×
Ad

ಹಾಲು ಬೆರೆಸಿದ ಕಾಫಿಗಿಂತ ಕರಿ ಕಾಫಿ ಉತ್ತಮ!; ವೈದ್ಯರು ಹೇಳುವುದೇನು?

Update: 2026-01-29 17:32 IST

ಸಾಂದರ್ಭಿಕ ಚಿತ್ರ | Photo Credit : freepik

ಕಾಫಿ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಚರ್ಚಿತ ವಿಚಾರ. ಇತ್ತೀಚೆಗೆ ಕರಿಕಾಫಿಯಿಂದ ಅಡ್ಡಪರಿಣಾಮಗಳಿವೆ ಎಂದು ವರದಿಯಾಗಿತ್ತು. ಈ ಕುರಿತು ವೈದ್ಯರು ತಮ್ಮ ಅಭಿಪ್ರಾಯ ಬಿಚ್ಚಿಟ್ಟಿದ್ದಾರೆ.

ಕರಿ ಕಾಫಿಯ ಬಗ್ಗೆ ಇತ್ತೀಚೆಗೆ ಬಹಳ ಚರ್ಚೆಯಾಗುತ್ತಿದೆ. ಬೆಳಗ್ಗೆ ಎದ್ದು ಹಾಲಿನ ಕಾಫಿ ಕುಡಿಯುವ ಬದಲಾಗಿ ಸಕ್ಕರೆ ಬೆರೆಸದ ಕರಿ ಕಾಫಿ ಕುಡಿದರೆ ಚೆನ್ನಾಗಿರುತ್ತದೆ ಎಂದು ಅನೇಕ ವೈದ್ಯರು ಸಾಮಾಜಿಕ ಜಾಲತಾಣದಲ್ಲಿ ಹೇಳುತ್ತಿದ್ದಾರೆ.

ಡಾ. ಸಬಾ ಉಸ್ಮಾನ್, “ಒಮ್ಮೆ ನೀವು ಕರಿ ಕಾಫಿಯನ್ನು ಸಕ್ಕರೆ ಬೆರೆಸದೆ ಸೇವಿಸಲು ಆರಂಭಿಸಿದರೆ ಮತ್ತೆ ಹಿಂತಿರುಗಿ ನೋಡಬೇಕಾಗಿಲ್ಲ. ಇದು ರುಚಿ ಮಾತ್ರವಲ್ಲ. ಸಿಹಿಯ ಬದಲಾಗಿ ಅಧಿಕೃತವಾದುದನ್ನು ಸೇವಿಸುವುದು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಡಾ ಮಿಲಾದ್ ಶಾರಿಫ್ಪೌರ್ ಅವರ ಪ್ರಕಾರ, “ಕರಿಕಾಫಿಯನ್ನು ಹಾಲು, ಕ್ರೀಮ್ ಅಥವಾ ಸಕ್ಕರೆ ಬೆರೆಸದೆ ಸೇವಿಸಿದರೆ ಸಮಸ್ಯೆಯಿಲ್ಲ. ಶಸ್ತ್ರಚಿಕಿತ್ಸೆಗೆ ಎರಡು ಗಂಟೆಗಳಿಗೆ ಮೊದಲು ಕೂಡ ಇದನ್ನು ಸೇವಿಸಬಹುದು. ಹೀಗಾಗಿ ರೋಗಿಗಳಿಗೆ ಬೆಳಗಿನ ಕಾಫಿ ಕುಡಿಯದಂತೆ ಸೂಚಿಸುವುದು ತಪ್ಪು.”

ಬಹುತೇಕರು ಕರಿ ಕಾಫಿಯಿಂದ ಅಡ್ಡಪರಿಣಾಮಗಳಾಗುತ್ತವೆ ಎಂದು ಹೇಳುತ್ತಾರೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಲಿವರ್ ಡಾಕ್ ಎಂದು ಪ್ರಸಿದ್ಧಿ ಪಡೆದ ಸಿರಿಯಾಕ್ ಅಬಿ ಫಿಲಿಪ್ಸ್ ಹೇಳುವ ಪ್ರಕಾರ ಕರಿಕಾಫಿಯಿಂದ ಅಡ್ಡಪರಿಣಾಮಗಳಾಗುತ್ತವೆ ಎನ್ನುವುದು ಸುಳ್ಳು. ಅವರ ಪ್ರಕಾರ ಕರಿಕಾಫಿ ನಿರಂತರವಾಗಿ ಆರೋಗ್ಯ ಲಾಭಗಳಿಗೆ ಕಾರಣವಾಗಿದೆ.

ಕರಿಕಾಫಿಯಿಂದ ಅಡ್ಡಪರಿಣಾಮಗಳಿಲ್ಲ!

ಜೀರ್ಣದ ಸಮಸ್ಯೆ ಇದ್ದವರು ಕರಿಕಾಫಿ ಕುಡಿಯಬಾರದು ಎನ್ನುವ ಪ್ರಚಲಿತವಾದ ಮಾತು ಸುಳ್ಳು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಗ್ಯಾಸ್ಟ್ರಿಕ್, ಅಲ್ಸರ್, ರಿಫ್ಲಕ್ಸ್ ಅನ್ನನಾಳದ ಉರಿಯೂತ ಮೊದಲಾದ ಕಾಯಿಲೆಗಳಿಗೂ ಕಾಫಿ ಸೇವನೆಗೂ ಸಂಬಂಧವಿಲ್ಲ ಎನ್ನುವುದು ಜಪಾನ್ನ ಅಧ್ಯಯವನೊಂದು ಬಹಿರಂಗಪಡಿಸಿದೆ. ಹಾಗೆಯೇ ಕರಿಕಾಫಿ ನಿದ್ರೆಗೆ ಸಮಸ್ಯೆ ಒಡ್ಡಲಿದೆ ಎನ್ನುವುದೂ ತಪ್ಪು. ಕರಿಕಾಫಿಯಲ್ಲ, ಕೆಫೈನ್ ನಿದ್ರೆಗೆ ಸಮಸ್ಯೆಯೊಡ್ಡುತ್ತದೆ. ಆದರೆ ಒಟ್ಟಾರೆ ನಿದ್ರೆಯಲ್ಲಿ ಹೆಚ್ಚು ಬದಲಾವಣೆ ಆಗುವುದಿಲ್ಲ ಎಂದು ಅವರು ಅಧ್ಯಯನವೊಂದನ್ನು ಮುಂದಿಟ್ಟು ವಿವರಿಸಿದ್ದಾರೆ. ಹಾಗೆಯೇ ಕರಿಕಾಫಿ ಆತಂಕ (anxiety) ಖಾಯಿಲೆಗೆ ಕಾರಣವಾಗಬಹುದು ಎನ್ನುವುದನ್ನೂ ಅವರು ಸುಳ್ಳು ಎಂದು ಹೇಳಿದ್ದಾರೆ. ತಮ್ಮ ವಾದಕ್ಕೆ ಪುಷ್ಠಿ ನೀಡುವ ಅಧ್ಯಯನದ ದಾಖಲೆಗಳನ್ನು ಅವರು ಮುಂದಿಟ್ಟಿದ್ದಾರೆ.

ಮಾಧ್ಯಮವೊಂದಕ್ಕೆ ವಿವರ ನೀಡಿದ ಕಿಮ್ಸ್ ಆಸ್ಪತ್ರೆಯ ಆಹಾರ ತಜ್ಞೆ ಡಾ ಅಮ್ರೀನ್ ಶೇಕ್ ಪ್ರಕಾರ, ಗ್ಯಾಸ್ಟ್ರಿಕ್ಸ್, ಆತಂಕದ (anxiety) ಅಥವಾ ನಿದ್ರೆಯ ಸಮಸ್ಯೆ ಇರುವವರು ಕರಿಕಾಫಿಯನ್ನು ಸೇವಿಸುವುದು ಕಡಿಮೆಗೊಳಿಸಬೇಕು. ದಿನಕ್ಕೆ 1-2 ಕಪ್ಗಳು ಸಾಕು. ತಡಸಂಜೆ ಸೇವಿಸಬಾರದು.

