ಸಾಹಿತ್ಯ ವಿಮರ್ಶೆ ಮತ್ತು ನಿಜ ದನಿ

ಸಾಹಿತ್ಯಸಂಸ್ಕೃತಿಯನ್ನು ಪೊರೆಯುವ ಕೆಲಸ ಆಳವಾದ ಅಧ್ಯಯನ, ಸೂಕ್ಷ್ಮ ಚರ್ಚೆ, ಸಮಾಜದ ಆರೋಗ್ಯ ಕುರಿತ ಕಾಳಜಿ, ಜವಾಬ್ದಾರಿಯುತ ಬೋಧನೆ, ಅರ್ಥಪೂರ್ಣ ವಿಮರ್ಶೆ, ಪಠ್ಯಪುಸ್ತಕಗಳ ಬಗೆಗೆ ಚಿಂತನೆ ಎಲ್ಲವನ್ನೂ ಒಳಗೊಂಡಿರುತ್ತದೆ. ಸುಮಾರು ಅರವತ್ತು ವರ್ಷಗಳ ಕಾಲ ಈ ಅನನ್ಯ ಕೆಲಸ ಮಾಡಿದ ಜಿ.ಎಚ್. ನಾಯಕರ ವಿಮರ್ಶೆ ಕುರಿತ ಒಂದು ನೋಟ...

Update: 2024-05-25 07:33 GMT

ಅನಂತಮೂರ್ತಿಯವರು ತೀರಿಕೊಳ್ಳುವ ಕೆಲವು ದಿನಗಳ ಕೆಳಗೆ ಫೋನ್ ಮಾಡಿ, ‘ಏನು ಓದುತ್ತಿದ್ದೀಯ?’ ಎಂದರು. ನಾನಾಗ ಜಿ.ಎಚ್. ನಾಯಕರ ‘ಮೌಲ್ಯಮಾರ್ಗ’ ಸಂಪುಟಗಳನ್ನು ಓದುತ್ತಿದ್ದೆ; ನಾಯಕರ ವಿಮರ್ಶೆಯ ಬಗ್ಗೆ ಮೆಚ್ಚುಗೆಯ ಮಾತಾಡತೊಡಗಿದೆ. ತಕ್ಷಣ ಅನಂತಮೂರ್ತಿಯವರು ‘‘ಜಿ.ಎಚ್. ನಾಯಕರಂತೆ ಆತ್ಮಸಾಕ್ಷಿಗೆ ಬದ್ಧವಾಗಿ ಬರೆಯುವವರು ತೀರಾ ಕಡಿಮೆ. ನಾವೆಲ್ಲ ಅವರ ಬರಹಗಳನ್ನು ಸರಿಯಾಗಿ ಅಸೆಸ್ ಮಾಡೇ ಇಲ್ಲ. ನನಗೆ ಆ ಪುಸ್ತಕಗಳು ಈಗಲೇ ಬೇಕು’’ ಎಂದು ಮಗುವಿನಂತೆ ರಚ್ಚೆ ಹಿಡಿದರು. ನಾನು ಅವನ್ನು ತರಿಸಿ ಕೊಡುವಷ್ಟರಲ್ಲಿ ಅನಂತಮೂರ್ತಿ ತೀರಿಕೊಂಡರು.

