ತಡೆತಡೆದು ಉಪವಾಸ ಮಾಡುವ ಅಭ್ಯಾಸವೆ?; ಹಾರ್ವರ್ಡ್ ವೈದ್ಯರ ಸಲಹೆ ಏನು?
ಸಾಂದರ್ಭಿಕ ಚಿತ್ರ | Photo Credit : freepik
ಬಹಳಷ್ಟು ಮಂದಿ ತ್ವರಿತ ಫಲಿತಾಂಶಕ್ಕಾಗಿ ತಡೆತಡೆದು ಮಾಡುವ ಉಪವಾಸದ ಆಹಾರ ಕ್ರಮ ಪ್ರಯತ್ನಿಸುತ್ತಾರೆ. ಆದರೆ ಈ ಉಪವಾಸ ಪದ್ಧತಿಯ ಆಯ್ಕೆ ಸಮರ್ಥನೀಯವೆ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ.
ಇಂಟರ್ಮಿಟೆಂಟ್ ಫಾಸ್ಟಿಂಗ್ ಅಥವಾ ತಡೆತಡೆದು ಮಾಡುವ ಉಪವಾಸ ಇತ್ತೀಚೆಗೆ ಬಹಳ ಚರ್ಚೆಯಲ್ಲಿರುವ ಆಹಾರ ಪದ್ಧತಿಗಳಲ್ಲಿ ಒಂದಾಗಿದೆ. ತೂಕ ಇಳಿಸುವುದರಿಂದ ತೊಡಗಿ ದೀರ್ಘಾಯುಷ್ಯದವರೆಗೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಸರಳ ಆಹಾರವೆಂದು ಪರಿಗಣಿಸಲಾಗಿದೆ.
ಆದರೆ ಈ ಪ್ರಚಾರದಲ್ಲಿ ಕರಗಿ ಹೋಗುವ ಮೊದಲು ಅದು ಏನೆಂದು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ತಡೆತಡೆದು ಮಾಡುವ ಉಪವಾಸವೆಂದರೆ ನೀವೇನು ತಿನ್ನುತ್ತೀರಿ ಎನ್ನುವುದು ಮುಖ್ಯವಾಗುವುದಿಲ್ಲ. ಯಾವಾಗ ತಿನ್ನುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಸಾಮಾನ್ಯವಾಗಿ ನಿರ್ದಿಷ್ಟ ಸಮಯದಲ್ಲಿ ಆಹಾರ ಸೇವನೆಯಾಗಿರುತ್ತದೆ. ಅಂದರೆ ದಿನಕ್ಕೆ 8 ಗಂಟೆಗಳ ಉಪವಾಸ ಅಥವಾ ವಾರದಲ್ಲಿ ಒಂದು ಅಥವಾ ಎರಡು ದಿನಗಳ ಕಾಲ ಉಪವಾಸ ಸೇರಿರುತ್ತದೆ. ಬಹಳಷ್ಟು ಮಂದಿ ತ್ವರಿತ ಫಲಿತಾಂಶಕ್ಕಾಗಿ ಇದನ್ನು ಪ್ರಯತ್ನಿಸುತ್ತಾರೆ. ಆದರೆ ಈ ಉಪವಾಸ ಪದ್ಧತಿಯ ಆಯ್ಕೆ ಸಮರ್ಥನೀಯವೆ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ.
