ಹಾವೇರಿ: ತಿಮ್ಮಾಪುರ ಗ್ರಾಮದಲ್ಲಿ ದಾರುಲ್ ಫೌಝ್ ರಿಫಾರ್ಮ್ ಟ್ರಸ್ಟ್‌ನ ‘ಕನಸಿನ ಸೂರು’ ಯೋಜನೆಯಡಿ ನೂತನವಾಗಿ ನಿರ್ಮಿಸಲಾದ ಇಮಾಮ್ ರಝಾ ಮಸೀದಿಯ ಉದ್ಘಾಟನಾ ಸಮಾರಂಭವು ಅತ್ಯಂತ ಸಂಭ್ರಮ ಹಾಗೂ ಯಶಸ್ವಿಯಾಗಿ ನೆರವೇರಿತು.

ತಿಮ್ಮಾಪುರ ಗ್ರಾಮದಲ್ಲಿ ದಾರುಲ್ ಫೌಝ್ ರಿಫಾರ್ಮ್ ಟ್ರಸ್ಟ್ (ರಿ.) ವತಿಯಿಂದ ‘ಕನಸಿನ ಸೂರು’ ಯೋಜನೆಯಡಿ ನಿರ್ಮಿಸಲಾದ ಇಮಾಮ್ ರಝಾ ಮಸೀದಿಯ ಉದ್ಘಾಟನಾ ಸಮಾರಂಭವು ನಡೆಯಿತು. ಮಸೀದಿಯ ಖತೀಬರು ಕಿರಾಅತ್ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾರುಣ್ಯ ನಿಧಿ ಕರ್ನಾಟಕ ಸಂಸ್ಥೆಯ ಜಲೀಲ್ ಕಲಾರ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಅತಿಥಿಯಾಗಿ ಆಗಮಿಸಿದ್ದ ಮಹಮ್ಮದ್ ಸಾದಿಕ್ ಜಾರತ್ತಾರ್ ಅವರು ಮಾತನಾಡಿ, ಸಮಾಜದಲ್ಲಿ ಪರಸ್ಪರ ಪ್ರೀತಿ, ಸಹಬಾಳ್ವೆ ಮತ್ತು ಸೌಹಾರ್ದತೆಯನ್ನು ಬೆಳೆಸುವ ಅಗತ್ಯವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ಕಾನೂನು ಪದವಿ ಪೂರ್ಣಗೊಳಿಸಿ ಕರ್ನಾಟಕ ರಾಜ್ಯ ಕಾನೂನು ಪರಿಷತ್ತಿನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿರುವ ದಾರುಲ್ ಫೌಝ್ ರಿಫಾರ್ಮ್ ಟ್ರಸ್ಟ್‌ನ ಕಾರ್ಯದರ್ಶಿ ಅಡ್ವೊಕೇಟ್ ಸಮದ್, ಟ್ರಸ್ಟ್‌ನ ಸಂಯೋಜಕ ಅಡ್ವೋಕೇಟ್ ಸಂಶುದ್ದೀನ್ ಕರೈ ಹಾಗೂ ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಟ್ರಸ್ಟ್‌ನ ಹಿತೈಷಿ ಅಡ್ವೊಕೇಟ್ ಹರೀಶ್ ಪೂಜಾರಿ ಅವರನ್ನು ಸ್ಮರಣಿಕೆ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ದಾರುಲ್ ಫೌಝ್ ರಿಫಾರ್ಮ್ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಶೇಕ್ ಶಾಝ್ ಮೂಲ್ಕಿ, ಅಧ್ಯಕ್ಷ ಶಂಶೀರ್ ಎಣ್ಣೆಹೊಳೆ, ಗೌರವಾಧ್ಯಕ್ಷ ಶಾಹುಲ್ ಕಾಶಿಪಟ್ನ, ಪ್ರಧಾನ ಕಾರ್ಯದರ್ಶಿ ನಿಸಾರ್ ಮಂಗಳೂರು, ಖಜಾಂಚಿ ಮುಸ್ತಫಾ ಬೋಳಿಯಾರ್ ಹಾಗೂ ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮಲಾರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ

ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಿಮ್ಮಾಪುರ ಗ್ರಾಮದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ತಿಮ್ಮಾಪುರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಮಸೀದಿಯ ಅಧ್ಯಕ್ಷರು ಮತ್ತು ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದಾರುಲ್ ಫೌಝ್ ರಿಫಾರ್ಮ್ ಟ್ರಸ್ಟ್‌ನ ಅಧ್ಯಕ್ಷ ಶಂಶೀರ್ ಎಣ್ಣೆಹೊಳೆ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು ಸ್ವಾತಂತ್ರ್ಯ, ಸಂವಿಧಾನ, ಸಾಮಾಜಿಕ ನ್ಯಾಯ ಹಾಗೂ ಕೋಮು ಸೌಹಾರ್ದತೆಯ ಮೌಲ್ಯಗಳನ್ನು ಬಲಪಡಿಸುವ ಅಗತ್ಯವನ್ನು ಪ್ರತಿಪಾದಿಸಿದರು.

ಕಾರ್ಯಕ್ರಮವನ್ನು ಅಬ್ದುಲ್ ರಹಿಮಾನ್ ಮಲಾರ್ ನಿರೂಪಿಸಿದರು. ಅಡ್ವೊಕೇಟ್ ಸಂಶುದ್ದೀನ್ ಕರೈ ವಂದಿಸಿದರು.

ಮಸೀದಿ ಉದ್ಘಾಟನೆ ಹಾಗೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ಧಾರ್ಮಿಕ ಆಚರಣೆಯೊಂದಿಗೆ ಸಾಮಾಜಿಕ ಸೌಹಾರ್ದತೆ ಮತ್ತು ರಾಷ್ಟ್ರಪ್ರೇಮದ ಸಂದೇಶವನ್ನು ಸಾರುವ ಮೂಲಕ ಯಶಸ್ವಿಯಾಗಿ ಸಂಪನ್ನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor