ʼಅರಿಶಿಣ ಸಾಬೂನಿನ ಪ್ರಚಾರಕ್ಕೆ ಮುಗಿ ಬೀಳಬೇಡಿʼ; ವೈದ್ಯರ ಎಚ್ಚರಿಕೆ
ಸಾಂದರ್ಭಿಕ ಚಿತ್ರ | Photo Credit : freepik
ಅರಿಶಿಣ ಸಾಬೂನು ಅನೇಕ ಲಾಭಗಳನ್ನು ತರುವುದು ನಿಜವಾಗಿದ್ದರೂ, ಎಲ್ಲರಿಗೂ ಸೂಕ್ತವಲ್ಲ ಎನ್ನುವುದನ್ನು ಮನಗಾಣಬೇಕಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ಅರಿಶಿಣಯುಕ್ತ ಸಾಬೂನಿನ ಚರ್ಚೆ ನಡೆಯುತ್ತಿದೆ. ಮೊಡವೆಯಂತಹ ಚರ್ಮದ ಸಮಸ್ಯೆಗಳಿಗೆ ಅರಿಶಿಣ ಮದ್ದು ಎನ್ನುವ ಸುದ್ದಿ ಚರ್ಚೆಯಲ್ಲಿದೆ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?
ಚರ್ಮರೋಗ ತಜ್ಞರಾದ ಡಾ. ರಿಂಕಿ ಕಪೂರ್ ಪ್ರಕಾರ ಅರಿಶಿಣ ಸಾಬೂನು ಚರ್ಮಕ್ಕೆ ಉತ್ತಮ. “ಅರಿಶಿಣ ಸಾಬೂನಿನಲ್ಲಿ ಉರಿಯೂತ ವಿರೋಧಿ ಮತ್ತು ಬ್ಯಾಕ್ಟೀರಿಯ ವಿರೋಧಿ ತತ್ವಗಳು ಹೆಚ್ಚಿದ್ದು, ಚರ್ಮಕ್ಕೆ ಲಾಭದಾಯಕವಾಗಿ ಪರಿಣಮಿಸಲಿದೆ” ಎನ್ನುತ್ತಾರೆ ರಿಂಕಿ ಕಪೂರ್.
“ಅರಿಶಿಣವು ಕರ್ಕ್ಯುಮಿನ್ನಿಂದ ತುಂಬಿರುತ್ತದೆ ಎನ್ನುವುದು ತಿಳಿದಿರುವ ಸತ್ಯ. ಕರ್ಕ್ಯುಮಿನ್ ಚರ್ಮದಲ್ಲಿ ಕೆಂಪು ಮತ್ತು ಮೊಡವೆಗಳನ್ನು ನಿಭಾಯಿಸುತ್ತದೆ. ಚರ್ಮದ ಟೋನ್ ಅನ್ನು ಉತ್ತೇಜಿಸುತ್ತದೆ ಎಂದು ನಂಬಲಾಗಿದೆ. ಚರ್ಮವನ್ನು ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ” ಎನ್ನುತ್ತಾರೆ ರಿಂಕಿ ಕಪೂರ್.
ಮನೆಯಲ್ಲಿ ಸಾಬೂನು ತಯಾರಿಸಬಹುದೆ?
“ಮನೆಯಲ್ಲಿ ಸಾಬೂನು ತಯಾರಿಸಲು ಅರಿಶಿಣ ಪುಡಿ, ಅಗತ್ಯ ಎಣ್ಣೆಗಳು ಮತ್ತು ಸಾಬೂನಿನ ಬೇಸ್ ಮತ್ತು ಸಾಬೂನಿನ ಮೌಲ್ಡ್ ಬೇಕಾಗಿರುತ್ತದೆ. ಎಲ್ಲ ಅಂಶಗಳನ್ನು ಮಿಶ್ರ ಮಾಡಿ ಮತ್ತು ಮಿಶ್ರಣವನ್ನು ಮೌಲ್ಡ್ ಮೇಲೆ ಸುರಿಸಿ 24 ಗಂಟೆಗಳ ಕಾಲ ಸೆಟ್ ಆಗಲು ಬಿಡಬೇಕು. ನಂತರ ಸಾಬೂನನ್ನು ಮೌಲ್ಡ್ನಿಂದ ತೆಗೆದು ಅನುಕೂಲಕರವಾಗಿ ಬಳಸಬಹುದು” ಎನ್ನುತ್ತಾರೆ ವೈದ್ಯರು.