ಅವತ್ತು ಅನಂತಮೂರ್ತಿಯವರ ಈ ಕಾತರ ಕೇಳಿ ಕರಗಿಹೋಗಿದ್ದ ಜಿ.ಎಚ್. ನಾಯಕರು ಕಳೆದ ವರ್ಷ ಮೇ ತಿಂಗಳ ೨೬ರಂದು ತೀರಿಕೊಂಡರು. ಹೊಸ ತಲೆಮಾರಿನ ಅನೇಕ ಓದುಗ, ಓದುಗಿಯರಿಗೆ ಕನ್ನಡ ವಿಮರ್ಶಾ ಪರಂಪರೆಯಲ್ಲಿ ಜಿ.ಎಚ್. ನಾಯಕರಿಗೆ ಇರುವ ಮಹತ್ವದ ಸ್ಥಾನ ಗೊತ್ತಿರಲಿಕ್ಕಿಲ್ಲ. ಈಚೆಗೆ ಅವರ ವಿಮರ್ಶೆಯನ್ನು ನೆನೆಯುವಾಗ ಕಾಲಕಾಲದ ಟ್ರೆಂಡಿ ವಿಮರ್ಶೆಗಳೆಲ್ಲ ಕಣ್ಮರೆಯಾಗಿ, ಅವರ ಓದಿನ ಪ್ರಾಮಾಣಿಕತೆ ಕನ್ನಡ ವಿಮರ್ಶಾ ಪರಂಪರೆಯಲ್ಲಿ ಬಹು ಕಾಲ ಉಳಿಯಬಲ್ಲದು ಎನ್ನಿಸಿತು. ಅವರ ಪುಸ್ತಕವೊಂದರ ಹೆಸರು: ‘ನಿಜ ದನಿ’. ಅವರ ಸಮಗ್ರ ವಿಮರ್ಶಾ ಸಂಪುಟಗಳ ಹೆಸರು: ‘ಮೌಲ್ಯಮಾರ್ಗ’. ಇವೆರಡೂ ಹೆಸರುಗಳು ಸಾಹಿತ್ಯ ಕೃತಿಗಳ ದನಿ ಹಾಗೂ ಮೌಲ್ಯಗಳನ್ನು ಕುರಿತಂತೆ ನಾಯಕರ ನಿರಂತರ ಹುಡುಕಾಟಗಳನ್ನು ಹೇಳುತ್ತವೆ.

ನಾಯಕರ ಪ್ರಾಮಾಣಿಕ, ನಿಜ ದನಿ ನನ್ನನ್ನು ಥಟ್ಟನೆ ತಟ್ಟಿದ್ದು ಹದಿಹರೆಯದಲ್ಲಿ ಲೈಬ್ರರಿಯಲ್ಲಿ ಸಿಕ್ಕ ಅವರ ‘ಸಮಕಾಲೀನ’ ಎಂಬ ವಿಮರ್ಶೆಯ ಪುಸ್ತಕದಲ್ಲಿ. ಅದು ಎಷ್ಟು ಅರ್ಥವಾಯಿತೋ ಏನೋ! ಅಲ್ಲಿನ ವಿಶ್ಲೇಷಣೆಯ ಗಾಂಭೀರ್ಯ ಮಾತ್ರ ನನ್ನೊಳಗಿಳಿಯಿತು. ಒಂದು ಪಠ್ಯವನ್ನು ಓದುವ ಧ್ಯಾನಸ್ಥ ರೀತಿಯನ್ನು, ವಸ್ತುನಿಷ್ಠ ಓದು ತಲುಪುವ ಬೌದ್ಧಿಕ ಎತ್ತರವನ್ನು ನಾಯಕರ ಬರವಣಿಗೆಯಲ್ಲಿ ಮುಂದೆ ಗಮನಿಸುತ್ತಾ ಬಂದೆ. ಸಾಹಿತ್ಯವನ್ನು ಪ್ರೀತಿಯಿಂದ ಗ್ರಹಿಸುವವರಿಗೆ, ಅರ್ಥಪೂರ್ಣವಾಗಿ ಪಾಠ ಮಾಡುವವರಿಗೆ ನಾಯಕರ ರೀತಿಯ ಪಠ್ಯದ ನಿಕಟ ಓದು ಆದರ್ಶವಾದುದು. ಒಮ್ಮೆ ಹೀಗೆ ಪ್ರಾಮಾಣಿಕವಾಗಿ ಪಠ್ಯವನ್ನು ಹತ್ತಿರದಿಂದ ಓದುವುದನ್ನು ಕಲಿತ ಮೇಲಷ್ಟೇ ಉಳಿದ ಅನೇಕ ಓದುಗಳು ನಮ್ಮಲ್ಲಿ ಬೆಳೆಯಬಲ್ಲವು.

