×
Ad

ಜಗದೇಕ ಐಲುದೊರೆ!

Update: 2025-06-23 11:25 IST

ಈತನ ಬುದ್ಧಿಗೆ ಯಾವುದೇ ಫಿಲ್ಟರ್ ಇರುವಂತಿಲ್ಲ. ನಾಲಗೆಗಂತೂ ಯಾವ ಕಡಿವಾಣವೂ ಇದ್ದಂತಿಲ್ಲ.

ಇಸ್ರೇಲ್ ಇದ್ದಕ್ಕಿದ್ದಂತೆ ಇರಾನ್‌ನ ಮೇಲೆ ಬಾಂಬ್ ದಾಳಿ ಮಾಡಿದರೆ, ಈತ ಅದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಒಂದು ದಿನ ಮಾತಾಡುತ್ತಾನೆ; ಮಾರನೆಯ ದಿನ ‘ಅದು ನನಗೆ ಮೊದಲೇ ಗೊತ್ತಿತ್ತು’ ಎನ್ನುತ್ತಾನೆ. ಎರಡು ದಿನ ಬಿಟ್ಟು ‘ಇರಾನ್, ಇಸ್ರೇಲ್ ಯುದ್ಧ ಕೊನೆಗಾಣಿಸುತ್ತೇನೆ’ ಎನ್ನುತ್ತಾನೆ; ಸಂಜೆಗಾಗಲೇ ‘ನಾನು ಏನು ಮಾಡುತ್ತೇನೋ ನನಗೇ ಗೊತ್ತಿಲ್ಲ’ ಎನ್ನುತ್ತಾನೆ. ‘ಇರಾನಿನ ಜನ ತಕ್ಷಣ ಟೆಹರಾನ್ ಸಿಟಿ ಖಾಲಿ ಮಾಡಬೇಕು’ ಎಂದು ವಾಶಿಂಗ್ಟನ್‌ನಿಂದಲೇ ಫರ್ಮಾನು ಹೊರಡಿಸುತ್ತಾನೆ. ಜನ ಕದಲದಿರುವುದನ್ನು ನೋಡಿ ನಾಳೆ ಆ ರಾಗ ಕೈಬಿಡುತ್ತಾನೆ. ಇದ್ದಕ್ಕಿದ್ದಂತೆ ಇಸ್ರೇಲ್ ಬೆಂಬಲಕ್ಕೆ ನಿಲ್ಲುವವನಂತೆ ಆಡುತ್ತಾನೆ. ಮಾರನೆಯ ದಿನ ‘ಎರಡು ವಾರ ಬಿಟ್ಟು ಹೇಳುತ್ತೇನೆ’ ಎನ್ನುತ್ತಾನೆ. ಎರಡೇ ದಿನದಲ್ಲಿ ಬಾಂಬ್ ದಾಳಿ ನಡೆಸಿ, ‘ಇರಾನಿನ ಪರಮಾಣು ಕೇಂದ್ರದ ಕತೆ ಮುಗಿಸಿದ್ದೇನೆ’ ಎಂದು ಘೋಷಿಸುತ್ತಾನೆ.

ಕಳೆದ ಮೂರ್ನಾಲ್ಕು ತಿಂಗಳಿಂದಲೂ ಈತನ ಆವುಟವನ್ನು ಲೋಕ ನೋಡುತ್ತಲೇ ಇದೆ: ಬೆಳಗಾಗೆದ್ದು ‘ಬೇರೆ ಬೇರೆ ದೇಶಗಳ ಸರಕುಗಳ ಮೇಲೆ ಐವತ್ತು ಪರ್ಸೆಂಟ್ ಸುಂಕ ಹೆಚ್ಚಿಸುತ್ತೇನೆ’ ಎನ್ನುತ್ತಾನೆ. ಮೂರು ದಿನ ಬಿಟ್ಟು, ‘ಇದನ್ನು ಮೂರು ತಿಂಗಳು ಮುಂದೂಡಿದ್ದೇನೆ’ ಎನ್ನುತ್ತಾನೆ. ಜಾಗತೀಕರಣ ಕಾಲದ ಮುಕ್ತ ಮಾರುಕಟ್ಟೆಯ ಮಾರಾಟದ ಲಾಭ ಚೀನಾಕ್ಕೆ ಹೋಗಿದೆ ಎಂಬುದು ಗೊತ್ತಾಗತೊಡಗಿದಂತೆ, ಈತ ‘ಈ ಜಾಗತೀಕರಣವೇ ಸರಿಯಿಲ್ಲ’ ಎನ್ನುತ್ತಾನೆ. ಜಾಗತೀಕರಣದ ಕಾಲದಲ್ಲಿ ಯಾವದೇ ದೇಶ ಬೇರಾವುದೇ ದೇಶದಲ್ಲಿ ಏನನ್ನಾದರೂ ಮಾರಾಟ ಮಾಡಬಹುದು ಎಂಬ ಆರ್ಥಿಕ ನೀತಿಯನ್ನು ಜೋರು ಗಂಟಲಿನಿಂದ ಜಾರಿಗೆ ತಂದ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದ್ದದ್ದು ತನ್ನ ದೇಶವೇ ಎಂಬುದನ್ನೇ ಮರೆಯುತ್ತಾನೆ.

