ್ಚು ಓದುವ
ಇಂಗ್ಲಿಷ್ ಪುಸ್ತಕಗಳಲ್ಲಿ ಕಾಗುಣಿತದ ತಪ್ಪುಗಳನ್ನು ಕಾಣುವುದು ಕಡಿಮೆ. ಇಂಗ್ಲಿಷ್‌ನಲ್ಲಿ ‘ಸ್ಪೆಲ್ ಚೆಕ್’ ಇದೆ; ಸ್ಪೆಲ್ಲಿಂಗ್ ತಪ್ಪಾದರೆ ಯಾವುದು ಸರಿ ಎಂಬುದನ್ನು ಅದು ಸೂಚಿಸುತ್ತದೆ.
ಇಂಗ್ಲಿಷ್ ವಾಕ್ಯಗಳ ಸರಿ, ತಪ್ಪುಗಳನ್ನೂ ಸೂಚಿಸುವ ವ್ಯವಸ್ಥೆಗಳಿವೆ. ಕನ್ನಡದಲ್ಲಿ ಈ ಅನುಕೂಲ ಇಲ್ಲ. ಜೊತೆಗೆ ಲೇಖಕರ ಬೇಜವಾಬ್ದಾರಿ, ಅವಸರ, ಅದಕ್ಷತೆ, ದಕ್ಷ ಪ್ರೂಫ್ ರೀಡರುಗಳ ಕೊರತೆ, ಪ್ರಾಮಾಣಿಕ ಪ್ರೂಫ್ ರೀಡರುಗಳಿಗೆ ತಕ್ಕಮಟ್ಟಿನ ಸಂಭಾವನೆಯನ್ನಾದರೂ ಕೊಡಲು ಲೇಖಕರ, ಸಂಸ್ಥೆಗಳ ಹಿಂಜರಿತ ಇವೆಲ್ಲ ಇದರಲ್ಲಿ ಸೇರಿವೆ.
1990ರ ಸುಮಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪುಸ್ತಕಗಳ ಪ್ರೂಫ್ ರೀಡಿಂಗ್ ಸಂಭಾವನೆ 3ರೂಪಾಯಿ 80 ಪೈಸೆ. 2025ರಲ್ಲಿ ಈ ಸಂಭಾವನೆ ಪುಟಕ್ಕೆ 10 ರೂಪಾಯಿ ಅಷ್ಟೇ! ‘ಈಗ ಕೊನೇ ಪಕ್ಷ ಪುಟಕ್ಕೆ ಇಪ್ಪತ್ತು ಮೂವತ್ತು ರೂಪಾಯಿಯನ್ನಾದರೂ ಮಾಡಿ, ಕಳೆದ ಮೂವತ್ತೈದು ವರ್ಷಗಳಲ್ಲಿ ನಿಮ್ಮ ಸಂಬಳ, ಭತ್ತೆ ಎಷ್ಟು ಏರಿದೆ ಎಂಬುದನ್ನು ನೋಡಿಕೊಂಡಾದರೂ ಇದನ್ನು ಏರಿಸಿ’ ಎಂದರೆ, ದಿವ್ಯ ನಿರ್ಲಿಪ್ತತೆಯೇ ಅಧಿಕಾರಿಗಳ ಉತ್ತರ!
ಕನ್ನಡ ಪುಸ್ತಕಗಳ ಪ್ರೂಫ್ ರೀಡಿಂಗ್ ನಿಜಕ್ಕೂ ಅಸಲಿ ವಿಜ್ಞಾನ ಎಂದು ‘ವಿನ್ಯಾಸವಿಜ್ಞಾನಿ’ ಸುಜ್ಞಾನಮೂರ್ತಿಯವರು ಬಡಕೊಂಡರೂ ಅನೇಕರಿಗೆ ಅರ್ಥವಾಗುವುದಿಲ್ಲ. ಆದರೂ ಪರಿಸ್ಥಿತಿ ತೀರಾ ಕೈಮೀರಿಲ್ಲ! ನನ್ನ ವಲಯದಲ್ಲಿ ಕೆಲವರಾದರೂ ಸೂಕ್ಷ್ಮ ಕಣ್ಣಿನ ಗೆಳೆಯ, ಗೆಳತಿಯರು, ಭಾಷಾಜ್ಞಾನ ಇರುವವರು, ಸದಾ ಕನ್ನಡ ಭಾಷೆಯ ಜೊತೆಯಿರುವವರು ಇರುವುದರಿಂದ, ನಾನೂ ಸಾಕಷ್ಟು ಗಮನ ಕೊಡುವುದರಿಂದ, ನನ್ನಂಥವರ ಪುಸ್ತಕಗಳು ಕೊಂಚ ಬಚಾವ್.
