×
Ad

ಆರ್ಥಿಕ ಸಮೀಕ್ಷೆಯು ಸಂಸ್ಕರಿತ ಆಹಾರ ಮತ್ತು ಸಾಮಾಜಿಕ ಮಾಧ್ಯಮದ ನಿಯಂತ್ರಣದ ಬಗ್ಗೆ ಒತ್ತು ನೀಡಿರುವುದೇಕೆ?

Update: 2026-01-30 17:55 IST

ಸಾಂದರ್ಭಿಕ ಚಿತ್ರ | Photo Credit : freepik

ಸಮೀಕ್ಷೆಯಲ್ಲಿ, “ಭಾರತದ ದೀರ್ಘಕಾಲೀನ ಆರ್ಥಿಕ ಪ್ರಗತಿ ಕೇವಲ ಉದ್ಯೋಗಗಳು ಮತ್ತು ಕೌಶಲ್ಯಗಳನ್ನು ಅವಲಂಬಿಸಿಲ್ಲ, ಬದಲಾಗಿ ತನ್ನ ಕಾರ್ಯಪಡೆಯ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಮುಖ್ಯವಾಗುತ್ತದೆ” ಎಂದು ಹೇಳಲಾಗಿದೆ.

2026ರ ಕೇಂದ್ರ ಬಜೆಟ್ ಅಧಿವೇಶನಕ್ಕೆ ಮೊದಲು ಗುರುವಾರ ಆರ್ಥಿಕ ಸಮೀಕ್ಷೆಯ ಕುರಿತಾಗಿ ಮಾತನಾಡಿದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ ಅನಂತ ನಾಗೇಶ್ವರನ್ ಸಂಸ್ಕರಿತ ಆಹಾರ ಸೇವನೆ, ಬೊಜ್ಜು ಮತ್ತು ಮಕ್ಕಳು-ಯುವಜನರಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಮಾಧ್ಯಮಗಳ ಬಳಕೆಯಂತಹ ವಿಚಾರಗಳನ್ನು ಮುಂದಿಟ್ಟು ಅಚ್ಚರಿ ಮೂಡಿಸಿದ್ದಾರೆ. ಆರ್ಥಿಕ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿದ ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳ ದಾಖಲೆಯಲ್ಲಿ ‘ಆರೋಗ್ಯಸೇವೆಯನ್ನು ಬಲಪಡಿಸುವುದು” ಎಂಬ ಅಧ್ಯಾಯದಡಿ ಈ ವಿಚಾರಗಳ ಉಲ್ಲೇಖವಿದೆ.

ಸಮೀಕ್ಷೆಯಲ್ಲಿ, “ಭಾರತದ ದೀರ್ಘಕಾಲೀನ ಆರ್ಥಿಕ ಪ್ರಗತಿ ಕೇವಲ ಉದ್ಯೋಗಗಳು ಮತ್ತು ಕೌಶಲ್ಯಗಳನ್ನು ಅವಲಂಬಿಸಿಲ್ಲ, ಬದಲಾಗಿ ತನ್ನ ಕಾರ್ಯಪಡೆಯ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಮುಖ್ಯವಾಗುತ್ತದೆ” ಎಂದು ಹೇಳಲಾಗಿದೆ.

ಈ ಬಗ್ಗೆ ಮುಖ್ಯವಾಗಿ ಉಲ್ಲೇಖಿಸಿದ ಅನಂತ ನಾಗೇಶ್ವರನ್, “ಹೆಚ್ಚುತ್ತಿರುವ ಬೊಜ್ಜು, ಕಳಪೆ ಆಹಾರ ಪದ್ಧತಿ ಮತ್ತು ಡಿಜಿಟಲ್ ವ್ಯಸನವು ನಿಯಂತ್ರಣವಿಲ್ಲದೆ ಮುಂದುವರಿದರೆ ಭಾರತದ ಜನಸಂಖ್ಯೆಯ ಲಾಭಾಂಶವನ್ನು ಪಡೆಯಲಾಗದೆ ಇರುವ ಅಪಾಯ ಎದುರಿಸಬಹುದು” ಎಂದು ಹೇಳಿದ್ದಾರೆ.

ಸಂಸ್ಕರಿತ ಆಹಾರದ ಬಗ್ಗೆ ಏಕೆ ಉಲ್ಲೇಖಿಸಲಾಗುತ್ತಿದೆ?

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4 (NFHS-4) ಹೇಳಿರುವ ಪ್ರಕಾರ ಅಧಿಕ ತೂಕ ಮತ್ತು ಬೊಜ್ಜಿನ ಪ್ರಮಾಣದಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ. ಐವರು ಭಾರತೀಯ ವಯಸ್ಕರಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಈಗ ಅಧಿಕ ತೂಕ ಅಥವಾ ಬೊಜ್ಜು ಸಮಸ್ಯೆ ಹೊಂದಿದ್ದಾರೆ. ನಗರ ಪ್ರದೇಶಗಳಲ್ಲಿ ಹೆಚ್ಚು ಬೊಜ್ಜಿನ ಸಮಸ್ಯೆ ಇರುತ್ತದೆ. ಇದೀಗ ಬೊಜ್ಜಿನ ಸಮಸ್ಯೆ ಸಿರಿವಂತರಿಗೆ ಮಾತ್ರ ಸೀಮಿತವಾಗಿಲ್ಲ, ಎಲ್ಲಾ ಆದಾಯ ವರ್ಗದ ಕುಟುಂಬಗಳಿಗೂ ವ್ಯಾಪಿಸುತ್ತಿದೆ.