ಅಮ್ರೀನ್ ಶೇಕ್ ಪ್ರಕಾರ, ಹಾಲಿನ ಚಹಾವನ್ನು ಸಕ್ಕರೆ ಹಾಕಿ ಕುಡಿದರೆ ಹಾಲಿನ ಕೊಬ್ಬಿನಿಂದ ಕ್ಯಾಲರಿಗಳು ಮತ್ತು ಲ್ಯಾಕ್ಟೋಸ್ ಕೂಡ ದೇಹವನ್ನು ಸೇರುತ್ತದೆ. ಬದಲಾಗಿ ಕರಿ ಕಾಫಿ ಕ್ಯಾಲರಿ ರಹಿತವಾಗಿರುತ್ತದೆ. ಬಹಳಷ್ಟು ಮಂದಿ ಕರಿ ಕಾಫಿ ಕುಡಿದ ನಂತರ ಹೊಟ್ಟೆ ಉಬ್ಬರಿಸುವುದು ಕಡಿಮೆಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ.

ಅಮ್ರೀನ್ ಹೇಳುವ ಪ್ರಕಾರ, ಅಸಿಡಿಟಿ ಅಥವಾ ಆಮ್ಲೀಯ ರಿಫ್ಲೆಕ್ಸ್ ಇರುವವರು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅನನುಕೂಲವಾಗಬಹುದು. ಹೀಗಾಗಿ ಹಾಲಿಲ್ಲದೆ ಬೆಳಗಿನ ಬದಲು ಸಂಜೆ ಕುಡಿಯುವುದು ಉತ್ತಮ.

ತೂಕ ಇಳಿಸಲು ಕರಿ ಕಾಫಿ ಸಹಕಾರಿ

ಅಮ್ರೀನ್ ಹೇಳುವ ಪ್ರಕಾರ, ಕಾಫಿಯಿಂದ ಹಾಲು ಮತ್ತು ಸಕ್ಕರೆ ತೆಗೆದು ಬಳಸುವುದರ ಪರಿಣಾಮ ಆರು ತಿಂಗಳಲ್ಲಿ ತಿಳಿದು ಬರಲಿದೆ. ಕರಿಕಾಫಿಯಿಂದ ತೂಕ ಇಳಿಕೆಯಾಗದೆ ಇದ್ದರೂ, ಸಮತೋಲಿತ ಆಹಾರ ಕ್ರಮ ಮತ್ತು ದೈಹಿಕ ಚಟುವಟಿಕೆಯಿಂದ ತೂಕವನ್ನು ನಿರ್ವಹಣೆ ಮಾಡಬಹುದಾಗಿದೆ. ಕೆಫೈನ್ನಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ ಮತ್ತು ವ್ಯಾಯಾಮದ ಸಂದರ್ಭದಲ್ಲಿ ಕೊಬ್ಬು ಕರಗಿಸಲು ನೆರವಾಗಬಹುದು.

ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ಲಾಭಗಳಿವೆಯೆ?

ಅಮ್ರೀನ್ ಪ್ರಕಾರ ಕರಿ ಕಾಫಿಗೆ ಬದಲಾಗುವುದರಿಂದ ಹಾಲಿನಿಂದಾಗಬಹುದಾದ ಸಕ್ಕರೆ ಏರಿಕೆಯನ್ನು ತಪ್ಪಿಸಬಹುದು. “ಇನ್ಸುಲಿನ್ ರೆಸಿಸ್ಟನ್ಸ್ ಅಥವಾ ಮಧುಮೇಹ ಪೂರ್ವದ ಸ್ಥಿತಿ ಇರುವವರಿಗೆ ಹಾಲು ಕಾಫಿಗೆ ಬದಲಾಗಿ ಕರಿಕಾಫಿ ಸೇವಿಸಲು ಆರಂಭಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದು. ಕಾಲಾನುಸಾರ ಇನ್ಸುಲಿನ್ ಸಂವೇದನೆ ಸುಧಾರಿಸಬಹುದು. ಒಟ್ಟು ಸಕ್ಕರೆ ಪ್ರಮಾಣ ಸೇವನೆ ಕಡಿಮೆಯಾಗಬಹುದು.”

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News