×
Ad

ಎಲ್ಲ ಗೆಲ್ಲುವ ಹೀರೋನ ಹಿಂದೆ!

Update: 2025-09-29 11:54 IST

ಹೀರೋಗಳನ್ನು ಸೃಷ್ಟಿಸುವ ಲೇಖಕರ ಫ್ಯಾಂಟಸಿ-ಭ್ರಾಮಕಲೋಕ ಕುರಿತು ಮಾತಾಡುತ್ತಾ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಒಂದು ಪರಿಚಿತ ಮಾದರಿಯನ್ನು ಚರ್ಚಿಸುತ್ತಾನೆ: ಇಂಥ ಕೃತಿಗಳಲ್ಲಿ- ಉದಾಹರಣೆಗೆ, ಕಾದಂಬರಿಗಳಲ್ಲಿ- ಹೀರೋ ಸುತ್ತ ಎಲ್ಲವೂ ಜರುಗುತ್ತವೆ. ಹೀರೋ ಬಗ್ಗೆ ಎಲ್ಲರಿಗೂ ಒಲವು ಇರುವಂತೆ, ಹೀರೋಗೆ ಒಂದು ವಿಶೇಷ ಶಕ್ತಿಯಿರುವಂತೆ, ಅಪಾಯಗಳಿಂದ ಅವನಿಗೆ ವಿಶೇಷ ರಕ್ಷಣೆ ದೊರೆಯುವಂತೆ ಲೇಖಕ ‘ನೋಡಿಕೊಳ್ಳುತ್ತಾನೆ’.

ಉದಾಹರಣೆಗೆ, ಕಾದಂಬರಿಯ ಅಧ್ಯಾಯ ವೊಂದರ ಕೊನೆಗೆ ಹೀರೋ ತೀವ್ರ ಗಾಯವಾಗಿ ಪ್ರಜ್ಞೆ ತಪ್ಪಿ ಬೀಳುತ್ತಾನೆ; ಮುಂದಿನ ಅಧ್ಯಾಯದಲ್ಲಾಗಲೇ ಅವನು ಚೇತರಿಸಿಕೊಂಡು ಗುಣಮುಖನಾಗುವಂತೆ ಕಾದಂಬರಿಕಾರ ನೋಡಿಕೊಳ್ಳುತ್ತಾನೆ. ಕಾದಂಬರಿಯ ಮೊದಲ ಭಾಗದಲ್ಲಿ ಹೀರೋ ಕಡಲಿನಲ್ಲಿ ಪ್ರಯಾಣ ಮಾಡುತ್ತಿದ್ದಾನೆ; ಇದ್ದಕ್ಕಿದ್ದಂತೆ ಕಡಲಿನಲ್ಲಿ ಬಿರುಗಾಳಿಯೆದ್ದು ಹಡಗು ಮುಳುಗಿ ಹೋಗುತ್ತದೆ. ಮುಂದಿನ ಭಾಗದ ಶುರುವಿನಲ್ಲಾಗಲೇ ಹೀರೋ ಅಚ್ಚರಿ ಹುಟ್ಟಿಸುವಂತೆ ಪಾರಾಗಿದ್ದಾನೆ! ಆಗ ‘ಹಿಸ್ ಮೆಜೆಸ್ಟಿ ಇಗೋ’- ಅಹಂ ಸಾಹೇಬರು- ಹೇಳುತ್ತಾರೆ: ‘ನನಗೆ ಏನೂ ಆಗಲ್ಲ.’ ಹೀರೋ ಎನ್ನುವವನು ‘ಲೇಖಕನ ಅಹಮ್ಮಿನ ವಿಸ್ತರಣೆ’ ಎಂಬ ಸೂಕ್ಷ್ಮ ಗ್ರಹಿಕೆಯನ್ನು ಮುಂದೊಮ್ಮೆ ಫ್ರಾಯ್ಡ್ ಮಂಡಿಸಿದ್ದು ಈ ಹಿನ್ನೆಲೆಯಲ್ಲಿ.