ಆದರೂ, ಬರೆವವರೆಲ್ಲ ಇಂಥ ವಲಯವನ್ನು ಸೃಷ್ಟಿಸಿಕೊಳ್ಳುವುದು ಕಷ್ಟವಿರಬಹುದು. ಈ ಸಮಸ್ಯೆಗೆ ಖಾಯಂ ಉತ್ತರ ಬೇಕಲ್ಲ ಎಂದು ಎನ್.ಎ.ಎಂ. ಇಸ್ಮಾಯಿಲ್ ಅವರನ್ನು ಕೇಳಿದೆ. ಹಿಂದೊಮ್ಮೆ ‘ಪ್ರಜಾವಾಣಿ’ಯಲ್ಲಿ ‘ಇ-ಹೊತ್ತು’ ಅಂಕಣ ಬರೆಯುತ್ತಿದ್ದ ಇಸ್ಮಾಯಿಲ್ ಆಧುನಿಕ ಡಿಜಿಟಲ್ ತಂತ್ರಜ್ಞಾನ ವಲಯದ ಆಳವಾದ ಜ್ಞಾನವುಳ್ಳ ಕರ್ನಾಟಕದ ಅಪರೂಪದ ಪ್ರತಿಭೆ. ನನ್ನಂಥವರು ಇಂಥ ಸಮಸ್ಯೆಗಳಿಗೆಲ್ಲ ಮೊರೆ ಹೋಗುವುದು ಅವರನ್ನೇ.
ಇಸ್ಮಾಯಿಲ್ ಕನ್ನಡ ಸ್ಪೆಲ್ ಚೆಕ್ ಕುರಿತು ಹಲವು ವರ್ಷಗಳಿಂದ ಯೋಚಿಸಿ ಕೆಲಸ ಮಾಡುತ್ತಿರುವವರು. ಪ್ರಜಾವಾಣಿಯಲ್ಲಿದ್ದಾಗ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದವರು. ಈ ಅಂಕಣಕ್ಕಾಗಿ ನಾನು ಕೇಳಿಕೊಂಡಾಗ, ‘ಕನ್ನಡ ಕಾಗುಣಿತ ಪರೀಕ್ಷಕ’ ಅಥವಾ ‘ಸ್ಪೆಲ್ ಚೆಕ್’ ಕುರಿತು ಇಸ್ಮಾಯಿಲ್ ಕೊಟ್ಟ ಟಿಪ್ಪಣಿಯ ಭಾಗಗಳನ್ನು ಇಲ್ಲಿ ಕೊಡುತ್ತಿರುವೆ:
‘ಕನ್ನಡದಲ್ಲಿ ಸ್ಪೆಲ್ ಚೆಕ್ ಸುತ್ತ ಕೆಲವು ಕೆಲಸಗಳೂ ಆಗಿವೆ. ಮುಖ್ಯವಾದದ್ದು ಓಪನ್ ಆಫೀಸ್ ಅಥವಾ ಲಿಬ್ರೆ ಆಫೀಸ್‌ಗಾಗಿ ಕೆಲವು ಉತ್ಸಾಹಿ ತಂತ್ರಜ್ಞರು ಸ್ವಯಂಸೇವಕರಾಗಿ ಮಾಡಿದ ಕೆಲಸ. ಇದು ಒಂದು ಹಂತದವರೆಗೂ ಆಗಿ ಉಳಿದಿದೆ. ಏಕೆಂದರೆ, ಇದಕ್ಕೆ ಬಹಳ ಮುಖ್ಯವಾಗಿ ಬೇಕಿದ್ದ tagged corpus of words (ಒಂದು ಪದ ನಾಮಪದವೋ, ಕ್ರಿಯಾಪದವೋ, ವಿಶೇಷಣವೋ ಎಂಬುದನ್ನು ಸೂಚಿಸುವ, ಪದಸ್ವರೂಪವನ್ನು ವಿವರಿಸುವ, ಪದಕೋಶ) ಕನ್ನಡದಲ್ಲಿ ಲಭ್ಯವೇ ಇಲ್ಲ. ಮೈಸೂರಿನ ಭಾಷಾಸಂಸ್ಥಾನ ಇಂಥದ್ದೊಂದನ್ನು ಮಾಡಿದೆಯಂತೆ. ಅದು ಓಪನ್ ಸೋರ್ಸ್ ತಂತ್ರಜ್ಞಾನದಲ್ಲಿ ಕೆಲಸ ಮಾಡುವವರಿಗೆ ಲಭ್ಯವಿರುವ ಮಾಹಿತಿ ನನಗಿಲ್ಲ.