ವೈದ್ಯರಾದ ತ್ರಿಶಾ ಪಾಸ್ರಿಚಂದ್ ಇನ್ಸ್ಟಾಗ್ರಾಂನಲ್ಲಿ ಹಾಕಿರುವ ವೀಡಿಯೋದಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ. ತ್ರಿಶಾ ಅವರು ಬೆತ್ ಇಸ್ರೇಲ್ ಡೀಕನೆಸ್ ಮೆಡಿಕಲ್ ಸೆಂಟರ್ನಲ್ಲಿ ವೈದ್ಯೆ ಮತ್ತು ಹಾರ್ವರ್ಡ್ ಮೆಡಿಕಲ್ ಸ್ಕೂಲ್ನಲ್ಲಿ ವೈದ್ಯಕೀಯ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಂ ವೀಡಿಯೋದಲ್ಲಿ ತಡೆತಡೆದು ಮಾಡುವ ಉಪವಾಸದ ಬಗ್ಗೆ ದೀರ್ಘ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮಯದ ಮೇಲೆ ಗಮನಹರಿಸುವ ಉಪವಾಸ
ತ್ರಿಶಾ ವಿವರಿಸುವ ಪ್ರಕಾರ, ತಡೆತಡೆದು ಮಾಡುವ ಉಪವಾಸ ಊಟ ಮಾಡುವ ಸಮಯದ ಮೇಲೆ ಗಮನಹರಿಸುತ್ತದೆ. 8 ಗಂಟೆ ಹೊಟ್ಟೆ ಖಾಲಿ ಇಟ್ಟ ನಂತರ ಊಟ ಮಾಡುವುದು ಅಥವಾ ವಾರಕ್ಕೆ ಒಂದೆರಡು ದಿನ ಉಪವಾಸ ಮಾಡುವುದು ಇಂಟರ್ಮಿಟೆಂಟ್ ಉಪವಾಸದ ಸಾಮಾನ್ಯ ವಾಡಿಕೆಯಾಗಿರುತ್ತದೆ. ಸಂಶೋಧನೆಗಳು ತೋರಿಸುವ ಪ್ರಕಾರ ಕೆಲವು ತಿಂಗಳ ಕಾಲ ತೂಕ ಇಳಿಕೆಗೆ ಇದು ನೆರವಾಗಬಹುದು. ಆದರೆ ಸಮಸ್ಯೆ ಏನೆಂದರೆ, “ಯಾವಾಗಲೂ ತೂಕ ಇಳಿಕೆಯಾಗುವುದಿಲ್ಲ. ಉಪವಾಸ ನಿಂತ ಮೇಳೆ ತೂಕ ಮರಳಿ ಸ್ವಸ್ಥಾನಕ್ಕೆ ತಿರುಗುತ್ತದೆ” ಎನ್ನುತ್ತಾರೆ ತ್ರಿಶಾ.
ಅಷ್ಟಲ್ಲದೆ, ತಡೆತಡೆದು ಮಾಡುವ ಉಪವಾಸದಿಂದ ಹೃದಯ ರೋಗ, ಕ್ಯಾನ್ಸರ್ನಿಂದ ಮುಕ್ತಿಪಡೆಯಬಹುದು ಅಥವಾ ದೀರ್ಘಾಯುಷಿಗಳಾಗಬಹುದು ಎನ್ನುವುದೂ ಸುಳ್ಳು. ಈ ಕುರಿತು ಅಧ್ಯಯನಗಳು ಯಾವುದೇ ಪುರಾವೆ ನೀಡಿಲ್ಲ. ಮುಖ್ಯವಾಗಿ ಇಂತಹ ಉಪವಾಸದ ದೀರ್ಘಾವಧಿ ಲಾಭಗಳು ಅಸ್ಪಷ್ಟವಾಗಿಯೇ ಇವೆ.
ದೀರ್ಘಕಾಲ ಅಭ್ಯಾಸ ಸಾಧ್ಯವಿಲ್ಲವೇಕೆ?
ತಡೆತಡೆದು ಮಾಡುವ ಉಪವಾಸದ ದೊಡ್ಡ ವಿಚಾರವೆಂದರೆ ನಿರಂತರವಾಗಿ ಲಾಭ ಸಿಗದೆ ಇರುವುದು. ತಡೆತಡೆದು ಮಾಡುವ ಉಪವಾಸವನ್ನು ನಿರಂತರವಾಗಿ ಮಾಡಲು ಸಾಧ್ಯವಾಗದು. ಕೆಲಸದ ವೇಳೆ, ಸಾಮಾಜಿಕ ಜೀವನದ ಯೋಜನೆಗಳು ಮತ್ತು ನಿತ್ಯದ ಒತ್ತಡದಿಂದಾಗಿ ತಡೆತಡೆದು ಮಾಡುವ ಉಪವಾಸವನ್ನು ದೀರ್ಘಕಾಲ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಬಹಳ ಕಠಿಣ ಎನಿಸಿದಾಗ ಜನರು ಅದನ್ನು ಬಿಡುತ್ತಾರೆ. ಹಾಗಾದಾಗ ತೂಕ ಮತ್ತೆ ಏರುತ್ತದೆ.