ನಾಯಕರ ಓದಿನ ರೀತಿಯನ್ನು ‘ನಿಧಾನವಾಗಿ, ಆದರೆ ಆಮೂಲಾಗ್ರವಾಗಿ ಒಳಹೊರಗುಗಳನ್ನು ಒಳಗೊಂಡು ಒಂದು ಕೃತಿಯನ್ನು ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಳ್ಳುವ ರೀತಿ’ ಎಂದು ಅಡಿಗರು ಆರಂಭದಲ್ಲೇ ಗುರುತಿಸಿದ್ದರು; ‘ನಾಯಕರ ಶೈಲಿ ಸಾಹಿತ್ಯ ವಿಮರ್ಶೆಯಲ್ಲಿ ಪ್ರಾಮಾಣಿಕತೆ ಎಂದರೇನು ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿದೆ’ ಎಂದಿದ್ದರು. ಈ ಬಗೆಯ ಪ್ರಾಮಾಣಿಕತೆಯಿಂದ ಕನ್ನಡದ ಪ್ರಾಚೀನ ಕೃತಿಗಳನ್ನು ಕುರಿತು ನಾಯಕರು ಬರೆದ ಬರಹಗಳಿಂದ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಈ ಕೃತಿಗಳು ಸ್ಪಷ್ಟವಾಗಿವೆ. ಒಂದು ಕಾಲಕ್ಕೆ ಕನ್ನಡದಲ್ಲಿ ರೂಪುಗೊಂಡ ನವ್ಯ ವಿಮರ್ಶೆ, ಕೃತಿಕೇಂದ್ರಿತ ವಿಮರ್ಶೆಗಳನ್ನು ಖಚಿತವಾಗಿ ರೂಪಿಸಿದವರಲ್ಲಿ ನಾಯಕರೂ ಇದ್ದಾರೆ. ತಾವು ರೂಪಿಸಿಕೊಂಡ ವಿಮರ್ಶೆಯ ನಿಷ್ಠುರ ಮಾರ್ಗಗಳನ್ನು ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಕೃತಿಗಳ ಓದು, ಮರು ಓದುಗಳಲ್ಲಿ ಅವರು ದಕ್ಷವಾಗಿ ಬಳಸಿದ್ದಾರೆ.

ಪಂಪನನ್ನು ಮತ್ತೆ ಮತ್ತೆ ವಿವರಿಸಿರುವ ನಾಯಕರು ಒಮ್ಮೆ ರಿಫ್ರೆಶರ್ ಕೋರ್ಸಿನಲ್ಲಿ ‘ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ’ ಎಂಬ ಪಂಪನ ಜನಪ್ರಿಯ ಘೋಷಣೆಯನ್ನು ಪ್ರಸ್ತಾಪಿಸಿದರು. ತಕ್ಷಣ ಅಲ್ಲಿದ್ದ ಟೀಚರುಗಳು, ‘ಇಲ್ಲಿ ಎಂದರೆ ವಿಕ್ರಮಾರ್ಜುನ ವಿಜಯ; ಅಲ್ಲಿ ಎಂದರೆ ಆದಿಪುರಾಣ’ ಎಂದು ಹಳೆಯ ಪ್ಲೇಟನ್ನೇ ಹಾಕಿದರು! ಆಗ ನಾಯಕರು ನಗುತ್ತಾ ‘‘...‘ಅಲ್ಲಿ’ ಎಂದರೆ ಆದಿಪುರಾಣ ಎಂದು ಖಾತ್ರಿಯಾಗಿ ಹೇಗೆ ಹೇಳುತ್ತೀರಿ? ‘ಅಲ್ಲಿ’ ಎನ್ನುವುದು ಅಕಸ್ಮಾತ್ ಸಿಕ್ಕಿರದ ಪಂಪನ ಇನ್ನಾವುದೋ ಕೃತಿಯನ್ನೂ ಸೂಚಿಸುತ್ತಿರಬಹುದಲ್ಲವೆ?’’ ಎಂದರು. ನಾಯಕರ ಈ ಓಪನ್ ರೀಡಿಂಗ್‌ನ ಒರಿಜಿನಾಲಿಟಿ ಅವತ್ತು ನನ್ನಲ್ಲಿ ಹುಟ್ಟಿಸಿದ ವಿಸ್ಮಯ ಇವತ್ತಿಗೂ ಇದೆ.