ಇಂಗ್ಲಿಷ್‌ನಲ್ಲಿ ಸ್ಪೆಲ್ ಚೆಕ್ ಆರಂಭವಾದದ್ದು 1960ರಲ್ಲಿ. ಅಮೆರಿಕದ ಬ್ರೌನ್ ಯೂನಿವರ್ಸಿಟಿ 1960ರಲ್ಲಿ ಈ ಪ್ರಯತ್ನ ಆರಂಭಿಸಿ ಸುಮಾರು 10 ಲಕ್ಷ ಪದಗಳ tagged corpora ಅಭಿವೃದ್ಧಿಪಡಿಸಿತು. ಇದರಿಂದ ಪ್ರೇರಿತರಾಗಿ ಲ್ಯಾಂಕಾಸ್ಟರ್, ಓಸ್ಲೋ, ಬರ್ಗನ್ ವಿಶ್ವವಿದ್ಯಾಲಯಗಳು 1970ರಲ್ಲಿ ‘ಬ್ರಿಟಿಷ್ ಇಂಗ್ಲಿಷ್ ಕಾರ್ಪೋರಾ’ ಅಭಿವೃದ್ಧಿಪಡಿಸಿದವು. ಈಗ ಇಂಥ ಅನೇಕ ಕಾರ್ಪೊರಾಗಳಿವೆ.
ಈಗ ಸದ್ಯಕ್ಕೆ ಮೈಕ್ರೋಸಾಫ್ಟ್ 365 ನಲ್ಲಿ ಕನ್ನಡ ಸ್ಪೆಲ್ ಚೆಕ್ ಲಭ್ಯವಿದೆ. ಆದರೆ ಇದು ಸ್ವತಂತ್ರ ಪದಗಳನ್ನು ಗುರುತಿಸುತ್ತದೆಯೇ ಹೊರತು, ಒಂದು ಪದದಿಂದ ಪಡೆದ, ರೂಪುಗೊಂಡ,‘derivative’ ಪದಗಳಲ್ಲಿ ಇರುವ ತಪ್ಪನ್ನು ಗುರುತಿಸುವುದಿಲ್ಲ. ಆದರೂ ಬಹುತೇಕ ತಪ್ಪುಗಳನ್ನು ಗುರುತಿಸಲು ಇದರಿಂದ ಸಾಧ್ಯ. ಸಾಮಾನ್ಯ ಅಲ್ಪಪ್ರಾಣ, ಮಹಾಪ್ರಾಣಗಳ ತಪ್ಪುಗಳನ್ನು ಇದು ಹೇಳುತ್ತದೆ. ಆದರೆ ಇದನ್ನು ಬಳಸುವುದಕ್ಕೆ ಹೊಸ ಆವೃತ್ತಿಯ ಆಫೀಸ್ ಪ್ಯಾಕೇಜ್ ಖರೀದಿಸಬೇಕಾಗುತ್ತದೆ. ನಮ್ಮಲ್ಲಿ ಬಹುತೇಕರು ಅನಧಿಕೃತ ಆವೃತ್ತಿಗಳನ್ನು ಬಳಸುತ್ತಾರೆ; ಆದ್ದರಿಂದ ಜನಸಾಮಾನ್ಯರಿಗೆ ಇದು ಸುಲಭವಾಗಿ ಸಿಗುವುದಿಲ್ಲ.