ಫ್ರಾಯ್ಡ್ ಹೇಳುವ ಈ ಹೀರೋ ಮಾದರಿ ಅನೇಕ ಕೃತಿಗಳಲ್ಲಿ ಕಾಣುತ್ತಲೇ ಇರುತ್ತದಾದರೂ, ಅದೆಲ್ಲ ಹಳೆಯ ಮಾತಾಯಿತು ಎಂದುಕೊಂಡಿದ್ದೆ. ಆದರೆ ಮೊನ್ನೆ ಸಂಜೆ, ‘ಇಲ್ಲ, ಇಲ್ಲ! ಫ್ರಾಯ್ಡ್ ಹೇಳಿದ್ದು ಇವತ್ತಿಗೂ ನಿಜ!’ ಅನ್ನಿಸತೊಡಗಿತು. ಲೇಖಕರು ತಮ್ಮ ಅಹಮ್ಮಿಗೆ ತೃಪ್ತಿಯಾಗುವಂತೆ, ತಮ್ಮ ಹಗಲುಗನಸುಗಳನ್ನು ಈಡೇರಿಸಿಕೊಳ್ಳಲು ಹೀರೋನನ್ನು ಸೃಷ್ಟಿಸುತ್ತಾರೆ ಎಂಬ ಬಗ್ಗೆ ಫ್ರಾಯ್ಡ್ ಸೂಚಿಸಿದ್ದು ಸರಿಯೆನ್ನಿಸಿತು. ಕಾರಣ, ಆ ಸಂಜೆ ನನ್ನೆದುರಿಗೆ ಕೂತಿದ್ದ ಒಬ್ಬ ಹೊಸ ಕಾದಂಬರಿಕಾರ ಫ್ರಾಯ್ಡ್ ಹೇಳುತ್ತಿರುವ ಹೀರೋನ ಮಾದರಿಯನ್ನೇ ಮುಂದುವರಿಸುತ್ತಿರುವಂತೆ ಕಂಡ:

‘ಹದಿಮೂರನೇ ಶತಮಾನದ ನನ್ನ ಕಥಾನಾಯಕ ಬಾಲ್ಯದಲ್ಲಿ ಒಬ್ಬನೇ ಕುದುರೆಯೇರಿ ಶಾಲೆಗೆ ಹೋಗುತ್ತಾನೆ. ದಾರಿಯಲ್ಲಿ ಏರಿ ಬಂದ ಗೂಳಿಯ ಕೋಡು ಹಿಡಿದು ಹಿಮ್ಮೆಟ್ಟಿಸುತ್ತಾನೆ. ಶಾಲೆಯ ಹುಡುಗರ ಲೀಡರ್ ಆಗುತ್ತಾನೆ... ಆಟದಲ್ಲಿ ಎಲ್ಲರ ಮಣ್ಣು ಮುಕ್ಕಿಸುತ್ತಾನೆ...’

ಸದರಿ ಕಾದಂಬರಿಕಾರನ ಹೀರೋ ಸೃಷ್ಟಿಯ ಬಣ್ಣನೆ ಹೀಗೇ ನಡೆದಿತ್ತು.

‘ಅದು ಹೇಗೆ ಸಾಧ್ಯ? ನಿಮಗೆ ಅನ್ನಿಸಿದ್ದನ್ನೆಲ್ಲ ಹದಿಮೂರನೇ ಶತಮಾನದ ಹೀರೋ ಪಾತ್ರದ ಮೇಲೆ ಹಾಕಿದರೆ ಹೇಗಾಗುತ್ತೆ...’ ಎಂದು ಗೊಣಗುತ್ತಾ ಸುಮ್ಮನಾದ ನನ್ನೊಳಗೆ ಹೀರೋ ಸೃಷ್ಟಿಯ ಬಗ್ಗೆ ಫ್ರಾಯ್ಡ್ ಹೇಳಿದ ಮಾತುಗಳು ಗುಂಯ್ಗುಡತೊಡಗಿದವು.

ಹತ್ತಾರು ವರ್ಷ ನನ್ನ ಕ್ಲಾಸುಗಳಲ್ಲಿ ಮತ್ತೆ ಮತ್ತೆ ಚರ್ಚಿಸಿರುವ ಫ್ರಾಯ್ಡ್ ಕಲಾಮೀಮಾಂಸೆಯ ಸಾರ ಇದು: ಲೇಖಕನ ಇಷ್ಟಾರ್ಥಗಳ ಈಡೇರಿಕೆಯಂತೆ ಅವನ ಕಾದಂಬರಿ ಕೆಲಸ ಮಾಡುತ್ತಿರುತ್ತದೆ. ಕೃತಿಯ ಹೀರೋ ಅಂತಿಮವಾಗಿ ಲೇಖಕನ ‘ನಾನು’ ಎಂಬುದರ ವಿಸ್ತರಣೆ. ಕೃತಿಕಾರ ತನ್ನ ಹಗಲುಗನಸುಗಳನ್ನು ಈಡೇರಿಸಿಕೊಳ್ಳಲು ಹೀರೋನನ್ನು ಸೃಷ್ಟಿಸುತ್ತಾನೆ. ಉದಾಹರಣೆಗೆ, ಎಲ್ಲರಿಗೂ ಇರುವಂತೆ ಕಾದಂಬರಿಕಾರನಿಗೂ ಖ್ಯಾತಿಯ ಆಸೆ ಇದೆ ಎಂದಿಟ್ಟುಕೊಳ್ಳಿ. ಅವನ ಹೀರೋ ಖ್ಯಾತನಾಗುತ್ತಾನೆ. ಲೇಖಕನಿಗೆ ಊರಿನ ಹೆಣ್ಣಗಳೆಲ್ಲ ತನ್ನನ್ನು ಪ್ರೀತಿಸಲಿ ಎಂಬ ಆಸೆ. ಸರಿ, ಅದು ಕೃತಿಯಲ್ಲಿ ಈಡೇರುತ್ತದೆ. ಕೃತಿಯಲ್ಲಿ ಇರುವವರು ಒಳ್ಳೆಯವರು, ಕೆಟ್ಟವರು ಎಂದು ಎರಡು ಭಾಗವಾಗಿದ್ದಾರೆ. ಒಳ್ಳೆಯವರೆಲ್ಲ ಹೀರೋಗೆ ಸಹಾಯ ಮಾಡುವವರು; ಕೆಟ್ಟವರು ಹೀರೋಗೆ ತೊಂದರೆ ಕೊಡುವವರು. ಏನೇ ಆದರೂ, ಹೀರೋ ‘ಹೀರೋ’ ಆಗಿಯೇ ಉಳಿಯುತ್ತಾನೆ!

