ಹಾಸನದ ಯುವಕ ಗೋವಾದಲ್ಲಿ ಹೃದಯಾಘಾತದಿಂದ ಮೃತ್ಯು
Update: 2026-01-02 14:05 IST
ಸಾಂದರ್ಭಿಕ ಚಿತ್ರ | PC : gemini
ಹಾಸನ: ಆಲೂರು ತಾಲೂಕಿನ ಕೆ. ಹೊಸಳ್ಳಿ ಗ್ರಾಮದ ಯುವಕ ರಕ್ಷಿತ್ (26) ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಡಿ. 31ರಂದು ಸಂಬಂಧಿಕರಾದ ಚಿದಂಬರಂ ಹಾಗೂ ಪ್ರವೀಣ್ ಅವರೊಂದಿಗೆ ರಕ್ಷಿತ್ ಗೋವಾಗೆ ತೆರಳಿದ್ದ. ನ್ಯೂ ಇಯರ್ ಆಚರಣೆ ಮುಗಿದ ಬಳಿಕ ಮೂವರು ಜ.1ರಂದು ತಿಂಡಿ ಸೇವಿಸಿ ಗೋವಾದಲ್ಲಿ ತಿರುಗಾಡುತ್ತಿದ್ದ ವೇಳೆ, ರಕ್ಷಿತ್‌ಗೆ ಏಕಾಏಕಿ ತೀವ್ರ ಹೃದಯಾಘಾತ ಸಂಭವಿಸಿದೆ.
ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯದಲ್ಲೇ ರಕ್ಷಿತ್ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಘಟನೆಯ ಸುದ್ದಿ ತಿಳಿದ ನಂತರ ಜೊತೆಯಲ್ಲಿದ್ದ ಪ್ರವೀಣ್ ಮತ್ತು ಚಿದಂಬರಂ ಸೇರಿದಂತೆ ಕುಟುಂಬಸ್ಥರು ಮೃತದೇಹವನ್ನು ಗೋವಾದಿಂದ ಸ್ವಗ್ರಾಮಕ್ಕೆ ತರಿಸಿದ್ದಾರೆ.