ಜಿಮ್ ನಲ್ಲಿ ಬೆನ್ನುನೋವು ಬಂದಲ್ಲಿ ಏನು ಮಾಡಬೇಕು?
ಸಾಂದರ್ಭಿಕ ಚಿತ್ರ | Photo Credit : freepik
ಸಕ್ರಿಯವಾಗಿರುವುದು ಆರೋಗ್ಯಕರವಾಗಿದ್ದರೂ ಸಹ ತಪ್ಪು ಕಸರತ್ತು, ತೀವ್ರವಾದ ವ್ಯಾಯಾಮ ಅಥವಾ ಕೆಲವೊಂದು ಭಂಗಿಗಳ ಆಯ್ಕೆ ಅದಾಗಲೇ ಇರುವ ನೋವು ಅಥವಾ ಗಾಯಗಳನ್ನು ಹದಗೆಡಿಸಬಹುದು.
ಜಿಮ್‌ಗೆ ಹೋಗಿ ವ್ಯಾಯಾಮ ಮಾಡುವವರಿಗೆ ಬೆನ್ನು ನೋವು ಸಾಮಾನ್ಯ ಸಮಸ್ಯೆ. ಅನೇಕ ಮಂದಿ ಯಾವ ಚಲನೆ ಉತ್ತಮ ಮತ್ತು ಯಾವುದು ದೇಹಕ್ಕೆ ಸೂಕ್ತವಲ್ಲ ಎಂದು ತಿಳಿದುಕೊಳ್ಳದೆ ವ್ಯಾಯಾಮ ಮುಂದುವರಿಸಿ ಇನ್ನಷ್ಟು ಅನಾರೋಗ್ಯವನ್ನು ತಂದುಕೊಳ್ಳುತ್ತಾರೆ.
ಸಕ್ರಿಯವಾಗಿರುವುದು ಆರೋಗ್ಯಕರವಾಗಿದ್ದರೂ ಸಹ ತಪ್ಪು ಕಸರತ್ತು, ತೀವ್ರವಾದ ವ್ಯಾಯಾಮ ಅಥವಾ ಕೆಲವೊಂದು ಭಂಗಿಗಳ ಆಯ್ಕೆ ಅದಾಗಲೇ ಇರುವ ನೋವು ಅಥವಾ ಗಾಯಗಳನ್ನು ಹದಗೆಡಿಸಬಹುದು. ಹೀಗಾಗಿ ಜಿಮ್ ದಿನಚರಿಯನ್ನು ಒಟ್ಟು ಆರೋಗ್ಯಕ್ಕೆ ಸೂಕ್ತವಾಗುವಂತೆ ಬಳಸಿಕೊಳ್ಳುವುದು ಅತಿ ಮುಖ್ಯ.
ಫಿಟ್‌ನೆಸ್ ವೃತ್ತಿಪರರ ಪ್ರಕಾರ ಬೆನ್ನು ನೋವು ಬಂದಾಕ್ಷಣ ಜಿಮ್ ತ್ಯಜಿಸುವುದು ಸೂಕ್ತವಲ್ಲ. ಬದಲಾಗಿ ಬೆನ್ನುಮೂಳೆಯ ಮೇಲೆ ಒತ್ತಡ ಬೀಳದಂತಹ ಚಲನೆಗಳನ್ನು ಹಾಗೂ ತಂತ್ರಗಳನ್ನು ಯೋಜಿಸಬೇಕು.
ಈ ಕಾಳಜಿಗಳನ್ನು ಸುರಕ್ಷಿತವಾಗಿ ನಿಭಾಯಿಸುವುದು ಹೇಗೆ ಎಂದು ಹಿಯರ್‌ನೌ ಆಫೀಶಿಯಲ್‌ನ ಹಿರಿಯ ಫಿಟ್‌ನೆಸ್ ಮತ್ತು ಜೀವನಶೈಲಿ ಸಲಹೆಗಾರರಾದ ಸಾಧನಾ ಸಿಂಗ್ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ವಿವರ ನೀಡಿದ್ದಾರೆ;
ಮಾಡಬಾರದು
► ಚಲನಶೀಲತೆ ಮತ್ತು ನಿಷ್ಕ್ರಿಯತೆಯ ಮಿತಿಯನ್ನು ತಿಳಿದುಕೊಳ್ಳದೆ ಹೆಚ್ಚಿನ ಕಸರತ್ತಿಗೆ ಮುಂದಾಗಬಾರದು. ಅತಿಯಾದ ಸ್ಕ್ವಾಟ್‌ಗಳು, ಡೆಡ್‌ಲಿಫ್ಟ್‌ಗಳು ಅಥವಾ ಲೆಗ್ ಪ್ರೆಸ್‌ಗಳಂತಹ ಚಲನೆಗಳು ಬೆನ್ನುಮೂಳೆಯ ಮೇಲೆ ಒತ್ತಡ ಹೇರಬಹುದು. ಹೀಗಾಗಿ ಅದಾಗಲೇ ಬೆನ್ನು ನೋವು ಇದ್ದರೆ ತೀವ್ರವಾಗಿ ತಿರುಗಬಹುದು.