ಗೂಗಲ್ ಡಾಕ್ಸ್‌ನಲ್ಲಿ ಕನ್ನಡ ಸ್ಪೆಲ್ ಚೆಕ್ ನೇರವಾಗಿ ಲಭ್ಯವಿಲ್ಲ. ನೀವು ಗೂಗಲ್ ವರ್ಕ್ ಸ್ಪೇಸ್ ಬಳಸುವವರಾದರೆ, ಪರೋಕ್ಷವಾಗಿ ಈ ಸವಲತ್ತು ಲಭ್ಯವಿದೆ. ಉemiಟಿi ಂI ಯನ್ನು ಗೂಗಲ್ ಡಾಕ್ಸ್‌ನಲ್ಲಿ ಬರವಣಿಗೆ ಸಹಾಯಕನಂತೆ ಬಳಸಿಕೊಂಡರೆ ಅದು ತಪ್ಪುಗಳನ್ನೂ ತಿದ್ದಿಕೊಡುತ್ತದೆ. ಇದಕ್ಕೆ ಸಣ್ಣಮಟ್ಟಿಗಿನ ಕಸರತ್ತು ಮಾಡಬೇಕಾಗುತ್ತದೆ. ಜೊತೆಗೆ ಗೂಗಲ್ ವರ್ಕ್ ಸ್ಪೇಸ್‌ನ ಚಂದಾದಾರಿಕೆಯ ಅಗತ್ಯವೂ ಇದೆ. ಸದ್ಯದ ಮಟ್ಟಿಗೆ ಜಿಯೋ ಮೊಬೈಲ್‌ನ ಚಂದಾದಾರರಿಗೆ ಗೂಗಲ್ ಸೇವೆ ಒಂದೂವರೆ ವರ್ಷದ ಮಟ್ಟಿಗೆ ಉಚಿತವಾಗಿ ದೊರೆಯುತ್ತದೆ. ಜಿಯೋ ಮೊಬೈಲ್ ನಂಬರ್ ಇರುವವರು ಇದನ್ನು ಬಳಸಲು ಸಾಧ್ಯವಿದೆ.
ಕನ್ನಡ ಪದಗಳ tagged corpus(ಪದ ಸ್ವರೂಪಗಳನ್ನು ವಿವರಿಸುವ ಕೋಶ) ಮಾಡುವ ಯೋಜನೆಯೊಂದನ್ನು ಪೂರ್ಣಚಂದ್ರ ತೇಜಸ್ವಿಯವರ ಸಲಹೆಯ ಮೇರೆಗೆ ಪ್ರೊ. ವಿವೇಕ ರೈಯವರು ಕುಲಪತಿಗಳಾಗಿದ್ದಾಗ ಕನ್ನಡ ವಿಶ್ವವಿದ್ಯಾಲಯ ಕೈಗೆತ್ತಿಕೊಂಡಿತ್ತು. ಆದರೆ ಅದು ಮುಂದುವರಿದಂತಿಲ್ಲ. ಕನ್ನಡ ವಿಶ್ವವಿದ್ಯಾಲಯ ಇವತ್ತಿಗೂ ಇದನ್ನು ಮಾಡಬಹುದು. ಇಂಥದ್ದೊಂದು ವ್ಯವಸ್ಥೆ ಇದ್ದಿದ್ದರೆ ಓಪನ್ ಸೋರ್ಸ್ ಉತ್ಸಾಹಿಗಳು, ಜೊತೆಗೆ ಮೈಕ್ರೋಸಾಫ್ಟ್ ನಂಥ ಕಂಪೆನಿಗಳೂ, ಸ್ಪೆಲ್ ಚೆಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದರು. ಈಗ ಅವರ ಬಳಿ ಇರುವುದು ಅವರೇ ಅಭಿವೃದ್ಧಿಪಡಿಸಿದ ಕಾರ್ಪೊರಾಗಳನ್ನು ಅವಲಂಬಿಸಿರುವ ಸ್ಪೆಲ್ ಚೆಕ್‌ಗಳು. ಎಐ ಬಂದಮೇಲೆ ಈ ಕೆಲಸ ಇನ್ನೂ ಸುಲಭವಾಗಿದೆ. ಆದರೆ ಈ ಕಂಪೆನಿಗಳಿಗೆ ಇದನ್ನು ಮಾಡಲೇಬೇಕಾದಷ್ಟು ದೊಡ್ಡ ಮಾರುಕಟ್ಟೆಯೇ ಕಾಣಿಸುತ್ತಿಲ್ಲ.
ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಸುಲಭವಾಗಿ ಹಾಗೂ ಅತ್ಯಗತ್ಯವಾಗಿ ಮಾಡಬಹುದಾದ ಕೆಲಸ ಇದು:
ಕರ್ನಾಟಕ ಸರಕಾರ ತಾನು ಖರೀದಿಸುವ ಆಫೀಸ್ 365 ತಂತ್ರಾಂಶದಲ್ಲಿ ಕನ್ನಡ ಸ್ಪೆಲ್ ಚೆಕ್‌ನ ಮಟ್ಟ ಯಾವ ರೀತಿಯದ್ದಾಗಿರಬೇಕು ಎಂಬುದನ್ನು ಖಾತರಿಪಡಿಸಿಕೊಳ್ಳಲು ತೀರ್ಮಾನಿಸಿದರೆ ನಿರ್ಣಾಯಕ ಬದಲಾವಣೆ ಸಾಧ್ಯವಿದೆ. ಆದರೆ ಅದಕ್ಕೆ ಸರಕಾರ ಮನಸ್ಸು ಮಾಡಬೇಕಷ್ಟೇ. ಕನ್ನಡ ಬಳಸಬಲ್ಲ ಕಂಪ್ಯೂಟರ್‌ಗಳನ್ನೂ, ಸಾಫ್ಟ್‌ವೇರ್‌ಗಳನ್ನೂ ಖರೀದಿಸುವುದರಲ್ಲಿ ಕರ್ನಾಟಕ ಸರಕಾರಕ್ಕಿಂತ ದೊಡ್ಡ ಗ್ರಾಹಕ ಮತ್ತಾರೂ ಇರಲು ಸಾಧ್ಯವಿಲ್ಲ. ಇದನ್ನು ಕನ್ನಡದ ಅಭಿವೃದ್ಧಿಗಾಗಿ ಬಳಸಿಕೊಳ್ಳುವ ಜಾಣತನ, ಕಾಳಜಿ ಸರಕಾರಕ್ಕೆ ಇರಬೇಕು. ಕರ್ನಾಟಕದ ವಿಜ್ಞಾನ ತಂತ್ರಜ್ಞಾನ ಅಕಾಡಮಿಗೂ ಈ ಕೆಲಸವನ್ನು ಒಪ್ಪಿಸಿ ಮಾಡಿಸಬಹುದು. ಆದರೆ ಈ ಬಗೆಯ ಕೆಲಸಕ್ಕೆ ವಿಷನ್ ಮುಖ್ಯ. ವಿಜ್ಞಾನ ತಂತ್ರಜ್ಞಾನ ಅಕಾಡಮಿಯ ತುಂಬಾ ಅಧಿಕಾರಿಗಳು ಮತ್ತು ಹಳೆಯ ತಲೆಮಾರಿನವರೇ ಇದ್ದಾರೆ. ಇದೇ ದೊಡ್ಡ ಸಮಸ್ಯೆ.