ಈತ ಯಾರೆಂಬುದು ನಿಮಗೆ ಗೊತ್ತಿದೆ. ಈತನ ಹೆಸರು ಡೊನಾಲ್ಡ್ ಟ್ರಂಪ್. ಅಮೆರಿಕದ ಈವರೆಗಿನ ಅಧ್ಯಕ್ಷರಲ್ಲೆಲ್ಲ ಅತ್ಯಂತ ಮಾನಸಿಕ ಅಸಮತೋಲನವುಳ್ಳ ವ್ಯಕ್ತಿ ಎಂದು ಹೆಸರಾಗಿರುವ ವ್ಯಕ್ತಿ. ಈತನ ಕೈಯಲ್ಲಿ ನ್ಯೂಕ್ಲಿಯರ್ ಪವರ್ ನಿಯಂತ್ರಣದ ಅಧಿಕಾರ ಇರುವುದು ಅಪಾಯಕಾರಿ ಎಂದು ಅಮೆರಿಕದ ತಜ್ಞರೇ ಹೇಳಿಯಾಗಿದೆ.

‘ನನಗೆ ಅಮೆರಿಕದ ಹಿತಾಸಕ್ತಿ ಮೊದಲು; ಅಮೆರಿಕ ಬೇರೆ ದೇಶಗಳ ಯುದ್ಧದಲ್ಲಿ ತಲೆಹಾಕುವುದಿಲ್ಲ’ ಎಂದು ಈ ವ್ಯಕ್ತಿ ಚುನಾವಣಾ ಪ್ರಚಾರ ಮಾಡಿದ. ‘ನಾನು ಎಲ್ಲೆಡೆ ಶಾಂತಿಸಂಧಾನ ಮಾಡುತ್ತೇನೆ; ಅಧ್ಯಕ್ಷನಾದ ಎರಡೇ ದಿನದಲ್ಲಿ ರಶ್ಯ, ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗಾಣಿಸುತ್ತೇನೆ’ ಎಂದ. ಅಧ್ಯಕ್ಷನಾದ ಮೇಲೆ, ರಶ್ಯ ತನ್ನ ಮಾತಿಗೆ ಕ್ಯಾರೇ ಎನ್ನುವುದಿಲ್ಲ ಎಂಬುದು ಗೊತ್ತಾದ ತಕ್ಷಣ, ಕಮಕ್ ಕಿಮಕ್ ಎನ್ನದೆ ಸುಮ್ಮನಾದ. ಈಚೆಗಂತೂ ಉಕ್ರೇನ್ ಮೇಲೆ ನಡೆಯುತ್ತಿರುವ ರಶ್ಯದ ದಾಳಿಯ ಬಗ್ಗೆ ಒಂದು ಸೊಲ್ಲು ಕೂಡ ಟ್ರಂಪ್ ಬಾಯಲ್ಲಿ ಬಂದಂತಿಲ್ಲ.