ಫ್ರಾಯ್ಡ್ ಬರೆದಿರುವ ‘ಕ್ರಿಯೇಟಿವ್ ರೈಟರ್ಸ್ ಆಂಡ್ ಡೇಡ್ರೀಮಿಂಗ್’ ಎಂಬ ಪ್ರಖ್ಯಾತ ಲೇಖನದ ಕೆಲವು ಗ್ರಹಿಕೆಗಳನ್ನು ಇಲ್ಲಿ ಸರಳಗೊಳಿಸಿ ಹೇಳಿದ್ದೇನೆ. ಲೇಖಕನ ಇಷ್ಟಾರ್ಥದ ಈಡೇರಿಕೆಯ ಹೀರೋ ಸೃಷ್ಟಿಯ ಬಗ್ಗೆ ತಾನು ಹೇಳುತ್ತಿರುವ ಮಾತುಗಳು ಸಾಧಾರಣ ಕೃತಿಗಳಿಗೆ ಅನ್ವಯವಾಗುತ್ತವೆ, ಕ್ಲಾಸಿಕ್ಸ್ಗೆ- ಕಾಲಾತೀತ ಶ್ರೇಷ್ಠ ಕೃತಿಗಳಿಗೆ-ಇವು ಅನ್ವಯವಾಗುವುದಿಲ್ಲ ಎಂಬುದನ್ನು ಕೂಡ ಫ್ರಾಯ್ಡ್ ಹೇಳುತ್ತಾನೆ. ಆದ್ದರಿಂದಲೇ ಫ್ರಾಯ್ಡ್ ಕಥಾಮೀಮಾಂಸೆಯ ಮಾತುಗಳನ್ನು ಎಲ್ಲ ಲೇಖಕ, ಲೇಖಕಿಯರಿಗೂ ಮಕ್ಕಿಕಾಮಕ್ಕಿ ಅನ್ವಯಿಸಲಾಗದು. ಹಾಗೆ ಅನ್ವಯಿಸಿದರೆ, ಲೇಖಕಿ ಅಥವಾ ಲೇಖಕ ತನ್ನನ್ನು ತಾನು ಮೀರಿ ಬರೆಯುವ, ಅಥವಾ ಕೃತಿಯೇ ಬರೆಸಿಕೊಳ್ಳುವ ಕ್ರಿಯೆಯನ್ನೇ ನಾವು ಅಲ್ಲಗಳೆದಂತಾಗುತ್ತದೆ.

ನೂರು ವರ್ಷಗಳ ಕೆಳಗೆ ಪಶ್ಚಿಮದ ಕೆಲವು ಆಧುನಿಕ ಲೇಖಕ, ಲೇಖಕಿಯರು ಹಳೆಯ ಮಾದರಿಯ ಹೀರೋ ಕಲ್ಪನೆಯನ್ನೇ ಕೈಬಿಟ್ಟಿದ್ದು ನಿಮಗೆ ಗೊತ್ತಿರಬಹುದು. ಪಶ್ಚಿಮದ ನವ್ಯ, ನವ್ಯೋತ್ತರ ಸಾಹಿತ್ಯ ವಿಮರ್ಶೆ ‘ಹೀರೋ’ ಅಥವಾ ‘ನಾಯಕ’ ಎಂಬ ಪದವನ್ನೇ ಕೈಬಿಟ್ಟು ಅದರ ಬದಲಿಗೆ ಸೆಂಟ್ರಲ್ ಕ್ಯಾರಕ್ಟರ್- ಕೇಂದ್ರ ಪಾತ್ರ- ಎಂಬ ಪದವನ್ನು ಹೆಚ್ಚು ಬಳಸಿತು. ಹೀರೋಗಳು ಕೂಡ ಎಲ್ಲ ಹುಲುಮಾನವರ ಹಾಗೆ ಅವಮಾನಕ್ಕೊಳಗಾದರು; ಸಿದ್ಧಲಿಂಗಯ್ಯನವರ ‘ನನ್ನ ಜನ’ಗಳಂತೆ ಒದೆಸಿಕೊಂಡು ಒರಗಿದರು; ಸೋತು ಸುಣ್ಣವಾದರು. ‘ನವ್ಯದ ದುರ್ಬಲ ನಾಯಕ’ಎಂಬ ಗಿಳಿಪಾಠದ ವಿಮರ್ಶೆಗೆ ಈ ಥರದ ಸೂಕ್ಷ್ಮಗಳು ಹೊಳೆಯುವುದು ಕಷ್ಟ!

