×
Ad

ಗುಹಾ ರೂಪಕದ ಸುತ್ತ!

Update: 2025-07-21 13:13 IST

ರಶ್ಯದ ನೀನಾ ಕುಟಿನಾ ಎಂಬ ಮಹಿಳೆಯ ಗುಹಾವಾಸದ ಸುದ್ದಿ ಎರಡು ವಾರಗಳ ಕೆಳಗೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದನ್ನು ನೀವು ನೋಡಿರಬಹುದು. ನೀನಾ ಕುಟಿನಾ ಗೋಕರ್ಣದ ಬಳಿಯ ‘ಪಾಂಡವರ ಗುಹೆ’ಯಲ್ಲಿ ಇಬ್ಬರು ಹೆಣ್ಣುಮಕ್ಕಳೊಂದಿಗೆ ಇದ್ದದ್ದನ್ನು ಓದಿದ ಮಿತ್ರರೊಬ್ಬರು ‘ವಿದೇಶಿಯರು ಪ್ರಕೃತಿಯ ಜೊತೆ ಬದುಕುವ ಕಲೆಯನ್ನು ಈಚಿನ ದಶಕಗಳಲ್ಲಿ ಹೆಚ್ಚು ಹೆಚ್ಚು ಕಂಡುಕೊಳ್ಳುತ್ತಿದ್ದಾರೆ’ ಎಂದು ರೊಮ್ಯಾಂಟಿಕಾಗಿ ಮೆಚ್ಚತೊಡಗಿದ್ದರು!

ಪ್ರಕೃತಿಯೇ ಸೃಷ್ಟಿಸಿದ ಖಾಸಗಿ ಮನೆಯಂತಿರುವ ಗುಹೆಯ ಬಗ್ಗೆ ಮಾನವ ವ್ಯಾಮೋಹ ಇವತ್ತಿನದಲ್ಲ. ಬುದ್ಧನ ಹಲವು ಅನುಯಾಯಿಗಳಿಗೆ ಗುಹೆಗಳು ಮೂಲತಃ ಧ್ಯಾನದ, ಕಲಿಕೆಯ ಕೇಂದ್ರಗಳಾಗಿದ್ದವು. ನಂತರ ಬೋಧಿಸತ್ವನ ಪ್ರತಿಮೆ ತೆಗೆದು, ಶಿವಲಿಂಗ ಪ್ರತಿಷ್ಠಾಪಿಸಿದ ಗುಹೆಗಳೂ ಇವೆ. ಗುಹಾ ಸಂಕೇತ, ಗುಹಾ ರೂಪಕಗಳ ಸುತ್ತ ಸುತ್ತುವ ಮನಸ್ಸು ಕೊನೆಗೆ ಗುಹೇಶ್ವರನನ್ನು ತಲುಪಲೇಬೇಕಲ್ಲ! ‘ಗೊಗ್ಗೇಶ್ವರ’ ಎಂಬುದೇ ಅಲ್ಲಮಪ್ರಭುವಿನ ಅಂಕಿತ ನಾಮ, ಇಷ್ಟದೈವ ಎಂದು ಹಲವರು ವಾದ ಮಾಡಿದರೂ, ‘ಗುಹೇಶ್ವರಾ’ ಎಂಬ ಹೆಸರಿನ ಸಾಂಕೇತಿಕತೆ; ಅಲ್ಲಮನ ವಚನಗಳು ಅರಸುತ್ತಿರುವ ನಿಗೂಢ ಸತ್ಯಗಳಿಗೂ ’ಗುಹೇಶ್ವರ’ ರೂಪಕಕ್ಕೂ ಇರುವ ಸಂಬಂಧ ಇವನ್ನೆಲ್ಲ ನೆನೆದು ಮನಸ್ಸು ‘ಗುಹೇಶ್ವರ’ನನ್ನೇ ಒಪ್ಪತೊಡಗುತ್ತದೆ!

