ಅಜ್ಮಾನ್, ಯುಎಇ : ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (GMU)ಯ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ‘ವೈಟ್ ಕೋಟ್ 2026’ ತುಂಬೆ ಮೈದಾನದಲ್ಲಿ ಜರುಗಿತು. ಈ ಹೊಸ ಪ್ರವೇಶದೊಂದಿಗೆ, GMU 115 ದೇಶಗಳ ವಿದ್ಯಾರ್ಥಿಗಳನ್ನು ಹೊಂದಿರುವ ಅಪರೂಪದ ಮೈಲಿಗಲ್ಲನ್ನು ತಲುಪಿದೆ.

ನೂತನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ತುಂಬೆ ಗ್ರೂಪ್ ನ ಸಂಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದೀನ್ ಅವರು, “ಗಲ್ಫ್ ವಲಯದ ಅಗ್ರಮಾನ್ಯ ವಿಶ್ವವಿದ್ಯಾನಿಲಯವಾಗಿದ್ದ ನಾವು, ಇಂದು ವಿಶ್ವದ ಅತ್ಯುತ್ತಮ ವೈದ್ಯಕೀಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿ ಹೊರಹೊಮ್ಮಿದ್ದೇವೆ” ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಕುಲಪತಿ ಪ್ರೊ.ಮಂದಾ ವೆಂಕಟರಮಣ ಅವರು, “ಕೇವಲ ಬಿಳಿ ಕೋಟ್ ಧರಿಸಿದ ಮಾತ್ರಕ್ಕೆ ಯಾರೂ ವೈದ್ಯರಾಗುವುದಿಲ್ಲ. ವರ್ಷಗಳ ಕಾಲ ಉತ್ತಮ ಪ್ರಶ್ನೆಗಳನ್ನು ಕೇಳುತ್ತಾ ಕಲಿಯುವುದರಿಂದ ಮಾತ್ರ ಅದು ಸಾಧ್ಯವಾಗುತ್ತದೆ. ಸದಾ ಕಲಿಯುವ ಹಂಬಲವಿರಲಿ, ನಿಮಗೆ ಇನ್ನೂ ತಿಳಿಯದಿರುವ ವಿಷಯಗಳ ಬಗ್ಗೆ ಪ್ರಾಮಾಣಿಕವಾಗಿರಿ ಮತ್ತು ವಿಜ್ಞಾನದ ಮುಂದೆ ಕರುಣೆ-ಮಾನವೀಯತೆ ಎಂದಿಗೂ ಮರೆಯಾಗದಂತೆ ನೋಡಿಕೊಳ್ಳಿ” ಎಂದು ಹೇಳಿದರು.

ದಂತವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಫಿಸಿಯೋಥೆರಪಿ, ಮೆಡಿಕಲ್ ಲ್ಯಾಬೊರೇಟರಿ ಸೈನ್ಸಸ್, ಅನೆಸ್ತೇಷಿಯಾ ಟೆಕ್ನಾಲಜಿ, ಮೆಡಿಕಲ್ ಇಮೇಜಿಂಗ್ ಸೈನ್ಸಸ್, ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿ, ಆಪ್ಟೋಮೆಟ್ರಿ, ಹೆಲ್ತ್‌ಕೇರ್‌ ಮ್ಯಾನೇಜ್ಮೆಂಟ್ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಎಐ ವಿಭಾಗಗಳ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಬಳಿಕ ಡಾಕ್ಟರ್ ಆಫ್ ಮೆಡಿಸಿನ್ (MD), ಗ್ರಾಜುಯೇಟ್ ಎಂಟ್ರಿ ಎಂಡಿ, ಬಯೋಮೆಡಿಕಲ್ ಸೈನ್ಸ್ ಹಾಗೂ ತುಂಬೆ ಇಂಟರ್ನ್ಯಾಷನಲ್ ಪಾಥ್ವೇ ಪ್ರೋಗ್ರಾಂನ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿದರು.

ಪಶುವೈದ್ಯಕೀಯ ವೈಟ್ ಕೋಟ್ ಸಮಾರಂಭ:

ಯುಎಇಯಲ್ಲೇ ಮೊದಲ ಬಾರಿಗೆ ನಡೆದ ಪಶುವೈದ್ಯಕೀಯ ವೈಟ್ ಕೋಟ್ ಸಮಾರಂಭವು ಅಪರಾಹ್ನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ತುಂಬೆ ಮೊಯ್ದೀನ್ ವಹಿಸಿದ್ದರು.

ಹವಾಮಾನ ಬದಲಾವಣೆ ಮತ್ತು ಪರಿಸರ ಸಚಿವಾಲಯದ ಪ್ರಾಣಿ ಆರೋಗ್ಯ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕಿ ಡಾ.ಕಲ್ತಮ್ ಅಲಿ ಕಯಾಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಜಿಎಂಯುನ ಪಶುವೈದ್ಯಕೀಯ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ತೊಡಿಸಿದರು.

ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯನ್ನು 1998ರಲ್ಲಿ ಅಜ್ಮಾನ್ ನಲ್ಲಿ ಸ್ಥಾಪಿಸಲಾಗಿದ್ದು, ಇದು ಈ ವಲಯದ ಪ್ರಮುಖ ಖಾಸಗಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ತುಂಬೆ ಗ್ರೂಪ್‌ನ ಭಾಗವಾಗಿರುವ GMUನಲ್ಲಿ ವೈದ್ಯಕೀಯ, ದಂತವೈದ್ಯಕೀಯ, ಫಾರ್ಮಸಿ, ಶುಶ್ರೂಷೆ, ಆರೋಗ್ಯ ವಿಜ್ಞಾನ, ಪಶುವೈದ್ಯಕೀಯ, ಹೆಲ್ತ್‌ಕೇರ್‌ ಮ್ಯಾನೇಜ್ಮೆಂಟ್ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಎಐ ವಿಷಯಗಳನ್ನು ಬೋಧಿಸಲಾಗುತ್ತದೆ.

ಈ ವಲಯದ ಅತಿ ದೊಡ್ಡ ಖಾಸಗಿ ಶೈಕ್ಷಣಿಕ ಆರೋಗ್ಯ ವ್ಯವಸ್ಥೆಯಾಗಿರುವ ತುಂಬೆ ಹೆಲ್ತ್‌ಕೇರ್‌ ನೆಟ್ವರ್ಕ್ ಮೂಲಕ ಕ್ಲಿನಿಕಲ್ ತರಬೇತಿಗಾಗಿ 3,100ಕ್ಕೂ ಹೆಚ್ಚು ಹಾಸಿಗೆಗಳ ಸೌಲಭ್ಯವನ್ನು GMU ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor