×
Ad

ಆನಂದದ ಹಾರ್ಮೋನುಗಳು!

Update: 2026-02-16 11:30 IST

ಸುಖ ಸಂತೋಷಗಳ ನಾಡುಗಳ ಕಲ್ಪನೆಗಳನ್ನು ಕುರಿತ

ವಿಶ್ವ ಸಮೀಕ್ಷೆಗಳ ಮಾನದಂಡಗಳೇನೇ ಇರಲಿ, ಪ್ರತಿಯೊಬ್ಬರ ಸುಖ, ಆನಂದದ ಕಲ್ಪನೆಗಳೇ ಭಿನ್ನ ಹಾಗೂ ವೈಯಕ್ತಿಕ ಎಂಬ ಬಗ್ಗೆ ಯಾರಿಗೂ ಅನುಮಾನವಿರಲಾರದು. ಆದ್ದರಿಂದಲೇ, ಆನಂದ, ಸಂತೋಷಗಳ ಕಲ್ಪನೆಗಳನ್ನು ಕುರಿತ ಅಂತರ್‌ರಾಷ್ಟ್ರೀಯ ಸಮೀಕ್ಷಾ ಫಲಿತಾಂಶಗಳ ಎದುರು ನಮ್ಮ ಸಣ್ಣಪುಟ್ಟ ಸುಖಗಳ ಒರತೆಗಳ ಪಟ್ಟಿಯನ್ನು ನಾವು ಎಂದೂ ಮರೆಯಬಾರದು.

‘ನಮಗೆ ಇಷ್ಟವಾದ, ಪ್ರಿಯವಾದ ಕೆಲಸ ಮಾಡುತ್ತಿದ್ದರೆ ನಮ್ಮ ಹ್ಯಾಪಿನೆಸ್ ಹಾರ್ಮೋನುಗಳು ಹೆಚ್ಚು ಜಾಗೃತವಾಗುತ್ತವೆ’ ಎಂದರು ಡಾ. ಆರ್. ಕೆ. ಸರೋಜಾ. ಈ ಅಂಕಣ ಬರೆಯುವ ಕಾಯಕ ಹಾಗೂ ಇದನ್ನು ಓದುವ ಸುಂದರ ಮನಸ್ಸುಗಳು ಯಾವುವು ಎಂಬುದನ್ನು ಊಹಿಸಿಕೊಳ್ಳುವ ಲಹರಿ ಕೂಡ ಹ್ಯಾಪಿನೆಸ್ ಹಾರ್ಮೋನುಗಳ ಉಬ್ಬರಕ್ಕೆ ಕಾರಣವಾಗುತ್ತದೆ ಎಂಬುದನ್ನೂ ಇಲ್ಲಿ ಹೇಳಬೇಕು.

ಡಾಕ್ಟರ್ ಸರೋಜಾರ ಮಾತಿನ ಸುತ್ತ ಅಡ್ಡಾಡುತ್ತಲೇ ಯಾವ ದೇಶ ಹೆಚ್ಚು ಆನಂದದ ದೇಶ ಎಂಬುದನ್ನು ಕುರಿತಂತೆ ಪ್ರತೀ ವರ್ಷ ನಡೆಯುವ ಜಾಗತಿಕ ಸಮೀಕ್ಷೆ ನೆನಪಾಯಿತು. ಮೊನ್ನೆ 2025ರಲ್ಲಿ ನಡೆದ ಸುಖೀ ನಾಡುಗಳ ವಿಶ್ವಸಮೀಕ್ಷೆಯನ್ನು ನೀವು ನೋಡಿರಬಹುದು. ಯಾವ ದೇಶ ಹೆಚ್ಚು ಸಂತೋಷದ ನಾಡು, ಯಾವುದು ಹೆಚ್ಚು ಸುಖೀ ದೇಶ ಎಂಬುದನ್ನು ಗುರುತಿಸುವ ಈ ವಿಶ್ವ ಸಮೀಕ್ಷೆಯಲ್ಲಿ ಬಳಸುವ ಮಾನದಂಡಗಳು ಇವು: ಒಂದು ದೇಶದ ಆರ್ಥಿಕ ಅಭಿವೃದ್ಧಿ ಸೂಚ್ಯಂಕ; ಜನರ ತಲಾ ಆದಾಯ; ಜನರ ಸಾಮಾಜಿಕ ಭದ್ರತೆ; ಜನರಲ್ಲಿ ಆರೋಗ್ಯಕರ ಬದುಕಿನ ಸಾಧ್ಯತೆಗಳ ನಿರೀಕ್ಷೆ ಎಷ್ಟಿದೆ; ವ್ಯಕ್ತಿಗಳಲ್ಲಿ ಹಾಗೂ ಸಾರ್ವಜನಿಕ ಬದುಕಿನಲ್ಲಿ ಕಾಣಬರುವ ಉದಾರ ಗುಣ; ಜೀವನದಲ್ಲಿ ಆಯ್ಕೆಗಳನ್ನು ಮಾಡಿಕೊಳ್ಳಲು ಜನರಿಗೆ ಇರುವ ಸ್ವಾತಂತ್ರ್ಯ, ಹಾಗೂ ದೇಶದಲ್ಲಿ ಭ್ರಷ್ಟಾಚಾರದ ಪ್ರಮಾಣ ಕಡಿಮೆ ಇರುವುದು.

ಕಳೆದ ಏಳು ವರ್ಷದಿಂದ ಫಿನ್‌ಲ್ಯಾಂಡ್ ಎಂಬ ಪುಟ್ಟ ದೇಶ ಜಗತ್ತಿನ ಅತ್ಯಂತ ಸುಖೀ ದೇಶ ಎಂಬ ಸ್ಥಾನ ಉಳಿಸಿಕೊಂಡಿದೆ; 2025ರಲ್ಲಿ ಪ್ರಕಟವಾದ ಸಮೀಕ್ಷೆಯಲ್ಲೂ ಫಿನ್‌ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. 2025ರ ಮಾರ್ಚ್ ತಿಂಗಳಲ್ಲಿ ಬಂದ ಈ ಸುಖೀನಾಡಿನ ಸಮೀಕ್ಷೆಯ ಪಟ್ಟಿಯಲ್ಲಿ ಡೆನ್ಮಾರ್ಕ್, ಸ್ವೀಡನ್, ನ್ಯೂಝಿಲ್ಯಾಂಡ್ ಥರದ ದೇಶಗಳು ಇವೆ. ಈ ಸಲ ಈ ಪಟ್ಟಿಯಲ್ಲಿ ಕ್ರೂರ ನರಮೇಧದಲ್ಲಿ ತೊಡಗಿರುವ ಇಸ್ರೇಲ್ ಕೂಡ ಇರುವುದನ್ನು ನೋಡಿದಾಗ ಈ ಸಮೀಕ್ಷೆಯ ಮೆಥೆಡಾಲಜಿಯ ಬಗೆಗೆ ತೀವ್ರ ಅನುಮಾನ ಹುಟ್ಟಿತು.

ಅದಿರಲಿ, ಯಾರನ್ನು ಮುಟ್ಟಬೇಕು, ಯಾರನ್ನು ಮುಟ್ಟಬಾರದು ಎಂಬ ಕಟ್ಟುನಿಟ್ಟುಗಳ ಬಗ್ಗೆ ಸದಾ ತಲೆ ಕೆಡಿಸಿಕೊಳ್ಳುವ ಜನರಿರುವ ದೇಶ ಸುಖೀದೇಶವಾಗಿರುವುದು ಸಾಧ್ಯವೇ ಇಲ್ಲ. ವಿಶ್ವಗುರುವೆಂದು ಬೀಗುವ ಭಾರತ 2025ರ ವರ್ಷದ ಸುಖೀ ನಾಡುಗಳ ಪಟ್ಟಿಯಲ್ಲಿ 118ನೇ ಸ್ಥಾನದಲ್ಲಿರುವುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಪಾಕಿಸ್ತಾನ 109ನೇ ಸ್ಥಾನದಲ್ಲಿದೆ. ನೇಪಾಳ 92ನೇ ಸ್ಥಾನದಲ್ಲಿದೆ. ಇದೆಲ್ಲ ಏಕೆ ಹೀಗೆ ಎಂಬುದು ಎಲ್ಲರಿಗೂ ಗೊತ್ತಿದೆ.