ಅದೇನೇ ಇದ್ದರೂ, ಪಶ್ಚಿಮ, ಪೂರ್ವ ಮುಂತಾಗಿ ಎಲ್ಲ ದಿಕ್ಕುಗಳಲ್ಲೂ ಸೃಷ್ಟಿಯಾಗಿರುವ ಮಹಾಕಾವ್ಯಗಳಿಂದ ಒಂದು ಸಂಸ್ಕೃತಿಯಲ್ಲಿ ಹರಿದು ಬಂದಿರುವ ಹೀರೋ ಮಾದರಿ-ಎಲ್ಲವನ್ನೂ, ಎಲ್ಲರನ್ನೂ ಗೆಲ್ಲುವ ಹೀರೋ ಮಾದರಿ- ಅಷ್ಟು ಸುಲಭವಾಗಿ ಮಾಯವಾಗುವುದಿಲ್ಲ. ಶ್ರೇಷ್ಠ ಲೇಖಕರಲ್ಲಿ ಕೂಡ ಈ ಸುಪ್ತ ಬಯಕೆ ಅಡಗಿದ್ದರೆ ಅಚ್ಚರಿಯಲ್ಲ. ನಾವು ಇಷ್ಟ ಪಡುವವರನ್ನು ಸಮರ್ಥಿಸಿಕೊಳ್ಳುವ ನಮ್ಮೊಳಗಿನ ಸಾಧಾರಣ ಬಯಕೆಯ ರೀತಿಯ ಒಂದು ಬಯಕೆ ಲೇಖಕ, ಲೇಖಕಿಯರಲ್ಲೂ ಅಡಗಿರಬಹುದು. ಆಧುನಿಕ ಕಾದಂಬರಿಕಾರರಾದ ಕುವೆಂಪು ಅವರ ಹೂವಯ್ಯ; ತೇಜಸ್ವಿಯವರ ಕರ್ವಾಲೋ; ಅನಂತಮೂರ್ತಿಯವರ ಪ್ರಾಣೇಶಾಚಾರ್ಯ ಥರದ ಪಾತ್ರಗಳು ಕೂಡ ವಿಶಾಲ ಅರ್ಥದಲ್ಲಿ ‘ಗೆಲ್ಲುವ ಹೀರೋ’ನ ಮಾದರಿಯಲ್ಲೇ ಸೃಷ್ಟಿಯಾಗಿವೆಯಲ್ಲವೆ?

ಇಂಥ ಬಯಕೆ ಆಯಾ ಲೇಖಕ, ಲೇಖಕಿಯರಲ್ಲಿ ಮೂಡಿರುವ ಆದರ್ಶ ಪಾತ್ರದ ಸೃಷ್ಟಿಯ ಬಯಕೆಯ ಫಲವೂ ಇರಬಹುದು. ಎಲ್ಲರಲ್ಲೂ ಇರುವಂತೆ ಹೀರೋನಲ್ಲೂ ಈವಿಲ್ ಗುಣ ಇರುತ್ತದೆ ಎಂಬ ಅನುಮಾನದಲ್ಲೇ ಸದಾ ಬರೆದ ಲಂಕೇಶರ ಬರವಣಿಗೆಯಲ್ಲಿ ಕೂಡ ‘ಗುಣಮುಖ’ದ ಹಕೀಮನಂಥ ಆದರ್ಶ ಮಾದರಿ ಸೃಷ್ಟಿಯಾಯಿತು. ಹೀಗಾಗಿ ‘ಗೆಲ್ಲುವ ಹೀರೋ’ನನ್ನು ಸೃಷ್ಟಿಸುವ ಆಸೆ ಮಾನವಜೀವಿಗಳ ಆದಿಕಾಲದ ಆಸೆಯೂ ಇರಬಹುದು. ಇದು ಲೇಖಕ ಅಥವಾ ಲೇಖಕಿ ತಾವು ಯಾವುದನ್ನು ಸರಿ ಅಥವಾ ನ್ಯಾಯವೆಂದು ನಂಬುತ್ತಾರೋ ಅದನ್ನು ಹೀರೋ, ಹೀರೋಯಿನ್, ಕೇಂದ್ರಪಾತ್ರಗಳ ಮೂಲಕ ಸಾಧಿಸಿ ತೋರುವ ಬಯಕೆಯೂ ಆಗಿರಬಹುದು; ಅದು ತಾವು ಈಡೇರಿಸಿಕೊಳ್ಳುವ ಕನಸು ಅಥವಾ ಹಗಲುಗನಸಿನ ಸಾಕಾರ ರೂಪವೂ ಆಗಿರಬಹುದು. ಅದೇ ವೇಳೆಗೆ, ‘ಹೀರೋ ವರ್ಶಿಪ್’ ಎನ್ನುವುದು ಮಾನವನ ಆದಿಮ ಪ್ರವೃತ್ತಿಯೂ ಇರಬಹುದು.

