ಅಪ್ರತಿಮ ಕತೆಗಾರನ ಕೊನೇ ಪ್ರತಿಮೆಗಳು
ಕನ್ನಡದ ಅಪ್ರತಿಮ ಕತೆಗಾರ ಮೊಗಳ್ಳಿ ಗಣೇಶ್ (1962-2025) ಕಳೆದ ವಾರ ತೀರಿಕೊಂಡ ನಂತರ ಗೆಳೆಯ, ಗೆಳತಿಯರು ಮೊಗಳ್ಳಿಯ ಕೊನೆಯ ಕತೆ, ಪದ್ಯಗಳನ್ನು ನನಗೆ ಕಳಿಸುತ್ತಲೇ ಇದ್ದರು. ಮೊಗಳ್ಳಿ 2023ರ ಡಿಸೆಂಬರ್‌ನಲ್ಲಿ ನನ್ನ ‘ಕಥಾನಂತರ’ ಸಂಕಲನದ ಬಿಡುಗಡೆಯ ದಿನ ಮಾತಾಡಿದ ವೀಡಿಯೊ ಕೂಡ ಬಂತು. ಅದರಲ್ಲಿ ಮೊಗಳ್ಳಿ ತನ್ನ ಕತೆಗಳನ್ನು ಬರೆದ ನಂತರ ಏನಾಯಿತು ಎಂಬ ಬಗ್ಗೆ ಆಡಿದ ಜವಾರಿ ಮಾತುಗಳು ಕೇಳತೊಡಗಿದಂತೆ, ವೀಡಿಯೊದಲ್ಲಿರುವ ಕತೆಗಾರ ಈಗ ‘ಇಲ್ಲ’ ಎಂಬ ವಾಸ್ತವ ಸತ್ಯ ಬೇಗುದಿ ಹುಟ್ಟಿಸತೊಡಗಿತು?
ಈ ವೀಡಿಯೊದಲ್ಲಿ ಮೊಗಳ್ಳಿ ಗಣೇಶ್ ತಮ್ಮೂರಿನ ಬಗ್ಗೆ ಹೇಳುತ್ತಿದ್ದ ರೀತಿಯ ವಿವರಗಳನ್ನು 1996ರ ಸೆಪ್ಟಂಬರ್‌ನಲ್ಲಿ ‘ಲಂಕೇಶ್ ಪತ್ರಿಕೆ’ಯ ನನ್ನ ‘ಬರೆವ ಬದುಕು’ ಅಂಕಣದಲ್ಲಿ ಬರೆದಿದ್ದು ನೆನಪಾಯಿತು. 2023ರ ಮೊಗಳ್ಳಿಯ ಮಾತುಗಳಲ್ಲೂ ತನ್ನ ಮನೆಯ ಪಾತ್ರಗಳನ್ನು ಕತೆಗಳಲ್ಲಿ ತಂದಿದ್ದು; ನೆಂಟರಿಗೆ ಕೋಪ ಬಂದಿದ್ದು; ಇವತ್ತಿಗೂ ಊರಿಗೆ ಕಾಲಿಡಲು ಆಗದಿರುವುದು ಇದೆಲ್ಲ ಇತ್ತು. ಮೊಗಳ್ಳಿ ಈ ಮಾತುಗಳನ್ನಾಡುವ ಕೆಲವೇ ತಿಂಗಳುಗಳ ಕೆಳಗೆ ಸ್ವಾಮಿ ಆನಂದ್ ಮುಂತಾದ ಗೆಳೆಯರು, ಮೊಗಳ್ಳಿಯವರ ಮನೆಯವರು ಮೊಗಳ್ಳಿಯನ್ನು ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಸುಧಾರಿಸಿ, ಗೆಲುವಾಗಿಸಿಕೊಂಡು ಬಂದಿದ್ದರು.