ಹೀಗೆ ವಿಶ್ವದ ದೇಶಗಳ ‘ಹ್ಯಾಪಿನೆಸ್ ಇಂಡೆಕ್ಸ್’ ಸುತ್ತ ಅಲೆಯುತ್ತಿದ್ದ ಮನ ನನ್ನ ನೆಚ್ಚಿನ ಲೇಖಕರಲ್ಲೊಬ್ಬನಾದ ಪೌವ್ಲೊ ಕೊಯೆಲೊ ಕತೆಯೊಂದರತ್ತ ಹೊರಳಿತು. 1947ರಲ್ಲಿ ಹುಟ್ಟಿದ ಪೌವ್ಲೊ ಕೊಯೆಲೊ ಬ್ರೆಝಿಲ್ ದೇಶದ ಹಾಗೂ ವಿಶ್ವದ ವಿಶಿಷ್ಟ ಲೇಖಕ. ಆಳ-ಸರಳ-ಗೂಢ ಈ ಮೂರೂ ಸ್ತರ ಬೆರೆತು ಆಕರ್ಷಕವಾಗಿ ಬರೆಯಬಲ್ಲ ಜ್ಞಾನಿ-ಲೇಖಕ. ಈವರೆಗೆ ಹದಿನೈದು ಕೋಟಿ ಪ್ರತಿಗಳು ಮಾರಾಟವಾಗಿರುವ ಅವನ ಪ್ರಖ್ಯಾತ,

ಸುಂದರ, ಜನಪ್ರಿಯ ಕಾದಂಬರಿ ‘ಆಲ್ಕೆಮಿಸ್ಟ್’ನಲ್ಲಿ ಚಮಚೆಯಲ್ಲಿರುವ ಎರಡು ಹನಿ ಎಣ್ಣೆಯ ಬಗೆಗಿನ ಮಾತು ಈಗ ವಿಶ್ವ ಸಾಹಿತ್ಯದಲ್ಲಿ ಚಿರಪರಿಚಿತ. ಆ ಕತೆಯನ್ನು ಪೌವ್ಲೊ ಕೊಯೆಲೊ ಬಾಯಲ್ಲೇ ಕೇಳಿ:

ಆನಂದದ ಗುಟ್ಟು ಏನು ಎಂಬುದನ್ನು ಅತ್ಯಂತ ಜ್ಞಾನಿಗಳಾದವರ ಬಳಿ ಹೋಗಿ ಕೇಳಿ ತಿಳಿದುಕೊಂಡು ಬಾ ಎಂದು ವ್ಯಾಪಾರಿಯೊಬ್ಬ ಮಗನಿಗೆ ಹೇಳಿದ. ಮಗ ಮರುಭೂಮಿಯುದ್ದಕ್ಕೂ ನಲವತ್ತು ದಿನ ತಿರುಗಾಡಿ, ಬೆಟ್ಟವೊಂದರ ತುದಿಯಲ್ಲಿದ್ದ ಒಂದು ಸುಂದರ ಕೋಟೆಯನ್ನು ತಲುಪಿದ. ತರುಣ ಹುಡುಕುತ್ತಿದ್ದ ಸಂತ-ಜ್ಞಾನಿ ಆ ಕೋಟೆಯಲ್ಲಿದ್ದ.