ನಾಯಕರು ತೇಜಸ್ವಿಯವರ ‘ಕರ್ವಾಲೊ’ ಕಾದಂಬರಿಗೆ ಬರೆದ ಹಿನ್ನುಡಿಯಲ್ಲಿ ತೇಜಸ್ವಿಯವರ ಒಟ್ಟು ಸಾಹಿತ್ಯವನ್ನು ‘ಚಿರ ವಾಸ್ತವ’ ಹಾಗೂ ‘ಚರ ವಾಸ್ತವ’ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ನೋಡಿದ ರೀತಿಯನ್ನು ನೀವು ಗಮನಿಸಿರಬಹುದು. ಎರಡು ಪರಿಕಲ್ಪನೆಗಳ ಮೂಲಕ ಲೇಖಕನೊಬ್ಬನ ಎಲ್ಲ ಕೃತಿಗಳನ್ನೂ ವಿವರಿಸಿದ ನಾಯಕರ ಅಧ್ಯಯನ ವಿಧಾನ ಸಾಹಿತ್ಯ ಸಂಶೋಧನೆಯಲ್ಲಿ ತೊಡಗುವವರಿಗೆ ಅತ್ಯಂತ ಉಪಯುಕ್ತ. ‘ದ್ವೇಷಾಸೂಯೆಗಳಿಲ್ಲದೆ, ಭಿನ್ನಾಭಿಪ್ರಾಯಗಳೊಂದಿಗೆ ಸಹಬಾಳುವೆ ನಡೆಸುವ ಮಾನವೀಯವಾದ ಒಂದು ದೊಡ್ಡ ಗುಣವಿರುವ ವಿಮರ್ಶಕ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ನಾನು ತಿಳಿದಂತೆ ಜಿ.ಎಚ್. ನಾಯಕರೊಬ್ಬರೇ’ ಎಂದು ತೇಜಸ್ವಿ ಬರೆದ ಮಾತು ನನ್ನ ಮನಸ್ಸಿನಲ್ಲಿ ನಾಯಕರ ಬಗ್ಗೆ ವಿಶಿಷ್ಟ ಇಮೇಜೊಂದನ್ನು ಸೃಷ್ಟಿಸಿತು.

ಸಿರಿವರ ಪ್ರಕಾಶನ ಪ್ರಕಟಿಸಿರುವ ನಾಯಕರ ಸಮಗ್ರ ಕೃತಿಗಳನ್ನೊಳಗೊಂಡ ‘ಮೌಲ್ಯಮಾರ್ಗ’ದ ಸಂಪುಟಗಳನ್ನು ನೋಡನೋಡುತ್ತಾ, ನಾಯಕರ ವಿಮರ್ಶೆಯನ್ನು ಸರಿಯಾಗಿ ಓದದೆ ನಮ್ಮ ಬೋಧನಾವಲಯ ಗಂಭೀರ ಓದಿನ ಮಾರ್ಗಗಳನ್ನು ಕಳೆದುಕೊಂಡಿದೆ ಅನ್ನಿಸಿತು. ಅಬ್ಬರದ, ಅಸೂಕ್ಷ್ಮವಾದ, ಸರಳ ಸಾಮಾಜಿಕ ಓದಿನ ಹಳ್ಳಕ್ಕೆ ಬಿದ್ದು ಒಂದು ಧಾರೆಯ ಕನ್ನಡ ವಿಮರ್ಶೆ ಕಳೆದುಕೊಂಡಿರುವ ಸೂಕ್ಷ್ಮತೆಯನ್ನು ನಾಯಕರಂಥವರ ನಿರಂತರ ಪಠ್ಯವಿಸ್ತರಣೆಯ ಓದಿನಿಂದಲೂ ಪಡೆಯುತ್ತಿರಬೇಕಾಗುತ್ತದೆ.

ಉತ್ತರಕನ್ನಡದ ಸೂರ್ವೆ ಎಂಬ ಪುಟ್ಟ ಊರಿನಿಂದ ಬಂದ ಗೋವಿಂದರಾಯ ಹಮ್ಮಣ್ಣ ನಾಯಕ (ಹುಟ್ಟು: ೧೮ ಸೆಪ್ಟಂಬರ್ ೧೯೩೫) ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರೊಫೆಸರ್ ಆಗಿ, ಲೇಖಕರಾಗಿ, ತಮಗೆ ನಿಜಕ್ಕೂ ಒಪ್ಪಿಗೆಯಾದ ನವ್ಯ ವಿಮರ್ಶಾ ಮಾನದಂಡಗಳನ್ನು ನಿಷ್ಠುರವಾಗಿ ಬಳಸಿ ಖಚಿತ ಸಾಹಿತ್ಯಕ ನೋಟಗಳನ್ನು ಪಡೆದರು. ಮೈಸೂರಿನ ಸಾಹಿತ್ಯಪರಾವಲಂಬಿಗಳ ಅಸಾಹಿತ್ಯಕ ಪ್ರತಿಕ್ರಿಯೆಗಳು ಹಾಗೂ ಪೀಡನಗಳ ನಡುವೆಯೂ ತಮ್ಮ ಮಾರ್ಗದಲ್ಲಿ ಮುಂದುವರಿದರು; ಸಾಹಿತ್ಯದ ಚಿಂತನೆ, ಬೋಧನೆಗಳಲ್ಲಿ ಆಳವಾಗಿ ಮುಳುಗಿ ಸುತ್ತಲಿನ ಸಣ್ಣತನವನ್ನು ಮೀರಲೆತ್ನಿಸಿದರು.

ನಾಯಕರು ಕುವೆಂಪು ಅವರ ಸಾಹಿತ್ಯವನ್ನು ವಿಮರ್ಶಾತ್ಮಕವಾಗಿ ನೋಡುತ್ತಿದ್ದಾರೆಂದು ಕುವೆಂಪು ಅಂಧಾಭಿಮಾನಿಗಳು ಕಿಡಿ ಕಾರಿದ ಕಾಲವೂ ಇತ್ತು. ಇದರಿಂದ ಅಸಹ್ಯಗೊಂಡ ತೇಜಸ್ವಿ, ನಾಯಕರಿಗೆ ಮೇಷ್ಟರ ಕೆಲಸ ಬಿಟ್ಟು ತನ್ನಂತೆಯೇ ತೋಟ ಮಾಡಲು ಕರೆಯುತ್ತಾರೆ: ‘‘ಯಾವಯಾವುದೋ ಹಾಳುಮೂಳು ರದ್ದಿ ಟೆಕ್ಸ್ಟ್ ಬುಕ್ಕುಗಳನ್ನು ಹತ್ತೂವರೆಯಿಂದ ಐದು ಗಂಟೆಯವರೆಗೂ ಪಾಠ ಮಾಡುವುದು, ಅದಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಇದರಲ್ಲೇ ನಿಮ್ಮ ಟೈಂ ಕಳೆದು ಹೋಗುತ್ತೆ. ಅದು ಅಕಡಮಿಕ್ ವರ್ಕ್ ಏನ್ರೀ?’’