ರೂಪಕಗಳ ವಿದ್ಯಾರ್ಥಿಯಾದ ನನಗೆ ನೀನಾ ಇದ್ದ ಗುಹೆ ಹಲವು ಅರ್ಥಗಳನ್ನು ಹೊರಡಿಸಿದ್ದು ಸಹಜವಾಗಿತ್ತು. ಆಕೆ ಇದ್ದ ಗುಹೆಯಂತೆ ಆಕೆಯ ಜೀವನ ಕೂಡ-ಆಫ್‌ಕೋರ್ಸ್, ಎಲ್ಲರ ಜೀವನದ ಹಾಗೇ ನಿಗೂಢವಾಗಿರುವಂತಿತ್ತು. ಹದಿನೈದು ವರ್ಷದ ಕೆಳಗೆ ರಶ್ಯ ಬಿಟ್ಟ ನೀನಾ ಹಲವು ದೇಶಗಳನ್ನು ಸುತ್ತಿದ್ದಾಳೆ. ಆಕೆಯ ಒಬ್ಬ ಮಗ ರಶ್ಯದಲ್ಲಿದ್ದಾನೆ. ಮತ್ತೊಬ್ಬ ಮಗ ಗೋವಾದಲ್ಲಿ ಅಪಘಾತದಲ್ಲಿ ತೀರಿಕೊಂಡ. ಈಕೆಯ ಗುಹಾವಾಸದ ಸುದ್ದಿ ಬಿತ್ತರಗೊಂಡ ಮೇಲೆ ಆಕೆಯ ಸಂಗಾತಿ ಇಸ್ರೇಲಿ ಬಿಸಿನೆಸ್‌ಮನ್ ಡ್ರೋರ್ ಗೋಲ್ಡ್‌ಸ್ಟೈನ್ ಟೆಲಿವಿಶನ್ ಚಾನೆಲ್ಲೊಂದರಲ್ಲಿ ಮಾತಾಡಿದ.

ಡ್ರೋರ್ ಎಂಟು ವರ್ಷಗಳ ಕೆಳಗೆ ಗೋವಾದಲ್ಲಿ ನೀನಾಳನ್ನು ಭೇಟಿಯಾದ. ನೀನಾ-ಡ್ರೋರ್ ಪ್ರೀತಿಸಿದರು; ಜೊತೆಯಲ್ಲಿದ್ದರು. ನೀನಾಳ ಇಬ್ಬರು ಹೆಣ್ಣುಮಕ್ಕಳ ತಂದೆ ಡ್ರೋರ್. ಕೆಲ ವರ್ಷ ಇಂಡಿಯಾದಲ್ಲೂ, ಉಕ್ರೇನ್‌ನಲ್ಲೂ ಇದ್ದ ಡ್ರೋರ್, ನೀನಾ, ಹೆಣ್ಣುಮಕ್ಕಳು ಮತ್ತೆ ಗೋವಾಕ್ಕೆ ಬಂದಿದ್ದರು. ‘ಕೆಲವು ತಿಂಗಳ ಕೆಳಗೆ ಗೋವಾದಲ್ಲಿ ನನ್ನ

ಜೊತೆಗಿದ್ದ ನೀನಾ ಹೇಳದೆ ಕೇಳದೆ ಹೆಣ್ಣುಮಕ್ಕಳನ್ನು ಕರೆದುಕೊಂಡು ಗೋವಾದಿಂದ ಕಾಣೆಯಾದಳು’ ಎಂದು ಡ್ರೋರ್ ಪೊಲೀಸ್ ಕಂಪ್ಲೇಂಟ್ ಕೊಟ್ಟ. ನಂತರ ಅವರು ಗೋಕರ್ಣದಲ್ಲಿರುವುದನ್ನು ಕಂಡು ಅಲ್ಲಿಗೆ ಹೋದ.

‘ನಾನು ಮಕ್ಕಳ ಜೊತೆ ಕಾಲ ಕಳೆಯಲು ನೀನಾ ಬಿಡಲಿಲ್ಲ, ಒರಟಾಗಿ ನಡೆದುಕೊಂಡಳು’ ಎನ್ನುತ್ತಾನೆ ಡ್ರೋರ್. ತಾಯಿ, ಮಕ್ಕಳ ಜೀವನ ನಿರ್ವಹಣೆಗೆ ಸಾಕಷ್ಟು ಹಣವನ್ನೂ ಕೊಡುತ್ತಿದ್ದ ಡ್ರೋರ್, ಮುಖ್ಯವಾಗಿ ತನ್ನ ಹೆಣ್ಣು ಮಕ್ಕಳಿಗಾಗಿ ಹಪಹಪಿಸುತ್ತಿರುವಂತಿದೆ. ಆ ಹೆಣ್ಣುಮಕ್ಕಳು ರಶ್ಯಕ್ಕೆ ಹೋಗದಂತೆ ರಕ್ಷಿಸುವುದು ಡ್ರೋರ್‌ನ ಮೊದಲ ಆದ್ಯತೆ. ಇತ್ತ ನೀನಾ ತಾನು ಪ್ರಕೃತಿಯ ಮಡಿಲಿನಲ್ಲಿ ಇರಲು ಗುಹೆಗೆ ಹೋಗಿದ್ದೆ; ಪ್ರಕೃತಿಯ ಜೊತೆಗಿರುವುದು ಮನುಷ್ಯರ ಜೊತೆಗೆ ಇರುವುದಕ್ಕಿಂತ ಕ್ಷೇಮ ಎನ್ನುತ್ತಿದ್ದಾಳೆ. ಆಕೆ ಡ್ರೋರ್‌ನಿಂದ ತಪ್ಪಿಸಿಕೊಳ್ಳಲು ಗುಹೆ ಹಿಡಿದಳೋ, ಪಾಸ್‌ಪೋರ್ಟ್, ವೀಸಾಗಳ ಸಮಸ್ಯೆಯಿಂದ ಗುಹೆ ಸೇರಿಕೊಂಡಳೋ? ಎಲ್ಲವೂ ಗುಹೆಯಂತೆಯೇ ನಿಗೂಢ!

ಇದೆಲ್ಲದರ ಹಿಂದಿನ ಸತ್ಯ ಏನಾದರೂ ಇರಲಿ, ನೀನಾಳ ಗುಹೆ ನನ್ನನ್ನು ಏಕಾಏಕಿ ಫಾಸ್ಟರ್‌ನ ‘ಎ ಪ್ಯಾಸೇಜ್ ಟು ಇಂಡಿಯಾ’ ಕಾದಂಬರಿಯ ಮರಬಾರ್ ಗುಹೆಗಳಿಗೆ ಕರೆದೊಯ್ದಿತು; ಹಲವಾರು ಗಂಟೆಗಳ ಕಾಲ ಮತ್ತೆ ಆ ಕಾದಂಬರಿಯ ಘಟನಾವಳಿಗಳಲ್ಲಿ ಮುಳುಗೇಳುವಂಥ ಆಕಸ್ಮಿಕ ಆನಂದವನ್ನು ಸೃಷ್ಟಿಸಿತು.

ಫಾಸ್ಟರ್‌ನ ಕಾದಂಬರಿ ಗುಹೆಗಳನ್ನು ಪಶ್ಚಿಮ ಅರಿಯಲಾಗದ ಇಂಡಿಯಾದ ನಿಗೂಢ ಮುಖಗಳ ಸಂಕೇತವನ್ನಾಗಿಸುತ್ತದೆ. ಗುಹೆಗಳನ್ನು ಪರಸ್ಪರ ಅರ್ಥವಾಗದ ದೇಶಗಳು, ಸಂಸ್ಕೃತಿಗಳು; ಅರಿಯಲಾಗದ ಘಟನೆಗಳು, ವರ್ತನೆಗಳು, ಮಾತುಗಳು, ಮನಸ್ಸುಗಳ ರೂಪಕವನ್ನಾಗಿಯೂ ನೋಡುತ್ತದೆ. ಮರಬಾರ್ ಗುಹೆಗಳ ಬಣ್ಣನೆಯೊಂದಿಗೇ ಶುರುವಾಗುವ ಕಾದಂಬರಿಯ ಒಂದು ಘಟ್ಟದಲ್ಲಿ ಇಂಡಿಯನ್ ಡಾಕ್ಟರ್ ಅಝೀಝ್ ಶ್ರೀಮತಿ ಮೂರ್ ಹಾಗೂ ಅಡೆಲಾ ಕೊಸ್ಟೆಡ್ ಎಂಬ ಇಂಗ್ಲಿಷ್ ಮಹಿಳೆಯರಿಗೆ ಮರಬಾರ್ ಗುಹೆಗಳನ್ನು ತೋರಿಸಲು ಹೋಗುತ್ತಾನೆ. ಶ್ರೀಮತಿ ಮೂರ್ ದಣಿವಿನಿಂದಾಗಿ ಬೆಟ್ಟ ಹತ್ತಲಾಗದೆ ಕೆಳಗೇ ಉಳಿಯುತ್ತಾಳೆ. ಡಾಕ್ಟರ್ ಅಝೀಝ್, ಟೂರ್ ಗೈಡ್ ಹಾಗೂ ಅಡೆಲಾ ಬೆಟ್ಟ ಹತ್ತಿ ಮುಂದೆ ಸಾಗುತ್ತಾರೆ. ಒಂದು ಹಂತದಲ್ಲಿ ಮೂವರೂ ಬೇರೆಯಾಗುತ್ತಾರೆ. ಅಡೆಲಾ ಒಬ್ಬಳೇ ಗುಹೆಯೊಳಗೆ ಕಾಣೆಯಾಗುತ್ತಾಳೆ. ನಂತರ ಅಡೆಲಾ ಗುಹೆಯಲ್ಲಿ ಆಕ್ರಮಣಕ್ಕೆ ಒಳಗಾದಳೆಂಬ ಸುದ್ದಿ ಬರುತ್ತದೆ.