ಎರಡು ವರ್ಷದ ಕೆಳಗೆ ನನ್ನ ಪುಸ್ತಕ ಬಿಡುಗಡೆಯ ದಿನ ಮೊಗಳ್ಳಿ ಆಡುತ್ತಿದ್ದ ಮಾತಿನಲ್ಲಿ ಮತ್ತೆ ಹಳೆಯ ಕಸುವು, ಸ್ವಂತದ ಬಗೆಗೆ ಮಾತಾಡುವಾಗಿನ ಆನಂದದ ನಿರಾಳ ಧಾಟಿ, ಸ್ವ-ಗೇಲಿ, ತನ್ನ ಕಥಾಪಾತ್ರಗಳಾದ ಊರಿನ ನಂಟರ ಬಗೆಗಿನ ಆದಿಮ ಸೆಡವು... ಇವೆಲ್ಲವೂ ಮಗುವಿನ ರಚ್ಚೆಯ ಹಾಗೆ, ಜಾಣನ ಹಿನ್ನೋಟದ ಹಾಗೆ ಬಿಚ್ಚಿಕೊಂಡಿದ್ದವು. ಅಂದು ರಾತ್ರಿ ಗೆಳೆಯರ ಔತಣಕೂಟದಲ್ಲಿ ‘ನಮ್ಮ ಕೋಟಾ ಓವರ್’ ಎಂದಿದ್ದ ಮೊಗಳ್ಳಿ, ವಿದ್ಯಾರಣ್ಯ ಋಷಿಯ ಹಾಗೆ ಕೇವಲ ಜ್ಯೂಸ್ ಕುಡಿದು ಆರಾಮಾಗಿ ಮಾತಾಡುತ್ತಾ ರಾತ್ರಿ ಹನ್ನೊಂದರವರೆಗೂ ಕೂತಿದ್ದಾಗ ಆ ಮುಖದಲ್ಲಿ, ಮಾತಿನಲ್ಲಿ ಕಾಲನ ಆಕ್ರಮಣದ ಸುಳಿವು ಒಂಚೂರೂ ಇರಲಿಲ್ಲ.
ಅವತ್ತು ನನ್ನ ‘ಕಥಾನಂತರ’ ಕತಾಸಂಕಲನವನ್ನು ಮೊಗಳ್ಳಿಗೆ ಅರ್ಪಿಸಿ ಮೊಗಳ್ಳಿಯ ಮೂವತ್ತು ವರ್ಷಗಳ ಗೆಳೆತನದ ಅಷ್ಟಿಷ್ಟು ಋಣ ತೀರಿಸಿದ್ದೆನೇನೋ. ಆ ಅರ್ಪಣೆಯ ಐಡಿಯಾ ಅವತ್ತು ನನ್ನಲ್ಲಿ ಹುಟ್ಟಿದ್ದಕ್ಕೆ, ಆ ಅರ್ಪಣೆಗೆ ಗೆಳೆತನ ಮೀರಿದ ಕಾರಣವಿತ್ತು. ನನ್ನ ವಾರಗೆಯ ಕತೆಗಾರರ ನಡುವೆ ತನ್ನ ಕತೆಗಳನ್ನು ಬರೆಯುವ ಮುನ್ನ ಏನಾಗಿತ್ತು ಮತ್ತು ಕಥಾನಂತರ ಏನಾಯಿತು ಎಂದು ಹೇಳುತ್ತಾ ಅದನ್ನು ಹೆಚ್ಚು ಎಂಜಾಯ್ ಮಾಡುತ್ತಿದ್ದವನು ಮೊಗಳ್ಳಿಯೇ. ಅದು ಅವನ ಒಟ್ಟು ಕತಾಮೀಮಾಂಸೆಗೆ ಸಂಬಂಧಿಸಿದ ವಿಷಯ. ಪ್ರತೀ ಕತೆಗಾರ, ಕತೆಗಾರ್ತಿ ಅರಿವಿದ್ದೋ ಅರಿವಿಲ್ಲದೆಯೋ ಕತೆ ಬರೆಯುವ ಬಗ್ಗೆ ತಮ್ಮದೇ ಥಿಯರಿ, ಮೀಮಾಂಸೆ ಎಲ್ಲವನ್ನೂ ಬೆಳೆಸಿಕೊಂಡಿರುವ ಸಾಧ್ಯತೆ ಇದ್ದೇ ಇರುತ್ತದೆ.