ನಾಯಕರು ಕೆಲಸ ಬಿಡಲಿಲ್ಲ. ತೋಟ ಮಾಡಲಿಲ್ಲ. ತಾವು ಬೋಧಿಸುತ್ತಿದ್ದ ಉತ್ತಮ ಕೃತಿಗಳ ನಿಜದನಿಯನ್ನು ವಿಸ್ತರಿಸುತ್ತಲೇ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಬೆಳೆಸುತ್ತಾ ಹೋದರು. ನಾಯಕರಂತೆ ಐವತ್ತು ವರ್ಷಗಳ ಕಾಲ ಹಲ್ಲು ಕಚ್ಚಿ ಸಾಹಿತ್ಯ ವಿಮರ್ಶೆಯ ಮೌಲ್ಯಮಾರ್ಗದಲ್ಲಿರುವುದು ಸುಲಭವಲ್ಲ. ಈ ಮಾರ್ಗದಲ್ಲಿರಲು ಸಾಹಿತ್ಯ ವಿಮರ್ಶೆಯ ಮಾನದಂಡಗಳ ಆಳವಾದ ಗ್ರಹಿಕೆಯ ಜೊತೆಜೊತೆಗೇ ತಾನು ಬಳಸುತ್ತಿರುವ ವಿಮರ್ಶಾ ಮಾರ್ಗಗಳ ಬಗ್ಗೆ ಸ್ಪಷ್ಟತೆಗಳಿರಬೇಕು; ಅವುಗಳ ಬಗ್ಗೆ ಆಳದ ನಂಬಿಕೆಯಿರಬೇಕು; ಸಾಹಿತ್ಯ ವಿಮರ್ಶೆ ಎನ್ನುವುದು ಬಾಯುಪಚಾರದ ಮಾತುಗಳನ್ನು ಮೀರಿ ವಸ್ತುನಿಷ್ಠವಾದ ಸತ್ಯಶೋಧನೆಯಾಗಬೇಕು.ಇವೆಲ್ಲ ನಾಯಕರ ವಿಮರ್ಶೆಯ ಮೂಲಕವೂ ನಮಗೆ ಮನವರಿಕೆಯಾಗುತ್ತಾ ಹೋಗುತ್ತವೆ.

ನಾಯಕರ ರೀತಿಯ ವಸ್ತುನಿಷ್ಠತೆಯನ್ನು ಸಮಾಜದ ಎಲ್ಲ ವಲಯಗಳೂ ಎದುರು ನೋಡುತ್ತಿರುತ್ತವೆ ಎಂಬುದಕ್ಕೆ ಒಂದು ಉದಾಹರಣೆ: ಇಪ್ಪತ್ತೊಂದನೆಯ ಶತಮಾನದ ಶುರುವಿನಲ್ಲಿ ದಲಿತ ಬಣಗಳನ್ನು ಒಂದುಗೂಡಿಸಲು ಮುಕ್ತ ಚರ್ಚೆಯೊಂದು ಮೈಸೂರಿನಲ್ಲಿ ನಡೆಯಿತು. ದಿನವಿಡೀ ನಡೆದ ಈ ಚರ್ಚೆಯನ್ನು ನಿರ್ವಹಿಸಲು ದಲಿತ ಚಳವಳಿಗಾರರು ನಾಯಕರನ್ನು ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದರ ಕಾರಣ ಮುಂದೊಮ್ಮೆ ಹೊಳೆಯಿತು: ವ್ಯಕ್ತಿಯೊಬ್ಬ ಸಾಹಿತ್ಯವಿಮರ್ಶೆಯಲ್ಲಿ ಬಳಸುವ ವಸ್ತುನಿಷ್ಠತೆ ಸಮಾಜದ ಇನ್ನಿತರ ವಲಯಗಳನ್ನು ಗ್ರಹಿಸಲೂ ಅತ್ಯಗತ್ಯ. ವಿಮರ್ಶೆಯ ಚಟುವಟಿಕೆ ಅಖಂಡ. ಅದು ಎಲ್ಲ ವಲಯಗಳಿಗೂ ಒಂದೇ ತೀವ್ರತೆಯಿಂದ ಚಾಚಿಕೊಳ್ಳಬಲ್ಲದು!