ಡಾಕ್ಟರ್ ಅಝೀಝ್ ಮೇಲೆ ಆಕ್ರಮಣದ ಆಪಾದನೆ ಬಂದು, ಆತ ಬಂಧನಕ್ಕೊಳಗಾಗುತ್ತಾನೆ. ಆದರೆ ಅಡೆಲಾಗೆ ಯಾವ ರೀತಿಯ ಆಕ್ರಮಣವಾಯಿತು, ಯಾರಿಂದ ಆಯಿತು ಎಂಬ ಬಗ್ಗೆ ಯಾವುದೂ ಸ್ಪಷ್ಟವಿಲ್ಲ. ಅಡೆಲಾ ಕೊನೆಗೆ ಕೋರ್ಟಿನ ಸಾಕ್ಷಿಕಟ್ಟೆಯಲ್ಲಿ ನಿಂತಾಗ, ‘ಅಝೀಝ್ ನೆವರ್?’ ಎಂಬ ಮಾತು ಅವಳ ಒಳಗಿಂದ ಬರುತ್ತದೆ. ದೂರನ್ನು ವಾಪಸ್ ಪಡೆಯುತ್ತಿದ್ದೇನೆ ಎನ್ನುತ್ತಾಳೆ. ಅಝೀಝ್ ಆಪಾದನೆಯಿಂದ ಮುಕ್ತನಾಗುತ್ತಾನೆ. ಗುಹೆಯ ಕತ್ತಲಲ್ಲಿ ಏನಾಯಿತು ಎಂಬುದು ಕೊನೆಗೂ ಯಾರಿಗೂ ತಿಳಿಯುವುದಿಲ್ಲ. ಇಂಡಿಯಾದಲ್ಲಿ ಎಲ್ಲವೂ ಹೀಗೆಯೇ; ಇಲ್ಲಿ ಎಲ್ಲವೂ ನಿಗೂಢವಾಗಿ ಉಳಿದುಬಿಡುತ್ತದೆ ಎಂದು ಕೆಲವು ಪಶ್ಚಿಮದ ಲೇಖಕರಿಗೆ ಅನ್ನಿಸುವುದನ್ನು ಈ ಕಾದಂಬರಿಯೂ ಮರುದನಿಸುತ್ತದೆ.

ಫಾಸ್ಟರ್ ಕಾದಂಬರಿಯ ಈ ಭಾಗದ ನಿಗೂಢತೆಯನ್ನು ಕೆಲವರು ಟೀಕಿಸಿದ್ದಾರೆ. ಲೇಖಕನೊಬ್ಬ ಫಾಸ್ಟರ್‌ಗೆ ಪತ್ರ ಬರೆದು, ‘ಗುಹೆಯಲ್ಲಿ ನಿಜಕ್ಕೂ ಏನಾಯಿತು ಎಂಬ ಬಗ್ಗೆ ಕಾದಂಬರಿಕಾರನಾದ ನೀನು ಇನ್ನಷ್ಟು ಸ್ಪಷ್ಟತೆ ಕೊಡಬೇಕಾಗಿತ್ತು’ ಎನ್ನುತ್ತಾನೆ. ಅದಕ್ಕೆ ಫಾಸ್ಟರ್ ಕೊಟ್ಟ ಉತ್ತರ: ‘ಗುಹೆಯಲ್ಲಿ ಆದ ಕೃತ್ಯ ನಡೆದದ್ದು ಮನುಷ್ಯನಿಂದಲೋ, ಮಾನವಾತೀತ ಶಕ್ತಿಯಿಂದಲೋ ಅಥವಾ ಭ್ರಮೆಯೋ ಎಂಬುದನ್ನು ಕುರಿತಂತೆ ನನ್ನ ‘ಲೇಖಕಮನಸ್ಸು’ ಮಸಕುಮಸಕಾಯಿತು. ಜೀವನದ ಅನೇಕ ಅಂಶಗಳಂತೆ ಇದು ಕೂಡ ಹಾಗೇ ಮಸಕುಮಸುಕಾಗಿರಲಿ, ಅನಿಶ್ಚಿತವಾಗಿರಲಿ ಎಂಬುದು ನನ್ನ ಇಚ್ಛೆಯೂ ಹೌದು. ನಾನು ಮಾಡಿದ್ದು ಸರಿ ಅನ್ನಿಸುತ್ತೆ. ಯಾಕೆಂದರೆ, ನನ್ನ ಕಾದಂಬರಿಯ ವಸ್ತು ಇಂಡಿಯಾ. ಇದು ಬೇರೆ ಇನ್ಯಾವುದೋ ದೇಶವಾಗಿದ್ದರೆ ನಾನು ಹೀಗೆ ಬರೆಯುತ್ತಿರಲಿಲ್ಲವೇನೋ.’