ಮೊಗಳ್ಳಿ ಕೊನೆಕೊನೆಗೆ ಬರೆದ ‘ಹೊಸಿಲು ದಾಟಿದವರು’ ಕತೆಯ ಹಸ್ತ ಪ್ರತಿಯನ್ನು ರವಿಕುಮಾರ ಬಾಗಿ ಮೊನ್ನೆ ಕಳಿಸಿದರು. ಈ ಕತೆಯಲ್ಲಿ ಮೊಗಳ್ಳಿ ಅದು ಯಾಕೋ ಏನೋ ಬಸವಣ್ಣನವರ ಕಡೆಗೆ ಹೋಗಿಬಿಟ್ಟಿದ್ದ! ಮೊಗಳ್ಳಿ ಇಲ್ಲೇ ಎಲ್ಲೋ ಇರಬಹುದೇನೋ ಎನ್ನುವಂತೆ ‘ಬಸವಣ್ಣಾರ ಹತ್ರ ಯಾಕ್ ಹೋದ್ಯಲೇ, ಎಲ್ಲೆಲ್ಲೋ ಅಲೀತಾ ಇದೀಯಲ್ಲೋ’ ಎನ್ನಬೇಕೆನ್ನಿಸುವಷ್ಟರಲ್ಲಿ, ಈ ಕೊನೆಯ ಕತೆಯಲ್ಲೂ ಮೊಗಳ್ಳಿಯ ಕತೆಗಾರಿಕೆಯ ಸಹಜ ಶಕ್ತಿ ನನ್ನನ್ನು ಮುತ್ತತೊಡಗಿತು:
‘ಕಾಲದ ಅಲೆಯಲ್ಲಿ ಹಿಂದೆ ಸರಿಯುತ್ತಿದ್ದ ಮನೆಯ ಶೀತಗೋಡೆಗಳು ಮಳೆಗಾಲದಲ್ಲಿ ಅಲ್ಲಲ್ಲಿ ಕುಸಿದು ಹೋಗಿ, ಮುರುಕು ಗೋಡೆಗಳು ಅಲ್ಲಲ್ಲಿ ತಗಡನ್ನೂ ಪ್ಲಾಸ್ಟಿಕ್ ಹಾಳೆಗಳನ್ನೂ ಹೊದ್ದುಕೊಂಡು ಗಾಳಿ ಬೀಸಿದಾಗಲೆಲ್ಲ ಇದು ನ್ಯಾಯವೇ ಎಂದು ಅಂಗಲಾಚುತ್ತಿದ್ದವು. ಇದು ಬದುಕಿ ಉಳಿಯಲು ಏನಾದರೊಂದು ಅನ್ಯ ಮಾರ್ಗ ಸಾಕು ಎಂಬ ಹಳಹಳಿಕೆ ಅಲ್ಲ. ಕಾಗೆ ಹಿತ್ತಿಲಲ್ಲಿ ವರಗುಟ್ಟುತ್ತಿದೆ. ಅನಾದಿ ನಾಯಿ ಗತಕಾಲದ ವಾಸನೆಗಳ ಕನಸಲ್ಲಿ ಮುದುರಿಕೊಂಡು ಬಿದ್ದಿದೆ. ಬೀಸುವ ಗಾಳಿಗೆ ಏನೇನೊ ಸುಟ್ಟು ಹೊಗೆಯ ಅಡರು. ಆ ಹಿತ್ತಿಲಲ್ಲಿ ಸಮಗಾರ ಹರಳಯ್ಯ ಬಂದು ಕೂತು ಭಂಗಿ ಸೇದಿ, ‘ನಾನಿಲ್ಲದ ನಾಳೆಗೆ ಬಸವಣ್ಣನೂ ಇರಲಾರ. ನಾನೂ ನನ್ನವರೂ ಉಳಿಯಲಾರರು; ಕೊನೆಗೆ ಇರುವವರೆಲ್ಲ ಇರುವೆಗಳಂತೆ ಸುಟ್ಟು ಹೋಗುವರು. ಆಗ ಯಾರಾದರೂ ಬಯಲಿಗೆ ಬಂದು ಬಾಗಿಲ ಹಾಕಿಕೊಳ್ಳಿ ಎಂದರೆ ಆಗ ಅಲ್ಲಮನ ಆತ್ಮ ಯಾವ ಕರೆಯ ನೀಡುವುದು... ಸಮಗಾರ ಭೀಮವ್ವ ಯಾವ ಎದೆ ಹಾಲ ನೀಡುವಳು’ ಎಂದು ಒಗಟು ನುಡಿದಿದ್ದ... ಕಾಲಚಕ್ರ ಉರುಳುತ್ತಲೇ ಇತ್ತು. ಚರಿತ್ರೆಗೆ ರುಂಡ ಮಾಲೆಗಳೆಂದರೆ ಅದೆಷ್ಟು ಆನಂದವೊ...’