ಆ ಕಾಲದಲ್ಲಿ ನಾಯಕರು ಸಾಹಿತ್ಯ ವಿಮರ್ಶೆಯಾಚೆಗೆ ಹೊರಳಿ, ‘ದಲಿತ ಹೋರಾಟ: ಗಂಭೀರ ಸವಾಲುಗಳು’ ಎಂಬ ಪುಟ್ಟ ಪುಸ್ತಕ ಬರೆದರು. ದಲಿತ ಚಳವಳಿ ಶಿಸ್ತುಬದ್ಧ ಅಕಡಮಿಕ್ ಗ್ರಹಿಕೆಗಳಿಂದಲೂ ಕಲಿಯಬೇಕಾದ ಅಗತ್ಯವನ್ನು ಸೂಚಿಸುವ ಪುಸ್ತಕವಿದು. ಸಾಹಿತ್ಯ ವಿಮರ್ಶೆಯ ಜೊತೆಗೇ ಖಚಿತ ವೈಚಾರಿಕ ಮುಖವೂ ನಾಯಕರಲ್ಲಿತ್ತು. ಆದ್ದರಿಂದಲೇ ಅಂಬೇಡ್ಕರ್ ಕುರಿತ ಅವರ ಲೇಖನವೂ ಮುಖ್ಯವಾದುದು. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಮಾಡುವುದನ್ನು ಅವರು ಪ್ರಶ್ನಿಸಿದ ರೀತಿ; ಮಠಗಳು, ಕೋಮುವಾದ ಹಾಗೂ ಜಾತಿ ಸಂಘಟನೆಗಳ ಬಗ್ಗೆ ತಳೆದ ನಿಲುವುಗಳು ಅವರ ಸ್ಪಷ್ಟ ವೈಚಾರಿಕ ಚೌಕಟ್ಟನ್ನು ಬಿಂಬಿಸುತ್ತವೆ.

ಜಿ.ಎಚ್. ನಾಯಕರ ‘ಸಮಕಾಲೀನ’, ‘ಅನಿವಾರ್ಯ’ ‘ನಿರಪೇಕ್ಷ’, ‘ನಿಜದನಿ’, ‘ಸಕಾಲಿಕ’ ಪುಸ್ತಕಗಳ ನಂತರ ಬಂದ ‘ಉತ್ತರಾರ್ಧ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂತು. ಅವರ ವಿಮರ್ಶೆಯ ಪೂರ್ವಾರ್ಧದ ಪುಸ್ತಕಗಳ ವಿಮರ್ಶಾತೀವ್ರತೆ, ರಾಚನಿಕ ದಕ್ಷತೆ ಹಾಗೂ ವ್ಯಾಪ್ತಿ ಈ ಪ್ರಶಸ್ತಿ ಪಡೆದ ಪುಸ್ತಕದಲ್ಲಿರಲಿಲ್ಲ. ಈ ಮಾತನ್ನು ಅವರಿದ್ದಾಗಲೇ ಬರೆದಿದ್ದೆ.

ಆದರೂ ನಾಯಕರು ಈ ಘಟ್ಟದಲ್ಲಿ ಬರೆದ ಬೇಂದ್ರೆಯವರ ‘ಕನಸಿನೊಳಗೊಂದು ಕಣಸು’ ಪದ್ಯದ ಜಾಗತೀಕರಣ ಘಟ್ಟದ ಓದು; ಉತ್ತರ ಕನ್ನಡದ ಗಿರಿ ಪಿಕಳೆಯವರಂಥ ಹೋರಾಟಗಾರರ ಬಗ್ಗೆ ಬರೆದಾಗ ಕಾಲದ ಚರಿತ್ರೆ ಮೂಡುವ ರೀತಿ; ತೇಜಸ್ವಿ ಬಗೆಗಿನ ಆತ್ಮೀಯ ಬರಹ, ನಾಡವರ ಬಗ್ಗೆ ಬರೆದ ಸಂಶೋಧನಾ ಬರಹ...ಇವೆಲ್ಲ ಅವರ ಬರವಣಿಗೆ ತೀರಾ ಕುಂದಿರಲಿಲ್ಲವೆಂಬುದನ್ನೂ ಹೇಳುತ್ತವೆ. ಗಂಭೀರ ಓದಿನ ಶ್ರಮ ಹಾಗೂ ಪ್ರಾಮಾಣಿಕತೆಗಳ ಬುನಾದಿಯುಳ್ಳ ಬರವಣಿಗೆ ಏರುಪೇರನ್ನು, ಇಳಿಮುಖ ವನ್ನು ಕಾಣಬಹುದು; ಆದರೆ ಅದು ತೀರಾ ಅಳ್ಳಕವಾಗುವುದಿಲ್ಲ.