ಇದೆಲ್ಲದರ ನಡುವೆ, ಹೀರೋ ಕುರಿತಂತೆ ಬ್ರೆಕ್ಟ್ನ ‘ಗೆಲಿಲಿಯೋ’ ನಾಟಕದಲ್ಲಿ ವಿಜ್ಞಾನಿ ಗೆಲಿಲಿಯೋ ಮತ್ತು ಅವನ ವಿದ್ಯಾರ್ಥಿ ಆಂದ್ರಿಯಾ ನಡುವಣ ಸಂಭಾಷಣೆ ಕೂಡ ನಮ್ಮನ್ನು ಎಚ್ಚರಿಸುತ್ತಿರಬೇಕಾಗುತ್ತದೆ:

ಆಂದ್ರಿಯಾ: ನಾಯಕರಿಲ್ಲದ ನಾಡು ದುಃಖಿಯಾಗಿರುತ್ತದೆ.

ಗೆಲಿಲಿಯೋ: ಅಲ್ಲ! ನಾಯಕರು ಬೇಕು ಅಂತ ಕಾಯೋ ನಾಡು ದುಃಖಿಯಾಗಿರುತ್ತದೆ.

ಬ್ರೆಕ್ಟ್ ಅನನ್ಯ ಪೊಲಿಟಿಕಲ್ ಲೇಖಕನಾದ್ದರಿಂದ ಅವನ ನಾಟಕದಲ್ಲಿ ಈ ಹೊಸ ದರ್ಶನ ಹುಟ್ಟಿತು. ತನ್ನ ಕಾಲದ ಜರ್ಮನಿಯಲ್ಲಿ ಹಿಟ್ಲರನಂಥ ಕ್ರೂರ ಸರ್ವಾಧಿಕಾರಿಯನ್ನು ಕೊನೆಗಾಣಿಸಲು ಯಾರೋ ಹೀರೋ ಬರುತ್ತಾನೆ ಎಂದು ಕಾಯುತ್ತಾ ಜನರು ಮೂರ್ಖರಾಗದೆ, ತಾವೇ ಒಟ್ಟಾಗಿ ಸರ್ವಾಧಿಕಾರವನ್ನು ಕೊನೆಗಾಣಿಸಬೇಕು ಎಂಬುದನ್ನು ಬ್ರೆಕ್ಟ್ ಸೃಷ್ಟಿಸಿದ ಗೆಲಿಲಿಯೋನ ಮಾತು ಸೂಚಿಸುತ್ತಿತ್ತು.

ಇದು ನಾಝಿವಾದಿ ಹಿಟ್ಲರನ ಕಾಲಕ್ಕಷ್ಟೇ ಅಲ್ಲ, ಪ್ರಜಾಪ್ರಭುತ್ವದಲ್ಲೇ ಸರ್ವಾಧಿಕಾರಿಗಳಾಗುವ ನಾಯಕರಿಗೂ ಅನ್ವಯವಾಗುತ್ತದೆ. ‘ನಾನು ಎಲ್ಲವನ್ನೂ ಮಾಡಬಲ್ಲೆ’ ಎನ್ನುವ ಸರ್ವಾಧಿಕಾರಿಯೊಬ್ಬ ಹೀರೋ ಥರವೇ ಆಡುತ್ತಿರುತ್ತಾನೆ; ಅಷ್ಟೇ ಅಲ್ಲ, ಆತ ಹಲವರಿಗೆ ಹೀರೋ ಥರ ಕೂಡ ಕಾಣುತ್ತಿರುತ್ತಾನೆ. ಈ ವಿಚಿತ್ರಸತ್ಯವನ್ನು ಹಿಟ್ಲರನ ಕಾಲದಲ್ಲಿ ಕಂಡಿದ್ದ ಬ್ರೆಕ್ಟ್ ತನ್ನ ನಾಟಕಗಳಲ್ಲಿ ಹೀರೋಗಳನ್ನು ರೂಪಿಸಿದ ರೀತಿಯೇ ವಿಭಿನ್ನವಾಯಿತು.

ಆದರೆ ಸರ್ವಾಧಿಕಾರಿಯನ್ನು ಹೀರೋ ಮಾಡುವ ‘ಜನರು-ಪತ್ರಕರ್ತರು- ಮಾಧ್ಯಮಗಳು ಹಾಗೂ ಭಟ್ಟಂಗಿ ಲೇಖಕರ’ ದುಷ್ಟಕೂಟಕ್ಕೂ, ಆದರ್ಶ ಹೀರೋ ಪಾತ್ರವನ್ನು ಸೃಷ್ಟಿ ಮಾಡಬಯಸುವ ಲೇಖಕರ ಹಗಲುಗನಸಿಗೂ ವ್ಯತ್ಯಾಸವಿದೆ. ಸರ್ವಾಧಿಕಾರಿಯನ್ನು ಹೀರೋ ಮಾಡಿ, ಹಾಡಿ ಹೊಗಳುವ ಭಟ್ಟಂಗಿ ಲೇಖಕರು ಸರ್ವಾಧಿಕಾರಿಯೊಬ್ಬ ನಿರ್ಮಾಣ ಮಾಡಲು ಹೊರಟಿರುವ ಭಯಗ್ರಸ್ತ ಸಮಾಜವನ್ನು ನಿತ್ಯ ಕುಕ್ಕಿ ತಿನ್ನುವ ರಣಹದ್ದುಗಳಂತೆ ಹೃದಯಹೀನ ಲಾಭಕೋರರಾಗಿರುತ್ತಾರೆ.

ಆದರೆ ಅಂಥ ಸರ್ವಾಧಿಕಾರಿಯ ವಿರುದ್ಧ ಸೆಣಸುವ ಹೀರೋ ಅಥವಾ ಹೀರೋಯಿನ್ ಒಬ್ಬಳನ್ನು ಸೃಷ್ಟಿಸುವ ಲೇಖಕ ಅಥವಾ ಲೇಖಕಿಯ ಹಗಲುಗನಸು ಕೂಡ ಒಂದು ಬಗೆಯ ನೈತಿಕತೆಯಿಂದ, ಸರ್ವಾಧಿಕಾರಿಯ ವಿರುದ್ಧ ಪ್ರತಿಭಟಿಸುವ ಪ್ರಾಮಾಣಿಕ ತುಡಿತದಿಂದ ಹುಟ್ಟಿರಬಲ್ಲದು. ಈಚೆಗೆ ತೀರಿಕೊಂಡ ಗೂಗಿ ವಾ ಥಿಯಾಂಗೊ ತನ್ನ ‘ವಿಝರ್ಡ್ ಆಫ್ ದ ಕ್ರೋ’ ಕಾದಂಬರಿಯಲ್ಲಿ ಇಂಥದೊಂದು ಮಾದರಿಯನ್ನು ಸೃಷ್ಟಿಸಿದ್ದ. ಆದರೆ, ಅದರ ಕೃತಕತೆ ತೀರಾ ಎದ್ದು ಕಾಣುವಂತಿತ್ತು, ಆ ಮಾತು ಬೇರೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ನಟರಾಜ್ ಹುಳಿಯಾರ್

contributor

Similar News