ಕತೆಗಾರನೊಬ್ಬನ ಅಪರೂಪದ ವಿಚಿತ್ರ ‘ವಿಶನ್’ಗೆ ಮಾತ್ರ ದಕ್ಕುವ ಈ ಥರದ ಚಿತ್ರಗಳಿದ್ದ ಕತೆಯನ್ನು ಮೊಗಳ್ಳಿ ಸೆಪ್ಟಂಬರ್ ಕೊನೆಯ ವಾರದಲ್ಲಿ ಫೈನಲ್ ಮಾಡಿ, ಒಂದು ರಾತ್ರಿ ಗೆಳೆಯ ಸುಬ್ಬುವಿಗೆ ಓದಿದ್ದ. ಮೊಗಳ್ಳಿ ಹೊಸಿಲು ದಾಟುವ ಮುನ್ನ ಕೈಬರಹದಲ್ಲಿ ಕೊನೆಯ ಪ್ರತಿ ರೆಡಿ ಮಾಡಿ, ತಪ್ಪಿದ್ದ ಕಡೆ ‘ವೈಟ್ನರ್’ನಲ್ಲಿ ಕರೆಕ್ಷನ್ ಹಾಕಿ ಗೆಳೆಯರಿಗೆ ಮೇಲ್ ಮಾಡಿದ್ದ. ‘ಹೊಸಿಲು ದಾಟಿದವರು’ ಕತೆ ಕಲಬುರ್ಗಿಯವರ ಕೊಲೆಯನ್ನು ಪ್ರತಿಭಟಿಸುವ ಜನರ ನಡಿಗೆಯೊಂದಿಗೆ ಕೊನೆಯಾಗುತ್ತದೆ:
‘ದೂರದಿಂದ ಧಿಕ್ಕಾರ ಮೊಳಗುತ್ತಿತ್ತು. ಇನ್ನು ಮುಂದೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಪ್ರತಿರೋಧದ ಮಹಾಯಾನಕ್ಕೆ ನಿಗೂಢವಾಗಿ ಜನ ಎಲ್ಲೆಲ್ಲಿಂದಲೋ ಒಟ್ಟಾಗಿ ಕಾಲು ಕಿತ್ತು ನಡೆದಿತ್ತು’. ‘ಯುವ ಜನಾಂಗ ಇದೇನಿದು?’ ಎಂದು ಬೆರಗಾಗಿ ಗಮನಿಸುತ್ತಿತ್ತು.
2025ರ ಆಗಸ್ಟ್-ಸೆಪ್ಟಂಬರ್ ನಡುವೆ ಬರೆದಂತಿರುವ ಮೊಗಳ್ಳಿಯ ‘ಲಾಸ್ಟ್ ಸಪ್ಪರ್’ ಕತೆ ಹೀಗೆ ಕೊನೆಯಾಗುತ್ತದೆ:
‘ರಣಬಿಸಿಲು ತಣತಣಿಸುತ್ತಿತ್ತು. ಯಾರೋ ಬರುತ್ತಿರುವಂತೆ ಕಂಡು ಕಂಡು ಮಾಯವಾದಂತೆ ಭಾಸವಾಗುತ್ತಿತ್ತು. ಅಚಲ ಆತ್ಮವಿಶ್ವಾಸದಲ್ಲಿ ಅವರು ಕಾಯುತ್ತಲೇ ಇದ್ದರು.’
ಕೊನೆಕೊನೆಗೆ ಬರೆದ-ಮೊಗಳ್ಳಿಯ ಕೊನೆಯ ಪದ್ಯವೇ ಆಗಿರಬಹುದಾದ-
‘ಇಲ್ಲಿ ಎಲ್ಲವೂ ಸಾಧ್ಯ’ ಎಂಬ ಪದ್ಯ ಹೀಗೆ ಕೊನೆಯಾಗುತ್ತದೆ:
ಹಳ್ಳ ಹೊಳೆ ತೊರೆ ನದಿ
ಕಡಲೆಲ್ಲ ಬೇರೆ ಬೇರೆಯೇ
ಮಳೆಯ ನೀರಾಗುವ ಆಸೆ
ಆಗಲಾದರೂ ನಾನು ಎಲ್ಲರ ದಾಹಕ್ಕೆ ಪನ್ನೀರಾಗುವೆ.