ಏನಾಯಿತೆಂದರೆ, ನಮ್ಮ ನಾಯಕನಿಗೆ ಆ ಪವಿತ್ರ ಸಂತ ತಕ್ಷಣ ಕಾಣದೆ ಅವನು ಅಪಾರ ಚಟುವಟಿಕೆಗಳು ನಡೆಯುತ್ತಿದ್ದ ರೂಮೊಂದಕ್ಕೆ ಬಂದು ನಿಂತ. ಅಲ್ಲಿ ವ್ಯಾಪಾರಿಗಳು ಬರುತ್ತಿದ್ದರು; ಹೋಗುತ್ತಿದ್ದರು. ಮೂಲೆಯೊಂದರಲ್ಲಿ ಜನ ಹರಟೆ ಹೊಡೆಯುತ್ತಿದ್ದರು. ಸಂಗೀತಗಾರರ ಪುಟ್ಟ ಮೇಳವೊಂದು ಸುಮಧುರ ಹಾಡುಗಳನ್ನು ಹಾಡುತ್ತಿತ್ತು. ಅಲ್ಲೇ ಒಂದು ಮೇಜಿನ ಮೇಲೆ ಆ ಪ್ರದೇಶದ ರುಚಿರುಚಿಯಾದ ತಿಂಡಿ ತಿನಿಸುಗಳಿದ್ದವು.

ಅಲ್ಲಿದ್ದ ಸಂತ-ಜ್ಞಾನಿ ಎಲ್ಲರನ್ನೂ ಮಾತಾಡಿಸುತ್ತಿದ್ದ. ನಮ್ಮ ತರುಣ ಎರಡು ಗಂಟೆ ಕಾದ ನಂತರ ಅವನಿಗೆ ಜ್ಞಾನಿಯ ಜೊತೆ ಮಾತಾಡುವ ಅವಕಾಶ ಸಿಕ್ಕಿತು. ತರುಣ ಯಾಕೆ ಬಂದಿದ್ದಾನೆಂದು ಸಂತ ಗಮನವಿಟ್ಟು ಕೇಳಿಸಿಕೊಂಡು, ‘ಈಗ ನಿನಗೆ ಆನಂದದ ಗುಟ್ಟು ಹೇಳಿಕೊಡುವಷ್ಟು ಟೈಮಿಲ್ಲಪ್ಪ’ ಅಂದ.

ನಂತರ ‘ಈ ಅರಮನೆ ಸುತ್ತ ಅಡ್ಡಾಡಿಕೊಂಡು ಎರಡು ಗಂಟೆ ಬಿಟ್ಟು ಬಾ’ ಅಂದ ಸಂತ, ‘ನೀನು ನನಗೊಂದು ಸಹಾಯ ಮಾಡಬೇಕಲ್ಲ’ ಅನ್ನುತ್ತಾ, ತರುಣನ ಕೈಗೆ ಒಂದು ಟೀ ಸ್ಪೂನ್ ಕೊಟ್ಟ; ಅದರಲ್ಲಿ ಎರಡು ಹನಿ ಎಣ್ಣೆ ಹಾಕುತ್ತಾ ಹೇಳಿದ: ‘ಹಾಂ! ನೀನು ಅಡ್ಡಾಡುವಾಗ ಚಮಚದಲ್ಲಿರೋ ಎಣ್ಣೆ ಚೆಲ್ಲದ ಹಾಗೆ ನೋಡಿಕೊ.’

ಸರಿ, ತರುಣ ಅರಮನೆಯ ಮಹಡಿಯ ಮೆಟ್ಟಲುಗಳನ್ನು ಹತ್ತಿ, ಇಳಿದು ಅಡ್ಡಾಡಲು ಶುರು ಮಾಡಿದ. ಹಾಗೆ ಅಡ್ಡಾಡುವಾಗಲೂ ಚಮಚೆಯಲ್ಲಿರುವ ಎಣ್ಣೆ ಚೆಲ್ಲದಂತೆ ಅದರ ಮೇಲೆ ಕಣ್ಣಿಟ್ಟೇ ಇದ್ದ. ಎರಡು ಗಂಟೆ ಕಳೆದ ಮೇಲೆ ಸಂತನಿದ್ದ ಜಾಗಕ್ಕೆ ಬಂದ.

‘ಹಾಂ! ನಮ್ಮ ಡೈನಿಂಗ್ ರೂಮಲ್ಲಿ ಮೇಲಿಂದ ತೂಗುಬಿಟ್ಟಿರೋ ಪರ್ಷಿಯಾದ ನಾಯ್ದ ವಸ್ತ್ರಗಳನ್ನು ನೋಡಿದೆಯಾ? ತೋಟಗಾರರ ಮುಂದಾಳು ಹತ್ತು ವರ್ಷ ಕೆಲಸ ಮಾಡಿ ಬೆಳೆಸಿರೋ ತೋಟ ನೋಡಿದೆಯಾ? ನನ್ನ ಲೈಬ್ರರಿಯಲ್ಲಿ ಸುಂದರವಾದ ತೊಗಲು ಹಾಳೆಗಳಿವೆಯಲ್ಲ, ಅವನ್ನು ನೋಡಿದೆಯಾ?’ ಎಂದ ಸಂತ.

ತರುಣ ಕಸಿವಿಸಿಗೊಂಡು, ‘ಅಯ್ಯೋ! ನಾನು ಒಂದೂ ನೋಡಿಲ್ಲ’ ಎಂದು ನಿವೇದಿಸಿಕೊಂಡ. ಸಂತ ಕೊಟ್ಟ ಚಮಚದಲ್ಲಿದ್ದ ಎಣ್ಣೆ ಚೆಲ್ಲದಂತೆ ನೋಡಿಕೊಳ್ಳುವುದೊಂದೇ ಅವನ ಕಾಳಜಿಯಾಗಿತ್ತು!

‘ಹಾಗಾದರೆ ವಾಪಸ್ ಹೋಗಿ ಈ ನನ್ನ ಲೋಕದಲ್ಲಿರುವ ವಿಶೇಷವಾದದ್ದು, ಸುಂದರವಾದದ್ದು, ಅದ್ಭುತವಾದದ್ದು ಏನಿದೆ, ಅದೆಲ್ಲವನ್ನೂ ನೋಡು. ಒಬ್ಬ ಮನುಷ್ಯನ ಮನೆಯನ್ನೇ ಸರಿಯಾಗಿ ನೋಡಿ ಅರಿಯದೆ, ಆತನನ್ನು ನಂಬಬಾರದು.’

ತರುಣ ಹಗುರಾದ. ಮತ್ತೆ ಎರಡು ಹನಿ ಎಣ್ಣೆಯಿದ್ದ ಚಮಚ ತೆಗೆದುಕೊಂಡ. ಅರಮನೆ ತುಂಬ ಅಡ್ಡಾಡಿದ. ಗೋಡೆಯಲ್ಲಿದ್ದ ಹಾಗೂ ತೊಲೆಗಳಿಂದ ತೂಗು ಬಿಟ್ಟಿದ್ದ ಕಲಾಕೃತಿಗಳನ್ನೆಲ್ಲ ಗಮನವಿಟ್ಟು ನೋಡಿದ.

ತೋಟಗಳನ್ನು ನೋಡಿದ. ಅರಮನೆಯ ಸುತ್ತ ಇರುವ ಬೆಟ್ಟಗುಡ್ಡ ಗಳನ್ನು ನೋಡಿದ. ಹೂಗಳ ಕೋಮಲತೆ ನೋಡಿದ. ಒಂದೊಂದು ಕಲಾಕೃತಿಯನ್ನೂ ಅದಕ್ಕೆ ತಕ್ಕ ಜಾಗದಲ್ಲಿ ಜೋಡಿಸಿಟ್ಟವರ ಅಭಿರುಚಿಯ ಪ್ರಜ್ಞೆಯನ್ನು ಗಮನಿಸಿದ. ವಾಪಸ್ ಸಂತ-ಜ್ಞಾನಿಯ ಬಳಿ ಬಂದು ತಾನು ನೋಡಿದ್ದ ಎಲ್ಲವನ್ನೂ ವಿವರವಾಗಿ ಒಪ್ಪಿಸಿದ.

‘ಸರಿ. ನಾನು ನಿನಗೆ ಕೊಟ್ಟ ಎರಡು ಹನಿ ಎಣ್ಣೆ ಏನಾಯಿತು?’ ಎಂದ ಸಂತ.

ತರುಣ ಈಗ ಚಮಚದ ಕಡೆ ನೋಡುತ್ತಾ ಎಣ್ಣೆ ಚೆಲ್ಲಿಹೋಗಿದ್ದನ್ನು ಗಮನಿಸಿದ.