ತಾನು ಮಾತಾಡಿದ್ದು ತಪ್ಪು ಎಂದು ಯಾರಾದರೂ ಟ್ರಂಪ್‌ಗೆ ತೋರಿಸಿದರೆ, ಅದಕ್ಕೆ ಈತನಿಂದ ಉತ್ತರವೇ ಬರುವುದಿಲ್ಲ. ಸಿಎನ್‌ಎನ್ ಟೆಲಿವಿಶನ್ ಚಾನೆಲ್‌ನ ಹುಡುಗಿ ಈತನಿಗೊಂದು ಪ್ರಶ್ನೆ ಕೇಳಿದರೆ, ‘ನಿನ್ನ ಸಿಎನ್‌ಎನ್ ಚಾನೆಲ್‌ನ ಯಾರೂ ನೋಡಲ್ಲ; ಅದು ಪ್ರಾಪಗ್ಯಾಂಡಾ ಟಿ.ವಿ.’ ಎನ್ನುತ್ತಾನೆ! ಈಚೆಗೆ ಈತ ಭಾರತ, ಪಾಕಿಸ್ತಾನಗಳ ನಡುವಣ ಯುದ್ಧವನ್ನು ತಾನೇ ನಿಲ್ಲಿಸಿದ್ದು ಎಂದು ಟ್ರಂಪೆಟ್ ಬಾರಿಸಿದ. ಭಾರತ ಪ್ರತಿಭಟಿಸಿದ ತಕ್ಷಣ, ‘ಇಲ್ಲ! ಇಲ್ಲ! ಎರಡೂ ದೇಶಗಳ ಜಾಣರು ಯುದ್ಧ ನಿಲ್ಲಿಸಿದರು’ ಎಂದ; ನಿನ್ನೆ ‘ಇಷ್ಟೆಲ್ಲ ಮಾಡಿದರೂ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿಲ್ಲ’ ಎಂದು ಅಲವತ್ತುಕೊಂಡ; ಮಾರನೆಯ ದಿನವೇ ಜಗತ್ತಿನ ಶಾಂತಿ ಕದಡಿದ. ಹುಚ್ಚಿಗೆ ನೊಬೆಲ್ ಪ್ರಶಸ್ತಿ ಇರುವಂತಿಲ್ಲ!

ನಿಮಗೆ ನೆನಪಿರಬಹುದು: ಈ ಟ್ರಂಪ್ ೨೦೨೧ರಲ್ಲಿ ಅಮೆರಿಕದ ಅಧ್ಯಕ್ಷಗಿರಿಯ ಚುನಾವಣೆ ಸೋತಾಗ ಚುನಾವಣೆಯೇ ಸರಿಯಾಗಿ ನಡೆದಿಲ್ಲ ಎಂದು ತನ್ನದೇ ಅಮೆರಿಕದ ವೈಟ್‌ಹೌಸ್ ಮೇಲೆ ಗೂಂಡಾಗಳನ್ನು ಛೂ ಬಿಟ್ಟ ಆಪಾದನೆಗೆ ಗುರಿಯಾದವನು; ಈ ಸಲ ಅಧಿಕಾರಕ್ಕೆ ಬಂದ ತಕ್ಷಣ, ಜೈಲಿನಲ್ಲಿದ್ದ ಆ ಗೂಂಡಾಗಳನ್ನು ಸ್ವಾತಂತ್ರ್ಯಯೋಧರೆಂಬಂತೆ ಬಿಡುಗಡೆಗೊಳಿಸಿದವನು! ಅಮೆರಿಕದ ಸಂವಿಧಾನದ ಪ್ರಕಾರ ಒಬ್ಬ ವ್ಯಕ್ತಿ ಎರಡಕ್ಕಿಂತ ಹೆಚ್ಚು ಸಲ ಅಧ್ಯಕ್ಷನಾಗುವಂತಿಲ್ಲ; ಆದರೂ ಮತ್ತೆ ನಾನೇ ಯಾಕೆ ಅಧ್ಯಕ್ಷನಾಗಬಾರದು ಎಂಬ ರಾಗ ಶುರು ಮಾಡಿರುವ ಟ್ರಂಪ್, ಮೊನ್ನೆ ತನ್ನ ಎಪ್ಪತ್ತೊಂಬತ್ತನೇ ಹುಟ್ಟುಹಬ್ಬದ ದಿನವೇ ಮಿಲಿಟರಿ ಪೆರೇಡ್ ಮಾಡಿಸಿಕೊಂಡ. ಈ ಪೆರೇಡ್ ನೋಡಲು ಭಾರೀ ಸಂಖ್ಯೆಯಲ್ಲಿ ಜನ ಬರದಿದ್ದರೂ ‘ಭಾರೀ ಸಕ್ಸಸ್’ ಅಂದ. ‘ಆ ಹಮಾಮಾನ ತಜ್ಞರು ಅವತ್ತು ನೂರಕ್ಕೆ ನೂರು ಪರ್ಸೆಂಟ್ ಮಳೆ ಬರುತ್ತೆ ಎಂದಿದ್ದರೂ ಮಳೆ ಬರಲೇ ಇಲ್ಲ, ನೋಡಿ!’ ಎನ್ನುತ್ತಾ ತಾನೇ ಮಳೆ ನಿಲ್ಲಿಸಿದವನಂತೆ ಹೆಮ್ಮೆಪಟ್ಟ!