► ಕಡಿಮೆ ಪ್ರಯತ್ನದಲ್ಲಿ ಹೆಚ್ಚು ಲಾಭ ಪಡೆಯಲು ಯತ್ನಿಸುವ ಬದಲಾಗಿ ನಿಯಂತ್ರಿತ ಚಲನೆಗೆ ಪ್ರಾಮುಖ್ಯತೆ ಕೊಡಬೇಕು. ನಿಯಂತ್ರಿತ ಚಲನೆಗೆ ಪ್ರಯತ್ನಿಸದೆ ಇದ್ದಲ್ಲಿ ಸ್ನಾಯುಗಳ ತೊಡಗಿಸಿಕೊಳ್ಳುವಿಕೆ ಕಡಿಮೆಯಾಗುತ್ತದೆ ಮತ್ತು ಬೆನ್ನುಮೂಳೆಯ ರಚನೆಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ.
► ವಾರ್ಮಪ್ ನಿಯಮಗಳನ್ನು ಅಲಕ್ಷಿಸಬಾರದು. ಸೂಕ್ತವಾದ ವಾರ್ಮಪ್ ವ್ಯಾಯಾಮಗಳನ್ನು ಮಾಡದೆ ಭಾರವಾದ ಕಸರತ್ತುಗಳಿಗೆ ಇಳಿದರೆ ಬೆನ್ನುಮೂಳೆಯ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ.
► ಬಹುತೇಕರು ನೋವಿನ ನಡುವೆಯೇ ವ್ಯಾಯಾಮ ಮುಂದುವರಿಸುತ್ತಾರೆ. ನೋವು ಅಥವಾ ಅಹಿತಕರ ಭಾವನೆಯನ್ನು ಸಾಮಾನ್ಯ ಎಂದುಕೊಳ್ಳುತ್ತಾರೆ. ಇದರಿಂದ ಸಣ್ಣ ಉರಿ ಅಥವಾ ಗಾಯಗಳು ದೊಡ್ಡ ಸಮಸ್ಯೆ ಒಡ್ಡಬಹುದು.
ಮಾಡಬೇಕಾಗಿರುವುದು
► ಚಲನಶೀಲತೆ ಮತ್ತು ಸ್ಥಿರತೆ ಎರಡೂ ಒಳಗೊಂಡ ಕಡಿಮೆ ಪರಿಣಾಮದ ವ್ಯಾಯಾಮಗಳನ್ನು ಮೊದಲು ಮಾಡಬೇಕು. ಬೆನ್ನುಮೂಳೆಗೆ ಹೊರೆ ಬೀಳದಂತಹ ಭಂಗಿಗಳ ವ್ಯಾಯಾಮ ಆಯ್ಕೆ ಮಾಡಬೇಕು.
► ನಿಯಂತ್ರಿತ ವ್ಯಾಯಾಮಕ್ಕೆ ಬೆಂಬಲ ಪಡೆದು ಕಸರತ್ತುಗಳನ್ನು ಮಾಡುವುದು ಉತ್ತಮ. ಬೆನ್ನಿಗೆ ಬೆಂಬಲ ನೀಡುವಂತಹ ಯಂತ್ರಗಳ ಸಹಾಯದಿಂದ ವ್ಯಾಯಾಮ ಆರಂಭಿಸಬಹುದು.
► ವ್ಯಾಯಾಮ ಮಾಡುವಾಗ ನೋವು ಕಂಡುಬಂದರೆ ತಕ್ಷಣವೇ ನಿಲ್ಲಿಸಬೇಕು. ಸ್ನಾಯುವಿಗೆ ಆಯಾಸವಾದ ಅನುಭವವಾದಲ್ಲಿ 48ರಿಂದ 72 ಗಂಟೆಗಳ ವಿಶ್ರಾಂತಿ ತೆಗೆದುಕೊಳ್ಳಬೇಕು. ಸೌಮ್ಯ ಚಲನೆಯ ನಂತರವೂ ನೋವು ಕಡಿಮೆಯಾಗದೆ ಇದ್ದರೆ ಎಚ್ಚರಿಕೆಯ ಗಂಟೆಯಾಗಿರುತ್ತದೆ. ತಕ್ಷಣವೇ ಪರಿಣತ ವೈದ್ಯರನ್ನು ಸಂಪರ್ಕಿಸಬೇಕು.
► ತೂಕ ಎತ್ತುವುದು, ಯಂತ್ರವನ್ನು ಬಳಸುವುದು, ಸಾಮೂಹಿಕ ತರಗತಿಯನ್ನು ತೆಗೆದುಕೊಳ್ಳುವುದು—ಯಾವುದೇ ಮಾಡುತ್ತಿದ್ದರೂ ಭಂಗಿ, ಚಲನೆ ಅಥವಾ ಭಾರದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ಹೊಂದಿಕೊಳ್ಳಬೇಕು.