ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ; ಶಾಸಕ ಪ್ರಕಾಶ್ ಕೋಳಿವಾಡಗೆ ದಂಡ
ಹಾವೇರಿ: ಹೆಲ್ಮೆಟ್ ಧರಿಸದೆ ಬುಲೆಟ್ ಬೈಕ್ ಚಲಾಯಿಸಿದ್ದ ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಅವರಿಗೆ ಟ್ರಾಫಿಕ್ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ.
ಆ.25ರಂದು ಶಾಸಕ ಪ್ರಕಾಶ್ ಕೋಳಿವಾಡ ಅವರು ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದರ ಬೆನ್ನಲ್ಲೇ ರಾಣೇಬೆನ್ನೂರು ಟ್ರಾಫಿಕ್ ಪೊಲೀಸರು ಶಾಸಕರಿಗೆ ನೋಟಿಸ್ ಕಳುಹಿಸಿದ್ದು, ನೋಟಿಸ್ ಆಧಾರದ ಮೇಲೆ ಪ್ರಕಾಶ್ ಕೋಳಿವಾಡ ಅವರು 500 ದಂಡ ಪಾವತಿಸಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪೊಲೀಸರ ಕ್ರಮವನ್ನು ಸ್ವಾಗತಿಸಿರುವ ಅವರು, ಎಸ್ಪಿ ಅವರು ನೋಟಿಸ್ ನೀಡಿದ್ದು, ಪೊಲೀಸ್ ಸಿಬ್ಬಂದಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಅವರ ಕರ್ತವ್ಯವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.