ವಲಸೆ ಬಂದವರ ದೇಶವೇ ಆಗಿರುವ ಅಮೆರಿಕದಲ್ಲಿ ಶ್ರಮಜೀವಿ ವಲಸಿಗರ ಬಗ್ಗೆ ಅತ್ಯಂತ ಕ್ರೂರವಾಗಿ ವರ್ತಿಸುತ್ತಾ ಹಿಂಸಾನಂದ ಅನುಭವಿಸುತ್ತಿರುವ ಟ್ರಂಪ್, ಅಮೆರಿಕದಲ್ಲಿ ಯಾವ ಥರದ ಹಿಂಸೆ ನಡೆದರೂ ಅದು ಕಮ್ಯುನಿಸ್ಟರಿಂದ ಎಂದು ಸಲೀಸಾಗಿ ಹೇಳಬಲ್ಲವನು. ಹೊಗಳಿಕೆಗೆ ಉಬ್ಬುವ ಟ್ರಂಪ್ ದೌರ್ಬಲ್ಯ ಇಸ್ರೇಲಿನ ಯುದ್ಧದಾಹಿ ಪ್ರಧಾನಿ ನೆತನ್ಯಾಹುಗೆ ಗೊತ್ತು. ಹಲವಾರು ವರ್ಷಗಳಿಂದ ಎಲ್ಲೆಲ್ಲಿ ಇರಾನ್ ನ್ಯೂಕ್ಲಿಯರ್ ಬಾಂಬ್ ತಯಾರಿಸುತ್ತಿದೆ ಎಂದು ಮಕ್ಕಳಿಗೆ ಚಿತ್ರ ಬರೆದು ತೋರಿಸುವಂತೆ ತೋರಿಸುತ್ತಲೇ ಇದ್ದ ಈ ನೆತನ್ಯಾಹು ಈಗ ಇದೇ ಪಿಳ್ಳೆ ನೆವದಲ್ಲಿ ಇರಾನ್‌ನ ಮೇಲೆ ದಾಳಿ ಶುರು ಮಾಡಿದ್ದಾನೆ. ಈತನ ಮಾತನ್ನೇ ಟ್ರಂಪ್ ನೆಚ್ಚಿ, ‘ಅಮೆರಿಕದ ಸೆಕ್ಯುರಿಟಿ ಏಜೆನ್ಸಿ ಇರಾನ್ ಬಗ್ಗೆ ಕೊಡುತ್ತಿರುವ ಮಾಹಿತಿಯೇ ತಪ್ಪು! ಅಮೆರಿಕದ ಸೆಕ್ಯುರಿಟಿ ಏಜೆನ್ಸಿಗೆ ಏನೂ ಗೊತ್ತಿಲ್ಲ’ ಎಂದು ರಾಗ ಹಾಡಿದವನು, ಇದೀಗ ತಾನೇ ಎಲ್ಲವನ್ನೂ ಸಂಶೋಧನೆ ಮಾಡಿದವನಂತೆ ಯುದ್ಧಕ್ಕೆ ಹೊರಟಂತಿದೆ.

‘ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ಸರಿ’ (ಎವೆರಿಥಿಂಗ್ ಈಸ್ ಫೇರ್ ಇನ್ ಲವ್ ಆಂಡ್ ವಾರ್) ಎಂಬ ಮಾತು ಹದಿನಾರನೆಯ ಶತಮಾನದ ಜಾನ್ ಲಿಲಿಯ ‘ಯೂಫಿಯಸ್: ದ ಅನಾಟಮಿ ಆಫ್ ವಿಟ್’ ಎನ್ನುವ ಕಾದಂಬರಿಯಲ್ಲಿದೆ. ಈ ಮಾತು ವ್ಯಂಗ್ಯದಲ್ಲಿ ಹೇಳಿದ್ದೋ, ಸಿಟ್ಟಿನಲ್ಲಿ ಹೇಳಿದ್ದೋ ಆಗಿರಲೂಬಹುದು. ಇದನ್ನು ಈ ಕಾಲದಲ್ಲಿ ರಾಜಕೀಯವೂ ಸೇರಿದಂತೆ ಎಲ್ಲ ಕಡೆ ವಿಸ್ತರಿಸಿಕೊಂಡು ರಾಜಕಾರಣಿಗಳು, ವ್ಯಾಪಾರಿಗಳು ನಡೆಸುತ್ತಿರುವ ಭಂಡತನ ಎಲ್ಲರಿಗೂ ಗೊತ್ತಿದೆ. ಆದರೆ ರಾಜಕೀಯದಲ್ಲಿ ಎಲ್ಲವೂ ಸರಿ ಎಂಬ ಈ ಠೇಂಕಾರ ಬಲಿಷ್ಠ ಎನ್ನಲಾಗುವ ರಾಷ್ಟ್ರಗಳು ಹಾಗೂ ಮೆಜಾರಿಟಿಯಿರುವ ಆಳುವ ಪಕ್ಷಗಳು ಏನು ಬೇಕಾದರೂ ಮಾಡುವಂತೆ ಮಾಡಿಬಿಟ್ಟಿದೆ. ದೇಶಗಳನ್ನು ಆಳುವ ಜನರ ಮನಸ್ಸಿನಲ್ಲಿ ಹಳೆಯ ಕಾಲದ ಫ್ಯೂಡಲ್, ಜಮೀನ್ದಾರಿ ಗತ್ತು ಹೆಚ್ಚಾಗಿದೆ. ಅದರಲ್ಲೂ ಡಬ್ಬಾ ಸೂಪರ್‌ಮ್ಯಾನ್ ಸಿನೆಮಾಗಳನ್ನು ತಯಾರಿಸುವ, ಹಾಗೂ ಅದನ್ನು ಹೆಚ್ಚು ಜನ ನೋಡುವ ಅಮೆರಿಕದಲ್ಲಿ ಈ ಫ್ಯೂಡಲ್ ಧೋರಣೆಯನ್ನು ಮೆಚ್ಚುವವರ ಸಂಖ್ಯೆಯೂ ಹೆಚ್ಚಿದೆ.

ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷನಾಗಿದ್ದಾಗ ಈ ಫ್ಯೂಡಲ್ ಧೋರಣೆ, ಠೇಂಕಾರದ ಭಾಷೆ ಕೊಂಚ ಕಡಿಮೆಯಾಗಿತ್ತು. ಕಾರಣ, ಒಬಾಮಾಗೆ ನಾನೂರು ವರ್ಷಗಳ ಕೆಳಗೆ ತನ್ನ ಆಫ್ರಿಕನ್ ಹಿರೀಕರನ್ನು ಅಮೆರಿಕಕ್ಕೆ ಗುಲಾಮರಾಗಿ ಸಾಗಿಸಿದಾಗ ಅವರು ಪಟ್ಟಿರುವ ಅವಮಾನ, ಯಾತನೆಗಳ ಅನುಭವದ ಬಗ್ಗೆ ಅರಿವಿತ್ತು; ಹೀಗಾಗಿ ಒಬಾಮಾ ಭಾಷೆಯೇ ಬೇರೆಯಾಗಿತ್ತು. ಸೂಪರ್ ಪವರ್ ಎಂಬ ಅಹಂಕಾರದಲ್ಲಿ ಮುಳುಗಿದ್ದ ದೇಶದಲ್ಲಿ ಒಬಾಮಾರ ನೋವಿನ ಅನುಭವದಿಂದಾಗಿ ಅಷ್ಟಿಷ್ಟಾದರೂ ಮಾನವೀಯ ನಡೆನುಡಿ ಆಡಳಿತವಲಯದಲ್ಲಿ ಮೂಡಿತ್ತು. ಅಮೆರಿಕದ ಅಸಹಾಯಕ ವರ್ಗಗಳ ಆರೋಗ್ಯ ಕಾಪಾಡಿದ ‘ಒಬಾಮಾ ಹೆಲ್ತ್ ಕೇರ್’ ಶುರುವಾಗಿದ್ದು ಆಗ. ಕೊಂಚ ಯೋಚಿಸಿ, ತೂಕವಾಗಿ ಮಾತನಾಡುವ ನಾಯಕತ್ವ ಅಮೆರಿಕದಲ್ಲಿ ಕಾಣಿಸಿಕೊಂಡದ್ದು ಒಬಾಮಾ ಕಾಲದಲ್ಲಿ.

ಆದರೆ ಮಾನವೀಯ ಭಾಷೆಗಿಂತ ಅಗ್ಗದ ಸುಳ್ಳಿನ ಭಾಷೆಯೇ ಮಾಧ್ಯಮಗಳಿಗೆ ಹಾಗೂ ಈ ಮಾಧ್ಯಮಗಳಿಂದ ತಮ್ಮ ಅಭಿರುಚಿ ಕೆಡಿಸಿಕೊಂಡ ಜನಕ್ಕೆ ಪ್ರಿಯವಾಗುತ್ತಿರುವ ಕಾಲದಲ್ಲಿ ಟ್ರಂಪ್ ಥರದವರು ಇಡೀ ಲೋಕಕ್ಕೆ ಸೃಷ್ಟಿಸಲಿರುವ ಅಂತಿಮ ನರಕದ ಅರಿವು ಅವರಿಗೆ ಇದ್ದಂತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಟರಾಜ್ ಹುಳಿಯಾರ್

contributor

Similar News