ಲೇಖಕನೊಬ್ಬನ ಬದುಕಿನ ಕೊನೆಕೊನೆಯ ಕತೆ, ಕವಿತೆಗಳ ವಸ್ತುಗಳನ್ನು, ಕೊನೆಯ ಸಾಲುಗಳನ್ನು ತೀರಾ ಸರಳವಾಗಿ ಮನೋವಿಶ್ಲೇಷಣೆಗೆ ಒಳಪಡಿಸುವುದು; ಅಥವಾ ಕತೆಗಾರನಿಗೂ ಕತೆಗಳಿಗೂ ಅತಿಯಾದ ಸಂಬಂಧ ಕಲ್ಪಿಸುವುದು ಸರಿಯಲ್ಲ. ಆದರೆ ಈ ಎರಡು ಕತೆಗಳ ಕೊನೆಯಲ್ಲಿರುವ ‘ಕಾಯುತ್ತಿದ್ದರು’, ‘ಬೆರಗಾಗಿ ನೋಡುತ್ತಿದ್ದರು’ ಎಂಬ ಚಿತ್ರಗಳು; ಕೊನೆಯ ಕವಿತೆಯ ಕೊನೆಯಲ್ಲಿರುವ ‘ಪನ್ನೀರಾಗುವೆ’ ಎಂಬ ನಿರೀಕ್ಷೆ... ಹೀಗೆ ಒಂಥರದಲ್ಲಿ ‘ಪಾಸಿಟಿವ್’ ಎನ್ನಬಹುದಾದ ಕೊನೆಗಳನ್ನು ನೋಡಿದರೆ ಮೊಗಳ್ಳಿ ಬರಹ ಬೇರೊಂದು ದಿಕ್ಕಿಗೆ ತಿರುಗತೊಡಗಿತ್ತೇನೋ ಅನ್ನಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ಗಾಂಧಿ, ಅಂಬೇಡ್ಕರರನ್ನು ಮತ್ತೆ ಹುಡುಕಿಕೊಂಡು ಬರೆದ ‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಪುಸ್ತಕ ಮೊಗಳ್ಳಿಯ ಹೊಸ ಬೆಸುಗೆಯನ್ನೂ ಸೂಚಿಸುತ್ತಿತ್ತು.
ಜೊತೆಜೊತೆಗೇ ಬರೆಯುತ್ತಿದ್ದ ನಾನೂ, ಅವನೂ ಆಗಾಗ ‘ಅದು ಸರಿಯಿದೆ’; ‘ಇದು ಸರಿಯಲ್ಲ’ ಎನ್ನುವುದು; ‘ಪುಣ್ಯಕೋಟಿ ಎಂಬ ಕನ್ನಡ ರೂಪಕವನ್ನು ಒಂದೇಟಿಗೆ ಫಿನಿಶ್ ಮಾಡಬಾರದು’ ಎಂದು ನಾನು ಹೇಳುವುದು... ಇವೆಲ್ಲವೂ ನಮ್ಮಿಬ್ಬರ ನಡುವೆ ಇದ್ದವು... ನಾವು ಇನ್ನೂ ಏನೇನು ಹೇಳುವುದಿತ್ತೋ, ಕೇಳುವುದಿತ್ತೋ... ಈಗ ಉಳಿದಿರುವುದು ಯಾವ ತೋರಿಕೆಯೂ ಇಲ್ಲದ ಆತ್ಮ ಸಂವಾದವೊಂದೇ.