ಆದರೆ, ಅರಿಶಿಣ ಸಾಬೂನು ಅನೇಕ ಲಾಭಗಳನ್ನು ತರುವುದು ನಿಜವಾಗಿದ್ದರೂ, ಎಲ್ಲರಿಗೂ ಸೂಕ್ತವಲ್ಲ ಎನ್ನುವುದನ್ನು ಮನಗಾಣಬೇಕಿದೆ. ಅನೇಕ ಚರ್ಮದ ಸಮಸ್ಯೆಗಳಿಗೂ ಕಾರಣವಾಗಬಹುದು.
ಅರಿಶಿಣ ಸಾಬೂನು ಎಲ್ಲರಿಗೂ ಸೂಕ್ತವಲ್ಲ:
ಅತಿ ಸಂವೇದನಾಶೀಲ ಚರ್ಮ ಇರುವವರು, ಅರಿಶಿಣದಿಂದ ಅಲರ್ಜಿ ಇರುವವರು ಅಥವಾ ನಿರ್ದಿಷ್ಟ ಚರ್ಮದ ಸ್ಥಿತಿಗಳು ಇರುವವರಿಗೆ ಉರಿಯೂತದ ಅನುಭವವಾಗಬಹುದು. “ಡೈರ್ಮಟೈಟಿಸ್ (ಚರ್ಮದ ಉರಿಯೂತ), ಸೊರಿಯಾಸಿಸ್ ಅಥವಾ ರೊಸಾಸಿಯಂತಹ ಚರ್ಮ ರೋಗಗಳನ್ನು ಹೊಂದಿರುವವರು ಸಾಬೂನು ಬಳಸುವಾಗ ಅತ್ಯಂತ ಜಾಗರೂಕರಾಗಿರಬೇಕು. ಯಾವುದೇ ಚರ್ಮದ ಆರೈಕೆ ಉತ್ಪನ್ನ ಬಳಸುವಾಗ ಹೊಂದಿಕೆಯಾಗುತ್ತದೆಯೇ ಎಂದು ಪರಿಶೀಲಿಸಲು ಪ್ಯಾಚ್ ಪರೀಕ್ಷೆಯು ನಿರ್ಣಾಯಕವಾಗಿರುತ್ತದೆ” ಎನ್ನುತ್ತಾರೆ ರಿಂಕಿ.
ಒಬ್ಬರಿಗೆ ಚೆನ್ನಾಗಿ ಅನ್ವಯಿಸುವ ವಸ್ತು ಮತ್ತೊಬ್ಬರಿಗೆ ಸೂಕ್ತವಾಗದೆ ಇರಬಹುದು. ಹೀಗಾಗಿ, ಚರ್ಮತಜ್ಞರಿಂದ ಪರೀಕ್ಷೆಗೆ ಒಳಪಡಿಸಿ ವಸ್ತುಗಳನ್ನು ಬಳಸುವುದು ಸೂಕ್ತ ಎನ್ನುತ್ತಾರೆ ವೈದ್ಯರು. “ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡುವ ಕಾರಣಕ್ಕೆ ಒಂದು ಸಾಬೂನನ್ನು ಬಳಸಬೇಡಿ. ಹಾಗೆ ಮಾಡಿದಲ್ಲಿ ನಿಮ್ಮ ಚರ್ಮಕ್ಕೆ ದೊಡ್ಡ ಸಮಸ್ಯೆಯನ್ನು ತಂದುಕೊಳ್ಳಬಹುದು. ಸ್ವಯಂ ಆಗಿ ಯಾವುದೇ ಉತ್ಪನ್ನ ಆರಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ” ಎನ್ನುತ್ತಾರೆ ರಿಂಕಿ ಕಪೂರ್.