‘ಸರಿ! ಗುಹೆಯಲ್ಲೇನಾಯಿತು, ಹೇಳಿ?’ ಎಂಬ ಪ್ರಶ್ನೆಗೆ ಫಾಸ್ಟರ್, ‘ಐ ಡೋಟ್ ನೋ’ ಎಂದ. ‘ಇಂಡಿಯಾ ಎನ್ನುವುದು ಖಚಿತವಾಗಿ ವಿವರಿಸಲಾಗದ ಗೋಜಲು-ಗೊಂದಲ ಎಂಬುದನ್ನು ಅಡೆಲಾಗೆ ಗುಹೆಯಲ್ಲಿ ಆದ ಅನುಭವದ ಮೂಲಕ ತೋರಿಸಲೆತ್ನಿಸಿದ್ದೇನೆ’ ಎಂದು ಕೂಡ ಹೇಳಿದ. ಗುಹೆಗಳನ್ನು ಅರಿಯುವುದು ಸುಲಭವಲ್ಲ; ಅದರಲ್ಲೂ ಮಾನವಲೋಕದ ಗುಹೆಗಳನ್ನು? ಎಂಬ ಗಾಢ ಸತ್ಯ ಈ ಕಾದಂಬರಿ ಓದುತ್ತಾ ಮತ್ತೆ ಹೊಳೆಯತೊಡಗುತ್ತದೆ.

ಈಚಿನ ದಶಕಗಳಲ್ಲಿ ಇಂಡಿಯಾದ ಗುಹೆಗಳನ್ನು ಹುಡುಕಿಕೊಂಡು ಬರುವ, ಅಲ್ಲಿ ಕೆಲ ಕಾಲ ಇದ್ದು ಹೋಗುವ ವಿದೇಶಿಯರು ಈ ಗುಹೆಗಳನ್ನು ರಮ್ಯವಾಗಿ ನೋಡಿ ನಿಗೂಢೀಕರಿಸುತ್ತಲೇ ಇರುವುದು ಎಲ್ಲರಿಗೂ ಗೊತ್ತಿದೆ. ಗೋಕರ್ಣದ ಸುತ್ತಣ ಗುಹೆಗಳಲ್ಲಿ ಕೆಲವು ದಶಕಗಳಿಂದ ಆಗಾಗ ಕಾಣಿಸಿಕೊಳ್ಳುತ್ತಿರುವ ಪಶ್ಚಿಮದ ಹಿಪ್ಪಿಗಳ ಅಥವಾ ‘ಆಧ್ಯಾತ್ಮಿಕ ಅನ್ವೇಷಕರ’ ಗುಹಾವಾಸ ಮೇಲುನೋಟಕ್ಕೆ ಕಾಣುವಷ್ಟು ಸರಳವಲ್ಲ! ಇವರಲ್ಲಿ ನಶಾಜೀವಿಗಳೆಷ್ಟೋ? ಇಂಡಿಯಾದಲ್ಲಿರುವ ಸೋಕಾಲ್ಡ್ ಅಧ್ಯಾತ್ಮಜೀವಿಗಳಂತೆ ಇವರಲ್ಲೂ ತಾವು ‘ಅಧ್ಯಾತ್ಮಜೀವಿ’ಗಳೆಂದು ಭ್ರಮಿಸಿರು ವವರೆಷ್ಟೋ? ಸುಮ್ಮನೆ ಅಲೆಯುವ ಅಬ್ಬೇಪಾರಿ ಗಳೆಷ್ಟೋ? ಯಾರ ಹಂಗೂ ಇಲ್ಲದೆ ತಮ್ಮ ಪಾಡಿಗೆ ತಾವು ಇರಲು ಬಯಸುವವರೆಷ್ಟೋ? ಈ ಗುಹಾಂತರಂಗ ಯಾರಿಗೆ ಗೊತ್ತು!