‘ಹಾಂ, ಇದೇ ನಾನು ನಿನಗೆ ಹೇಳುವ ಬುದ್ಧಿಮಾತು: ಆನಂದದ ಗುಟ್ಟು ಏನು ಗೊತ್ತಾ? ಜಗತ್ತಿನಲ್ಲಿ ಸುಂದರವಾದದ್ದನ್ನು, ಅದ್ಭುತವಾದದ್ದನ್ನು ನೋಡುವುದು; ಅದರ ಜೊತೆಗೇ ಚಮಚದಲ್ಲಿರುವ ಎರಡು ಹನಿ ಎಣ್ಣೆಯನ್ನು ಎಂದೂ ಮರೆಯದಿರುವುದು.’

ಈ ಕತೆಯನ್ನು ಇಲ್ಲಿ ಕೊಡುವಾಗ, ಈ ಕತೆಯ ಅಥವಾ ರೂಪಕದ ಅರ್ಥಗಳನ್ನು ಹೆಕ್ಕಿ ತೆಗೆಯಲು ಮನಸ್ಸು ತವಕಿಸುತ್ತದೆ. ಆದರೆ ಈ ಅಂಕಣದ ಓದುಗ ಓದುಗಿಯರು ಈ ಕತೆಯ ಸೂಚನೆಗಳನ್ನು ತಂತಾವೇ ಹುಡುಕಿಕೊಳ್ಳಲಿ ಎಂದು ಹಾಗೇ ಬಿಡುತ್ತೇನೆ.

ಈ ಅಂಕಣದ ಮೊದಲ ಭಾಗದಲ್ಲಿ ಹೇಳಿದ ಸುಖ ಸಂತೋಷಗಳ ನಾಡುಗಳ ಕಲ್ಪನೆಗಳನ್ನು ಕುರಿತ ವಿಶ್ವ ಸಮೀಕ್ಷೆಗಳ ಮಾನದಂಡಗಳೇನೇ ಇರಲಿ, ಪ್ರತಿಯೊಬ್ಬರ ಸುಖ, ಆನಂದದ ಕಲ್ಪನೆಗಳೇ ಭಿನ್ನ ಹಾಗೂ ವೈಯಕ್ತಿಕ ಎಂಬ ಬಗ್ಗೆ ಯಾರಿಗೂ ಅನುಮಾನವಿರಲಾರದು. ಆದ್ದರಿಂದಲೇ, ಆನಂದ, ಸಂತೋಷಗಳ ಕಲ್ಪನೆಗಳನ್ನು ಕುರಿತ ಅಂತರ್‌ರಾಷ್ಟ್ರೀಯ ಸಮೀಕ್ಷಾ ಫಲಿತಾಂಶಗಳ ಎದುರು ನಮ್ಮ ಸಣ್ಣಪುಟ್ಟ ಸುಖಗಳ ಒರತೆಗಳ ಪಟ್ಟಿಯನ್ನು ನಾವು ಎಂದೂ ಮರೆಯಬಾರದು.

ಈ ನಮ್ಮ ಸ್ವಂತ ಪಟ್ಟಿಯ ಜೊತೆಗೇ ಪೌವ್ಲೊ ಕೊಯೆಲೊನ ಕತೆಯ ಸಂತ ಹೇಳುವ ಚಮಚೆಯಲ್ಲಿರುವ ಎರಡು ಹನಿ ಎಣ್ಣೆ ಚೆಲ್ಲದಂತೆ ನೋಡಿಕೊಂಡೇ ಲೋಕದ ಎಲ್ಲ ಸುಂದರವಾದದ್ದನ್ನು ನೋಡುವ, ಅರಿಯುವ ಕಣ್ಣೂ ದಕ್ಕಿದರೆ? ನಮ್ಮ ಹ್ಯಾಪಿ ಹಾರ್ಮೋನುಗಳು ಸದಾ ಉಕ್ಕುತ್ತಿರಬಲ್ಲವು!

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಟರಾಜ್ ಹುಳಿಯಾರ್

contributor

Similar News