ಸುಮಾರು 2015ರ ತನಕವೂ ನಮ್ಮ ಓಪನ್ ಸೋರ್ಸ್ ಗ್ರೂಪ್‌ಗಳು ಸ್ವಲ್ಪ ಮಟ್ಟಿಗೆ ಕನ್ನಡ ತಂತ್ರಜ್ಞಾನದ ಸುತ್ತ ಕೆಲಸ ಮಾಡುತ್ತಿದ್ದವು. ಆದರೆ ಈಗ ಅದೂ ಇಲ್ಲವಾಗಿದೆ. ಇದಕ್ಕೆ ಮುಖ್ಯ ಕಾರಣ ಕನ್ನಡ ಭಾಷೆ ಗೊತ್ತಿರುವ, ಕನಿಷ್ಠ ಕನ್ನಡವನ್ನು ಟೈಪ್ ಮಾಡುವ ಉತ್ಸಾಹವಿರುವ, ಸ್ವಯಂ ಉತ್ಸಾಹದಿಂದ ಈ ಕೆಲಸ ಮಾಡುವ ವಿದ್ಯಾರ್ಥಿ ವಾಲೆಂಟಿಯರ್‌ಗಳೇ ಈಗ ಇಲ್ಲವಾಗಿದ್ದಾರೆ. ಇಂಜಿನಿಯರಿಂಗ್ ಕಾಲೇಜುಗಳಿಗೆ ಬರುವ ಅನೇಕರು ಕನ್ನಡವನ್ನು ಪಾಸ್ ಆಗಲು ಬೇಕಾದ ಭಾಷೆಯಾಗಿಯಷ್ಟೇ ಗ್ರಹಿಸಿ ಕಲಿತವರು. ಹಾಗಾಗಿ ಇಂಥವರು ಕನ್ನಡ ಪ್ರಾಜೆಕ್ಟ್‌ಗಳಿಗೆ ಸಿಗುವುದೇ ಇಲ್ಲ. ಈ ಮಟ್ಟಿಗೆ ತಮಿಳು ಮತ್ತು ಮಲಯಾಳಂಗಳೇ ಪರವಾಗಿಲ್ಲ. ಅಲ್ಲಿ ಇನ್ನೂ ಉತ್ಸಾಹ ಉಳಿದುಕೊಂಡಿದೆ.
ತಮಿಳು ಸ್ಪೆಲ್ ಚೆಕ್ ಬರಲು ದಶಕಗಳ ಹಿಂದೆ ತಮಿಳು ಸರಕಾರವೇ ಮುಂದಡಿಯಿಟ್ಟಿದ್ದರಿಂದ ತಮಿಳು ಸ್ಪೆಲ್ ಚೆಕ್ ಈಗ ಜಾರಿಯಲ್ಲಿದೆ. ಕನ್ನಡದಲ್ಲೂ ಸ್ಪೆಲ್ ಚೆಕ್ ಎಲ್ಲರಿಗೂ ದೊರೆಯುವಂತೆ ಮಾಡುವುದು ಅಸಾಧ್ಯವಾದದ್ದೇನಲ್ಲ. ಕನ್ನಡದ ಹೊಸ ತಲೆಮಾರಿನ ಬಗ್ಗೆ ಕಾಳಜಿ ಇದ್ದರೆ ಇದು ಕೆಲವೇ ತಿಂಗಳುಗಳಲ್ಲಿ ಸಾಧ್ಯವಾಗಬಹುದಾದ ಕೆಲಸ.
ಸದಾ ಸಮಾಜಮುಖಿ-ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಮಾತಾಡುವ, ಬರೆಯುವ ಎನ್.ಎ.ಎಂ. ಇಸ್ಮಾಯಿಲ್ ಅವರ ಅನುಭವ ಮತ್ತು ಜ್ಞಾನದ ಕಾಳಜಿಯ ಮಾತುಗಳನ್ನು ಕರ್ನಾಟಕ ಸರಕಾರ ಹಾಗೂ ಕನ್ನಡ ಸಂಸ್ಥೆಗಳು ಕಿವಿಗೊಟ್ಟು ಕೇಳಿಸಿಕೊಳ್ಳುವ ಕಾಲ ಬೇಗ ಬರಲಿ.