ಸರಳ ಪರ್ಯಾಯ ಆಯ್ಕೆಗಳೇನು?
ತಡೆತಡೆದು ಮಾಡುವ ಉಪವಾಸದ ಬದಲಾಗಿ ತ್ರಿಶಾ ಸರಳ ಆಯ್ಕೆಗಳನ್ನು ಕೊಡುತ್ತಾರೆ. ಆಹಾರ ಯಾವಾಗ ತಿನ್ನಬೇಕು ಎನ್ನುವ ಬದಲಾಗಿ ಆಹಾರ ಕ್ರಮದಲ್ಲಿ ಏನಿದೆ ಎನ್ನುವುದು ಮುಖ್ಯವಾಗುತ್ತದೆ ಎನ್ನುತ್ತಾರೆ ತ್ರಿಶಾ.
ಬೆಳಗಿನ ಉಪಹಾರ ಬೇಗ ಸೇವಿಸುವುದು
ಬೆಳಗ್ಗೆ ಎದ್ದು ಒಂದು ಗಂಟೆಯೊಳಗೆ ಉಪಾಹಾರ ಸೇವಿಸಿ. ಅದರಲ್ಲಿ ಅತ್ಯಧಿಕ ಪ್ರೊಟೀನ್ ಮತ್ತು ಫೈಬರ್ ಅಂಶಗಳು ಇರಲಿ. ಸಕ್ಕರೆ ಅಂಶದ ದವಸ ಧಾನ್ಯಗಳು ಅಥವಾ ಪೇಸ್ಟ್ರಿಗಳನ್ನು ಸೇವಿಸಬಾರದು. ಗುಣಮಟ್ಟದ ಉಪಾಹಾರದಿಂದ ಹಸಿವೆ ಕಡಿಮೆಯಾಗುತ್ತದೆ. ಮಧ್ಯಾಹ್ನ ತಿನಿಸುಗಳನ್ನು ತಿನ್ನುವ ಅಗತ್ಯ ಕಾಣುವುದಿಲ್ಲ.
ಮಲಗುವ ಸಮಯದಲ್ಲಿ ತಿನ್ನಬಾರದು
ನಿದ್ರೆಗೆ ಜಾರುವ 2-3 ಗಂಟೆಗೆ ಮೊದಲೇ ಆಹಾರ ಸೇವಿಸಬೇಕು. ತಡರಾತ್ರಿ ಊಟ ಮಾಡುವ ಅಭ್ಯಾಸ ತೊರೆಯಬೇಕು. ತಡರಾತ್ರಿ ಊಟ ಮಾಡುವುದರಿಂದ ದೇಹದಲ್ಲಿ ಕೊಬ್ಬು ತುಂಬುತ್ತದೆ ಮತ್ತು ಕ್ಯಾಲರಿ ಕರಗುವುದಿಲ್ಲ. ಹೀಗಾಗಿ ಬೊಜ್ಜು ಬರುವ ಸಾಧ್ಯತೆಯಿದೆ.
ಸಮಯಕ್ಕಿಂತ ಆಹಾರ ಮುಖ್ಯ
ತ್ರಿಶಾ ಹೇಳುವ ಪ್ರಕಾರ, ನಾವು ಏನು ತಿನ್ನುತ್ತೇವೆ ಎನ್ನುವುದು ಮುಖ್ಯವೇ ವಿನಾ ಯಾವಾಗ ತಿನ್ನುತ್ತೇವೆ ಎನ್ನುವುದು ಹೆಚ್ಚು ಮುಖ್ಯವಾಗುವುದಿಲ್ಲ. ಹಣ್ಣುಗಳು, ತರಕಾರಿಗಳು, ದ್ವಿದಳ ಧಾನ್ಯಗಳು, ಇಡೀ ಧಾನ್ಯಗಳು, ಕಡಲೆಗಳು ಮತ್ತು ಬೀಜಗಳ ಸೇವನೆ ಮುಖ್ಯವಾಗುತ್ತದೆ. ಸಂಸ್ಕರಿತ ಆಹಾರ ಕಡಿಮೆ ಮಾಡಬೇಕು.
ಕೃಪೆ: ndtv.com