ನಾಯಕರ ಕೊನೆಯ ಘಟ್ಟದ ಬರವಣಿಗೆ ಓದುವಾಗ ಹೀಗೆನ್ನಿಸಿತು: ಸಾಧಾರಣ ಕೃತಿಗಳ ಬಗ್ಗೆ ಬರೆಯುವಾಗ ನಮ್ಮ ಬರವಣಿಗೆಯೂ ಸಾಧಾರಣವಾಗುತ್ತದೇನೋ! ಕಾರಂತರ ‘ಒಂಟಿದನಿ’, ‘ಮೊಗ ಪಡೆದ ಮನ’ ಕಾದಂಬರಿಗಳ ಬಗೆಗೆ ನಾಯಕರ ವಿವರಣಾತ್ಮಕ ವಿಮರ್ಶೆಯನ್ನು ಓದುವಾಗ ಹೀಗನ್ನಿಸಿತು. ಅಲ್ಲಿ ಕೂಡ ಸರಿಯಾದ ಪ್ರಶ್ನೆಗಳನ್ನು ನಾಯಕರು ಎತ್ತಲು ಮರೆತಿಲ್ಲ ಎನ್ನುವುದೂ ನಿಜ.

ಕೃತಿಪರೀಕ್ಷೆಯಲ್ಲಿ ಬಳಸಿದ ನೈತಿಕ ಸೂಕ್ಷ್ಮಗಳನ್ನು ವ್ಯಕ್ತಿಗಳ ಬಗ್ಗೆ ಬರೆಯುವಾಗ ಬಳಸಿರುವ ಭಾಷೆಯಲ್ಲೂ ನಾಯಕರು ಪಾಲಿಸಲೆತ್ನಿಸಿದ್ದಾರೆ. ಸಾಹಿತ್ಯ ಕೃತಿಗಳ ಶ್ರೇಷ್ಠತೆಯ ಬಗೆಗಿನ ಅವರ ಖಚಿತ ನಿಲುವುಗಳು ಹಾಗೂ ಸಾಹಿತ್ಯಕ ಶ್ರೇಷ್ಠತೆಯನ್ನೇ ಆಯ್ಕೆಯ ಅಂತಿಮ ಮಾನದಂಡವಾಗಿ ಬಳಸುವ ರೀತಿ ಅವರು ಐದು ದಶಕಗಳ ಕೆಳಗೆ ನ್ಯಾಶನಲ್ ಬುಕ್ ಟ್ರಸ್ಟ್‌ಗಾಗಿ ಸಂಪಾದಿಸಿದ ‘ಕನ್ನಡ ಸಣ್ಣ ಕತೆಗಳು’ ಸಂಕಲನದಲ್ಲೂ ಇತ್ತು.

ಸಾಹಿತ್ಯಸಂಸ್ಕೃತಿಯನ್ನು ಪೊರೆಯುವ ಕೆಲಸ ಆಳವಾದ ಅಧ್ಯಯನ, ಸೂಕ್ಷ್ಮ ಚರ್ಚೆ, ಸಮಾಜದ ಆರೋಗ್ಯ ಕುರಿತ ಕಾಳಜಿ, ಜವಾಬ್ದಾರಿಯುತ ಬೋಧನೆ, ಅರ್ಥಪೂರ್ಣ ವಿಮರ್ಶೆ, ಪಠ್ಯಪುಸ್ತಕಗಳ ಬಗೆಗೆ ಚಿಂತನೆ ಎಲ್ಲವನ್ನೂ ಒಳಗೊಂಡಿರುತ್ತದೆ. ಈ ಹೊಣೆಯನ್ನು ಹಲವು ದಶಕಗಳ ಕಾಲ ನಿರ್ವಹಿಸಿದ ನಾಯಕರ ನಿಜ ಮಾದರಿ ಎಲ್ಲ ಕನ್ನಡ ತಲೆಮಾರುಗಳಿಗೂ ಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - Naufal

contributor

Contributor - ನಟರಾಜ್ ಹುಳಿಯಾರ್

contributor

Similar News