ಇದರಿಂದ ಯಾರಿಗೂ ತೊಂದರೆಯಿಲ್ಲದಿದ್ದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ; ಆ ಮಾತು ಬೇರೆ. ಆದರೆ ಆಧುನಿಕ ದೃಷ್ಟಿಕೋನದಿಂದ ನೋಡಿದರೆ, ಈ ಥರದ ‘ಗುಹಾಅಧ್ಯಾತ್ಮ’ ಒಂದು ಬಗೆಯ ಬೋರ್‌ಡಂನಿಂದ; ಶೂನ್ಯಭಾವದಿಂದ; ಮನುಷ್ಯರ ಸಹವಾಸ ಹುಟ್ಟಿಸಿದ ಸುಸ್ತಿನಿಂದ; ಏಕಾಂತದ ಆಸೆಯಿಂದ; ಅಥವಾ ಪಶ್ಚಿಮದಲ್ಲಿ ತಿಂದು ಕಟ್ಟರೆಯಾದ ಅತಿಯಾದ ಸುಖದಿಂದ... ಹೀಗೆ ಹಲವು ಹಿನ್ನೆಲೆಗಳ ಖಾಲಿತನದಿಂದಲೂ ಹುಟ್ಟಿರಬಹುದು ಎನ್ನಿಸುತ್ತದೆ. ಭಾರತದಲ್ಲಿ ಇವತ್ತಿಗೂ ಬೆಟ್ಟಗುಡ್ಡಗಳ ನಡುವಣ ಒಂಟಿ ಮನೆಗಳಲ್ಲಿ ಬದುಕುವ; ನಿತ್ಯ ಹೊಲ, ತೋಟ, ಗದ್ದೆಗಳಲ್ಲಿ ದುಡಿಯುತ್ತಾ, ‘ಪ್ರಕೃತಿಯ ಮಡಿಲಲ್ಲಿ ಬದುಕಿದ್ದೇವೆ’ ಎಂದು ಘೋಷಿಸದೆ ಕೆಲಸ ಮಾಡುವ ಕೋಟ್ಯಂತರ ಜನರನ್ನು ನೋಡುತ್ತಲೇ ಇರುತ್ತೇವೆ. ಇವರನ್ನು ಕಂಡವರಿಗೆ ‘ಪ್ರಕೃತಿಯ ಜೊತೆಗೆ ಬದುಕಲು ಬಂದಿದ್ದೇವೆ’ ಎನ್ನುವ ವಿದೇಶೀಯರ ಮಾತು ರೊಮ್ಯಾಂಟಿಕ್ ಅನ್ನಿಸದಿರದು!

ಈ ಬರಹದ ಶುರುವಿನಲ್ಲಿ ಹೇಳಿದ ರಶ್ಯನ್ ಮಹಿಳೆ ನಿಜಕ್ಕೂ ನೊಂದು ಕೂಡ ಗುಹೆಯಂಥ ಜಾಗ ಸೇರಿರಬಹುದು. ಫಾಸ್ಟರ್ ಕಾದಂಬರಿಯ ಅಡೆಲಾಳ ಗುಹಾನುಭವದ ಸಂಕೇತದ ನಿಗೂಢತೆ ನೀನಾ ಕತೆಗೂ ಅನ್ವಯಿಸುವಂತಿದೆ. ಆದರೆ ರಶ್ಯ ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವ ಕಾಲದಲ್ಲಿ ತನ್ನ ಇಬ್ಬರು ಮುಗ್ಧ ಹೆಣ್ಣುಮಕ್ಕಳನ್ನು ಭಾರತ ರಶ್ಯಕ್ಕೆ ಕಳಿಸದಿರಲಿ ಎಂಬ ಡ್ರೋರ್ ತಲ್ಲಣ ಮನ ಕರಗಿಸುತ್ತದೆ. ಹಾಗೆಯೇ ಮರಬಾರ್ ಗುಹೆಗಳ ಪದರುಗಳಂತೆ ಕತೆಯ ಮೇಲೆ ಕತೆ ಹೇಳುವಂತೆ ಕಾಣುವ ನೀನಾಳ ವಿಚಿತ್ರ ನಿಗೂಢ ಸ್ಥಿತಿ ಕೂಡ ಮರುಕ ಹುಟ್ಟಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಟರಾಜ್ ಹುಳಿಯಾರ್

contributor

Similar News