ಸಮೀಕ್ಷೆಯ ಪ್ರಕಾರ ಅತಿ ಸಂಸ್ಕರಿತ ಆಹಾರಗಳನ್ನು ಸೇವಿಸುವುದು, ಅಧಿಕ ಸಕ್ಕರೆ ಸೇವನೆ ಮತ್ತು ಹೆಚ್ಚು ಚಟುವಟಿಕೆಯಿಲ್ಲದ ಜೀವನಶೈಲಿಯಿಂದ ಬೊಜ್ಜು ಬೆಳೆಯುತ್ತಿದೆ. ಬೊಜ್ಜು ಒಂದು ಜೀವನಶೈಲಿಯ ಸಮಸ್ಯೆಯಾಗಿ ಉಳಿದಿಲ್ಲ, ಇದು ಗಂಭೀರ ಅರ್ಥವ್ಯವಸ್ಥೆಯ ಸಮಸ್ಯೆಯಾಗಿದೆ. ಮಧುಮೇಹ, ಹೃದಯ ರೋಗದ ಅಪಾಯವನ್ನು ಹೆಚ್ಚಿಸುತ್ತಿದೆ. ವಯಸ್ಕರ ಕಾರ್ಯಕಾರಿ ಆಯಸ್ಸಿನಲ್ಲಿ ಉತ್ಪಾದಕತೆ ಕಡಿಮೆ ಮಾಡುತ್ತಿದೆ.

ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತ ಗಮನ

ಈ ಬಾರಿ ನಾವು ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯದ ಕಡೆಗೂ ಗಮನಹರಿಸಲಿದ್ದೇವೆ ಎಂದು ನಾಗೇಶ್ವರನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. “ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಅತಿ ಅಗತ್ಯ. ಭಾರತ ತನ್ನ ಯುವ ಜನಸಮೂಹದಿಂದ ಸಂಪೂರ್ಣ ಲಾಭ ತಂದುಕೊಳ್ಳಲು ಬಯಸಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಸಮೀಕ್ಷೆಯ “ಬೊಜ್ಜು ಸವಾಲನ್ನು ಎದುರಿಸುವುದು” ಎನ್ನುವ ಅಧ್ಯಾಯದಲ್ಲಿ ಸಂಜೆ 6ರಿಂದ ರಾತ್ರಿ 11 ಗಂಟೆಯವರೆಗೆ ಅತಿ ಸಂಸ್ಕರಿತ ಆಹಾರಕ್ಕೆ ನಿಷೇಧ ಹೇರುವುದು. ಹಸುಗೂಸುಗಳು ಮತ್ತು ಅಂಬೆಗಾಲಿಡುವ ಮಕ್ಕಳ ಹಾಲು ಮತ್ತು ಪಾನೀಯಗಳ ಮೇಲೆ ಮಿತಿ ಹೇರುವ ಕ್ರಮ ಕೈಗೊಳ್ಳುವ ಬಗ್ಗೆಯೂ ವಿವರಗಳಿವೆ.

ಸಮೀಕ್ಷೆಯ ಸಲಹೆಗಳಲ್ಲಿ ಗ್ರಾಹಕರು ಮಾಹಿತಿಯುಕ್ತ ಆಯ್ಕೆಗಳನ್ನು ಮಾಡಲು ಸಾಧ್ಯವಾಗುವಂತೆ ಉತ್ತಮ ಆಹಾರ ಲೇಬಲಿಂಗ್ ಕೂಡ ಸೇರಿದೆ. ಅದಕ್ಕಾಗಿ ಖಾಸಗಿ ಕ್ಷೇತ್ರದ ನೆರವು ಮತ್ತು ಪ್ರಜೆಗಳಲ್ಲಿ ಹೆಚ್ಚಿನ ಜಾಗೃತಿಯ ಅಗತ್ಯವಿದೆ ಎಂದು ನಾಗೇಶ್ವರನ್ ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಮಾಧ್ಯಮ ಬಳಕೆಯ ಬಗ್ಗೆ