ಕಳೆದ ಎರಡು ಮೂರು ವರ್ಷಗಳಿಂದಲಂತೂ ಮೊಗಳ್ಳಿಯ ಕುಟುಕುಜೀವವನ್ನು ಹಿಡಿದಿಟ್ಟಿದ್ದು ಅವನ ನಿರಂತರ ಬರವಣಿಗೆ. ಈಚಿನ ವರ್ಷಗಳಲ್ಲಿ ಮೊಗಳ್ಳಿ 24/7 ಬರಹಗಾರನಾಗಿರುವುದನ್ನು ಕುರಿತು ಗೆಳೆಯರು ಮಾತಾಡುತ್ತಿದ್ದರು. ನಿತ್ಯ ಬರೆಯುತ್ತಾ, ನಾಳೆ ಬರೆಯುವುದು ಇನ್ನೂ ಇದೆ ಎಂದು ಧಾವಂತದಲ್ಲಿ ಏಳುತ್ತಾ ಬರೆವ ಕಾಯಕದಲ್ಲಿ ಮೊಗಳ್ಳಿ ಉಸಿರಾಡುತ್ತಿದ್ದಂತಿತ್ತು. ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ‘ಲಿವಿಂಗ್ ಟು ಟೇಲ್ ದ ಟೇಲ್’ ಆತ್ಮಕತೆಯ ಒಂದು ಭಾಗ ಬರೆದು, ‘ಕತೆ ಹೇಳಲು ಬದುಕಿರುವೆ’ ಎನ್ನುತ್ತಾ ಕ್ಯಾನ್ಸರ್‌ಗೆ ಸವಾಲು ಹಾಕಲು ನೋಡಿದ್ದ. ‘ಬರೆಯಲು ಬದುಕಿರುವೆ’ ಎಂಬ ಜಿಗುಟು ಛಲ ಇಪ್ಪತ್ತೈದು ವರ್ಷಗಳ ಕೆಳಗೆ ಲಂಕೇಶರ ಕೊನೆಯ ವರ್ಷಗಳಲ್ಲಿ ಕಂಡಂತೆ ಈಚೆಗೆ ಮೊಗಳ್ಳಿಯಲ್ಲೂ ಕಾಣತೊಡಗಿತ್ತು?
ಹದಿಹರೆಯದ ಶುರುವಿನಲ್ಲಿ ‘ಹೆಂಗೋ ಬದುಕಿಕೊಳ್ಳುವ ಆಸೆ’ಯಿಂದ ಸಂತೆಮೊಗೇನಹಳ್ಳಿಯ ಹುಟ್ಟುಮನೆ ಬಿಟ್ಟು ಮೈಸೂರಿಗೆ ಓಡಿ ಹೋದ ಮೊಗಳ್ಳಿ, ಎಷ್ಟೋ ವರ್ಷಗಳ ನಂತರ ಅಪಾರ ಆಸೆ ಪಟ್ಟು ಹೊಸಪೇಟೆಯಲ್ಲಿ ದೊಡ್ಡ ಮನೆ ಕಟ್ಟಿಸಿದ್ದು, ಆನಂದ ಪಟ್ಟಿದ್ದು ಸಹಜವಾಗಿತ್ತು. ಯಾಕೋ ಈಚೆಗೆ ಆ ಮನೆ ಬಿಟ್ಟು ತನ್ನ ಅಪಾರ ಗೆಳೆಯರ ಬಳಗವಿರುವ ಮೈಸೂರಿನ ಕಡೆಗೆ ಮತ್ತೆ ಹೋಗಿ ಇದ್ದುಬಿಡುವ ಆಸೆ ಮೊಗಳ್ಳಿಯಲ್ಲಿ ಹೊಸ ಸಾಧ್ಯತೆಗಳನ್ನು ಚಿಗುರಿಸಿತ್ತು.
ಲಿಯನಾರ್ಡೊ ಡವಿಂಚಿಯ ಪ್ರಖ್ಯಾತ ಚಿತ್ರ ‘ಲಾಸ್ಟ್ ಸಪ್ಪರ್’ ಎಂಬ ರೂಪಕ ಬಳಸಿ ತನ್ನ ಬದುಕಿನ ಕೊನೆಯಲ್ಲಿ ‘ಲಾಸ್ಟ್ ಸಪ್ಪರ್’ (ಕೊನೆಯ ರಾತ್ರಿಯೂಟ) ಎಂಬ ಕತೆ ಬರೆದ ಮೊಗಳ್ಳಿ ಅಕ್ಟೋಬರ್ 4ರ ಶನಿವಾರ ರಾತ್ರಿ ತನಗೆ ಸೇರಿದಷ್ಟು ಊಟ ಮಾಡಿ ಒಬ್ಬನೇ ಕೊನೆಯ ಗಳಿಗೆಗಳತ್ತ ಸರಿದಂತಿದೆ? ನನಗೆ ಪ್ರಿಯರಾದ ಹಲವರಂತೆ ಮೊಗಳ್ಳಿ ಕೂಡ ನಡುರಾತ್ರಿಯೇ ಕೊನೆಯುಸಿರೆಳೆದಿದ್ದು ನೆನಪಾಗಿ ದುಗುಡ ಆವರಿಸತೊಡಗುತ್ತದೆ.