ಸಮೀಕ್ಷೆಯಲ್ಲಿ ವಿಶೇಷವಾಗಿ ಹದಿಹರೆಯದವರು ಮತ್ತು ಯುವಜನರಲ್ಲಿ ಡಿಜಿಟಲ್ ವ್ಯಸನ ಮತ್ತು ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆಯ ಬಗ್ಗೆಯೂ ಆತಂಕ ವ್ಯಕ್ತಪಡಿಸಲಾಗಿದೆ. NFHS ಮತ್ತು ವರ್ತನೆಯ ಅಧ್ಯಯನಗಳಲ್ಲಿ ಕಂಡುಬಂದಿರುವ ವಿವರಗಳನ್ನು ಸಮೀಕ್ಷೆ ಉಲ್ಲೇಖಿಸಿದ್ದು, “ಡಿಜಿಟಲ್ ವೇದಿಕೆಗಳಲ್ಲಿ ಸಾಮಾಜಿಕ ಹೋಲಿಕೆಯೊಂದಿಗೆ ದೀರ್ಘಕಾಲೀನ ಸ್ಕ್ರೀನ್ ಬಳಕೆಯು ಆತಂಕ (anxiety), ಖಿನ್ನತೆಯ ಲಕ್ಷಣಗಳು ಮತ್ತು ಭಾವನಾತ್ಮಕ ಹತಾಶೆಗೆ ಕಾರಣವಾಗುತ್ತಿದೆ” ಎಂದು ಹೇಳಲಾಗಿದೆ.

ಈಗಾಗಲೇ ನೀತಿ ನಿರೂಪಣಾ ಚರ್ಚೆಗಳಲ್ಲಿ ಈ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಆಂಧ್ರಪ್ರದೇಶ ಮತ್ತು ಗೋವಾದಲ್ಲಿ 16ರ ವಯಸ್ಸಿನ ಒಳಗಿನ ಮಕ್ಕಳಿಗೆ ಸಾಮಾಜಿಕ ಬಳಕೆಯನ್ನು ನಿರ್ಬಂಧಿಸಲಾಗಿದೆ. ಆದರೆ ಸಂಪೂರ್ಣ ನಿಷೇಧ ಹೇರುವುದು ಅಗತ್ಯವಿಲ್ಲ, ಕುಟುಂಬಗಳು ಮತ್ತು ವ್ಯಕ್ತಿಗಳು ಮಾಹಿತಿಯುಕ್ತ ಆಯ್ಕೆಗಳನ್ನು ಮಾಡುವುದು ನಿರ್ಣಾಯಕವೆನಿಸಿದೆ ಎಂದು ಸಮೀಕ್ಷೆ ಒತ್ತಿ ಹೇಳಿದೆ.

“ಹದಿಹರೆಯದವರು ಹೆಚ್ಚು ಸಮಯ ಸ್ಕ್ರೀನ್ನಲ್ಲಿ ಕಾಲಕಳೆಯುವುದು, ದೈಹಿಕ ಚಟುವಟಿಕೆ ಕಡಿಮೆ ಇರುವುದು ಮತ್ತು ಅನಾರೋಗ್ಯಕರ ಆಹಾರ ಕ್ರಮ ಜೊತೆಗೂಡಿ ಆತಂಕ ಮತ್ತು ಆತ್ಮಹತ್ಯೆಯ ಆಲೋಚನೆಗಳು ಬರಲು ಕಾರಣವಾಗುತ್ತದೆ. ಭಾರತದ ಭವಿಷ್ಯದ ಕಾರ್ಯಪಡೆಯ ಮೇಲೆ ಇದು ಮೌನವಾಗಿ ಹಾನಿ ತರುತ್ತಿದೆ. ಇದು ದೀರ್ಘಕಾಲೀನ ಪ್ರಗತಿಯ ಮಹಾತ್ವಾಕಾಂಕ್ಷೆ ಮೇಲೆ ಏಟು ಬೀಳಲಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಿಂದಿನ ಆರ್ಥಿಕ ಸಮೀಕ್ಷೆಗಳು ಮಾನಸಿಕ ಆರೋಗ್ಯದ ಮೇಲೆ ತೀಕ್ಷ್ಣವಾದ ಗಮನ ಹರಿಸಿದ್ದರೂ ಈ ವರ್ಷದ ವರದಿಯಲ್ಲಿ ವಿಸ್ತ್ರತ ಉಲ್ಲೇಖ ಮಾಡಲಾಗಿದೆ. ದೈಹಿಕ ಆರೋಗ್ಯ ಮತ್ತು ಜೀವನಶೈಲಿಯ ಅಪಾಯಗಳನ್ನು ಅರ್ಥವ್ಯವಸ್ಥೆಯ ಚೌಕಟ್ಟಿನೊಳಗೆ ತರಲಾಗಿದೆ. ದೀರ್ಘಕಾಲೀನ ಪ್ರಗತಿಗೆ ಆರೋಗ್ಯಕರ ವ್ಯಕ್ತಿಗಳ ಅಗತ್ಯವಿದೆ. ಅದೇ ಕಾರಣಕ್ಕೆ 2025-26ರ ಆರ್ಥಿಕ ಸಮೀಕ್ಷೆ ಮುಖ್ಯವಾಗಿ ಸಂಸ್ಕರಿತ ಆಹಾರ ಸೇವನೆ ಮತ್ತು ಸಾಮಾಜಿಕ ಮಾಧ್ಯಮದ ಬಳಕೆಯ ಬಗ್ಗೆ ಹೆಚ್ಚು ಒತ್ತು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News